ಬಸವಣ್ಣ ಈ ಜಗತ್ತು ಕಂಡ ಶ್ರೇಷ್ಠ ಸಂತ: ಸುತ್ತೂರುಶ್ರೀ

KannadaprabhaNewsNetwork | Published : Jun 13, 2024 12:46 AM

ಸಾರಾಂಶ

ರಷ್ಯಾ ಕ್ರಾಂತಿ, ಕಾರ್ಲ್ ಮಾರ್ಕ್ಸ್ ತತ್ವಗಳು ಜಗತ್ತಿನಲ್ಲಿ ಶಾಶ್ವತ ಎಂದು ಭಾವಿಸಲಾಗಿತ್ತು, ಆದರೆ ಕಾಲಚಕ್ರ ಉರುಳಿದಂತೆ ಬಹಳ ಕಾಲ ಉಳಿಯಲಿಲ್ಲ, ಬಸವಣ್ಣ 12 ಶತಮಾನದಲ್ಲಿ ಕೈಗೊಂಡ ಸಾಮಾಜಿಕ ಕ್ರಾಂತಿ ಇಂದಿಗೂ ಫಲ ನೀಡುತ್ತಿವೆ, ಸಮಾನತೆ, ಮಹಿಳಾ ಸ್ವಾತಂತ್ರ್ಯ, ಶೋಷಿತರ ಧ್ವನಿಯಾದ ಬಸವಣ್ಣ, ಕಾಯಕಕ್ಕೆ ನೀಡಿದ ಮಹತ್ವ ಅಮೂಲ್ಯವಾದುದು.

ಕನ್ನಡಪ್ರಭ ವಾರ್ತೆ ನಂಜನಗೂಡು

ಬಸವಣ್ಣನವರು ಈ ಜಗತ್ತು ಕಂಡ ಶ್ರೇಷ್ಠ ಸಂತ, ಅವರು 900 ವರ್ಷಗಳ ಹಿಂದೆ ಧರ್ಮ ಮತ್ತು ಆಧ್ಯಾತ್ಮದ ತಳಹದಿಯ ಮೇಲೆ ಕಟ್ಟಿದ ಶರಣ ಸಂಸ್ಕೃತಿ ಎಲ್ಲ ಕಾಲಕ್ಕೂ ಸಲ್ಲುತ್ತದೆ ಎಂದು ಸುತ್ತೂರು ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.

ಪಟ್ಟಣದ ಜೆಎಸ್ಎಸ್ ಮಂಗಳ ಮಂಟಪದಲ್ಲಿ ಬುಧವಾರ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ತಾಲೂಕು ಘಟಕ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ರಷ್ಯಾ ಕ್ರಾಂತಿ, ಕಾರ್ಲ್ ಮಾರ್ಕ್ಸ್ ತತ್ವಗಳು ಜಗತ್ತಿನಲ್ಲಿ ಶಾಶ್ವತ ಎಂದು ಭಾವಿಸಲಾಗಿತ್ತು, ಆದರೆ ಕಾಲಚಕ್ರ ಉರುಳಿದಂತೆ ಬಹಳ ಕಾಲ ಉಳಿಯಲಿಲ್ಲ, ಬಸವಣ್ಣ 12 ಶತಮಾನದಲ್ಲಿ ಕೈಗೊಂಡ ಸಾಮಾಜಿಕ ಕ್ರಾಂತಿ ಇಂದಿಗೂ ಫಲ ನೀಡುತ್ತಿವೆ, ಸಮಾನತೆ, ಮಹಿಳಾ ಸ್ವಾತಂತ್ರ್ಯ, ಶೋಷಿತರ ಧ್ವನಿಯಾದ ಬಸವಣ್ಣ, ಕಾಯಕಕ್ಕೆ ನೀಡಿದ ಮಹತ್ವ ಅಮೂಲ್ಯವಾದುದು, ಬಸವಣ್ಣ ವಾತ್ಸಲ್ಯದಿಂದ ಬದುಕುವ ರೀತಿ ನೀತಿಗಳನ್ನು ಬೋಧಿಸಿ ನಮ್ಮ ಭೌದ್ದಿಕ, ಮಾನಸಿಕ ವಿಕಾಸಕ್ಕೆ ಅದ್ಯತೆ ಕೊಟ್ಟವರು, ಭಕ್ತ-ಭಗವಂತನ ನಡುವೆ ನೇರವಾದ ಸಂಬಂಧವಿದೆ ಎಂದು ಸರಳವಾದ ವಚನಗಳ ಮೂಲಕ ಸಾಮಾನ್ಯರಿಗೂ ಅರ್ಥವಾಗುವ ರೀತಿಯಲ್ಲಿ ಬೋಧಿಸಿದರು. ಅವರ ತತ್ವ, ಆದರ್ಶಗಳನ್ನು ಯುವ ಸಮೂಹ ಪಾಲಿಸಬೇಕು ಎಂದರು.

ಚುಂಚನಹಳ್ಳಿ ಶ್ರೀಪಟ್ಟದ ಮಠದ ಚೆನ್ನಬಸವ ಸ್ವಾಮೀಜಿ ಮಾತನಾಡಿ, ಬಸವಣ್ಣನವರು ಪ್ರತಿಪಾದಿಸಿದ ತತ್ವ ವಿಚಾರಗಲಂತೆ ನಡೆದರೆ ಸಮಾಜದಲ್ಲಿ ಉತ್ತಮ ಬದಲಾವಣೆ ಕಾಣಲು ಸಾಧ್ಯವಾಗುತ್ತದೆ, ಅವರ ಶರಣ ಸಿದ್ಧಾತಗಳು ಕಾಲ, ದೇಶಗಳನ್ನು ಮೀರಿದ್ದು, ವಿಶ್ವದ ಎಲ್ಲ ದೇಶಗಳು ಅವರ ಸಮಾಜಮುಖಿ ಚಿಂತನೆಯನ್ನು ಮೆಚ್ಚಲೇಬೇಕು, ಪಟ್ಟಣದಲ್ಲಿ ಬಸವಜಯಂತಿ ಕಾರ್ಯಕ್ರಮವನ್ನು ಆಯೋಜಕರು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ, ಇಂತಹ ಆಚರಣೆಗಳು ಸಮಾಜ ಬಗ್ಗೂಡುವಿಕೆಯಿಂದ ಸಹ ಜೀವನ ನಡೆಸಲು ಪ್ರೇರಣದಾಯಿಯಾಗಿವೆ. ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಬಸವ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದೆ, ಇದು ನಮ್ಮ ನಂಬಿಕೆ, ಆಚರಣೆಗಳಿಗೆ ಮಹತ್ವವನ್ನು ಕಲ್ಪಿಸುತ್ತವೆ ಎಂದರು.

ಲಾಳನಹಳ್ಳಿಯ ಶರಣೆ ಜಯದೇವಿ ತಾಯಿ, ದೇವನೂರು ಮಹಾಂತ ಸ್ವಾಮೀಜಿ, ಮಲ್ಲನಮೂಲೆ ಮಠದ ಚೆನ್ನಬಸವ ಸ್ವಾಮೀಜಿ ಮಾತನಾಡಿದರು.

ಬಸವ ಜಯಂತಿ ಪ್ರಯುಕ್ತ ಬುಧವಾರ ಬೆಳಗ್ಗೆ ಪಟ್ಟಣದ ಗೌರಿ ಘಟ್ಟ ಬೀದಿಯ ಶಿವಪಾದ ಸ್ವಾಮಿ ಗದ್ದಿಗೆಯಿಂದ ಬಸವೇಶ್ವರರ ಪುತ್ಥಳಿಯ ಭವ್ಯ ಮೆರವಣಿಗೆಗೆ ತುಮಕೂರಿನ ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ಚಾಲನೆ ನೀಡಿದರು.

ಮೆರವಣಿಗೆಯಲ್ಲಿ ನಂದಿಧ್ವಜ, ವೀರಗಾಸೆ, ಭಜನಾತಂಡ, ಜಾನಪದ ಕಲಾತಂಡ, ಅಲಂಕೃತ ಸ್ತಬ್ದ ಚಿತ್ರಗಳು ರಾಷ್ಟ್ರಪತಿ ರಸ್ತೆ, ಮಹಾತ್ಮಾಗಾಂಧಿ ರಸ್ತೆಗಳ ಮೂಲಕ ಜೆಎಸ್ಎಸ್ ಮಂಗಳ ಮಂಟಪ ತಲುಪಿತು. ಅಕ್ಕನ ಬಳಗದವರು ಮೆರವಣಿಗೆಯನ್ನು ಪೂರ್ಣಕುಂಭ ಸ್ವಾಗತ ನೀಡಿ ಬರಮಾಡಿಕೊಂಡರು. ಮಹಾಸಭಾದ ಅಧ್ಯಕ್ಷ ದೇವನೂರು ಮಹಾದೇವಪ್ಪ ಪ್ರಾಸ್ತವಿಕ ಮಾತನಾಡಿದರು.

ಹೊನ್ನಲಗೆರೆ ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ನಾಗರಾಜೇಂದ್ರ ಸ್ವಾಮೀಜಿ, ಅಖಿಲ ಭಾರತ ವೀರಶೈವ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಬದನವಾಳು ಮಂಜುನಾಥ್, ಖಜಾಂಚಿ ಮಾಧು ಕೆ.ಎನ್. ಚಿನ್ನಸ್ವಾಮಿ ಎಚ್.ಎಂ. ಮಂಜುಳಾ ಮಧು, ಎಂ.ಕೆ. ಶಿವಬಸಪ್ಪ ಡಿ.ಎಂ. ಶಿವಪ್ರಕಾಶ್, ಎಸ್.ಎನ್. ಮಲ್ಲೇಶ್, ಲೋಕೇಶ್, ಸುಬ್ಬಣ್ಣ, ಚಿಕ್ಕಮಾದಪ್ಪ, ಎಚ್.ಎಂ. ಮಹದೇವಮೂರ್ತಿ, ಬಿ.ಬಿ. ಶಿವನಾಗಪ, ಟಿ.ಎಸ್. ವೀರೇಶ್ ಕುಮಾರ್, ಹೆಮ್ಮರಗಾಲ ಉಮೇಶ್, ಗುರುಮಲ್ಲಪ್ಪ, ಬಿಜೆಪಿ ರಾಜ್ಯ ಮುಖಂಡ ಎಸ್. ಮಹದೇವಯ್ಯ, ಬಿ.ಎಸ್. ಮಹದೇವಪ್ಪ, ಕ್ರಾಂತಿಕಾರಿ ಬಸವಣ್ಣ ಸಂಘದ ಅಧ್ಯಕ್ಷ ಜಗದೀಶ್ ಇದ್ದರು.

Share this article