- ಪಾಂಡೋಮಟ್ಟಿಯಲ್ಲಿ ಶಿವಾನುಭವ ಗೋಷ್ಠಿ ಕಾರ್ಯಕ್ರಮದಲ್ಲಿ ಡಾ.ಗುರುಬಸವ ಸ್ವಾಮೀಜಿ
- - -ಕನ್ನಡಪ್ರಭ ವಾರ್ತೆ ಚನ್ನಗಿರಿ
ಓಂ ಶ್ರೀ ಗುರುಬಸವಲಿಂಗಾಯ ನಮಃ ಎಂಬ ಶರಣ ವಾಕ್ಯವು ವಿಶ್ವದ ಮಂತ್ರವಾಗಿದೆ. ಇದು ಹೆಮ್ಮೆಪಡುವ ವಿಚಾರ ಎಂದು ಪಾಂಡೋಮಟ್ಟಿ ವಿರಕ್ತ ಮಠದ ಶ್ರೀ ಡಾ.ಗುರುಬಸವ ಮಹಾಸ್ವಾಮೀಜಿ ನುಡಿದರು.ಶನಿವಾರ ಸಂಜೆ ತಾಲೂಕಿನ ಪಾಂಡೋಮಟ್ಟಿ ಗ್ರಾಮದ ವಿರಕ್ತ ಮಠದಲ್ಲಿ ಜಗಜ್ಯೋತಿ ವಿಶ್ವಗುರು ಬಸವಣ್ಣ ಮತ್ತು ಜಗನ್ಮಾತೆ ಅಕ್ಕ ಮಹಾದೇವಿ ಜಯಂತ್ಯುತ್ಸವ ಹಾಗೂ 870ನೇ ಮಾಸಿಕ ಶಿವಾನುಭವ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
12ನೇ ಶತಮಾನದ ಜಗಜ್ಯೋತಿ ಬಸವೇಶ್ವರರು ಜಾತಿಭೇದ, ವರ್ಗ ಲಿಂಗಗಳ ಯಾವುದೇ ಭಿನ್ನತೆಗಳನ್ನು ಮಾಡದೇ ಸಮಸಮಾಜ ನಿರ್ಮಾಣ ಮಾಡುವಲ್ಲಿ ಹೆಚ್ಚಿನ ಶ್ರಮ ವಹಿಸಿದ್ದ ಮಹಾನ್ ಶರಣರಾಗಿದ್ದಾರೆ. ಮನುಷ್ಯ, ಮನುಷ್ಯರ ನಡುವ ಭೇದ-ಭಾವ ಮಾಡದೇ ಎಲ್ಲರೂ ಒಂದೇ ಎಂಬ ಮುಕ್ತ ವಾತಾವರಣವನ್ನು ಕಲ್ಪಿಸಿಕೊಟ್ಟವರು ಎಂದರು.ಶತಮಾನಗಳಿಂದ ತುಳಿತಕ್ಕೆ ಒಳಗಾಗಿ, ಬಳಲಿ ಹೋಗಿದ್ದ ಶೂದ್ರರು, ಮಹಿಳೆಯರು, ದಲಿತರು ಬಂದು ಅನುಭವ ಮಂಟಪದಲ್ಲಿ ಒಗ್ಗೂಡಿದರು. ನಾವುಗಳು ಇಂದು ಅವರ ತತ್ವದ ಅಡಿಯಲ್ಲಿ ನಡೆಯಬೇಕು. ನಮ್ಮ ಜವಾಬ್ದಾರಿಗಳನ್ನು ಅರಿತುಕೊಂಡಾಗ ಬೇಡುವ ಅವಶ್ಯಕತೆ ಇಲ್ಲ ಎಂಬುದು ಶರಣ ನೀತಿಯಾಗಿದೆ. ಸಮಾಜದ ಮತ್ತು ಧರ್ಮದ ಸೇವೆ ಮಾಡಿದವರನ್ನು ಸ್ಮರಿಸುವುದು ನಮ್ಮ ಧರ್ಮ ಎಂದು ತಿಳಿಸಿದರು.
ಜಗನ್ಮಾತೆ ಅಕ್ಕ ಮಹಾದೇವಿ ಅವರು ಮಹಿಳೆಯರು ಅಪೇಕ್ಷೆಪಟ್ಟಲ್ಲಿ ಸಂಸಾರದ ಬಂಧನ ತ್ಯಜಿಸಿ ಅಧ್ಯಾತ್ಮಿಕ ಸಾಧನೆಯತ್ತ ಸಾಗಬಲ್ಲಳು ಎನ್ನುವುದಕ್ಕೆ ಉತ್ತಮ ಉದಾಹರಣೆಯಾಗಿದ್ದಾರೆ. ಲಿಂಗಾಯಿತ ಧರ್ಮದಲ್ಲಿ ವೈಜ್ಞಾನಿಕತೆ, ವೈಚಾರಿಕತೆ, ಸರಳತೆಗಳಿವೆ ಎಂದು ತಿಳಿಸಿದರು.ಸಂತೆಬೆನ್ನೂರಿನ ಸರ್ಕಾರಿ ಡಿಗ್ರಿ ಕಾಲೇಜಿನ ಪ್ರಾಧ್ಯಾಪಕಿ ಜಿ.ಟಿ. ಜ್ಯೋತಿ, ಶಿವಮೊಗ್ಗದ ಲೋಕಾಯುಕ್ತ ಇಲಾಖೆಯ ಡಿ.ವೈ.ಎಸ್.ಪಿ. ಚಂದ್ರಶೇಖರ್, ಸರ್ಕಲ್ ಇನ್‌ಸ್ಪೆಕ್ಟರ್ ವೀರಬಸಪ್ಪ ಕುಸಲಾಪುರ, ಡಾ.ಇಂಚರ, ಇಂಪನ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಲಕ್ಷ್ಮೀಸಾಗರ ಗ್ರಾಮದ ಮಂಜುನಾಥ್, ಪಾಂಡೋಮಟ್ಟಿ ನಂಜಪ್ಪ, ಜಂತುಕೊಳಲಿನ ಉಜ್ಜಿನಪ್ಪ, ಚಂದ್ರಪ್ಪ, ಚನ್ನಬಸಪ್ಪ, ವಕೀಲ ರಾಜಪ್ಪ, ಧನಂಜಯ್, ಕಾಕನೂರು ಎಂ.ಬಿ.ನಾಗರಾಜ್, ಶಿವಮೂರ್ತ್ಯಪ್ಪ ಉಪಸ್ಥಿತರಿದ್ದರು.- - -
-20ಕೆಸಿಎನ್‌ಜಿ1:ಚನ್ನಗಿರಿ ತಾಲೂಕಿನ ಪಾಂಡೋಮಟ್ಟಿ ಗ್ರಾಮದ ವಿರಕ್ತ ಮಠದಲ್ಲಿ ಏರ್ಪಡಿಸಿದ್ದ 870ನೇ ಮಾಸಿಕ ಶಿವಾನುಭವ ಗೋಷ್ಠಿ ಕಾರ್ಯಕ್ರಮದಲ್ಲಿ ಪಾಂಡೋಮಟ್ಟಿ ಶ್ರೀಗಳು ಮಾತನಾಡಿದರು.