ಗದಗ: ೧೨ನೇ ಶತಮಾನದಲ್ಲಿ ಸಮಾಜೋಧಾರ್ಮಿಕ ಚಳವಳಿಯ ನೇತೃತ್ವ ವಹಿಸಿ ಸಮಾಜದ ಓರೆಕೋರೆಗಳನ್ನು ತಿದ್ದಿ ಸಮ ಸಮಾಜದ ನಿರ್ಮಾಣಕ್ಕೆ ಜೊತೆಗೂಡಿ ಹೆಜ್ಜೆ ಹಾಕಿದ ವ್ಯಕ್ತಿ ಬಸವಣ್ಣ. ಇಷ್ಟಲಿಂಗದ ಮೂಲಕ ದೇಹವನ್ನೇ ದೇವಾಲಯವಾಗಿಸಿ ಆಧ್ಯಾತ್ಮಿಕ ಸಮಾನತೆ, ಕಾಯಕಕ್ಕೆ ದೈವಿಕತೆ, ದಾಸೋಹಕ್ಕೆ ಶ್ರೇಷ್ಠತೆ ತಂದು ಕೊಟ್ಟವರು ವಿಶ್ವಗುರು ಬಸವಣ್ಣನವರು. ಬಹುತ್ವದ ಭಾರತಕ್ಕೆ ಬಸವಣ್ಣನೇ ಬೆಳಕು ಎಂದು ಚಿಂತಕ ಅಶೋಕ ಬರಗುಂಡಿ ಹೇಳಿದರು.
ಡಾ. ಅಂಬೇಡ್ಕರ ರಚಿಸಿದ ಸಂವಿಧಾನದಲ್ಲಿ ಮತ್ತು ವಿಶ್ವಸಂಸ್ಥೆ ಪ್ರತಿಪಾದಿಸಿದ ಮಾನವ ಹಕ್ಕುಗಳಲ್ಲಿ ಬಸವಾದಿ ಶರಣರು ಪ್ರತಿಪಾದಿಸಿದ ಮೌಲ್ಯಗಳ ತಿರುಳನ್ನು ಕಾಣುತ್ತೇವೆ. ಎಲ್ಲರಲ್ಲಿರುವ ಮೂಲ ವಸ್ತು ಒಂದೇ ಆಗಿರುವದರಿಂದ ಬೇಧಭಾವ ಸಲ್ಲದು. ಬಹುತ್ವದ ಭಾರತಕ್ಕೆ ಬಸವಣ್ಣನವರ ವಿಚಾರಗಳೇ ಪ್ರಧಾನವಾಗಿವೆ. ಬಸವಣ್ಣ ಈ ಕಾಲದ ಅನಿವಾರ್ಯ ಹಾಗೂ ಮಾದರಿ ವ್ಯಕ್ತಿ. ಈ ಹಿನ್ನೆಲೆಯಲ್ಲಿ ಕರ್ನಾಟಕ ಸಾಂಸ್ಕೃತಿಕ ನಾಯಕನಾಗಿ ನಮ್ಮ ಮನೆ ಮನ ಬೆಳಗುವ ವ್ಯಕ್ತಿಯಾಗಿದ್ದಾನೆ ಎಂದರು.
ಕಸಾಪ ಜಿಲ್ಲಾಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ, ಭಾರತ ಆಧ್ಯಾತ್ಮಿಕತೆಯ ನೆಲೆವೀಡು ೧೨ನೇ ಶತಮಾನದಲ್ಲಿ ಆಧ್ಯಾತ್ಮಕ್ಕೂ ಕೂಡಾ ಹೊಸ ಭಾಷ್ಯ ಬರೆದವರು ಶರಣರಾಗಿದ್ದಾರೆ. ಲೌಕಿಕ ಮತ್ತು ಪಾರಮಾರ್ಥಿಕ ಬದುಕನ್ನು ಸುಂದರಗೊಳಿಸುವ ಸಿದ್ಧಾಂತ ಮಂಡಿಸಿದ್ದಾರೆ. ಅನೇಕ ಹೊಸ ಹೊಳಹುಗಳಿಗೆ ಬಸವಾದಿಶರಣರ ಕಾಲ ಕಾರಣವಾಗಿದೆ ಎಂದರು.ಈ ವೇಳೆ ಬಸವಣ್ಣನವರ ಜೀವನ ಚರಿತ್ರೆಯ ಕುರಿತಾದ ಛಾಯಾಚಿತ್ರ ಚಿತ್ರಕಲಾವಿದ, ಸಾಹಿತಿ ಪುಂಡಲೀಕ ಕಲ್ಲಿಗನೂರ ಪ್ರದರ್ಶಿಸಿ ವಿವರಿಸಿದರು.
ನೀಲಗಂಗಾ ಪ್ರಕಾಶನದಿಂದ ಪ್ರಕಟಿಸಿದ ಟಿ.ಆರ್. ಚಂದ್ರಶೇಖರ ರಚಿಸಿದ ಬಸವಪ್ರಣೀತ ಲಿಂಗಾಯತ ಧರ್ಮ ಪುಸ್ತಕವನ್ನು ಜಿಲ್ಲಾ ಖಜಾನೆ ಅಧಿಕಾರಿಗಳು ಹಾಗೂ ಸಾಹಿತಿ ವಿ. ಹರಿನಾಥಬಾಬು ಲೋಕಾರ್ಪಣೆಗೊಳಿಸಿದರು.ಪ್ರಗತಿಪರ ಚಿಂತಕ ಶೇಕಣ್ಣ ಕವಳಿಕಾಯಿ, ಡಾ.ಐ.ಬಿ.ಪಾಟೀಲ, ಪ್ರೊ. ಅನ್ನದಾನಿ ಹಿರೇಮಠ, ಡಾ. ಶಂಕರ ಬಾರಿಕೇರ, ಪ್ರೋ. ಚಂದ್ರಶೇಖರ ವಸ್ತ್ರದ, ಸುರೇಶ ಕುಂಬಾರ, ರಾಜಶೇಖರ ಕರಡಿ, ಡಾ. ನಾಗರಾಜ ಬಳಿಗೇರ, ಡಾ. ಬಿ.ಎಲ್.ಚವ್ಹಾಣ,ಮರಳಸಿದ್ದಪ್ಪ ದೊಡ್ಡಮನಿ, ಅಶೋಕ ಸುತಾರ, ಪ್ರೊ. ಐ.ಎಸ್.ಹಿರೇಮಠ, ನಾಗಭೂಷಣ ಬಡಿಗಣ್ಣವರ ಸೇರಿದಂತೆ ಇತರರು ಇದ್ದರು.
ಶ್ರೀಕಾಂತ ಬಡ್ಡೂರ ಸ್ವಾಗತಿಸಿದರು. ಶಿವಾನಂದ ಗಿಡ್ನಂದಿ ನಿರೂಪಿಸಿದರು. ಪ್ರೊ. ಸಿದ್ದಲಿಂಗೇಶ ಸಜ್ಜನಶೆಟ್ಟರ ವಂದಿಸಿದರು.