ಗಲ್ಲಿ, ಹಳ್ಳಿಗಳಲ್ಲಿ ಜೋಕುಮಾರಸ್ವಾಮಿ ಪುಂಡಾಟಿಕೆ ಶುರು

KannadaprabhaNewsNetwork |  
Published : Sep 08, 2025, 01:01 AM IST
7ಎಚ್‌ಯುಬಿ26ಎಬಿದಿರಿನ ಬುಟ್ಟಿಯಲ್ಲಿ ಜೋಕುಮಾರನನ್ನು ಸಿಂಗರಿಸಿರುವುದು | Kannada Prabha

ಸಾರಾಂಶ

ಹುಟ್ಟಿದ ಏಳು ದಿನ ಕಂಡ ಕಂಡ ಮಹಿಳೆಯರಿಗೆ ಕಾಟ ಕೊಡುತ್ತ ಮೆರೆದಾಡುವ ಜೋಕುಮಾರ ಮನೆಯ ಬಾಗಿಲಿಗೆ ಬಂದಾಗ, ಊರಿನ ಮಹಿಳೆಯರು ಮರದ ತುಂಬಾ ದವಸ- ಧಾನ್ಯಗಳನ್ನು ತಂದು ಕೊಡುತ್ತಾರೆ. ಜತೆಗೆ, ಮನೆಯಲ್ಲಿರುವ ಸೊಳ್ಳೆ, ತಿಗಣೆಗಳು ಕ್ರಿಮಿಕೀಟಗಳು ಜೋಕುಮಾರನೊಂದಿಗೆ ಹೊರಟು ಹೋಗಲಿ ಎಂದು ಉಪ್ಪು, ಮೆಣಸಿನಕಾಯಿ, ಎಣ್ಣೆ-ಬೆಣ್ಣೆ, ಅಂಬಲಿ (ಹುಳಿನುಚ್ಚು) ನೀಡುವುದು ಸಂಪ್ರದಾಯ.

ಫಕೃದ್ದೀನ್ ಎಂ.ಎನ್.

ನವಲಗುಂದ: ಈ ವರ್ಷ ಮತ್ತೆ ಗ್ರಾಮದಲ್ಲಿ ಜೋಕುಮಾರನ (ಜೋಕುಮಾರಸ್ವಾಮಿ) ಮೆರೆದಾಟ ಆರಂಭವಾಗಿದೆ. ಇಲ್ಲಿನ ಸುಣಗಾರರ ಒಂದೇ ಮನೆತನದಲ್ಲಿ ಭಾದ್ರಪದ ಶುಕ್ಲದ ಅಷ್ಟಮಿ ದಿನದಂದು ಜನಿಸಿದ ಮೂವರು ಜೋಕುಮಾರರು, ನವಲಗುಂದದಲ್ಲೊಬ್ಬ ಇಬ್ರಾಹಿಂಪುರ ಹಾಗೂ ಕುಮಾರಗೊಪ್ಪ ಗ್ರಾಮದಲೊಬ್ಬ. ಹೀಗೆ ಮೂರು ಗ್ರಾಮದಲ್ಲಿ ಪ್ರತಿಯೊಂದು ಓಣಿಯಲ್ಲಿ ಜೋಕುಮಾರ ಮೆರೆದಾಡುತ್ತಿದ್ದಾನೆ.

ಸುಣಗಾರ ಮನೆತನದವರೊಂದಿಗೆ ಮರಲಕ್ಕಣ್ಣವರ ಮನೆತನದ ಮಹಿಳೆಯರು ಬಿದಿರಿನ ಬುಟ್ಟಿಯಲ್ಲಿ ಜೋಕುಮಾರನ ಕೂಡಿಸಿ, ಕಣ್ಣರಳಿಸಿದ ದುಂಡು ಮುಖ ದೊಡ್ಡ ಕಣ್ಣು, ವಿಭೂತಿ, ಹುರಿಕಟ್ಟಾದ ದೊಡ್ಡ ಮೀಸೆ, ತೆರೆದ ಬಾಯಿ, ಗಿಡ್ಡ ಕಾಲುಗಳು, ಕೈಯಲ್ಲಿ ಸಣ್ಣದಾದ ಕತ್ತಿಯುಳ್ಳ ಮಣ್ಣಿನ ಮೂರ್ತಿಯನ್ನು ಬೇವಿನ ತಪ್ಪಲಲ್ಲಿ ಮುಚ್ಚಿಕೊಂಡು ಹೆಣ್ಣುಮಕ್ಕಳು ಬಿದಿರಿನ ಬುಟ್ಟಿಯಲ್ಲಿ ಹೊತ್ತು ತರುತ್ತಾರೆ. ಕಣ್ಣಿಗೆ ಶಕ್ತಿ ಅಥವಾ ಕವಡಿಯನ್ನು ಚುಚ್ಚಿ ಅವು ಎದ್ದು ಕಾಣುವಂತೆ ಮಾಡಿ ದುಂಡು ಮುಖದ ದೊಡ್ಡ ಬಾಯಿಗೆ, ಬೆಣ್ಣೆ ಒರೆಸಿ, ತಲೆ ತುಂಬಾ ಹೂವು ಮುಡಿಸಿ, ಸುತ್ತಲೂ ಬೇವಿನ ತಪ್ಪಲಿನಿಂದ ಜೋಕುಮಾರನ ಮೂರ್ತಿಯನ್ನು ಮುಚ್ಚಿ, ಮುಖ ಮಾತ್ರ ಕಾಣುವಂತೆ ಮಾಡಿದ್ದಾರೆ. ಇದು ಜೋಕುಮಾರನ ಮೂಲ ಸ್ವರೂಪ ಕೂಡ ಆಗಿದೆ.

ಪ್ರತೀತಿ ಏನು?: ಹುಟ್ಟಿದ ಏಳು ದಿನ ಕಂಡ ಕಂಡ ಮಹಿಳೆಯರಿಗೆ ಕಾಟ ಕೊಡುತ್ತ ಮೆರೆದಾಡುವ ಜೋಕುಮಾರ ಮನೆಯ ಬಾಗಿಲಿಗೆ ಬಂದಾಗ, ಊರಿನ ಮಹಿಳೆಯರು ಮರದ ತುಂಬಾ ದವಸ- ಧಾನ್ಯಗಳನ್ನು ತಂದು ಕೊಡುತ್ತಾರೆ. ಜತೆಗೆ, ಮನೆಯಲ್ಲಿರುವ ಸೊಳ್ಳೆ, ತಿಗಣೆಗಳು ಕ್ರಿಮಿಕೀಟಗಳು ಜೋಕುಮಾರನೊಂದಿಗೆ ಹೊರಟು ಹೋಗಲಿ ಎಂದು ಉಪ್ಪು, ಮೆಣಸಿನಕಾಯಿ, ಎಣ್ಣೆ-ಬೆಣ್ಣೆ, ಅಂಬಲಿ (ಹುಳಿನುಚ್ಚು) ನೀಡುವುದು ಸಂಪ್ರದಾಯ. ಬಟ್ಟೆ ಒಗೆಯುವ ಕಲ್ಲು ಪಡಿಯ ಕೆಳಗೆ ಊರ ಮಹಿಳೆಯರಿಂದ ಹೊಡೆಸಿಕೊಂಡು ಜೋಕುಮಾರ ಸಾವನಪ್ಪುತ್ತಾನೆ.

ಅಲ್ಪಾಯುಷಿ ಜೋಕುಮಾರ: ಜೋಕುಮಾರನ ಸುತ್ತಲೂ ಮುಳ್ಳು ಹಾಕಿ ಹೆಣ್ಣುಮಕ್ಕಳು ಸುತ್ತುತ್ತಾ ಹಾಡುತ್ತಾರೆ. ಈ ವೇಳೆ ಹೆಣ್ಣು ಮಕ್ಕಳ ಸೆರಗು ಮುಳ್ಳಿಗೆ ತಾಗುತ್ತದೆ. ಜೋಕುಮಾರನೇ ಸೀರೆ ಎಳೆದನೆಂದು ಗಂಡಸರು ಆತನನ್ನು ಒನಕೆಯಿಂದ ಹೊಡೆಯುತ್ತಾರೆ. ಆಗ ಆತನ ರುಂಡ ಅಂಗಾತ ಬಿದ್ದರೆ ‘ಉತ್ತಮ ಮಳೆಗಾಲ’ವೆಂದು, ಬೋರಲು ಬಿದ್ದರೆ ‘ಬರಗಾಲ’ ಎಂದೂ ನಂಬುತ್ತಾರೆ. ನಂತರ ರುಂಡ-ಮುಂಡಗಳನ್ನು ಊರ ಮುಂದಿನ ಹಳ್ಳ ಅಥವಾ ಕೆರೆಗೆ ತಂದು ಬಟ್ಟೆ ತೊಳೆಯುವ ಕಲ್ಲಿನ ಕೆಳಗೆ ಮುಚ್ಚಿ ಬರುತ್ತಾರೆ.

ನೀಲವ್ವ ಬಾರಕೇರ, ಯಲ್ಲಮ್ಮ ಭೋವಿ, ನೀಲಮ್ಮ ಭೋವಿ, ಪ್ರೇಮಾ ಜಾಲಗಾರ, ಪುಷ್ಪಾ ಭೋವಿ, ಗೀತಾ ಭೋವಿ, ಬಸವ್ವ ಭೋವಿ, ಜಯವ್ವ ಬಾರಕೇರ, ಭೀಮ್ಮವ್ವ ಜಾಲಗಾರ, ಲಕ್ಷ್ಮವ್ವ ಜಾಲಗಾರ, ಕಮಲವ್ವ ಭೋವಿ, ಸುವರ್ಣ ಬಾರಕೇರ ಇತರರ ತಂಡ ಇಬ್ರಾಹಿಂಪುರ, ಕುಮಾರಗೊಪ್ಪ ನವಲಗುಂದದಲ್ಲಿ ಜೋಕುಮಾರನನ್ನು ಸಿಂಗರಿಸಿಕೊಂಡು ತೆಲೆ ಮೇಲೆ ಹೊತ್ತು ಓಣಿ ಓಣಿ ಮೆರೆಸುತ್ತಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಗವಂತನ ಶಕ್ತಿ ಪಡೆದವರಿಂದ ಡಿಕೆಶಿ ಸಿಎಂ ಆಗುವ ದಿನಾಂಕ ನಿಗದಿ : ಇಕ್ಬಾಲ್
ಜನ ನಂಗೆ ಇನ್ನೊಂದು ಅವಕಾಶ ಕೊಡಲಿ : ಎಚ್ಡಿಕೆ