ಸಮಾಜಕ್ಕೆ ಮಾರ್ಗ ತೋರಿದವರು ಬಸವಣ್ಣ: ಡಿಸಿ ಡಾ.ವಿದ್ಯಾಕುಮಾರಿ

KannadaprabhaNewsNetwork | Published : May 11, 2024 12:01 AM

ಸಾರಾಂಶ

ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಬಸವಣ್ಣ ಜಯಂತಿ ಹಾಗೂ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಆಚರಣೆ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಮಣಿಪಾಲ

ಬಸವಣ್ಣ ತಮ್ಮ ನಡೆನುಡಿಗಳಿಂದ ದೈವತ್ವಕ್ಕೇರಿ, ತಮ್ಮ ವಚನಗಳ ಮೂಲಕ ಸಮಾಜದಲ್ಲಿರುವ ಮೌಢ್ಯ, ಮೇಲುಕೀಳುಗಳನ್ನು ಹೊಗಲಾಡಿಸಿ, ಸಮಾಜದ ನಡೆ ಹಾಗೂ ಬದ್ಧತೆ ಹೇಗಿರಬೇಕೆಂದು ಮಾರ್ಗವನ್ನು ತೋರಿಸಿದ್ದಾರೆ. ಅಂತೆಯೇ ಹೇಮರೆಡ್ಡಿ ಮಲ್ಲಮ್ಮ ಅವರು ಇವತ್ತಿನ ಸ್ತ್ರೀಸಮಾಜಕ್ಕೆ ಆದರ್ಶಪ್ರಾಯರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಹೇಳಿದರು.

ಅವರು ಗುರುವಾರ ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಬಸವಣ್ಣ ಜಯಂತಿ ಹಾಗೂ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬಸವಣ್ಣ ಅವರು 12ನೇ ಶತಮಾನದಲ್ಲಿ ಬೋಧಿಸಿದ ಕಾಯಕವೇ ಕೈಲಾಸ ಎಂಬ ಆಶಯದಂತೆ ಪ್ರತಿಯೊಬ್ಬರು ತಮ್ಮ ಕೆಲಸದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಾಗ ಮಾತ್ರವೇ ಪ್ರತಿಫಲ ದೊರೆಯುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಶರಣ ಸಮಿತಿ ಅಧ್ಯಕ್ಷ ಡಾ. ನಿರಂಜನ್, ಬಸವಣ್ಣ ಅವರು ಮತ ವರ್ಗ ಯಾವುದೇ ಭೇದವಿಲ್ಲದೆ ಎಲ್ಲರೂ ಒಂದೇ ಎಂಬ ಸಮಾಜದ ನಿರ್ಮಾಣಕ್ಕೆ ಶ್ರಮಿಸಿದರು. ಅಲ್ಲದೇ ಕನ್ನಡದಲ್ಲಿ ಆಧ್ಯಾತ್ಮವನ್ನು ಹೇಳುವ ಮೂಲಕ ಅನೇಕ ವಚನಕಾರ ಹಾಗೂ ವಚನಗಾರ್ತಿಯರನ್ನು ಮುನ್ನಲೆಗೆ ತಂದ ಕೀರ್ತಿ ಬಸವಣ್ಣನವರಿಗೆ ಸಲ್ಲುತ್ತದೆ ಎಂದರು.

ಹೇಮರೆಡ್ಡಿ ಮಲ್ಲಮ್ಮ ಅವರ ತತ್ವ ಪದಗಳು, ಲಾವಾಣಿ ಹಾಗೂ ಜನಪದ ಗೀತೆಗಳು ಇಂದಿಗೂ ಉತ್ತರ ಕರ್ನಾಟಕ ಭಾಗದಲ್ಲಿ ಬೇಸಾಯದ ಸಮಯದಲ್ಲಿ ಬಳಕೆ ಮಾಡುಲಾಗುತ್ತಿದ್ದು, ಅವರು ಕನ್ನಡ ಮಾತ್ರವಲ್ಲದೆ ತೆಲುಗು ಭಾಷೆಯಲ್ಲೂ ಸಾಹಿತ್ಯವನ್ನು ರಚಿಸಿದ್ದಾರೆ. ಆಂಧ್ರ ಪ್ರದೇಶದ ನಾಡಗೀತೆಯಲ್ಲಿ ಮಲ್ಲಮ್ಮ ಅವರ ಪತಿ ಭಕ್ತಿಯ ಕುರಿತು ಉಲ್ಲೇಖವಿದೆ. ಅಲ್ಲದೇ ಗುಲ್ಬರ್ಗ ವಿಶ್ವ ವಿದ್ಯಾಲಯದಲ್ಲಿ ಮಲ್ಲಮ್ಮ ಅಧ್ಯಯನ ಪೀಠ ಆರಂಭಗೊಂಡಿರುವುದು ಸಂತಸದ ವಿಚಾರ ಎಂದರು.

ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಅಪರ ಜಿಲ್ಲಾಧಿಕಾರಿ ಮಮತಾದೇವಿ ಜಿ.ಎಸ್., ಆರೋಗ್ಯಧಿಕಾರಿ ಐ.ಪಿ. ಗಡಾದ್, ಶಿವಶರಣೆಹೇಮರೆಡ್ಡಿ ಮಲ್ಲಮ್ಮ ಅಭಿಮಾನಿ ಬಳಗದ ಶಾಂತೇನ ಗೌಡ, ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ ಅಧ್ಯಕ್ಷ ಸಿದ್ದಬಸಯ್ಯ ಸ್ವಾಮಿ ಚಿಕ್ಕಮಠ, ಬಸವ ಸಮಿತಿ ಅಧ್ಯಕ್ಷ ಗಂಗಾಧರ್, ಜಗನ್ನಾಥ್ ಪಣಸಾಲೆ, ಕಸಾಪ ಕಾರ್ಯದರ್ಶಿ ನರಸಿಂಹ ಮೂರ್ತಿ, ವೀರಶೈವ ಸಮಾಜ ಮತ್ತು ಉಡುಪಿ ಬಸವ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಸಿದರು. ರಾಮಾಂಜಿ ವಂದಿಸಿದರು.

Share this article