ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣ: ತಲೆಮರೆಸಿದ್ದ ಪ್ರಮುಖ ಆರೋಪಿ ಸೇರಿ ಮೂವರ ಸೆರೆ

KannadaprabhaNewsNetwork | Published : May 11, 2024 12:01 AM

ಸಾರಾಂಶ

2022 ಜುಲೈ 26ರಂದು ಬೆಳ್ಳಾರೆಯಲ್ಲಿ ಪ್ರವೀಣ್‌ ನೆಟ್ಟಾರು ಅವರನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ 20ಕ್ಕೂ ಅಧಿಕ ಮಂದಿಯನ್ನು ಬಂಧಿಸಲಾಗಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು/ಸುಳ್ಯ

ದ.ಕ. ಬಿಜೆಪಿ ಕಾರ್ಯಕರ್ತ ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ತಲೆಮರೆಸಿದ್ದ ಪ್ರಮುಖ ಆರೋಪಿ ಮುಸ್ತಾಫ ಪೈಚಾರ್‌ ಸೇರಿದಂತೆ ಮೂರು ಮಂದಿಯನ್ನು ರಾಷ್ಟ್ರೀಯ ತನಿಖಾ ಏಜೆನ್ಸಿ(ಎನ್ಐಎ) ತಂಡ ಹಾಸನದ ಸಕಲೇಶಪುರದಲ್ಲಿ ಪತ್ತೆ ಮಾಡಿ ಬಂಧಿಸಿದೆ. ಈತನ ಪತ್ತೆಗೆ ಎನ್ಐಎ 5 ಲಕ್ಷ ರು. ಬಹುಮಾನ ಪ್ರಕಟಿಸಿತ್ತು.

ಸಕಲೇಶಪುರ ಬಳಿಯ ಆನೆಮಹಲ್‌ ಕಾಫಿ ಎಸ್ಟೇಟ್‌ನಲ್ಲಿ ಕಾರ್ಮಿಕನ ಸೋಗಿನಲ್ಲಿ ಕೆಲಸ ಮಾಡಿಕೊಂಡಿದ್ದ ನಾಲ್ಕನೇ ಆರೋಪಿ ಮುಸ್ತಾಫ ಪೈಚಾರ್‌ನನ್ನು ಬುಧವಾರ ರಾತ್ರಿ ಎನ್‌ಐಎ ಇನ್‌ಸ್ಪೆಕ್ಟರ್‌ ಷಣ್ಮುಗಂ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಬಂಧಿಸಿದೆ. ಈತನ ಜತೆ ಕಾಫಿ ಎಸ್ಟೇಟ್‌ ಮಾಲೀಕ ಸಿರಾಜ್‌ ಮತ್ತು ಸೋಮವಾರ ಪೇಟೆ ಮೂಲದ ಇಲಿಯಾಸ್‌ ಎಂಬಾತನನ್ನೂ ವಶಕ್ಕೆ ಪಡೆಯಲಾಗಿದೆ.

ಮುಸ್ತಾಫ ಪೈಚಾರ್‌ ಸುಳ್ಯದ ಶಾಂತಿನಗರ ನಿವಾಸಿಯಾಗಿದ್ದು, ಪ್ರವೀಣ್‌ ನೆಟ್ಟಾರು ಹತ್ಯೆ ಬಳಿಕ ಎರಡು ವರ್ಷಗಳಿಂದ ತಲೆಮರೆಸಿಕೊಂಡಿದ್ದ. ಬಳಿಕ ಇದೇ ಜಾಗದಲ್ಲಿ ಕಾರ್ಮಿಕನಾಗಿ ಕೆಲಸ ಮಾಡಿಕೊಂಡಿದ್ದ ಎಂದು ಹೇಳಲಾಗಿದೆ. ಆರೋಪಿಗೆ ಆಶ್ರಯ ನೀಡಿದ್ದಕ್ಕೆ ಸಿರಾಜ್‌ ಮತ್ತು ಇಲಿಯಾಸ್‌ನನ್ನು ಬಂಧಿಸಲಾಗಿದೆ. ಬಂಧಿತರನ್ನು ಬೆಂಗಳೂರಿನ ಐಎನ್‌ಐ ಕಚೇರಿಗೆ ಕರೆದೊಯ್ಯಲಾಗಿದೆ. ಮುಸ್ತಾಫ ಪೈಚಾರ್‌ ನಿಷೇಧಿತ ಪಾಪ್ಯುಲರ್‌ ಫ್ರಂಟ್ ಆಫ್‌ ಇಂಡಿಯಾ (ಪಿಎಫ್‌ಐ) ಸಂಘಟನೆಯ ಮುಖಂಡನಾಗಿದ್ದು, ಪ್ರವೀಣ್‌ ನೆಟ್ಟಾರು ಹತ್ಯೆಗೆ ಸಂಚು ನಡೆಸಿದವರಲ್ಲಿ ಪ್ರಮುಖನಾಗಿದ್ದ.

2022 ಜುಲೈ 26ರಂದು ಬೆಳ್ಳಾರೆಯಲ್ಲಿ ಪ್ರವೀಣ್‌ ನೆಟ್ಟಾರು ಅವರನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ 20ಕ್ಕೂ ಅಧಿಕ ಮಂದಿಯನ್ನು ಬಂಧಿಸಲಾಗಿದೆ. ಕಳೆದ ಜನವರಿಯಲ್ಲಿ ಎನ್‌ಐಎ ಪೊಲೀಸರು 20 ಮಂದಿ ವಿರುದ್ಧ ವಿಶೇಷ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ಆರೋಪಿ ಬಂಧನಕ್ಕೆ ಪ್ರವೀಣ್‌ ನೆಟ್ಟಾರು ಪತ್ನಿ ಸಂತಸ:

ಪ್ರಮುಖ ಆರೋಪಿ ಮುಸ್ತಾಫ ಪೈಚಾರ್ ಬಂಧನಕ್ಕೆ ಪ್ರವೀಣ್ ನೆಟ್ಟಾರ್ ಪತ್ನಿ ನೂತನ ಅವರು ಸಂತಪ ವ್ಯಕ್ತಪಡಿಸಿದ್ದಾರೆ. ಈ ಕುರಿತು ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅವರು, ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಮುಸ್ತಾಫ ಪೈಚಾರ್ ಬಂಧನ ಆಗಿರುವುದು ನಮಗೆ ತುಂಬಾ ಖುಷಿಯಾಗಿದೆ. ಈ ಪ್ರಕರಣದ ಎಲ್ಲ ಆರೋಪಿಗಳಿಗೂ ಮರಣ ದಂಡನೆ ಶಿಕ್ಷೆಯಾಗಬೇಕು. ಮುಂದೆ ಸಮಾಜದಲ್ಲಿ ಇಂತಹ ಪ್ರಕರಣ ಮರುಕಳಿಸಬಾರದು. ಇಡೀ ದೇಶದಲ್ಲೇ ಈ ಪ್ರಕರಣ ಅಂತಿಮ ಪ್ರಕರಣ ಆಗಬೇಕು. ನಮ್ಮ ಕುಟುಂಬದವರಿಗೆ ತುಂಬಾ ಸಂತಸದ ಸುದ್ದಿ. ನಮ್ಮ ಕುಟುಂಬ, ಸಮಾಜದವರ ಪರವಾಗಿ ಎನ್‌ಐಎ ಅಧಿಕಾರಿಗಳಿಗೆ ಧನ್ಯವಾದ ಹೇಳುತ್ತೇನೆ. ಪ್ರಕರಣ ನಡೆದು ಎರಡು ವರ್ಷವಾದರೂ ಆರೋಪಿಗಳನ್ನು ಬಂಧಿಸಲು ಎನ್‌ಐಎ ಅಧಿಕಾರಿಗಳು ತುಂಬ ಪ್ರಯತ್ನಿಸುತ್ತಿದ್ದಾರೆ. ಎನ್‌ಐಎ ಮೇಲೆ ನಂಬಿಕೆ ಇದೆ. ಎಲ್ಲ ಆರೋಪಿಗಳ ಬಂಧನವಾಗುತ್ತದೆ ಎನ್ನುವ ವಿಶ್ವಾಸವಿದೆ. ಈ ಪ್ರಕರಣದ ಆರೋಪಿಗಳಿಗೆ ನೀಡುವ ಶಿಕ್ಷೆ ಒಂದು ಪಾಠವಾಗಬೇಕು. ಎಸ್‌ಡಿಪಿಐ, ಪಿಎಫ್‌ಐ ಕಾರ್ಯಕರ್ತರು ಮುಂದೆ ಯಾವತ್ತೂ ಇಂತಹ ಪ್ರಕರಣಕ್ಕೆ ಕೈ ಹಾಕಬಾರದು ಎಂದಿದ್ದಾರೆ.

Share this article