ವೀರಶೈವ ಧರ್ಮಕ್ಕೆ ಬಸವಾದಿ ಶರಣು ಹೊಸ ವ್ಯಾಖ್ಯಾನ ಬರೆದರು: ಉಜ್ಜಯಿನಿ ಶ್ರೀಗಳು

KannadaprabhaNewsNetwork | Published : Jul 3, 2024 12:15 AM
ಕೂಡ್ಲಿಗಿ ಪಟ್ಟಣದ  ಗುಡೇಕೋಟೆ ರಸ್ತೆಯ ಬಲಭಾಗಕ್ಕೆ ಬರುವ ಪಪ್ಪೀಸ್ ಎನ್ ಕ್ಲೈವ್ ವಸತಿ ಬಡಾವಣೆ ಉದ್ಗಾಟನೆ ಹಾಗೂ ಬಸವಣ್ಣನ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಸಾನಿಧ್ಯವಹಿಸಿ ದ ಉಜ್ಜಯಿನಿ ಸದ್ಧರ್ಮ ಪೀಠದ ಜಗದ್ಗುರು ಶ್ರೀಸಿದ್ದಲಿಂಗ ಶಿವಾಚಾರ್ಯ ಭಗವತ್ಪಾದ ಸ್ವಾಮಿಗಳು ಕಾರ್ಯಕ್ರಮ ಉದ್ಗಾಟಿಸಿದರು.    | Kannada Prabha

12ನೇ ಶತಮಾನದಲ್ಲಿ ಬಸವಾದಿ ಶರಣರು ತಮ್ಮದೇ ಆಡುಭಾಷೆಯಲ್ಲಿ ವಚನಗಳನ್ನು ಬರೆದು ಮೌಢ್ಯತೆ ವಿರುದ್ಧ ಸಮರ ಸಾರಿ ಸಮಾನತೆ ತರುವಲ್ಲಿ ಜೀವನವನ್ನೇ ಮುಡಿಪಾಗಿಟ್ಟಿದ್ದರು ಎಂದು ಶ್ರೀಗಳು ಹೇಳಿದರು.

ಕನ್ನಡಪ್ರಭ ವಾರ್ತೆ ಕೂಡ್ಲಿಗಿ

ಪುರಾತನ ವೀರಶೈವ ಧರ್ಮಕ್ಕೆ 12ನೇ ಶತಮಾನದಲ್ಲಿ ಬಸವಾದಿ ಶರಣರು ಹೊಸ ವ್ಯಾಖ್ಯಾನ ಬರೆಯುವ ಮೂಲಕ ವಚನದ ಮೂಲಕ ಜನತೆಯನ್ನು ಎಚ್ಚರಿಸುವ ಕಾಯಕ ಮಾಡಿದರು ಎಂದು ಉಜ್ಜಯಿನಿ ಸದ್ಧರ್ಮ ಪೀಠದ ಜಗದ್ಗುರು ಶ್ರೀ ಸಿದ್ಧಲಿಂಗ ಶಿವಾಚಾರ್ಯ ಭಗವತ್ಪಾದ ಸ್ವಾಮಿಗಳು ತಿಳಿಸಿದರು.

ಮಂಗಳವಾರ ಪಟ್ಟಣದ ಗುಡೇಕೋಟೆ ರಸ್ತೆಯ ಬಲಭಾಗಕ್ಕೆ ಬರುವ ಪಪ್ಪೀಸ್ ಎನ್ ಕ್ಲೈವ್ ವಸತಿ ಬಡಾವಣೆ ಉದ್ಘಾಟನೆ ಹಾಗೂ ಬಸವಣ್ಣನ ಪುತ್ಥಳಿ ಅನಾವರಣ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.

12ನೇ ಶತಮಾನದಲ್ಲಿ ಬಸವಾದಿ ಶರಣರು ತಮ್ಮದೇ ಆಡುಭಾಷೆಯಲ್ಲಿ ವಚನಗಳನ್ನು ಬರೆದು ಮೌಢ್ಯತೆ ವಿರುದ್ಧ ಸಮರ ಸಾರಿ ಸಮಾನತೆ ತರುವಲ್ಲಿ ಜೀವನವನ್ನೇ ಮುಡಿಪಾಗಿಟ್ಟಿದ್ದರೂ ಇಂತಹ ಶರಣನ ಪುತ್ಥಳಿ ಅನಾವರಣದ ಮೂಲಕ ಮುಂದಿನ ಪೀಳಿಗೆಗೆ ಬಸವಣ್ಣನ ಆದರ್ಶಗಳು ಪಾಲನೆಯಾಗಬೇಕಿದೆ ಎಂದರು. ಬಸವಣ್ಣ ಅವರನ್ನು ಕೇವಲ ಧಾರ್ಮಿಕವಾಗಿ ನೋಡಬಾರದು. ಅವರು ಸಮಾಜದ ಕ್ರಾಂತಿಕಾರಿಗಳಾಗಿದ್ದು, ಸಮಾಜದಲ್ಲಿ ಜಾತಿ ವ್ಯವಸ್ಥೆ ತೊಡೆದು ಹಾಕಿ ಸಮ ಸಮಾಜ ನಿರ್ಮಾಣ ಮಾಡುವಲ್ಲಿ ಬುನಾದಿ ಹಾಕಿದ ಮಹಾಪುರುಷ. ಎನಗಿಂತ ಕಿರಿಯನಿಲ್ಲ ಎನ್ನುವ ಮೂಲಕ ಮಹಾಮಾನವತವಾದಿಯಾಗಿದ್ದರು. ಇಂತಹ ಧೀಮಂತ ನಾಯಕನ ಜೀವನ ಮೌಲ್ಯಗಳು ಜಗತ್ತಿಗೆ ಆದರ್ಶಗಳಾಗಿದ್ದು, ಹೀಗಾಗಿಯೇ ಜಗಜ್ಯೋತಿ ಬಸವೇಶ್ವರ ಎಂದು ಕರೆಯಲಾಗುತ್ತದೆ ಎಂದರು.

ಕೂಡ್ಲಿಗಿ ಹಿರೇಮಠದ ಶ್ರೀ ಪ್ರಶಾಂತಸಾಗರ ಶಿವಾಚಾರ್ಯರು, ಕಾನಾಮಡಗು ದಾಸೋಹಮಠದ ಧರ್ಮಾಧಿಕಾರಿ ಶ್ರೀ ಐಮಡಿ ಶರಣಾರ್ಯರು, ಚಿತ್ರದುರ್ಗ ಶಾಸಕ ವೀರೇಂದ್ರ(ಪಪ್ಪಿ) ಅವರ ತಾಯಿ ರತ್ನಮ್ಮ, ವೀರೇಂದ್ರ (ಪಪ್ಪಿಯ) ಸಹೋದರ ಕೆ.ಪಿ. ನಾಗರಾಜ, ಜಿ.ಎಲ್. ಸಂತೋಷ್ ಗೌಡ, ಆಲೂರು ಮಲ್ಲಿಕಾರ್ಜುನ, ಪಿ. ರಾಜೇಂದ್ರ, ಜಿಪಂ ಮಾಜಿ ಅಧ್ಯಕ್ಷ ಜಿ. ಉಮೇಶ್, ಜಿಪಂ ಮಾಜಿ ಸದಸ್ಯ ಹುರುಳಿಹಾಳ್ ರೇವಣ್ಣ, ಕಾಂಗ್ರೆಸ್ ಮುಖಂಡರಾದ ಟಿ.ಜಿ. ಮಲ್ಲಿಕಾರ್ಜುನಗೌಡ, ಸಚಿನ್ ಕುಮಾರ್, ಜುಮ್ಮೋಬನಹಳ್ಳಿ ಬಸವರಾಜಪ್ಪ, ಹೊಸಹಳ್ಳಿ ಎ.ಸಿ. ಚನ್ನಬಸಪ್ಪ, ಯು.ನಾಗೇಶ್ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.