ಹೂವಿನಹಡಗಲಿ: 12 ನೇ ಶತಮಾನದಲ್ಲೇ ವಿಶ್ವಗುರು ಬಸವಣ್ಣ ಕಲ್ಯಾಣದ ಅನುಭವ ಮಂಟಪದಲ್ಲಿ ಶರಣ ಸಂಕುಲ ಒಗ್ಗೂಡಿಸಿ ವಚನಗಳ ಮೂಲಕ ಜೀವನದ ಮೌಲ್ಯ ಬಿತ್ತುವ ಕೆಲಸ ಮಾಡಿದ್ದಾರೆ ಎಂದು ನಿವೃತ್ತ ಪ್ರಾಚಾರ್ಯ ಶಾಂತಮೂರ್ತಿ. ಬಿ ಕುಲಕರ್ಣಿ ಹೇಳಿದರು.
ಇಲ್ಲಿನ ತಾಪಂ ರಾಜೀವ್ ಗಾಂಧಿ ಸಭಾಂಗಣದಲ್ಲಿ ತಾಲೂಕಾಡಳಿತ ಆಯೋಜಿಸಿದ್ದ ಸಾಂಸ್ಕೃತಿಕ ರಾಯಭಾರಿ ವಿಶ್ವ ಗುರು ಬಸವಣ್ಣನವರ 892ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.ಸಮನ್ವಯ,ಸಮಾನತೆಯ ಹರಿಕಾರನಾಗಿರುವ ಬಸವಣ್ಣನವರು, ಆಧ್ಯಾತ್ಮಿಕ ತತ್ವ ಪರಿಪಾಲಕರಾಗಿದ್ದರು. ಶರಣ ಸಂಕುಲದೊಂದಿಗೆ ಅನ್ನ ಹಾಗೂ ಜ್ಞಾನ ದಾಸೋಹಿಯಾಗಿದ್ದ ಇವರು, ನಿರಂತರವಾಗಿ ವಚನ ರಚಿಸುವ ಮೂಲಕ ಸಮಸಮಾಜ ನಿರ್ಮಾಣ ಮತ್ತು ಮೌಢ್ಯ,ಕಂದಾಚಾರ ಕಿತ್ತು ಹಾಕುವ ಕೆಲಸ ಮಾಡಿದ್ದಾರೆ, ಅವರ ಆದರ್ಶಯ ಬದುಕು ನಮ್ಮೇಲ್ಲರಿಗೂ ದಾರಿ ದೀಪವಾಗಿದೆ ಎಂದರು.
ಅನನ್ಯ ಸಮಷ್ಠಿ ಪ್ರಜ್ಞೆಯ ಜತೆಗೆ ಬಸವಣ್ಣ ಆಧ್ಯಾತ್ಮಿಕ ಕವಿಯಾಗಿದ್ದರು. ಆದ್ಯ ವಚನಕಾರ, ಧರ್ಮ ಸಮನ್ವಯ ಹರಿಕಾರನಾಗಿ ಜೀವನಕ್ಕೆ ಅಗತ್ಯವಿರುವ, ಸಪ್ತ ಸೂತ್ರಗಳನ್ನು ವಚನಗಳ ಮೂಲಕ ಸಾರಿದ್ದಾರೆ. ಕಾಯಕ ತತ್ವಕ್ಕೆ ಹೆಚ್ಚು ಮಹತ್ವ ನೀಡಿರುವ ಬಸವಣ್ಣನವರನ್ನು ಇಡೀ ವಿಶ್ವವೇ ಅಪ್ಪಿಕೊಂಡಿದೆ, ಆದರೆ ನಾವು ಅವರ ತತ್ವಾದರ್ಶ ಜೀವನದಲ್ಲಿ ಅಳವಡಿಸಿಕೊಳ್ಳದಿದ್ದರೇ ಉತ್ತಮ ಜೀವನ ರೂಪಿಸಿಕೊಳ್ಳಲು ಸಾಧ್ಯವಿಲ್ಲ ಎಂದರು.ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಗವಿಸಿದ್ದೇಶ್ವರ ಮಠದ ಡಾ. ಹಿರಿಶಾಂತ ವೀರ ಸ್ವಾಮೀಜಿ, ಮಲ್ಲನಕೇರಿ ಮಠದ ಅಭಿನವ ಚೆನ್ನಬಸವ ಸ್ವಾಮೀಜಿ ಮಾತನಾಡಿದರು.
ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ, ಅಖಿಲ ಭಾರತ ವೀರಶೈವ ಮಹಾಸಭಾದ ತಾಲೂಕಾಧ್ಯಕ್ಷ ಸಿ.ಕೆ.ಎಂ. ಬಸವಲಿಂಗ ಸ್ವಾಮಿ ಮಾತನಾಡಿದರು.ಅಧ್ಯಕ್ಷತೆಯನ್ನು ತಹಸೀಲ್ದಾರ್ ಜಿ. ಸಂತೋಷಕುಮಾರ ವಹಿಸಿದ್ದರು, ಅಖಿಲ ಭಾರತ ವೀರಶೈವ ಮಹಾಸಭಾದ ನಗರ ಘಟಕದ ಅಧ್ಯಕ್ಷ ಮುಂಡವಾಡದ ಉಮೇಶ, ಪುರಸಭೆ ಸದಸ್ಯ ವಾರದ ಗೌಸ್ ಮೋಹಿದ್ದೀನ್, ತಾಪಂ ಇಒ ಎಂ.ಉಮೇಶ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು, ಸಮಾಜದ ಮುಖಂಡರು ಉಪಸ್ಥಿತರಿದ್ದರು.
ಬಸವೇಶ್ವರ ಪುತ್ಥಳಿ ನಿರ್ಮಾಣವೀರಶೈವ ಸಮಾಜದ ಮುಖಂಡರ ಜತೆಗೆ ಚರ್ಚಿಸಿ ಜಗಜ್ಯೋತಿ ಬಸವೇಶ್ವರರ ವೃತ್ತ ನಿರ್ಮಿಸುವ ಜತೆಗೆ ಸುಂದರವಾದ ಬಸವಣ್ಣನವರ ಮೂರ್ತಿ ನಿರ್ಮಾಣದ ಚಿಂತನೆ ಇದೆ. ಆದಷ್ಟು ಶೀಘ್ರದಲ್ಲೇ ಈ ಕುರಿತು ಕ್ರಮ ಕೈಗೊಳ್ಳುತ್ತೇನೆಂದು ಶಾಸಕ ಕೃಷ್ಣನಾಯ್ಕ ಭರವಸೆ ನೀಡಿದರು.
ವಿಶ್ವ ಗುರು ಬಸವಣ್ಣನವರ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕಲ್ಯಾಣದಲ್ಲಿ ಬಸವಣ್ಣನವರು 12ನೇ ಶತಮಾನದಲ್ಲಿ ಎಲ್ಲರನ್ನು ಒಗ್ಗೂಡಿಸಿ ಕಾಯಕ ತತ್ವದಡಿಯಲ್ಲಿ ಅನುಭವ ಮಂಟಪದ ಮೂಲಕ ಸಂಸತ್ತಿನ ಪರಿಕಲ್ಪನೆ ನೀಡಿದ್ದಾರೆ. ಪ್ರತಿಯೊಬ್ಬರಿಗೂ ಬಸವಣ್ಣನವರ ತತ್ವ, ವಚನಗಳ ಪರಿಚಯ ಮಾಡುವ ಅಗತ್ಯವಿದೆ ಎಂದರು.ಇದೇ ಸಂದರ್ಭದಲ್ಲಿ ಪಿಯು ಪರೀಕ್ಷೆಯನ್ನು ಅತಿ ಹೆಚ್ಚು ಅಂಕಗಳನ್ನು ಪಡೆದಿರುವ ಇಟಿಗಿ ಪಂಚಮಸಾಲಿ ಪಿಯು ಕಾಲೇಜಿನ ಗಡ್ಡಿ ಸಿದ್ದಲಿಂಗಮ್ಮ, ಎಂ.ಎಂ.ಪಾಟೀಲ್ ಪಿಯು ಕಾಲೇಜಿನ ಕವಿತಾ, ವಾಣಿ ಇವರನ್ನು ಸಮಾಜದಿಂದ ಸನ್ಮಾನಿಸಿ ಗೌರವಿಸಲಾಯಿತು. ಇದಕ್ಕೂ ಮುನ್ನ ಪಟ್ಟಣದ ಕಲ್ಲೇಶ್ವರ ದೇವಸ್ಥಾನದಿಂದ ಬಸವಣ್ಣನವರ ಭಾವಚಿತ್ರವನ್ನು 20ಕ್ಕೂ ಹೆಚ್ಚು ಎತ್ತಿನ ಮೆರವಣಿಗೆ ನಡೆಯಿತು.