ಕನ್ನಡಪ್ರಭ ವಾರ್ತೆ ಹರಿಹರ
ನಗರದ ಸಿದ್ದೇಶ್ವರ ಪ್ಯಾಲೇಸ್‌ನಲ್ಲಿ ನಡೆದ ಸಾಂಸ್ಕೃತಿಕ ನಾಯಕರಾಗಿ ವಿಶ್ವಗುರು ಬಸವಣ್ಣ ಮಠಾಧೀಶರ ವಿಶೇಷ ಚಿಂತನ ಮಂಥನ ಕಾರ್ಯಕ್ರಮದ ಸಾನಿದ್ಯ ವಹಿಸಿದ್ದ ವೀರಶೈವ ಲಿಂಗಾಯಿತ ಪಂಚಮಸಾಲಿ ಪೀಠದ ವಚನಾನಂದ ಶ್ರೀಗಳು ಮಾತನಾಡಿ, ಅಸಮಾನತೆ ವಿರುದ್ಧ ಹೋರಾಡಿದ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಬಣ್ಣಿಸಿರುವುದು ಅರ್ಥಪೂರ್ಣವಾಗಿದೆ ಎಂದರು.
ಶೂದ್ರರಿಗೆ ದೇವಸ್ಥಾನ ಒಳಗೆ ಪ್ರವೇಶವಿರಲಿಲ್ಲ, ಊರೊಳಗೆ ಬಂದರೆ ಮುಖಕ್ಕೆ ಮಡಿಕೆಯನ್ನು ಹಾಕಿಕೊಂಡು, ಸೊಂಟಕ್ಕೆ ಪೊರಕೆಯನ್ನು ಕಟ್ಟಿಕೊಂಡು ಬರಬೇಕಿತ್ತು. ಮಂತ್ರ ಪಠಿಸಿದರೆ ನಾಲಿಗೆ ಸೀಳುವಂತಹ ಕಾಲಘಟ್ಟದಲ್ಲಿ ಕಾರ್ತಿಕದ ಕತ್ತಲಲ್ಲಿ ಚಂದ್ರ ಉದಯವಾದಂತೆ ಈ ಎಲ್ಲಾ ಅಸಮಾನತೆಗಳನ್ನು ಹೋಗಲಾಡಿಸಲು ಬಸವಣ್ಣನವರು ತಮ್ಮ ವಚನಗಳ ಮೂಲಕ ಪ್ರಯತ್ನಿಸಿದರೆಂದರು.ಮೌಡ್ಯತೆ, ಜಾತಿಯತೆ ಹಾಗೂ ಅಸಮಾನತೆಯ ವಿರುದ್ಧ ಹೋರಾಡಿದ ಸಾಂಸ್ಕೃತಿಕ ನಾಯಕ ಜಗಜ್ಯೋತಿ ಬಸವಣ್ಣನವರ ಜಯಂತಿಯನ್ನು ಮೊಟ್ಟ ಮೊದಲು ಆಚರಣೆಗೆ ತಂದಿದ್ದು ಮಹಾರಾಷ್ಟ್ರದಲ್ಲಿ. ದಾವಣಗೆರೆಯ ಹರ್ಡೇಕರ್ ಮಂಜಪ್ಪ ಹಾಗೂ ಮೃತ್ಯುಂಜಯ ಎಂಬುವರು ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ದಾವಣಗೆರೆ ನಗರದಲ್ಲಿ ಬಸವ ಜಯಂತಿ ಆಚರಿಸಿದ್ದರು ಎಂದು ನೆನೆದರು.
ಪೈಗಂಬರನ್ನು ಇಸ್ಲಾಂ ಸಮುದಾಯದ ದೇವರೆಂದು, ಏಸು ಕ್ರಿಸ್ತರನ್ನು ಕ್ರೈಸ್ತ ಧರ್ಮದ ದೇವರೆಂದು ಆರಾಧಿಸಲಾಗುತ್ತಿದೆ. ಆದರೆ ಹಿಂದೂ ಧರ್ಮದಲ್ಲಿ ಜಾತಿಗೊಂದು ದೇವರನ್ನು ಗುರುತಿಸುವ ಈ ಸಮಾಜದಲ್ಲಿ ಬಸವಣ್ಣನವರು ದೇವನೊಬ್ಬ ನಾಮ ಹಲವು ಎಂದು ಬಣ್ಣಿಸಿ, ವಿವಿಧತೆಯಲ್ಲಿ ಏಕತೆ ಸಾರಿದರೆಂದರು.
ಯಲವಟ್ಟಿ ಶ್ರೀ ಗುರು ಸಿದ್ಧಾಶ್ರಮದ ಶ್ರೀ ಯೋಗಾನಂದ ಶ್ರೀಗಳು ಮಾತನಾಡಿ, ಕನ್ನಡಕ್ಕೆ ತನ್ನದೇ ಆದ ಶಕ್ತಿ ಇದೆ. ಕನ್ನಡ ಮಾತನಾಡಿದರೆ ಕಿಳರಿಮೆ ಎಂಬ ಭಾವನೆ ಬಂದಿದೆ. ಬಹುತೇಕ ಜನರು ತಮ್ಮ ಸಹಿಯನ್ನು ಇಂಗ್ಲೀಷ್‌ನಲ್ಲಿ ಮಾಡುತ್ತಾರೆ. ಕನ್ನಡದ ಸರ್ಕಾರಿ ಶಾಲೆಗಳು ಮುಚ್ಚುತ್ತಿದ್ದರೆ ಇಂಗ್ಲಿಷ್ ಶಾಲೆಗಳು ಹೆಚ್ಚು ಹೆಚ್ಚು ತೆಲೆ ಎತ್ತುತ್ತಿದೆ ಇದರ ಬಗ್ಗೆ ಪ್ರತಿಯೊಬ್ಬ ಕನ್ನಡಿಗರು ಚಿಂತನೆ ಮಾಡಬೇಕು ಸಲಹೆ ನೀಡಿದರು.
ಸಮ್ಮೇಳನ ಸರ್ವಾಧ್ಯಕ್ಷ ಸಿ.ವಿ.ಪಾಟೀಲ್, ಜಿಲ್ಲಾ ಕಾಸಪ್ಪ ಅಧ್ಯಕ್ಷ ಬಿ.ವಾಮದೇವಪ್ಪ ಉಪಸ್ಥಿತರಿದ್ದರು. ಸ್ವಾಗತ ಎಂ.ಎ. ಚೆನ್ನಬಸಪ್ಪ, ನಿರೂಪಣೆ ಎಲ್.ಜಿ. ಮಧು ಕುಮಾರ್, ವಂದನಾರ್ಪಣೆ ಬಸನಗೌಡ ಎಂ.ಎಸ್. ನೆರವೇರಿಸಿದರು.