ಜಲಜೀವನ ಮಿಷನ್ ಯೋಜನೆಯಲ್ಲಿ ಅಕ್ರಮ ತಡೆಯಲು ಆಗ್ರಹ

KannadaprabhaNewsNetwork | Published : Jan 19, 2024 1:45 AM

ಸಾರಾಂಶ

ಜಲಜೀವನ ಮಿಷನ್ ಯೋಜನೆಯಲ್ಲಿ ಅಕ್ರಮ ನಡೆಯದಂತೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಕರ್ನಾಟಕ ರಾಷ್ಟ್ರ ಸಮಿತಿಯ ಜಿಲ್ಲಾ ಘಟಕದ ಪದಾಧಿಕಾರಿಗಳು ಸಿಇಒ ಅವರಿಗೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಜಲಜೀವನ ಮಿಷನ್ ಯೋಜನೆಯಲ್ಲಿ ಅಕ್ರಮ ನಡೆಯದಂತೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಕರ್ನಾಟಕ ರಾಷ್ಟ್ರ ಸಮಿತಿಯ ಜಿಲ್ಲಾ ಘಟಕದ ಪದಾಧಿಕಾರಿಗಳು ಸಿಇಒ ಅವರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಶಿವಾನಂದ ಯಡಹಳ್ಳಿ ಮಾತನಾಡಿ, ಜನರ ಮನೆಗಳಿಗೆ ನೀರು ಒದಗಿಸುವ ಜಲಜೀವನ ಮಿಷನ್ ಯೋಜನೆ ಅನುಷ್ಠಾನದಲ್ಲಿ ಸಾಕಷ್ಟು ಅವ್ಯವಸ್ಥೆ, ಅವ್ಯವಹಾರ ನಡೆಯುತ್ತಿರುವುದು ಕಂಡು ಬಂದಿದೆ, ಸರ್ಕಾರಿ ಅಧಿಕಾರಿಗಳ ಮತ್ತು ಶಾಸಕರ ದಿವ್ಯ ನಿರ್ಲಕ್ಷದಿಂದಾಗಿ ಈಗಾಗಲೇ ಕೆಲವೊಂದು ಹಳ್ಳಿಗಳಲ್ಲಿ ಕಾಮಗಾರಿ ಪ್ರಾರಂಭವಾಗಿದೆ ಇನ್ನು ಕೆಲವೊಂದು ಹಳ್ಳಿಗಳಲ್ಲಿ ಚಾಲನೆಗೊಳ್ಳುತ್ತಿದೆ. ಈ ಯೋಜನೆ ಅತ್ಯಂತ ಕಳಪೆ ಮಟ್ಟದಲ್ಲಿ ನಿರ್ಮಾಣವಾಗುತ್ತಿದೆ ಎಂದು ಸಾರ್ವಜನಿಕ ವಲಯದಲ್ಲಿ ತೀವ್ರವಾದ ಚರ್ಚೆಗೆ ಗ್ರಾಸವಾಗುತ್ತಿದೆ. ಈ ಯೋಜನೆಯನ್ನು ಸಮರ್ಪಕವಾಗಿ ಜಾರಿಗೆ ತಂದು ಪ್ರತಿಯೊಂದು ಹಳ್ಳಿಗೂ ಶುದ್ಧ ಕುಡಿಯುವ ನೀರನ್ನು ಒದಗಿಸುವುದರ ಮೂಲಕ ಬರಗಾಲದ ನಾಡಿಗೆ ಜೀವ ಜಲ ಒದಗಿಸಿದ ಪುಣ್ಯ ಸರ್ಕಾರಕ್ಕೆ ಮತ್ತು ಪ್ರಾಮಾಣಿಕ ಅಧಿಕಾರಿ ವರ್ಗಕ್ಕೆ ತಟ್ಟುತ್ತದೆ ಎಂದರು.

ಜನರಿಗೆ ನೀರು ಒದಗಿಸುವ ಮಹತ್ವದ ಯೋಜನೆಗಾಗಿರುವ ಜಲಜೀವನ ಮಿಷನ್ ಸಮರ್ಪಕವಾಗಿ ಅನುಷ್ಠಾನಗೊಂಡರೆ ಮಾತ್ರ ಈ ಯೋಜನೆಯ ಲಾಭ ಜನರಿಗೆ ತಟ್ಟುತ್ತದೆ, ಯೋಜನೆಯಡಿಯಲ್ಲಿ ಕಳಪೆ ಕಾಮಗಾರಿ, ಅವ್ಯವಸ್ಥೆಯಿಂದ ಕೂಡಿದ ಅವೈಜ್ಞಾನಿಕ ಕಾಮಗಾರಿ ನಡೆದರೆ ಯಾವ ಪ್ರಯೋಜನವೂ ಇಲ್ಲದಂತಾಗುತ್ತದೆ ಎಂದು ಹೇಳಿದರು.

ವಿಶೇಷವಾಗಿ ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ವಿಧಾನಸಭಾ ಕ್ಷೇತ್ರದಲ್ಲಿ ಈ ಯೋಜನೆ ಅಸರ್ಮಪಕವಾಗಿ ಅನುಷ್ಠಾನಗೊಳ್ಳುತ್ತಿದೆ, ಈ ಹಿಂದಿನ ವರ್ಷದಲ್ಲಿ ಕಳಪೆ ಗುಣಮಟ್ಟದ ಕಾಮಗಾರಿಯಿಂದಾಗಿ ಶೇ.೯೦ ರಷ್ಟು ಈ ಯೋಜನೆ ದುರುಪಯೋಗಕ್ಕೆ ಒಳಗಾಗಿದೆ, ಸದ್ಯ ಶಾಸಕರು ಚಾಲನೆ ನೀಡುತ್ತಿರುವ ೨೦೨೨-೨೩ರ ಕಾಮಗಾರಿಗಳು ಗುಣಮಟ್ಟವನ್ನು ಕಾಯ್ದುಕೊಳ್ಳಬೇಕು, ಈ ಯೋಜನೆಯಡಿಯಲ್ಲಿ ಸಮರ್ಪಕ, ಗುಣಮಟ್ಟದ ಕಾಮಗಾರಿ ನಡೆಯುವ ನಿಟ್ಟಿನಲ್ಲಿ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಈ ಭಾಗದ ಮಹಿಳೆಯರು ಐದಾರು ಕಿಮೀ ದೂರದವರೆಗೆ ಬಿಂದಿಗೆಯನ್ನು ಹೊತ್ತುಕೊಂಡು ನೀರು ತರುವುದು ಸರ್ವೇಸಾಮಾನ್ಯವಾಗಿದೆ. ಈ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ಜಲಜೀವನ ಮಿಷನ್ ವರದಾನವಾಗಲಿದೆ, ಆದರೆ ಯೋಜನೆಗಳು ಕೇವಲ ದಾಖಲೆಗಳಿಗೆ ಸೀಮಿತವಾಗದೆ ಕಾರ್ಯರೂಪಕ್ಕೆ ಬಂದಾಗ ಮಾತ್ರ ಮಹಿಳೆಯರು ಎದುರಿಸುತ್ತಿರುವ ಬವಣೆ ತಪ್ಪಲಿದೆ ಎಂದರು.

ಮುಖಂಡರಾದ ರಾಕೇಶ ಇಂಗಳಗಿ, ಅಬ್ದುಲ್‌ಹಮೀದ್ ಇನಾಮದಾರ, ಪ್ರವೀಣ ಕನಸೆ ಮುಂತಾದವರು ಈ ಸಂದರ್ಭದಲ್ಲಿ ಇದ್ದರು.

Share this article