ಶೋಷಿತರು, ಹಿಂದುಳಿದವರನ್ನು ಸಂಘಟಿಸಿದ್ದೇ ಬಸವಣ್ಣ: ಕುಂ.ವೀರಭದ್ರಪ್ಪ

KannadaprabhaNewsNetwork | Published : Jun 30, 2024 12:45 AM

ಸಾರಾಂಶ

ಲಿಂಗಾಯಿತ ಚಳವಳಿ ಅಂದ್ರೆ ಅದು ಲಿಂಗಾಯಿತರಿಗಷ್ಟೇ ಅಲ್ಲ. ಶೋಷಿತರು, ಹಿಂದುಳಿದವರನ್ನು ಸಂಘಟಿಸಿದ್ದು ಬಸವಣ್ಣನವರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಲಿಂಗಾಯಿತ ಚಳವಳಿ ಅಂದ್ರೆ ಅದು ಲಿಂಗಾಯಿತರಿಗಷ್ಟೇ ಅಲ್ಲ. ಶೋಷಿತರು, ಹಿಂದುಳಿದವರನ್ನು ಸಂಘಟಿಸಿದ್ದು ಬಸವಣ್ಣನವರು. ಮಹಿಳೆಯರನ್ನು ಅಕ್ಷರಸ್ಥರನ್ನಾಗಿ ಮಾಡಲು ನಮ್ಮ ಸರ್ಕಾರ ಕೋಟ್ಯಂತರ ರೂಪಾಯಿ ವ್ಯಯಿಸುತ್ತಿದೆ. ಆದರೆ, ಬಸವಣ್ಣನವರು 12ನೇ ಶತಮಾನದಲ್ಲಿಯೇ ಯಾವುದೇ ಹಣ ಖರ್ಚು ಮಾಡದೇ 700 ಜನ ಮಹಿಳೆಯರನ್ನು ಅಕ್ಷರಸ್ಥರನ್ನಾಗಿ ಮಾಡಿ, ವಚನಕಾರ್ತಿಯರನ್ನಾಗಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಇಂತಹ ಬಸವಣ್ಣನವರನ್ನು ಮನುವಾದಿಗಳು ಬಚ್ಚಿಟ್ಟಿದ್ದರು. ಫ.ಗು.ಹಳಕಟ್ಟಿ ಅವರು ಇರದೇ ಹೋಗಿದ್ದರೆ ವಚನ ಸಾಹಿತ್ಯ ಸಿಗುತ್ತಿರಲಿಲ್ಲ ಎಂದು ಹಿರಿಯ ಸಾಹಿತಿ ಕುಂ. ವೀರಭದ್ರಪ್ಪ ಹೇಳಿದರು.

ನವನಗರದ ಡಾ.ಬಿ.ಆರ್.ಅಂಬೇಡ್ಕರ್‌ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು, ಬಾಗಲಕೋಟೆ ಜಿಲ್ಲಾ ಹಾಗೂ ತಾಲೂಕು ಘಟಕದಿಂದ ಎರಡು ದಿನ ಆಯೋಸಿರುವ ಬಾಗಲಕೋಟೆ ಜಿಲ್ಲಾ 11ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಲಿಂಗಾಯತ ಚಳವಳಿ ಶೋಷಿತ, ಹಿಂದುಳಿದವರ ಧ್ವನಿ ಹೊರತು ಅದು ಜಾತಿವಾಚಕ ಅಲ್ಲ. ಸಮಾಜದ ಬೇರುಮಟ್ಟದಿಂದ ಲಿಂಗಾಯಿತ ಧರ್ಮ, ವಚನ ಸಾಹಿತ್ಯವನ್ನು ಜನಪ್ರಿಯಗೊಳಿಸಿದ್ದರೆ ಈ ದೇಶದಲ್ಲಿ ಇಸ್ಲಾಂ, ಕ್ರಿಶ್ಚಿಯನ್ ಇರುತ್ತಿರಲಿಲ್ಲ. ಲಿಂಗಾಯಿತ ಧರ್ಮ ಮನುಷ್ಯ ಧರ್ಮವಾಗಿದೆ ಎಂದು ಅಭಿಪ್ರಾಯಪಟ್ಟರು.

ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಗದಗ-ಯಡೆಯೂರು ತೋಂಟದಾರ್ಯ ಸಂಸ್ಥಾನಮಠದ ಡಾ.ತೋಂಟದ ಸಿದ್ಧರಾಮ ಸ್ವಾಮೀಜಿ, ಸಮ್ಮೇಳನಾಧ್ಯಕ್ಷ ಡಾ.ತಾತಾಸಾಹೇಬ ಬಾಂಗಿ ಅವರಿಗೆ ಕನ್ನಡ ಧ್ವಜ ಹಸ್ತಾಂತರ ಮಾಡಿದರು.

ಶಾಸಕ ಎಚ್‌.ವೈ. ಮೇಟಿ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಪಿ.ಎಚ್. ಪೂಜಾರ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಜಿ. ನಂಜಯ್ಯನಮಠ ಮಾತನಾಡಿದರು. ಕಾಂಗ್ರೆಸ್ ಮುಖಂಡ ನಾಗರಾಜ ಹದ್ಲಿ, ನಂದಿನಿ ಬಾಂಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರ ಕರ್ಣಕುಮಾರ ಜೈನಾಪೂರ, ಕಸಾಪ ರಾಜ್ಯಕಾರ್ಯಕಾರಿಣಿ ಸದಸ್ಯ ಜಿ.ಕೆ. ತಳವಾರ, ಡಾ.ಪ್ರಕಾಶ ಖಾಡೆ, ಕಸಾಪ ಜಿಲ್ಲಾಧ್ಯಕ್ಷ ಶಿವಾನಂದ ಶೆಲ್ಲಿಕೇರಿ, ತಾಲೂಕಾಧ್ಯಕ್ಷ ಪಾಂಡುರಂಗ ಸಣ್ಣಪ್ಪನವರ, ಗೌರವ ಕಾರ್ಯದರ್ಶಿ ಡಾ.ಚಂದ್ರಶೇಖರ ಕಾಳನ್ನವರ, ಕೋಶಾಧ್ಯಕ್ಷ ಡಾ.ಸಿ.ಎಂ.ಜೋಶಿ, ಸಂಘಟನಾ ಕಾರ್ಯದರ್ಶಿಗಳಾದ ಸಿ.ಎಸ್. ನಾಗನೂರ, ಶಂಕರ ಹೂಲಿ, ಡಾ.ಗೀತಾ ದಾನಶೆಟ್ಟಿ, ಯೋಗೇಶ ಲಮಾಣಿ, ವಿವಿಧ ತಾಲೂಕು ಘಟಕಗಳ ಅಧ್ಯಕ್ಷರಾದ ಆನಂದ ಪೂಜಾರಿ, ಗುರುರಾಜ ಲೂತಿ, ಸಂತೋಷ ತಳಕೇರಿ, ಬಿ.ಎಫ್. ಹೊರಕೇರಿ, ಮಹಾದೇವ ಕಂಬಾಗಿ, ಮಲ್ಲಿಕಾರ್ಜುನ ಸಜ್ಜನ ಸೇರಿದಂತೆ ಅನೇಕರು ವೇದಿಕೆಯಲ್ಲಿದ್ದರು.

ಸರ್ಕಾರಿ ಬಾಲಕಿಯರ ಪಪೂ ಕಾಲೇಜು ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ಕೆರೂರ ಗೌರಿಶಂಕರ ಕಲಾತಂಡದವರು ರೈತಗೀತೆ ಪ್ರಸ್ತುತಪಡಿಸಿದರು. ಜಿಲ್ಲಾಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಪ್ರಾಸ್ತಾವಿಕ ಮಾತನಾಡಿದರು. ತಾಲೂಕಾಧ್ಯಕ್ಷ ಪಾಂಡುರಂಗ ಸಣ್ಣಪ್ಪನವರ ಸ್ವಾಗತಿಸಿದರು. ಡಾ.ಚಂದ್ರಶೇಖರ ಕಾಳನ್ನವರ, ಸಂಗಮೇಶ ಸಣ್ಣತಂಗಿ ನಿರೂಪಿಸಿದರು. ಕ್ರಿಶ್ಚಿಯನ್, ಇಸ್ಲಾಂ ಧರ್ಮಗಳು ಇರುತ್ತಿರಲಿಲ್ಲ:

ಸಮಾಜದ ಬೇರುಮಟ್ಟದಿಂದ ಲಿಂಗಾಯಿತ ಧರ್ಮ, ವಚನ ಸಾಹಿತ್ಯವನ್ನು ಜನಪ್ರಿಯಗೊಳಿಸಿದ್ದರೆ ಈ ದೇಶದಲ್ಲಿ ಇಸ್ಲಾಂ, ಕ್ರಿಶ್ಚಿಯನ್ ಇರುತ್ತಿರಲಿಲ್ಲ. ಲಿಂಗಾಯಿತ ಧರ್ಮ ಮನುಷ್ಯ ಧರ್ಮವಾಗಿದೆ. ಬಸವಣ್ಣನವರು ಶೋಷಿತರ ಧ್ವನಿ. ಮಹಿಳೆಯರಿಗೆ ಸರ್ಕಾರ ಫ್ರೀ ಬಸ್ ಪ್ರಯಾಣ ಸೌಲಭ್ಯ ಮಾಡಿದ್ದು ಸ್ವಾಗತಾರ್ಹವಾಗಿದೆ. ಮಹಿಳೆಯರು ನಾಡು ಸುತ್ತುವ ಅವಕಾಶ ನೀಡಿದ್ದು ಅಭಿನಂದನೀಯ ಎಂದು ಸಾಹಿತಿ ಕುಂ.ವೀರಭದ್ರಪ್ಪ ಹೇಳಿದರು.

Share this article