ಸಮ ಸಮಾಜದ ಕನಸು ಬಿತ್ತಿದ ಬಸವಣ್ಣ: ಡಾ.ಮಹೇಶ ದಳಪತಿ

KannadaprabhaNewsNetwork |  
Published : May 28, 2025, 12:04 AM IST
36 | Kannada Prabha

ಸಾರಾಂಶ

ಮೈಸೂರು: 12ನೇ ಶತಮಾನದಲ್ಲಿ ಬಸವಣ್ಣನವರು ಸಮ- ಸಮಾಜ ಹಾಗೂ ಸಮಾನತೆಯ ಕನಸನ್ನು ಜಗತ್ತಿನಲ್ಲಿ ಮೊಟ್ಟ ಮೊದಲಿಗೆ ಬಿತ್ತಿದರು ಎಂದು ವಾತ್ಸಲ್ಯ ಶಿಕ್ಷಣ ಕಾಲೇಜು ಪ್ರಾಂಶುಪಾಲ ಹಾಗೂ ಮೈಸೂರು ವಿವಿ ಸಿಂಡಿಕೇಟ್ ಸದಸ್ಯ ಡಾ. ಮಹೇಶ ದಳಪತಿ ತಿಳಿಸಿದರು.

ಮೈಸೂರು: 12ನೇ ಶತಮಾನದಲ್ಲಿ ಬಸವಣ್ಣನವರು ಸಮ- ಸಮಾಜ ಹಾಗೂ ಸಮಾನತೆಯ ಕನಸನ್ನು ಜಗತ್ತಿನಲ್ಲಿ ಮೊಟ್ಟ ಮೊದಲಿಗೆ ಬಿತ್ತಿದರು ಎಂದು ವಾತ್ಸಲ್ಯ ಶಿಕ್ಷಣ ಕಾಲೇಜು ಪ್ರಾಂಶುಪಾಲ ಹಾಗೂ ಮೈಸೂರು ವಿವಿ ಸಿಂಡಿಕೇಟ್ ಸದಸ್ಯ ಡಾ. ಮಹೇಶ ದಳಪತಿ ತಿಳಿಸಿದರು.

ಮೈಸೂರಿನ ಗಾಂಧಿನಗರದ ಉರಿಲಿಂಗಿ ಪೆದ್ದಿ ಮಠದಲ್ಲಿ ಬಸವ ಜಯಂತಿಯಲ್ಲಿ ಬಸವ ಚಿಂತನೆ ಕುರಿತು ಮಾತನಾಡಿದ ಅವರು, ಬಸವ ಯುಗ ಕರುನಾಡಿನ ಸುವರ್ಣಯುಗವಾಗಿದೆ ಎಂದರೆ ತಪ್ಪಾಗಲಾರದು. ಅಂದು ವಿಚಾರಗಳ ವಿಜೃಂಭಣೆಯಿತ್ತು. ಸ್ತ್ರೀ ವಿಮೋಚನದ ಧ್ವನಿಯಿತ್ತು. ಇಂತಹ ಸಂದರ್ಭದಲ್ಲಿ ದಮನಿತರ ಶೋಷಿತರ ಪರವಾಗಿ ಮೊಟ್ಟಮೊದಲಿಗೆ ಧ್ವನಿಯೆತ್ತಿದವರು ಬಸವಣ್ಣನವರು. ಜಗತ್ತಿನಲ್ಲಿ ಪ್ರಥಮ ಬಾರಿಗೆ ಕಾಯಕಯೋಗಿಗಳ ಹೊಸ ಧರ್ಮ ಸ್ಥಾಪಿಸಿದರು ಎಂದರು.

ಕನಿಷ್ಠವೆಂದ ಎಡಗೈಯನ್ನು ಗದ್ದುಗೆ ಮಾಡಿ ಇಷ್ಟಲಿಂಗ ಪ್ರತಿಷ್ಠಾಪಿಸದವರು ಬಸವಣ್ಣನವರು. ಅಂದು ಕಾಯಕ ಸಮಾಜಕ್ಕೆ ಮನ್ನಣೆ ದೊರಕಿತು. ಅದಕ್ಕೆ ಕಾಯಕವೇ ಕೈಲಾಸ ಎಂದು ಕರೆದರು. ವರ್ಣ, ಧರ್ಮ, ಜಾತಿ, ಲಿಂಗ ಬೇದವಿಲ್ಲದೇ ಸರ್ವರನ್ನೂ ಒಳಗೊಂಡ ಅನುಭವ ಮಂಟಪ ಸ್ಥಾಪಿಸಿದ ಕೀರ್ತಿ ಬಸವಣ್ಣನಿಗೆ ಸಲ್ಲುತ್ತದೆ. ಬಹುತ್ವಕ್ಕೆ ಒತ್ತು ನೀಡಿ ಕಂದಾಚಾರಗಳಿಗೆ ಮುಕ್ತಿ ನೀಡಿದರು ಎಂದು ಹೇಳಿದರು.

ವಚನಗಳು ಪಚನವಾದರೆ ಸಹ್ಯ ಸಮಾಜ ನಿರ್ಮಾಣವಾಗುತ್ತದೆ. ಇಂದು ಸುಳ್ಳನ್ನೆ ಬಿತ್ತಿ, ಸುಳ್ಳನ್ನೆ ಬೆಳೆದು, ಸುಳ್ಳನ್ನೇ ಮನೆ ಮನಗಳಿಗೆ ತುಂಬುತ್ತಿದ್ದಾರೆ. ಆದ್ದರಿಂದ ನಾವೆಲ್ಲ ಎಚ್ಚರಿಕೆಯಿಂದ ಇರಬೇಕು. ಜಯಂತಿಗಳಲ್ಲಿ ವಿಚಾರಗಳ ಮೆರವಣಿಗೆ ಆಗಬೇಕು ಎಂದು ಹೇಳಿದರು.

ಉರಿಲಿಂಗಿ ಪೆದ್ದಿ ಮಠದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ ಮಾತನಾಡಿ, ಗುಡಿಗಳನ್ನು ಸುತ್ತವ ಬದಲು ನಿಮ್ಮ ದೇಹವೆ ದೇಗುಲವಾಗಿದೆ. ಗಂಗ ಯಮುನ ತೀರ್ಥವೆಂದು ಕಾರ್ಪೋರೇಷನ್ ನೀರನ್ನು ತೀರ್ಥ ಎಂದು ನೀಡಿ ಶೂದ್ರರನ್ನು ದಿಕ್ಕು ತಪ್ಪಿಸುತ್ತಾರೆ. ಬುದ್ದ, ಬಸವಣ್ಣ, ಅಂಬೇಡ್ಕರ್ ನಮಗೆ ಆದರ್ಶ ಪುರುಷರು ಎಂದು ಹೇಳಿದರು.

ಲಾಳನಹಳ್ಳಿಯ ಗುರುಮಲ್ಲೇಶ್ವರ ಮಠದ ಜಯದೇವಿ ತಾಯಿ, ಅಂಬಳೆ ಶಿವಾನಂದ ಇದ್ದರು. ಚೂಡಾಮಣಿ ಪ್ರಾರ್ಥಿಸಿದರು. ಸುಬ್ರಮಣ್ಯಂ ನಿರೂಪಿಸಿದರು.

PREV

Recommended Stories

ಯೂರಿಯಾ: ರೈತ ಬಾಂಧವರಲ್ಲಿ ಅತಂಕ ಬೇಡ
ಪಂಚಪೀಠ ನಿರ್ಣಯ ಒಪ್ಪಲ್ಲ, ರಂಭಾಪುರಿ ಶ್ರೀಗಳ ಮನಸ್ಥಿತಿ ಕಲುಷಿತ: ವಚನಾನಂದ ಶ್ರೀ