ಜುಲೈನಿಂದ ಅನರ್ಹರಿಗೆ ಗ್ಯಾರಂಟಿ ಬಂದ್‌

KannadaprabhaNewsNetwork |  
Published : May 28, 2025, 12:03 AM IST
27ಕೆಕೆಆರ್9:ಕುಕನೂರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜರುಗಿದ ಕುಕನೂರು, ಯಲಬುರ್ಗಾ ತಾಲೂಕಿನ ಗ್ಯಾರಂಟಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆ  ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಅಧ್ಯೆಕ್ಷತೆಯಲ್ಲಿ ಜರುಗಿತು.  | Kannada Prabha

ಸಾರಾಂಶ

ಅರ್ಹ ಅಲ್ಲದವರಿಗೂ ಸಹ ಯೋಜನೆ ಲಾಭ ಸಿಗುತ್ತಿದೆ. ಈ ಬಗ್ಗೆ ರಾಜ್ಯಮಟ್ಟದಲ್ಲಿ ಅಧಿಕಾರಿಗಳ ತಂಡ ರಚಿಸಿ ತನಿಖೆ ಮಾಡಲು ಮುಖ್ಯಮಂತ್ರಿಗೆ ತಿಳಿಸಿ ಜುಲೈನಿಂದ ಅನರ್ಹರಿಗೆ ಗ್ಯಾರಂಟಿ ಬಂದ್‌ ಮಾಡಲಾಗುವುದು ಎಂದು ಬಸವರಾಜ ರಾಯರಡ್ಡಿ ಹೇಳಿದರು.

ಕುಕನೂರು:

ಗ್ಯಾರಂಟಿ ಯೋಜನೆಗಳಲ್ಲಿ ಅನರ್ಹ ಫಲಾನುಭವಿಗಳಿಗೂ ಯೋಜನೆಯ ಲಾಭ ಹೋಗುತ್ತಿದ್ದು ಇದನ್ನು ತನಿಖೆ ಮಾಡಿ ಕಡಿವಾಣ ಹಾಕಬೇಕೆಂದು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು ಎಂದಿರುವ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ, ಜುಲೈನಿಂದ ಅನರ್ಹರಿಗೆ ಗ್ಯಾರಂಟಿ ಬಂದ್‌ ಮಾಡಲಾಗುವುದು ಎಂದು ಹೇಳಿದ್ದಾರೆ.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜರುಗಿದ ಕುಕನೂರು, ಯಲಬುರ್ಗಾ ತಾಲೂಕಿನ ಗ್ಯಾರಂಟಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯೆಕ್ಷತೆ ವಹಿಸಿ ಮಾತನಾಡಿದ ಅವರು, ಒಂದು ವಿಧಾನಸಭಾ ಕ್ಷೇತ್ರಕ್ಕೆ ವರ್ಷಕ್ಕೆ ಗ್ಯಾರಂಟಿ ಯೋಜನೆಯಲ್ಲಿ ಅಂದಾಜು ₹ 250 ಕೋಟಿ ಹಣ ನೀಡುತ್ತಿದ್ದು ಯೋಜನೆಗಳು ಜನರ ಮನೆ ಬಾಗಿಲಿಗೆ ತಲುಪಿವೆ. ಆದರೆ, ಅರ್ಹ ಅಲ್ಲದವರಿಗೂ ಸಹ ಯೋಜನೆ ಲಾಭ ಸಿಗುತ್ತಿದೆ. ಈ ಬಗ್ಗೆ ರಾಜ್ಯಮಟ್ಟದಲ್ಲಿ ಅಧಿಕಾರಿಗಳ ತಂಡ ರಚಿಸಿ ತನಿಖೆ ಮಾಡಲು ಮುಖ್ಯಮಂತ್ರಿಗೆ ತಿಳಿಸಲಾಗುವುದು ಎಂದರು.

ಮನೆ ಬಾಡಿಗೆ ನೀಡಿದ್ದರೂ ಸಹ ಅವರಿಗೆ ಉಚಿತ ಗೃಹಜ್ಯೋತಿ ಯೋಜನೆ ದೊರೆಯುತ್ತಿದೆ. ಗೃಹಲಕ್ಷ್ಮೀಯಲ್ಲಿ ಟ್ಯಾಕ್ಸ್, ಜಿಎಸ್‌ಟಿ ಹೊಂದಿದ ಕುಟುಂಬದ ಸದಸ್ಯರಿಗೆ ಹಣ ನೀಡುತ್ತಿರುವುದು ಹಾಗೂ ಅನ್ನಭಾಗ್ಯದಲ್ಲಿ ಯಲಬುರ್ಗಾ ಕ್ಷೇತ್ರದಲ್ಲಿ ಪಡಿತರ ಕಾರ್ಡ್‌ಗಳ ವ್ಯತ್ಯಾಸ ಗೋಚರಿಸಿದೆ. ಈ ಕುರಿತು ರಾಜ್ಯಾದ್ಯಂತ ತನಿಖೆ ಮಾಡಿಸಲಾಗುವುದು. ಜುಲೈನಿಂದ ಅನರ್ಹರಿಗೆ ಯೋಜನೆ ಲಾಭ ಸಿಗದು ಎಂದು ರಾಯರಡ್ಡಿ ಹೇಳಿದರು.

ತಾಪಂ ಇಒ ಸಂತೋಷ ಬಿರಾದಾರ ಪಾಟೀಲ್, ತಹಸೀಲ್ದಾರ್ ಎಚ್. ಪ್ರಾಣೇಶ, ಯಲಬುರ್ಗಾ ಗ್ಯಾರಂಟಿ ಯೋಜನೆ ಸಮಿತಿ ಅಧ್ಯಕ್ಷ ಸುಧೀರ ಕೊರ್ಲಹಳ್ಳಿ, ಕುಕನೂರು ತಾಲೂಕು ಗ್ಯಾರಂಟಿ ಯೋಜನೆ ಸಮಿತಿ ಅಧ್ಯಕ್ಷ ಸಂಗಮೇಶ ಗುತ್ತಿ, ಜಿಲ್ಲಾ ಗ್ಯಾರಂಟಿ ಯೋಜನೆಯ ಉಪಾಧ್ಯಕ್ಷ ಖಾಸಿಂಸಾಬ್ ತಳಕಲ್, ಸಿಡಿಪಿಒ ಬೆಟದಪ್ಪ ಮಾಳೆಕೊಪ್ಪ, ಆಹಾರ ಇಲಾಖೆಯ ಅಧಿಕಾರಿ ಮಲ್ಲಯ್ಯ, ಜೆಸ್ಕಾಂ ಅಧಿಕಾರಿ ನಾಗರಾಜ ಹಾಗೂ ಗ್ಯಾರಂಟಿ ಯೋಜನೆಯ ಸಮಿತಿಯ ಸದಸ್ಯರು, ಅಧಿಕಾರಿಗಳಿದ್ದರು.ಹಣ ಬದಲು ಆಹಾರ ಧಾನ್ಯ ಕಿಟ್ ವಿತರಣೆ

ಅನ್ನಭಾಗ್ಯ ಯೋಜನೆಯಲ್ಲಿ 10 ಕೆಜಿ ಪಡಿತರ ಧಾನ್ಯದಲ್ಲಿ 5 ಕೆಜಿ ಅಕ್ಕಿ ಜತೆಗೆ 5 ಕೆಜಿ ಪಡಿತರದ ಹಣ ₹ 150 ಫಲಾನುಭವಿಗಳ ಖಾತೆಗೆ ಜಮೆ ಮಾಡಲಾಗುತ್ತಿತ್ತು. ಆದರೆ, ಹಣ ನೀಡುವ ಬದಲು ತೊಗರಿ ಬೇಳೆ, ಕೊಬ್ಬರಿ ಎಣ್ಣೆ, ಸಕ್ಕರೆ, ಜೋಳ ಹೀಗೆ ಆಹಾರ ಧ್ಯಾನದ ಕಿಟ್ ಮಾಡಿ ವಿತರಿಸುವ ಯೋಚನೆ ಇದೆ. ಇದನ್ನು ರಾಜ್ಯ ಮಟ್ಟದಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ರಾಯರಡ್ಡಿ ತಿಳಿಸಿದರು.1000 ಟನ್ ಡಿಎಪಿ ಗೊಬ್ಬರ ಮಂಜೂರು

ಯಲಬುರ್ಗಾ, ಕುಕನುರು ತಾಲೂಕಿಗೆ 1000 ಟನ್ ಡಿಎಪಿ ರಸಗೊಬ್ಬರ ಅವಶ್ಯಕತೆ ಇದ್ದು ಪೂರೈಸುವಂತೆ ರಾಯರಡ್ಡಿ ಅವರು ಕೃಷಿ ಸಚಿವ ಚಲುವರಾಯ ಸ್ವಾಮಿ ಅವರಿಗೆ ಸೋಮವಾರ ಕರೆ ಮಾಡಿ ಕೋರಿದ್ದರು. ಮಂಗಳವಾರ ಸಚಿವರು ಕುಕನೂರು, ಯಲಬುರ್ಗಾ ತಾಲೂಕಿಗೆ 1000 ಟನ್ ಡಿಎಪಿ ಗೊಬ್ಬರ ಮಂಜೂರು ಮಾಡಿ ಪೂರೈಕೆಗೆ ಮುಂದಾಗಿದ್ದಾರೆ. ರೈತರಿಗೆ ಗೊಬ್ಬರ ಅಭಾವ ಆಗದು ಎಂದು ರಾಯರಡ್ಡಿ ತಿಳಿಸಿದ್ದಾರೆ.

PREV

Recommended Stories

ಯೂರಿಯಾ: ರೈತ ಬಾಂಧವರಲ್ಲಿ ಅತಂಕ ಬೇಡ
ಪಂಚಪೀಠ ನಿರ್ಣಯ ಒಪ್ಪಲ್ಲ, ರಂಭಾಪುರಿ ಶ್ರೀಗಳ ಮನಸ್ಥಿತಿ ಕಲುಷಿತ: ವಚನಾನಂದ ಶ್ರೀ