ಕನ್ನಡಪ್ರಭ ವಾರ್ತೆ ಬಾದಾಮಿ

ಕೌಟುಂಬಿಕ ಕಲಹದಿಂದ ಬೇಸತ್ತ ಮಹಿಳೆ ತನ್ನ ಮೂವರು ಮಕ್ಕಳನ್ನು ನೇಣು ಹಾಕಿ ಹತ್ಯೆ ಮಾಡಿ ತಾನೂ ಆತ್ಮಹತ್ಯೆಗೆ ಯತ್ನಿಸಿದ ಹೃದಯ ವಿದ್ರಾವಕ ಘಟನೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಹಿರೇಮುಚಳಗುಡ್ಡ ಗ್ರಾಮದಲ್ಲಿ ಭಾನುವಾರ ನಡೆದಿದೆ.

ಸಮೃದ್ಧಿ ಹನುಮಂತ ಗೌಡರ (೫), ಪ್ರೀತಮ್ ಹನುಮಂತ ಗೌಡರ (೪), ಸುಶಿಕತ್ ಹನುಮಂತ ಗೌಡರ (೨) ಹತ್ಯೆಯಾದ ಮಕ್ಕಳು. ರೂಪಾ ಹನುಮಂತ ಗೌಡರ (೨೭) ಕೌಟುಂಬಿಕ ಕಲಹದಿಂದ ಬೇಸತ್ತು ಮೊದಲು ಮೂವರು ಮಕ್ಕಳನ್ನು ಹಗ್ಗದಿಂದ ನೇಣಿಗೆ ಹಾಕಿದ್ದು, ಅವು ಸಾವಿಗೀಡಾದ ಬಳಿಕ ಡಿಸೇಲ್‌ ಕುಡಿದು ಹಗ್ಗದಿಂದ ನೇಣು ಹಾಕಿಕೊಳ್ಳಲು ಯತ್ನಿಸಿದ್ದಾಳೆ. ಕೂಡಲೇ ಆಕೆಯನ್ನು ರಕ್ಷಣೆ ಮಾಡಿ ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಬಾದಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.