ಏಕದೇವೋಪಾಸನೆಗೆ ದಾರಿ ತೋರಿದ ಬಸವಾದಿ ಶರಣರು

KannadaprabhaNewsNetwork | Published : Jan 8, 2025 12:15 AM

ಸಾರಾಂಶ

ಕ್ಲಿಷ್ಟ ಭಾಷೆಯ ಸಂಸ್ಕೃತ ಸಾಹಿತ್ಯ ಹೊರತುಪಡಿಸಿ ವಚನಗಳು ಎಂಬ ಸರಳ ಸುವಿಚಾರಗಳನ್ನು ಜನಸಾಮಾನ್ಯರ ಆಡುವ ಭಾಷೆಯಾದ ಕನ್ನಡದಲ್ಲಿ ರಚಿಸಿದವರು ಬಸವಾದಿ ಶಿವಶರಣರು

ಮುಂಡರಗಿ: ರಾಜನನ್ನು ಪ್ರತ್ಯಕ್ಷ ದೇವರು ಎಂದು ವರ್ಣಿಸುತ್ತಿದ್ದ ಪುರೋಹಿತಶಾಹಿಗಳ ಸಮಯದಲ್ಲಿ ನೂರೆಂಟು ಹೆಸರಿನ ದೇವತೆಗಳು ದೇವಸ್ಥಾನಗಳಲ್ಲಿ ವಿಗ್ರಹ ರೂಪದಲ್ಲಿ ವಾಸವಾಗಿದ್ದು, ಬೆಳ್ಳಿ ಬಂಗಾರ ಧರಿಸಿ ಭದ್ರವಾಗಿ ಬೀಗ ಹಾಕಿಸಿಕೊಂಡು ಮೆರೆಯುತ್ತಿದ್ದ ಕಾಲದಲ್ಲಿ ಅಂಗೈಯಲ್ಲಿ ಇಷ್ಟ ಲಿಂಗ ತಂದು ಏಕದೇವೋಪಾಸನೆಗೆ ದಾರಿ ತೋರಿದವರು ಬಸವಾದಿ ಶಿವಶರಣರು ಎಂದು ರಾಜ್ಯ ಐಎಂಎ ಮಾಜಿ ಅಧ್ಯಕ್ಷ ಡಾ. ಅನ್ನದಾನಿ ಮೇಟಿ ಹೇಳಿದರು.

ಅವರು ಸೋಮವಾರ ಪಟ್ಟಣದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ತು, ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಚೈತನ್ಯ ಶಿಕ್ಷಣ ಸಂಸ್ಥೆಯ ಸೌರಭ ಅಂಗ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ನಡೆದ ಶರಣ ಚಿಂತನ ಮಾಲಿಕೆಯ 9ನೇ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕ್ಲಿಷ್ಟ ಭಾಷೆಯ ಸಂಸ್ಕೃತ ಸಾಹಿತ್ಯ ಹೊರತುಪಡಿಸಿ ವಚನಗಳು ಎಂಬ ಸರಳ ಸುವಿಚಾರಗಳನ್ನು ಜನಸಾಮಾನ್ಯರ ಆಡುವ ಭಾಷೆಯಾದ ಕನ್ನಡದಲ್ಲಿ ರಚಿಸಿದವರು ಬಸವಾದಿ ಶಿವಶರಣರು, ಅಂತಹ ಶರಣರ ಕುರಿತಾದ ಚಿಂತನ ಮಾಲೆಯ ನಡೆಸುತ್ತಿರುವುದು ಶ್ಲಾಘನೀಯವಾದ ಕಾರ್ಯ ಎಂದರು.

ಪ್ರೊ. ಎಂ.ಎಸ್. ಹೊಟ್ಟಿನ ನಿಜಶರಣ ಅಂಬಿಗರ ಚೌಡಯ್ಯನವರ ಕುರಿತು ಮಾತನಾಡಿ, ನಿಷ್ಟುರವಾದಿ ನಿಜ ಶರಣ ಅಂಬಿಗರ ಚೌಡಯ್ಯ ವೃತ್ತಿಯಿಂದ ಹೊಳೆಯಲ್ಲಿ ದೋಣಿ ನಡೆಸುವ ಕಾಯಕ ಮಾಡುತ್ತಿದ್ದರು. ಇವರು 330ಕ್ಕೂ ಹೆಚ್ಚು ವಚನ ರಚಿಸಿದ್ದರು. ಅಂಬಿಗರ ಚೌಡಯ್ಯನವರು ರಚಿಸಿದ ವಚನಗಳು ಇಂದಿನ ಸಮಕಾಲೀನ ಸಮಾಜದ ವಿಡಂಬನಾತ್ಮಕ ನಡವಳಿಕೆಗಳ ಓರೆ ಕೋರೆಗಳ ಮೇಲೆ ಬೆಳಕು ಚೆಲ್ಲುವ ಮತ್ತು ಆ ಮೂಲಕ ಸಮಾಜ ತಿದ್ದುವ ಕೆಲಸ ಮಾಡಿವೆ. ಕಲ್ಯಾಣ ಕ್ರಾಂತಿಯ ನಂತರ ಶರಣರು ಉಳವಿಯೆಡೆಗೆ ಪ್ರಯಾಣ ಬೆಳೆಸಿದಾಗ ಶರಣರನ್ನು ಮತ್ತು ಶರಣರ ವಚನಗಳ ಕಟ್ಟುಗಳನ್ನು ಸಂರಕ್ಷಿಸಲು ಮಡಿವಾಳ ಮಾಚಿದೇವರೊಂದಿಗೆ ಕಾರ್ಯ ನಿರ್ವಹಿಸಿದವರು ಅಂಬಿಗರ ಚೌಡಯ್ಯನವರು. ಇವರು ನಿಷ್ಟುರವಾಗಿದ್ದರೂ ವಿಭಿನ್ನ ಮತ್ತು ವಿಶಿಷ್ಟ ವ್ಯಕ್ತಿತ್ವ ಹೊಂದಿದವರಾಗಿದ್ದರು ಎಂದು ಬಣ್ಣಿಸಿದರು.

ಚೈತನ್ಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ವೀಣಾ ಪಾಟೀಲ ಅಧ್ಯಕ್ಷತೆ ವಹಿಸಿದ ಮಾತನಾಡಿ, ಅಂಬಿಗರ ಚೌಡಯ್ಯ ತಮ್ಮ ವಚನಗಳ ಮೂಲಕ ಸಮಾಜದ ವಿರುದ್ಧ ಚಾಟಿ ಬೀಸುವಂತಹ ಅನೇಕ ವಚನ ರಚಿಸಿದ್ದರು ಎಂದರು.

ಕಾರ್ಯಕ್ರಮದಲ್ಲಿ ಕಾವೇರಿ ಬೋಲಾ, ಸುವರ್ಣ ಸುತಾರ್, ಲಕ್ಷ್ಮೀದೇವಿ ಗುಬ್ಬಿ, ಪಾರ್ವತಿ ಕುಬಸದ, ತೇಜಸ್ವಿನಿ ಹೊಸಪೇಟಿ, ಮಧುಮತಿ ಇಳಕಲ್, ಶೋಭಾ ಹೊಟ್ಟಿನ, ಮಂಜುನಾಥ ಅಳವಂಡಿ, ಎಂ.ಆರ್.ಕುಲಕರ್ಣಿ, ಸಿ.ಎಸ್.ಅರಸನಾಳ, ಡಾ.ನಿಂಗು ಸೊಲಗಿ, ಲಿಂಗರಾಜ ದಾವಣಗೆರೆ, ವಿ.ಎಫ್. ಗುಡದಪ್ಪನವರ್, ಸಂಗಣ್ಣ ಲಿಂಬಿಕಾಯಿ, ಎಂ.ಐ.ಮುಲ್ಲಾ, ಕೃಷ್ಣ ಸಾಹುಕಾರ, ಡಾ ಸಂತೋಷ ಹಿರೇಮಠ, ಮಲ್ಲಿಕಾರ್ಜುನ ಬಾರಕೇರ ಸೇರಿದಂತೆ ಅನೇಕರು ಉಪಸ್ಥತರಿದ್ದರು.

ರಮೇಶ ಪಾಟೀಲ ಪ್ರಾರ್ಥನಾ ಗೀತೆ ಹಾಡಿದರು. ಕಸಾಪ ತಾಲೂಕಾಧ್ಯಕ್ಷ ಎಂ.ಜಿ. ಗಚ್ಚಣ್ಣವರ ಸ್ವಾಗತಿಸಿದರು. ತಾಲೂಕು ಶಸಾಪ ಅಧ್ಯಕ್ಷ ಆರ್.ಎಲ್. ಪೊಲೀಸ್ ಪಾಟೀಲ ವಂದಿಸಿದರು.

Share this article