ಕನ್ನಡಪ್ರಭ ವಾರ್ತೆ ಬಳ್ಳಾರಿ
ನಗರದ ಬಸವ ಭವನದಲ್ಲಿ ಬಸವಸಂಸ್ಕೃತಿ ಅಭಿಯಾನ ಅಂಗವಾಗಿ ಜರುಗಿದ ಸಾರ್ವಜನಿಕ ಧಾರ್ಮಿಕ ಸಭೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಕನ್ನಡ ಸಾಹಿತ್ಯಕ್ಕೆ ಘನತೆ ಬಂದಿದ್ದೇ ವಚನ ಸಾಹಿತ್ಯದಿಂದ. ಈ ಮಾತನ್ನು ನಾಡಿನ ಅನೇಕ ವಿದ್ವಾಂಸರೇ ಹೇಳಿದ್ದಾರೆ. ಬಸವಣ್ಣನವರ ಸಂಪರ್ಕಕ್ಕೆ ಬಂದವರೆಲ್ಲರೂ ಶರಣರಾದರು. ಮನೆಗೆ ಕಳ್ಳತನಕ್ಕೆ ಬಂದವನನ್ನು ಸಹ ಬಸವಣ್ಣನವರು ಶರಣ ಎಂದು ಕರೆದ. ಆತನ ಮನಃ ಪರಿವರ್ತನೆಗೊಳಿಸಿ ಸಮಾಜಮುಖಿಯನ್ನಾಗಿಸಿದರು. ಕಂದಾಚಾರ, ಮೌಢ್ಯತೆ, ಅಂಧಶ್ರದ್ಧೆಗಳನ್ನು ದೂರ ಮಾಡಬೇಕು. ಸಮಾನತೆಯ ತತ್ವದಲ್ಲಿ ಸುಂದರ ಸಮಾಜ ನಿರ್ಮಾಣಗೊಳ್ಳಬೇಕು ಎಂಬ ಕಾರಣಕ್ಕಾಗಿಯೇ ಬಸವಣ್ಣ ಲಿಂಗಾಯತ ಧರ್ಮ ಸ್ಥಾಪಿಸಿದರು. ವಿಪರ್ಯಾಸ ಎಂದರೆ ಲಿಂಗಾಯತರಲ್ಲಿಯೇ ಮೌಢ್ಯತೆ, ಕಂದಾಚಾರಗಳು ಹೆಚ್ಚಾಗಿವೆ. ಬೇರೆ ಧರ್ಮಗಳ ಆಚಾರ-ವಿಚಾರಗಳು ಲಿಂಗಾಯತರ ಮನೆಗಳನ್ನು ಆಕ್ರಮಿಸಿವೆ ಎಂದು ಬೇಸರ ವ್ಯಕ್ತಪಡಿಸಿದರು.ವ್ಯಸನಮುಕ್ತ ಸಮಾಜ ನಿರ್ಮಾಣವಾಗಬೇಕು. ಲಿಂಗಾಯತ ಆಚಾರ-ವಿಚಾರಗಳನ್ನು ಅಳವಡಿಸಿಕೊಂಡು ಮದ್ಯ ವ್ಯಸನಿಗಳಾಗುವ ಬದಲು ಲಿಂಗ ವ್ಯಸನಿಗಳಾಗಬೇಕು. ಮೌಢ್ಯದಿಂದ ದೂರ ಉಳಿದು ವೈಜ್ಞಾನಿಕ, ವೈಚಾರಿಕ ಚಿಂತನೆಗಳನ್ನು ಮೈಗೂಡಿಸಿಕೊಳ್ಳಬೇಕು. ಜಂಗಮಪ್ರೇಮಿಗಳಾಗಬೇಕು. ಸನ್ಮಾರ್ಗಿ, ಸದಾಚಾರಿಗಳಾಗಬೇಕು. ಈ ಹಿನ್ನೆಲೆ ಜನರಲ್ಲಿ ಬಸವಪ್ರಜ್ಞೆ ಮೂಡಿಸಬೇಕು ಎಂಬ ಉದ್ದೇಶದಿಂದಾಗಿಯೇ ನಾಡಿನಾದ್ಯಂತ ಬಸವಸಂಸ್ಕೃತಿ ಅಭಿಯಾನ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಬಾಲ್ಕಿಯ ಹಿರೇಮಠ ಸಂಸ್ಥಾನದ ಡಾ. ಬಸವಲಿಂಗ ಪಟ್ಟದೇವರು ಮಾತನಾಡಿ, ಲಿಂಗಾಯತರು ಬಸವ ಸಂಸ್ಕೃತಿಯಿಂದ ದೂರ ಸರಿಯುತ್ತಿದ್ದಾರೆ. ವಚನಗಳಿಂದ ದೂರ ಉಳಿಯುತ್ತಿದ್ದಾರೆ. ಬಸವಪ್ರಜ್ಞೆ ಜಾಗೃತಗೊಳಿಸಬೇಕು. ಪ್ರತಿಯೊಬ್ಬರಲ್ಲೂ ಬಸವನಿಷ್ಠೆಯನ್ನು ಬೆಳೆಸಬೇಕು. ಈ ಹಿನ್ನೆಲೆ ಬಸವ ಸಂಸ್ಕೃತಿ ಅಭಿಯಾನ ಹೆಚ್ಚು ಮಹತ್ವ ಪಡೆದುಕೊಂಡಿದೆ. ಲಿಂಗಾಯತ ಸಮುದಾಯದಲ್ಲಿನ ಒಳ ಪಂಗಡಗಳು ಸಾಮರಸ್ಯವನ್ನು ದಿಕ್ಕು ತಪ್ಪಿಸುತ್ತಿವೆ. ಆದರೆ, ಲಿಂಗಾಯತ ಸಮಾಜದ ಎಲ್ಲ ಒಳ ಪಂಗಡಗಳ ಗುರು ಬಸವಣ್ಣ ಎಂಬುದನ್ನು ಪ್ರತಿಯೊಬ್ಬರೂ ಅರಿಯಬೇಕು ಎಂದರು.ಜಾತಿ ಗಣತಿಯಲ್ಲಿ ಯಾವುದೇ ಗೊಂದಲ ಮಾಡಿಕೊಳ್ಳದೆ ಲಿಂಗಾಯತ ಎಂದು, ಜಾತಿ ಕಾಲಂನಲ್ಲಿ ಉಪ ಪಂಗಡಗಳನ್ನು ಬರೆಸಿ ಎಂದು ಸಲಹೆ ನೀಡಿದರು.