ಕನ್ನಡಪ್ರಭ ವಾರ್ತೆ ಅರಸೀಕೆರೆ
ಬಸವಣ್ಣ ಕರ್ನಾಟಕದ ಸಾಂಸ್ಕೃತಿಕ ನಾಯಕರಾದರು ಎಂದಾಕ್ಷಣ ಕೇವಲ ಸಂಸ್ಕೃತಿಗೆ ಮಾತ್ರ ಮೀಸಲು ಅಂತ ಅಲ್ಲ. ಸಂಸ್ಕೃತಿಯಲ್ಲಿ ಧರ್ಮ, ಕಲೆ, ಸಾಹಿತ್ಯ, ಸಂಗೀತ, ನಾಟಕ, ಅರ್ಥಶಾಸ್ತ್ರ, ಸಮಾಜಶಾಸ್ತ್ರ, ರಾಜ್ಯಶಾಸ್ತ್ರ ಇದೆ. ಜೀವನದ ಸರ್ವತೋಮುಖ ಅಭಿವೃದ್ಧಿಗೆ ಬೇಕಾದ ಎಲ್ಲ ಚೈತನ್ಯವನ್ನು ಸಮಾಜಕ್ಕೆ ತಂದುಕೊಟ್ಟವರು ಬಸವಣ್ಣನವರು. ಅಂತಹ ಬಸವಣ್ಣನವರನ್ನು ಕರ್ನಾಟಕ ಸರ್ಕಾರ ‘ಕರ್ನಾಟಕದ ಸಾಂಸ್ಕೃತಿಕ ನಾಯಕ’ ಎಂದು ಘೋಷಣೆ ಮಾಡಿರುವುದು ಕರ್ನಾಟಕದ ಜನತೆಗೆ ಮಾತ್ರವಲ್ಲ, ಇಡೀ ಭಾರತೀಯರು ಮೆಚ್ಚಬಹುದಾದ, ಗೌರವಿಸಬಹುದಾದ ಸಂಗತಿ ಎಂದು ಹೇಳಿಕೆಯಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದರು.
ಸರ್ಕಾರಕ್ಕೆ ಮತ್ತೊಂದು ಮನವಿ ಮಾಡುತ್ತೇನೆ. ಕೇವಲ ಘೋಷಣೆ ಮಾಡಿದರೆ ಸಾಲದು, ಅದು ಕಲೆ, ಸಾಹಿತ್ಯ, ಸಂಗೀತ ಇವುಗಳ ನೆಲೆಯಲ್ಲಿ ಬಸವಣ್ಣನವರ ಆಶಯಗಳನ್ನು ಸಮಾಜದಲ್ಲಿ ಜಾರಿಗೆ ತರಬೇಕು. ಇವುಗಳಿಗೆ ಒಂದು ಸಮಿತಿಯನ್ನು ನೇಮಕ ಮಾಡಿ ಅದರಲ್ಲಿ ಅರ್ಹವ್ಯಕ್ತಿಗಳನ್ನು ಅಧ್ಯಕ್ಷರನ್ನಾಗಿ ಹಾಗೂ ಸದಸ್ಯರನ್ನಾಗಿ ನೇಮಿಸಬೇಕು. ಅವರ ಮೂಲಕ ಬಸವ ಸಂದೇಶವನ್ನು ಇಡೀ ನಾಡಿನಲ್ಲಿ ಬಿತ್ತರಿಸುವಂಥ ಕಾರ್ಯವನ್ನು ಸರ್ಕಾರ ಮಾಡಬೇಕು. ಅದಕ್ಕೆ ಬೇಕಾದ ಆರ್ಥಿಕ ನೆರವನ್ನು ಸರಕಾರ ನೀಡಬೇಕು ಎಂದು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ.ಬೆಂಗಳೂರಿನಲ್ಲಿ ಬಸವಣ್ಣನವರನ್ನು ಕರ್ನಾಟಕ ಸಾಂಸ್ಕೃತಿಕ ರಾಯಭಾರಿ ಎಂದು ಘೋಷಣೆ ಮಾಡಬೇಕೆಂದು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರು ಮುಖ್ಯಮಂತ್ರಿಗೆ ಮನವಿ ಮಾಡಿದ ಕ್ಷಣ.