ಕೊಡಗಿನಲ್ಲಿ ಕೊಂಚ ತಗ್ಗಿದ ಮಳೆ : ಮರ ಬಿದ್ದು ವ್ಯಕ್ತಿ ಸಾವು

KannadaprabhaNewsNetwork |  
Published : May 28, 2025, 12:04 AM IST
ಚಿತ್ರ :  27ಎಂಡಿಕೆ3 : ಬೆಂಗೂರು ಗ್ರಾಮದ ದೋಣಿಕಾಡು ಎಂಬಲ್ಲಿ ರಸ್ತೆಯ ಮೇಲೆ ನೀರು ಬಂದಿದ್ದು, ಜನರ ಓಡಾಟಕ್ಕೆ ದೋಣಿಯ ಸಿದ್ಧತೆ ಮಾಡಲಾಗಿದೆ.  | Kannada Prabha

ಸಾರಾಂಶ

ಕೊಡಗು ಜಿಲ್ಲೆಯಾದ್ಯಂತ ಮಳೆ ಕೊಂಚ ಕಡಿಮೆಯಾಗಿದೆ. ಆದರೆ ಜೋರಾಗಿ ಬೀಸುತ್ತಿರುವ ಗಾಳಿಯಿಂದ ಮರಗಳು ಧರೆಗುರುಳುತ್ತಿದೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕೊಡಗು ಜಿಲ್ಲೆಯಾದ್ಯಂತ ಮಂಗಳವಾರ ಮಳೆ ಕೊಂಚ ಕಡಿಮೆಯಾಗಿದೆ. ಆದರೆ ಜೋರಾಗಿ ಬೀಸುತ್ತಿರುವ ಗಾಳಿಯಿಂದ ಮರಗಳು ಧರೆಗುರುಳುತ್ತಿದೆ. ಮರ ಬಿದ್ದು ಬೆಳೆಗಾರರೊಬ್ಬರು ಮೃತಪಟ್ಟಿದ್ದಾರೆ.

ಸಿದ್ದಾಪುರ ಸಮೀಪದ ಮಾಲ್ದಾರೆಯಲ್ಲಿ ಬೆಳಿಗ್ಗೆ ಗಾಳಿಮಳೆಗೆ ಮರದ ಕೊಂಬೆ ಮುರಿದುಬಿದ್ದ ಪರಿಣಾಮ ಮಾಲ್ದಾರೆ ಗ್ರಾಮ ಪಂಚಾಯಿತಿಯ ಮಾಜಿ ಸದಸ್ಯ ವಿಷ್ಣು ಎಂಬುವವರು ಮೃತಪಟ್ಟಿದ್ದಾರೆ. ತಲೆಗೆ ಕೊಂಬೆ ಬಿದ್ದು ಗಂಭೀರ ಗಾಯಗೊಂಡಿದ್ದ ಗಾಯಾಳು ವಿಷ್ಣುವನ್ನು ಸಿದ್ದಾಪುರ ಪ್ರಾಥಮಿಕ ಆರೋಗ್ಯಕ್ಕೆ ದಾಖಲಿಸುವ ವೇಳೆಗಾಗಲೇ ತೀವ್ರ ರಕ್ತಸ್ರಾವದಿಂದ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.

ಭಾರಿ ಗಾಳಿ ಮಳೆಗೆ ಮನೆ ಮೇಲೆ ಮುರಿದು ಬಿದ್ದ ಭಾರೀ ಗಾತ್ರದ ಮರ ಮನೆಯಲ್ಲಿದ್ದ ವೃದ್ಧೆ, ಮಹಿಳೆ ಹಾಗೂ ಚಿಕ್ಕ ಮಗು ಅದೃಷ್ಟವಷಾತ್ ಅಪಾಯದಿಂದ ಪಾರಾದ ಘಟನೆ ನಡೆದಿದೆ.

ಮನೆ ಸಂಪೂರ್ಣ ಹಾನಿ:

ಜಿಲ್ಲೆಯ ಕುಶಾಲನಗರ ತಾಲೂಕಿನ ಊರುಗುಪ್ಪೆ ಪೈಸಾರಿಯಲ್ಲಿ ಘಟನೆ ನಡೆದಿದ್ದು ಮನೆಯೊಳಗೆ ಇದ್ದ ಶಾನಿಲ್ಲಾ, ಅವರ 7 ವರ್ಷದ ಮಗು ಹಾಗೂ ಅತ್ತೆ ಬಚಾವ್ ಆಗಿದ್ದಾರೆ. ಮರ ಬೀಳುತ್ತಿದ್ದಂತೆ ಮನೆಯೊಳಗೆ ಬಂಧಿಯಾಗಿದ್ದಾರೆ. ಶಾನಿಲ್ಲಾ ಹಾಗೂ ಅವರ ಅತ್ತೆಗೆ ಚಿಕ್ಕಪುಟ್ಟ ಗಾಯವಾಗಿದೆ. ಬೃಹತ್ ಗಾತ್ರದ ಮರ ಬಿದ್ದು ಮಹಮ್ಮದ್ ಎಂಬುವರ ಮನೆ ಸಂಪೂರ್ಣ ಹಾನಿಗೊಳಗಾಗಿದೆ.

ಬಳಿಕ ಮೂವರನ್ನು ಗ್ರಾಮದವರು ಹೊರಗೆ ಕರೆತಂದಿದ್ದಾರೆ. ಮನೆ, ಮನೆಮುಂದೆ ನಿಲ್ಲಿಸಿದ್ದ ಕಾರಿಗೆ ಹಾನಿಯಾಗಿದೆ. ಕ್ರೇನ್ ಮೂಲಕ ಮರ ತೆರವು ಕಾರ್ಯಾಚರಣೆ ನಡೆಯಿತು. ಪಂಚಾಯಿತಿ ಸಿಬ್ಬಂದಿ, ಅರಣ್ಯ ಇಲಾಖೆ ಸಿಬ್ಬಂದಿಯಿಂದ ಮರ ತೆರವು ಮಾಡಿದರು.

ಭಾರಿ ಮಳೆ ಹಿನ್ನೆಲೆ ಭಾಗಮಂಡಲ ಹೋಬಳಿ ಪದಕಲ್ಲು ಗ್ರಾಮದ ಭಾಸ್ಕರ ರವರ ಮನೆಯ ಹಿಂಭಾಗದ ಗೋಡೆ ಮಳೆಯಿಂದ ಕುಸಿದು ತೀವ್ರ ಹಾನಿಯಾಗಿದ್ದು,

ಕಂದಾಯ ಪರಿವೀಕ್ಷಕರು ಹಾಗೂ ಗ್ರಾಮ ಆಡಳಿತ ಅಧಿಕಾರಿಯವರು ಸ್ಥಳ ಪರಿಶೀಲಿಸಿದ್ದಾರೆ.

ಭಾಗಮಂಡಲ ಹೋಬಳಿಯಲ್ಲಿ ಮಳೆಯು ಹೆಚ್ಚಾಗಿದ್ದು ಬೇಂಗೂರು ಗ್ರಾಮ ಪಂಚಾಯಿತಿಯ ಬೆಂಗೂರು ಗ್ರಾಮದ ದೋಣಿಕಾಡು ಎಂಬಲ್ಲಿ ರಸ್ತೆಯ ಮೇಲೆ ನೀರು ಬಂದಿದ್ದು, ಜನರ ಓಡಾಟಕ್ಕೆ ದೋಣಿಯ ಸಿದ್ಧತೆ ಮಾಡಲಾಗಿದೆ. ಜನರ ಸಂಚಾರಕ್ಕೆ ಯಾವುದೇ ತೊಂದರೆ ಉಂಟಾಗಿಲ್ಲ.

ಮರ ತೆರವು:

ಶನಿವಾರಸಂತೆ ಹೋಬಳಿ ಕೋರಲಳ್ಳಿ ಗ್ರಾಮದ ಲಲಿತ ರವರ ಮನೆ ಮೇಲೆ ಮಳೆ ಗಾಳಿಯಿಂದಾಗಿ ಮರ ಬಿದ್ದಿದ್ದು, ಮನೆಯ ನೂರಕ್ಕೂ ಅಧಿಕ ಹಂಚುಗಳು ಹಾನಿಯಾಗಿರುತ್ತವೆ. ಅರಣ್ಯ ಇಲಾಖಾ ಸಿಬ್ಬಂದಿ ಮರವನ್ನು ತೆರವುಗೊಳಿಸಿದರು.

ಭಾಗ ಮಂಡಲ ಕರಿಕೆ ನಡುವೆ ಎಳ್ಳುಕೊಚ್ಚಿ ಬಳಿ ಸಣ್ಣ ಪ್ರಮಾಣದಲ್ಲಿ ಭೂ ಕುಸಿತ ಉಂಟಾಗಿದೆ. ಇದರಿಂದ ಕೆಲ ಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಕರಿಕೆ ಗ್ರಾಮ ಪಂಚಾಯತ್ ನಿಂದ ಮಣ್ಣು ತೆರವು ಕಾರ್ಯ ನಡೆಯಿತು.

ಮೂರು ಅಡಿ ನೀರು ಹೆಚ್ಚಳ:

ಕುಶಾಲನಗರ ತಾಲೂಕಿನಲ್ಲಿರುವ ಹಾರಂಗಿ ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ಒಂದೇ ದಿನ ಜಲಾಶಯಕ್ಕೆ ಮೂರು ಅಡಿ ನೀರು ಹೆಚ್ಚಳವಾಗಿದೆ. 2858 ಅಡಿ ಎತ್ತರದ ಜಲಾಶಯದಲ್ಲಿ 2834.45 ಅಡಿ ನೀರು ಸಂಗ್ರಹವಾಗಿದೆ. ಕಳೆದ ವರ್ಷ ಇದೇ ಸಂದರ್ಭದಲ್ಲಿ 2824 ಅಡಿ ನೀರು ಸಂಗ್ರಹವಿತ್ತು. ಒಂದು ವಾರದಲ್ಲಿ ಒಂದು ಟಿಎಂಸಿ ನೀರು ಸಂಗ್ರಹವಾಗಿದೆ. ಮಡಿಕೇರಿ, ಮಡಿಕೇರಿ ತಾಲೂಕು ವ್ಯಾಪ್ತಿ, ಮುಕ್ಕೋಡ್ಲು, ಹಮ್ಮಿಯಾಲ ಸೇರಿದಂತೆ ಹಲವೆಡೆ ಉತ್ತಮ ಮಳೆ ಆಗುತ್ತಿರುವ ಹಿನ್ನೆಲೆ ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ.

ಮಳೆ ವಿವರ :

ಜಿಲ್ಲೆಯಲ್ಲಿ ಮಂಗಳವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆ ಅವಧಿಯಲ್ಲಿ ಸರಾಸರಿ 76.82 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 0.45 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗಿನ ಮಳೆ 526.66 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 325.85 ಮಿ.ಮೀ ಮಳೆಯಾಗಿತ್ತು.

ಮಡಿಕೇರಿ ತಾಲೂಕಿನಲ್ಲಿ 82.55 ಮಿ.ಮೀ, ವಿರಾಜಪೇಟೆ ತಾಲೂಕಿನಲ್ಲಿ 78.70 ಮಿ.ಮೀ. ಮಳೆಯಾಗಿದೆ, ಪೊನ್ನಂಪೇಟೆ ತಾಲೂಕಿನಲ್ಲಿ 99.11 ಮಿ.ಮೀ. ಮಳೆಯಾಗಿದೆ.

ಸೋಮವಾರಪೇಟೆ ತಾಲೂಕಿನಲ್ಲಿ 86.05 ಮಿ.ಮೀ. ಮಳೆಯಾಗಿದೆ, ಕುಶಾಲನಗರ ತಾಲೂಕಿನಲ್ಲಿ 37.70 ಮಿ.ಮೀ. ಮಳೆಯಾಗಿದೆ.

ಹೋಬಳಿ ವಿವರ ; ಮಡಿಕೇರಿ ಕಸಬಾ 101, ನಾಪೋಕ್ಲು 102.20, ಸಂಪಾಜೆ 15, ಭಾಗಮಂಡಲ 112, ವಿರಾಜಪೇಟೆ 77.40, ಅಮ್ಮತ್ತಿ 80, ಹುದಿಕೇರಿ 132, ಶ್ರೀಮಂಗಲ 113.40, ಪೊನ್ನಂಪೇಟೆ 85, ಬಾಳೆಲೆ 66.02, ಸೋಮವಾರಪೇಟೆ 90.20, ಶನಿವಾರಸಂತೆ 64, ಶಾಂತಳ್ಳಿ 150, ಕೊಡ್ಲಿಪೇಟೆ 40, ಕುಶಾಲನಗರ 27.20, ಸುಂಟಿಕೊಪ್ಪ 48.20 ಮಿ.ಮೀ.ಮಳೆಯಾಗಿದೆ.

ಎನ್ ಡಿ ಆರ್ ಎಫ್ ತಂಡ ಆಗಮನ

ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಕೊಡಗು ಜಿಲ್ಲೆಗೆ ಎನ್ ಡಿಆರ್ ತಂಡ ಆಗಮಿಸಿದೆ. ಬೆಂಗಳೂರಿನಿಂದ ಆಗಮಿಸಿದ 10 ನೇ ಬೆಟಾಲಿಯನ್ ನ ಎನ್ ಡಿ ಆರ್ ಎಫ್ ತಂಡದಲ್ಲಿರುವ 30 ಸಿಬ್ಬಂದಿಗಳಿದ್ದಾರೆ. ಇನ್ಸ್‌ಪೆಕ್ಟರ್ ಹರಿಶ್ಚಂದ್ರ ಪಾಂಡೇ, ಕಮಾಂಡರ್ ವಿವಿಎನ್ ಪ್ರಸನ್ನ ಕುಮಾರ್ ನೇತೃತ್ವದಲ್ಲಿ ಆಗಮನವಾಗಿದ್ದು, ಮಡಿಕೇರಿಯ ಮೈತ್ರಿ ಹಾಲ್ ನಲ್ಲಿ ವಾಸ್ತವ್ಯ ಹೂಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

400 ಕೋಟಿ ರು. ದರೋಡೆ ಪ್ರಮುಖ ಆರೋಪಿ ಬಂಧನ
ಕಾಂಗ್ರೆಸ್‌ನವರಿಗೆ ಬಜೆಟ್ ಅರ್ಥವಾಗಲ್ಲ: ಜೋಶಿ ಚಾಟಿ