ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ
ಜಗತ್ತಿಗೆ ಬಸವ ಸಂಸ್ಕೃತಿಯೂ ಅಗತ್ಯವಿದೆ. ಬಸವೇಶ್ವರ ಜನಿಸಿದ ಬಸವನಬಾಗೇವಾಡಿಯು ಮುಂಬರುವ ದಿನಗಳಲ್ಲಿ ಇಡೀ ರಾಷ್ಟ್ರಕ್ಕೆ ಮಾದರಿಯಾಗಲಿದೆ ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.ಪಟ್ಟಣದ ಸಿಬಿಎಸ್‌ಇ ಶಾಲಾ ಆವರಣದಲ್ಲಿನ ನಂದೀಶ್ವರ ರಂಗ ಮಂದಿರದಲ್ಲಿ ಬಸವನಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರ, ಬಸವೇಶ್ವರ ಸೇವಾ ಸಮಿತಿ ಹಾಗೂ ಬಸವೇಶ್ವರ ಸೇವಾ ಸಮಿತಿಯ ಸಹಯೋಗದಲ್ಲಿ ಶ್ರಾವಣ ಮಾಸದ ಹಾಗೂ ಮೂಲನಂದೀಶ್ವರ ಜಾತ್ರಾಮಹೋತ್ಸವದಂಗವಾಗಿ ಒಂದು ತಿಂಗಳ ಕಾಲ ಹಮ್ಮಿಕೊಂಡಿರುವ ಬಸವ ಸಂಸ್ಕೃತಿ ಪ್ರವಚನಕ್ಕೆ ಚಾಲನೆ ನೀಡಿ ಮಾತನಾಡಿದರು. ಕಾಯಕ, ದಾಸೋಹ, ಸಮಾನತೆ ಸಂದೇಶ ನೀಡಿದ ಮಹಾನ್ ದಾರ್ಶನಿಕ ಬಸವೇಶ್ವರರು. ಮನುಷ್ಯ ಮನುಷ್ಯರನ್ನು ಪ್ರೀತಿ ಮಾಡುವ ಗುಣವನ್ನು ಬೆಳೆಸುವ ಜೊತೆಗೆ ಜಾತ್ಯಾತೀತವಾಗಿ ಎಲ್ಲರೂ ಸೇರಿ ಕಲ್ಯಾಣ ಸಮಾಜವನ್ನು ಸ್ಥಾಪಿಸಿದರು. ಪ್ರಜಾಪ್ರಭುತ್ವವಿಲ್ಲದೇ ಹೋಗಿದ್ದರೆ ಪ್ರತಿಯೊಬ್ಬರೂ ಬಹಳ ಕಷ್ಟ ಅನುಭವಿಸಬೇಕಾಗುತ್ತಿತ್ತು. ಮೊದಲು ಬಸವೇಶ್ವರ ಜಾತ್ರಾ ಮಹೋತ್ಸವವು ಸರಳವಾಗಿ ನಡೆಯುತ್ತಿತ್ತು. ನಾನು ಕ್ಷೇತ್ರಕ್ಕೆ ಬಂದ ಮೇಲೆ ಅದ್ಧೂರಿಯಾಗಿ ನಡೆಯುತ್ತಿದೆ. ಸೆ.೧ರಿಂದ ಆರಂಭವಾಗುವ ಬಸವ ಸಂಸ್ಕೃತಿ ಅಭಿಯಾನವನ್ನು ಯಶಸ್ವಿಗೊಳಿಸೋಣವೆಂದರು.
ಪ್ರವಚನಕಾರ ಅಥಣಿ ಮೋಟಗಿ ಮಠದ ಪ್ರಭು ಚನ್ನಬಸವ ಸ್ವಾಮೀಜಿ ಮಾತನಾಡಿ, ಭಾಗ್ಯವಿಧಾತ ಬಸವೇಶ್ವರರಿಗೆ ಜನ್ಮ ನೀಡಿದ ಪುಣ್ಯ ಸ್ಥಳವಿದು. ವಚನ, ಸಮತಾ, ಕಾಯಕ,ದಾಸೋಹ, ಭಾವೈಕ್ಯ, ಅನುಭಾವ, ಕನ್ನಡ ಸಂಸ್ಕೃತಿಯನ್ನು ಬಸವ ಸಂಸ್ಕೃತಿಯಲ್ಲಿ ನಾವೆಲ್ಲರೂ ಕಾಣಬಹುದಾಗಿದೆ. ಆ ಕಾರಣಕ್ಕೆ ಬಸವ ಸಂಸ್ಕೃತಿಯು ಜೀವನದ ಸಂಸ್ಕೃತಿಯಾಗಿದೆ. ಇಂತಹ ಜೀವನ ಸಂಸ್ಕೃತಿಯನ್ನು ಶ್ರಾವಣ ಮಾಸದ ಪುಣ್ಯ ಪರ್ವದಲ್ಲಿ ಒಂದು ತಿಂಗಳ ಕಾಲ ನಾವೆಲ್ಲರೂ ತಿಳಿದುಕೊಳ್ಳಬೇಕಿದೆ ಎಂದರು.ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಬಸವಣ್ಣನವರು ಇಷ್ಟಲಿಂಗದ ಮೂಲಕ ನಾವು ಭಗವಂತನನ್ನು ಕಾಣಬಹುದು ಎಂದು ಅರಿವು ನೀಡಿದರು. ಪ್ರತಿಯೊಬ್ಬರೂ ಇಷ್ಟಲಿಂಗ ಆರಾದಕರಾಗಬೇಕು. ಪ್ರತಿನಿತ್ಯ ಸಂಜೆ ೬.೩೦ ಗಂಟೆಯಿಂದ ೮ ಗಂಟೆಯವರೆಗೆ ನಡೆಯುವ ಈ ಪ್ರವಚನದ ಸದುಪಯೋಗವನ್ನು ಜನತೆ ಪಡೆದುಕೊಳ್ಳಬೇಕೆಂದರು.
ಜಾತ್ರಾಮಹೋತ್ಸವ ಸಮಿತಿ ಅಧ್ಯಕ್ಷ ರವಿ ರಾಠೋಡ ಮಾತನಾಡಿ, ಅ.೧೧ ರಿಂದ ಐದು ದಿನಗಳ ಕಾಲ ನಡೆಯುವ ಪಟ್ಟಣದ ಆರಾಧ್ಯದೈವ ಮೂಲನಂದೀಶ್ವರ ಜಾತ್ರಾಮಹೋತ್ಸವಕ್ಕೆ ಎಲ್ಲರೂ ತನು-ಮನ-ಧನದಿಂದ ಸಹಕಾರ ನೀಡಿ ಯಶಸ್ವಿಗೊಳಿಸಬೇಕು. ಈ ವರ್ಷದ ಜಾತ್ರಾಮಹೋತ್ಸವ ಅದ್ಧೂರಿಯಾಗಿ ನಡೆದು ಇತಿಹಾಸದಲ್ಲಿ ಉಳಿಯಬೇಕು ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಶಿವನಗೌಡ ಬಿರಾದಾರ, ಬಿ.ಕೆ.ಕಲ್ಲೂರ ಮಾತನಾಡಿದರು. ವೇದಿಕೆಯಲ್ಲಿ ಮುಖಂಡರಾದ ಎಲ್.ಎನ್.ಅಗರವಾಲ, ಸುರೇಶ ಹಾರಿವಾಳ, ಜಗದೀಶ ಕೊಟ್ರಶೆಟ್ಟಿ, ಬಸವರಾಜ ಹಾರಿವಾಳ, ಬಸವರಾಜ ಗೊಳಸಂಗಿ, ಸಂಗಣ್ಣ ಕಲ್ಲೂರ, ಶೇಖರಗೌಡ ಪಾಟೀಲ, ಸಂಕನಗೌಡ ಪಾಟೀಲ, ಪುರಸಭೆ ಅಧ್ಯಕ್ಷೆ ಜಗದೇವಿ ಗುಂಡಳ್ಳಿ, ಸಮಿತಿ ಪದಾಧಿಕಾರಿಗಳಾದ ಮಹೇಶ ಹಿರೇಕುರಬರ, ರಮೇಶ ಮಸಬಿನಾಳ, ಲಾಳೇಸಾ ಕೊರಬು, ಸಿದ್ರಾಮ ಪಾತ್ರೋಟಿ, ನಂದೀಶ ಪಾಟೀಲ, ಮಂಜು ಜಾಲಗೇರಿ ಇತರರು ಇದ್ದರು. ಶಂಕರಗೌಡ ಬಿರಾದಾರ ಸ್ವಾಗತಿಸಿದರು. ಎಂ.ಜಿ.ಆದಿಗೊಂಡ ಪರಿಚಯಿಸಿದರು. ಸಂಗಮೇಶ ಓಲೇಕಾರ ಪ್ರಾಸ್ತವಿಕವಾಗಿ ಮಾತನಾಡಿದರು. ಎಚ್.ಬಿ.ಬಾರಿಕಾಯಿ, ಕೊಟ್ರೇಶ ಹೆಗ್ಡಾಳ ನಿರೂಪಿಸಿದರು. ಎಂ.ಬಿ.ತೋಟದ ವಂದಿಸಿದರು.