ಶನಿವಾರ ಬೆಳಗ್ಗೆ ವಿ.ಸಿ.ಫಾರಂಗೆ ಭೇಟಿ ನೀಡಿದ ಎಚ್.ಡಿ.ಕುಮಾರಸ್ವಾಮಿ ಅವರು ಕ್ರೀಡಾಂಗಣ ನಿರ್ಮಾಣವಾಗಲಿರುವ ಸ್ಥಳವನ್ನು ಹಾಗೂ ವೇದಿಕೆ ಕಾರ್ಯಕ್ರಮದ ಸಿದ್ಧತೆಗಳನ್ನು ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಮಂಡ್ಯ

ತಾಲೂಕಿನ ವಿ.ಸಿ.ಫಾರಂನಲ್ಲಿ ಕೇಂದ್ರ ಸರ್ಕಾರದ ಖೇಲೋ ಇಂಡಿಯಾ ಯೋಜನೆಯಡಿ ₹೧೪ ಕೋಟಿ ವೆಚ್ಚದಲ್ಲಿ ನಿರ್ಮಿಸಲಿರುವ ಬಹುಪಯೋಗಿ ಒಳಾಂಗಣ ಕ್ರೀಡಾಂಗಣಕ್ಕೆ ಮಾ.೧೪ರಂದು ಕೇಂದ್ರ ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಬಲೀಕರಣ ಖಾತೆ ಸಚಿವ ಮಾನ್ಸೂಕ್ ಮಾಂಡವೀಯ ಅವರು ಶಂಕುಸ್ಥಾಪನೆ ನೆರವೇರಿಸುವರು ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ಶನಿವಾರ ಬೆಳಗ್ಗೆ ವಿ.ಸಿ.ಫಾರಂಗೆ ಭೇಟಿ ನೀಡಿದ ಎಚ್.ಡಿ.ಕುಮಾರಸ್ವಾಮಿ ಅವರು ಕ್ರೀಡಾಂಗಣ ನಿರ್ಮಾಣವಾಗಲಿರುವ ಸ್ಥಳವನ್ನು ಹಾಗೂ ವೇದಿಕೆ ಕಾರ್ಯಕ್ರಮದ ಸಿದ್ಧತೆಗಳನ್ನು ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ವಿ.ಸಿ.ಫಾರಂನ ೧.೫ ಎಕರೆ ಜಾಗದಲ್ಲಿ ಸುಸಜ್ಜಿತ ಕ್ರೀಡಾಂಗಣ ನಿರ್ಮಿಸಲಿದ್ದೇವೆ. ಸ್ವತಃ ಈ ಕಾರ್ಯಕ್ರಮಕ್ಕೆ ಕೇಂದ್ರ ಕ್ರೀಡಾ ಸಚಿವರೇ ಆಗಮಿಸುತ್ತಿದ್ದಾರೆ. ಗ್ರಾಮೀಣ ಮಕ್ಕಳಿಗೆ ಕ್ರೀಡೆಯಲ್ಲಿ ಪ್ರೋತ್ಸಾಹ ನೀಡಲು ಮುಂದಾಗಿದ್ದೇವೆ. ಅಲ್ಲದೆ, ಈ ಜಾಗದಲ್ಲಿ ಇನ್ನೂ ಹೆಚ್ಚಿನ ಕ್ರೀಡಾ ಸೌಲಭ್ಯ ಕಲ್ಪಿಸಲು ಮತ್ತಷ್ಟು ಜಾಗ ಬೇಕಿದೆ. ರಾಜ್ಯಸರ್ಕಾರ ಜಾಗ ಕೊಡುತ್ತದೆ ಎನ್ನುವ ನಿರೀಕ್ಷೆ ಇದೆ ಎಂದು ವಿಶ್ವಾಸದಿಂದ ಹೇಳಿದರು.

ಕ್ರೀಡಾಂಗಣಕ್ಕೆ ಮಂಡ್ಯ ನಗರದಲ್ಲಿಯೇ ಸ್ಥಳ ಕೊಡಿ ಎಂದು ಮೊದಲು ನಾನು ಸರ್ಕಾರವನ್ನು ಕೋರಿದ್ದೆ. ಆದರೆ, ನಗರದಲ್ಲಿ ಜಾಗ ಇಲ್ಲದ ಕಾರಣಕ್ಕೆ ವಿ.ಸಿ.ಫಾರಂನಲ್ಲಿ ಸ್ಥಳಾವಕಾಶ ನೀಡಿದ್ದಾರೆ. ಐದು ಎಕರೆ ಪ್ರದೇಶ ಬೇಕಾಗಿದೆ. ಮುಂದಿನ ದಿನಗಳಲ್ಲಿ ಕ್ರೀಡಾ ಸೌಲಭ್ಯಗಳನ್ನು ಐದು ಎಕರೆಗೂ ವಿಸ್ತರಣೆ ಮಾಡುತ್ತೇವೆ. ಇದರಲ್ಲಿ ಯಾವುದೇ ರಾಜಕೀಯ ಇಲ್ಲ. ಯೋಜನೆ ಎಲ್ಲೇ ಬಂದರೂ ಅದು ಮಂಡ್ಯ ಜಿಲ್ಲೆಯಲ್ಲೇ ಇರುತ್ತದೆ ಎಂದರು

ಮಾಜಿ ಸಚಿವ ಡಿ.ಸಿ.ತಮ್ಮಣ್ಣ, ಶಾಸಕ ಎಚ್.ಟಿ.ಮಂಜು, ವಿಧಾನ ಪರಿಷತ್ ಸದಸ್ಯ ಕೆ.ವಿವೇಕಾನಂದ, ಮಂಡ್ಯ ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ಮುಖಂಡ ಬಿ.ಆರ್.ರಾಮಚಂದ್ರ ಇತರರಿದ್ದರು.

------

ವಿಕಲಚೇತನರಿಗೆ ೩೮೮ ಎಲೆಕ್ಟ್ರಿಕ್ ವಾಹನ ವಿತರಣೆ

ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಮಾ.೧೪ರಂದು ನಡೆಯಲಿರುವ ಕ್ರೀಡಾಂಗಣ ಉದ್ಘಾಟನಾ ಕಾರ್ಯಕ್ರಮದಲ್ಲಿಯೇ ೩೮೮ ವಿಕಲಚೇತನರಿಗೆ ಹಂಚಿಕೆ ಮಾಡಲಿರುವ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಪರಿಶೀಲನೆ ನಡೆಸಿದರು. ಭಾರತದ ಹೆಸರಾಂತ ದ್ವಿಚಕ್ರ ವಾಹನ ತಯಾರಿಕೆ ಕಂಪನಿ ಟಿವಿಎಸ್ ಹಾಗೂ ಕೇಂದ್ರದ ಉಕ್ಕು ಸಚಿವಾಲಯದ ಅಧೀನದಲ್ಲಿರುವ ಭಾರತೀಯ ಉಕ್ಕು ಪ್ರಾಧಿಕಾರ ಎರಡೂ ಕಂಪನಿಗಳು ತಮ್ಮ ಸಿಎಸ್‌ಆರ್ ನಿಧಿಯಿಂದ ಈ ವಾಹನಗಳನ್ನು ಕೊಡುತ್ತಿವೆ. ಟಿವಿಎಸ್ ಕ್ಯೂರ್ಬ್ ಎಲೆಕ್ಟ್ರಿಕ್ ವಾಹನಗಳನ್ನು ನೀಡಲಾಗುತ್ತಿದೆ. ಆ ವಾಹನಗಳನ್ನು ಖುದ್ದು ಪರಿಶೀಲನೆ ನಡೆಸಿದರು.

-------

ಎಆರ್‌ಎಐ ಸಂಶೋಧನಾ ಕೇಂದ್ರಕ್ಕೆ ಜಾಗ; ಸರ್ಕಾರಕ್ಕೆ ಎಚ್‌ಡಿಕೆ ಅಭಿನಂದನೆ

ಮಂಡ್ಯದಲ್ಲಿ ಆಟೋಮೋಟಿವ್ ರಿಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾ (ಎಆರ್‌ಎಐ) ಸಂಶೋಧನೆ ಮತ್ತು ಪರೀಕ್ಷಾ ಕೇಂದ್ರ ತೆರೆಯಲು ೧೦೦ ಎಕರೆ ಭೂಮಿಯನ್ನು ನೀಡುವುದಾಗಿ ರಾಜ್ಯ ಸರ್ಕಾರ ಬಜೆಟ್‌ನಲ್ಲಿಯೇ ಘೋಷಣೆ ಮಾಡಿರುವುದು ಸ್ವಾಗತಾರ್ಹ. ಇದಕ್ಕಾಗಿ ಸರ್ಕಾರ ಮತ್ತು ಮುಖ್ಯಮಂತ್ರಿಗಳನ್ನು ಅಭಿನಂದಿಸುತ್ತೇನೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು.

ಮಂಡ್ಯದಲ್ಲಿ ಕೈಗಾರಿಕೆಗೆ ಅಭಿವೃದ್ಧಿಗೆ ಪೂರಕ ವ್ಯವಸ್ಥೆಯನ್ನು ಸೃಷ್ಟಿ ಮಾಡಬೇಕು. ಅದಕ್ಕಾಗಿ ಎಲ್ಲರೂ ಶ್ರಮಿಸಬೇಕು. ಎಆರ್‌ಎಐ ಕೇಂದ್ರ ಸ್ಥಾಪನೆಗೆ ಮೊದಲ ಹಂತದಲ್ಲಿ ಕೇಂದ್ರ ಸರ್ಕಾರವು ₹೫೦೦ ಕೋಟಿ ವೆಚ್ಚ ಮಾಡುತ್ತಿದೆ. ನಂತರ ಇನ್ನೂ ₹೫೦೦ ಕೋಟಿ ಹಣ ಹೂಡಿಕೆ ಮಾಡಲಾಗುವುದು. ಆದಷ್ಟು ಬೇಗ ನನ್ನ ಸಚಿವಾಲಯದ ಅಧಿಕಾರಿಗಳು, ತಾಂತ್ರಿಕ ನಿಪುಣರು ಆಗಮಿಸಿ ಸ್ಥಳ ಪರಿಶೀಲನೆ ನಡೆಸುವರು. ಭೂಮಿಯನ್ನು ರಾಜ್ಯ ಸರ್ಕಾರ ಎಲ್ಲಿ ಕೊಡಲಿದೆ ಎಂಬುದನ್ನು ಎದುರು ನೋಡುತ್ತಿದ್ದೇವೆ. ಈಗಾಗಲೇ ಸರ್ಕಾರ ಗುರುತಿಸಿರುವ ಭೂಮಿ ಯೋಜನೆಗೆ ಸೂಕ್ತವೋ ಅಲ್ಲವೋ ಎಂದು ಪರಿಶೀಲನೆ ನಡೆಸುವರು ಎಂದು ತಿಳಿಸಿದರು.

ಈಗಾಗಲೇ ರಾಜ್ಯದಲ್ಲಿ ಎಲೆಕ್ಟ್ರಿಕ್ ವಾಹನ ಕ್ಷೇತ್ರಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಎಫ್‌ಕೆಸಿಸಿಐ ಪದಾಧಿಕಾರಿಗಳು ಸೇರಿ ೫೦ಕ್ಕೂ ಹೆಚ್ಚು ಕೈಗಾರಿಕೋದ್ಯಮಿಗಳ ಸಭೆ ನಡೆಸಿದ್ದೇನೆ. ರಾಜ್ಯಕ್ಕೆ ಒಳ್ಳೆಯದಾಗಬೇಕು ಎನ್ನುವ ಉದ್ದೇಶದಿಂದ ನಾನು ಕೆಲಸ ಮಾಡುತ್ತಿದ್ದೇನೆ. ಯಾರನ್ನೋ ಮೆಚ್ಚಿಸಲು ಕೆಲಸ ಮಾಡುತ್ತಿಲ್ಲ. ಜನರ ಋಣ ತೀರಿಸಲು ಕೆಲಸ ಮಾಡುತ್ತಿದ್ದೇನೆ ಎಂದು ಅವರು ಹೇಳಿದರು.

------

ದಾಖಲೆ ಬಜೆಟ್ಟಿನ ದಾಖಲೆ ಹೊರೆ ಜನರ ಮೇಲೆ ಬೀಳಲಿದೆ

ಸಿದ್ದರಾಮಯ್ಯ ಅವರು ದಾಖಲೆ ೧೭ನೇ ಬಜೆಟ್ ಮಂಡಿಸಿದ್ದಾರೆ, ಸರಿ. ಹಾಗೆಯೇ ಜನರ ಮೇಲೆಯೂ ದಾಖಲೆಯ ಸಾಲದ ಹೊರೆ ಹೊರಿಸಿದ್ದಾರೆ. ಈ ದಾಖಲೆ ಬಜೆಟ್‌ನ ಹೊಡೆತ ಜನರ ಮೇಲೆ ಹೇಗೆ ಬೀಳುತ್ತೆ ಅಂತ ನೋಡಬೇಕು. ಆರ್ಥಿಕ ತಜ್ಞರು ಸಹ ಈ ಬಗ್ಗೆ ಹೇಳಿದ್ದಾರೆ. ಈ ಬಜೆಟ್ ನ ಅಂಕಿ- ಅಂಶದಿಂದ ಸಾಕಷ್ಟು ಸಮಸ್ಯೆ ಆಗುತ್ತೆ ಎಂದು ಎಚ್ಚರಿಕೆ ನೀಡಿದ್ದಾರೆ. ರಾಜ್ಯದ ಸಾಲದ ಪ್ರಮಾಣ ವಿತ್ತೀಯ ಹೊಣೆಗಾರಿಕೆಯನ್ನು ಮೀರಿದೆ. ಮನಸೋ ಇಚ್ಚೆ ಸಾಲ ಮಾಡಿದ್ದಾರೆ. ಇದರ ಪರಿಣಾಮ ಮುಂದಿನ ದಿನಗಳಲ್ಲಿ ಗೊತ್ತಾಗುತ್ತೆ ಎಂದು ಸಚಿವರು ಕಳವಳ ವ್ಯಕ್ತಪಡಿಸಿದರು.

-----

ಮಗನನ್ನು ಉಳಿಸಿಕೊಡಿ ಎಂದು ಕೇಳಿದ ಪೋಷಕರಿಗೆ ಮಿಡಿದ ಸಚಿವರು

ಅಪರೂಪ ಕಾಯಿಲೆಯಿಂದ ಬಳಲುತ್ತಿರುವ ಮಂಡ್ಯ ತಾಲೂಕಿನ ಶಿವಾರ ಗ್ರಾಮದ ಎರಡು ವರ್ಷದ ಸಾಯಿ ಚಿರಾಗ್ ಎಂಬ ಬಾಲಕನಿಗೆ ಸೂಕ್ತ ಚಿಕಿತ್ಸೆ ಕೊಡಿಸುವ ಭರವಸೆಯನ್ನು ಕೇಂದ್ರ ಸಚಿವರು ನೀಡಿದ್ದಾರೆ.

ವಿಸಿ ಫಾರಂಗೆ ಭೇಟಿ ನೀಡಿದ್ದ ವೇಳೆ ಸಚಿವರನ್ನು ಭೇಟಿಯಾದ ಶಿವಾರ ಗ್ರಾಮದ ಪೋಷಕರು ತಮ್ಮ ಎರಡು ವರ್ಷದ ಮಗನನ್ನು ಉಳಿಸಿಕೊಡಿ ಎಂದು ಕೇಳಿಕೊಂಡರು. ಬಾಲಕನ ಚಿಕಿತ್ಸೆಗೆ ಭಾರತದಲ್ಲಿ ₹೧೬ ಕೋಟಿ ಖರ್ಚಾಗುತ್ತದೆ ಎಂದು ವೈದ್ಯರು ಹೇಳುತ್ತಿದ್ದಾರೆ. ಆದರೆ, ವಿದೇಶದಲ್ಲಿ ₹೧.೭೫ ಕೋಟಿಗೆ ಚಿಕಿತ್ಸೆ ಸಿಗಲಿದೆ. ದಯವಿಟ್ಟು ಮಗನ ಚಿಕಿತ್ಸೆಗೆ ಸಹಾಯ ಮಾಡಿ ಎಂದು ಬಾಲಕನ ತಂದೆ ಚೇತನ್, ತಾಯಿ ಭಾರ್ಗವಿ ಅವರು ಸಚಿವರನ್ನು ಮನವಿ ಮಾಡಿಕೊಂಡರು.

ಪೋಷಕರ ಮನವಿಗೆ ಸ್ಪಂದಿಸಿದ ಸಚಿವರು, ಮಗುವಿನ ಚಿಕಿತ್ಸೆಗೆ ಸಹಕಾರ ನೀಡುವ ಭರವಸೆ ನೀಡಿದರು. ಪ್ರಧಾನಿಗಳ ಪರಿಹಾರ ನಿಧಿಯಿಂದ ಹಣ ಕೊಡಿಸುವುದರ ಜತೆಗೆ ವೈಯಕ್ತಿಕವಾಗಿ ನೆರವು ನೀಡುವ ಭರವಸೆ ನೀಡಿದರು.

೬ ತಿಂಗಳೊಳಗೆ ಆ ಬಾಲಕನಿಗೆ ಚಿಕಿತ್ಸೆ ಕೊಡಿಸಲೇಬೇಕು. ಇಲ್ಲವಾದರೆ ಮಗುವನ್ನು ಕಳೆದುಕೊಳ್ಳಬೇಕಾಗುತ್ತದೆ. ಸೂಕ್ತ ಕಾಲದಲ್ಲಿ ಚಿಕಿತ್ಸೆ ಕೊಡಿಸದಿದ್ದರೆ ಜೀವನ ಪರ್ಯಂತ ಮಗು ವಿಕಲಚೇತನನಾಗುವ ಆತಂಕ ಇದೆ. ಮೊದಲು ಕಾಲುಗಳಲ್ಲಿ ಕಾಣಿಸಿಕೊಂಡ ಸೋಂಕು ನಂತರ ಸೊಂಟದವರೆಗೂ ವ್ಯಾಪಿಸಿದೆ. ಚಿಕಿತ್ಸೆ ತಡವಾದಷ್ಟು ದೇಹಪೂರ್ತಿ ಸೋಂಕು ಆವರಿಸುವ ಭೀತಿಯನ್ನು ಪೋಷಕರು ತೋಡಿಕೊಂಡರು.