ಸಮಾನತೆ ಸಾರಿದ ಮಹಾ ಪುರುಷ ಬಸವಣ್ಣ: ಸಾತನೂರು ಜಯರಾಮ್

KannadaprabhaNewsNetwork | Published : May 1, 2025 12:49 AM

ಸಾರಾಂಶ

ಬಸವಣ್ಣನವರು ಕೂಡಲಸಂಗಮದಲ್ಲಿ ದೀಕ್ಷೆ ಪಡೆದವರು. ಸಮಾಜದ ಒಳಿತಿಗಾಗಿ ಹೆಣ್ಣು ಗಂಡು ಎಂಬ ಭೇದವಿಲ್ಲದೆ ಜಾತಿ ನಿರ್ಮೂಲನೆ ಮಾಡಬೇಕು ಎಂದು ಹೇಳಿ ಜಾತಿಯಿಂದ ಮನುಕುಲ ನಾಶವಾಗುತ್ತದೆ ಎಂಬುದನ್ನು ತಿಳಿದು ಅಂತರ್ಜಾತಿ ವಿವಾಹ ಮಾಡಿದ ಮಹಾಪುರುಷ.

ಕನ್ನಡಪ್ರಭ ವಾರ್ತೆ ಮಂಡ್ಯ

ಸಮಾಜದಲ್ಲಿ ಹೆಣ್ಣು ಗಂಡು ಎಂಬ ಭೇದವಿಲ್ಲದೆ ಸಮಾನತೆ ಸಾರಿದ ಮಹಾ ಪುರುಷ ಬಸವಣ್ಣ ಎಂದು ಜೆಡಿಎಸ್ ಪರಿಶಿಷ್ಟ ಜಾತಿ ವಿಭಾಗದ ಜಿಲ್ಲಾಧ್ಯಕ್ಷ ಸಾತನೂರು ಜಯರಾಮ್ ತಿಳಿಸಿದರು.

ನಗರದ ಮಿಮ್ಸ್ ಹೆರಿಗೆ ವಾರ್ಡ್ ಆವರಣದ ಮಮತೆಯ ಮಡಿಲು ನಿತ್ಯ ಅನ್ನದಾಸೋಹ ಕೇಂದ್ರದಲ್ಲಿ ಪರಿಸರ ರೂರಲ್ ಡೆವಲಪ್ ಮೆಂಟ್ ಸೊಸೈಟಿ ವತಿಯಿಂದ ನಡೆದ ವಿಶ್ವಗುರು ಶ್ರೀ ಬಸವಣ್ಣರವರ ಜಯಂತ್ಯುತ್ಸವದಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.

ಬಸವಣ್ಣನವರು ಕೂಡಲಸಂಗಮದಲ್ಲಿ ದೀಕ್ಷೆ ಪಡೆದವರು. ಸಮಾಜದ ಒಳಿತಿಗಾಗಿ ಹೆಣ್ಣು ಗಂಡು ಎಂಬ ಭೇದವಿಲ್ಲದೆ ಜಾತಿ ನಿರ್ಮೂಲನೆ ಮಾಡಬೇಕು ಎಂದು ಹೇಳಿ ಜಾತಿಯಿಂದ ಮನುಕುಲ ನಾಶವಾಗುತ್ತದೆ ಎಂಬುದನ್ನು ತಿಳಿದು ಅಂತರ್ಜಾತಿ ವಿವಾಹ ಮಾಡಿದ ಮಹಾಪುರುಷ ಎಂದರು.

ಬಸವಣ್ಣನವರ ಮಾರ್ಗದರ್ಶನ ದಲ್ಲಿ ಡಾ.ಬಿ.ಆ.ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಎಲ್ಲಾ ಆಶಯಗಳನ್ನು ಅಳವಡಿಸಿದ್ದಾರೆ. ಜಾತಿ ಭೇದವಿಲ್ಲದೆ ಸಮನಾಗಿ, ಏಕತೆಗಾಗಿ ಎಲ್ಲರೂ ದುಡಿಯೋಣ ಎಂದು ತಿಳಿಸಿದರು.

ಪರಿಸರ ಸಂಸ್ಥೆ ಅಧ್ಯಕ್ಷ ಮಂಗಲ ಎಂ.ಯೋಗೀಶ್ ಮಾತನಾಡಿ, ಬಸವಣ್ಣನವರ ವಚನಗಳು ಸರ್ವಕಾಲಕ್ಕೂ ಸಾರ್ವತ್ರಿಕವಾದವು. ಮನುಕುಲದ ಉಳಿವಿಗಾಗಿ ವಿಶ್ವ ಶಾಂತಿಗಾಗಿ ಬಸವಣ್ಣನವರು ಜಾತ್ಯಾತೀತವಾಗಿ ಎಲ್ಲರೂ ಸಮಾನತೆಯಿಂದ ಇರುವಂತೆ ಹೇಳಿದವರು ಎಂದರು.

ಕಾಯಕ ಸಿದ್ಧಾಂತವನ್ನೇ ಮೂಲ ಮಂತ್ರವಾಗಿಸಿಕೊಂಡು ಜಗತ್ತಿಗೆ ಸಮಾನತೆಯ ತತ್ವವನ್ನು ಸಾರಿದ ಮಹಾನ್ ಪುರುಷ ಬಸವಣ್ಣ ಅವರ ಆದರ್ಶಗಳನ್ನು ಪ್ರತಿ ಯೊಬ್ಬರು ಅನುಸರಿಸಬೇಕು ಎಂದು ಕಿವಿಮಾತು ಹೇಳಿದರು.

ಈ ವೇಳೆ ಶುಶ್ರೂಷಕಿಯರಾದ ರಕ್ಷಿತಾ,ರಾಧಾ,ದಿವ್ಯ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

ಪ್ರತಿಯೊಬ್ಬ ನೌಕರರಿಗೂ ಜನರ ಸೇವೆ ಮಾಡಲು ಒಂದು ಅವಕಾಶವಿದೆ: ಚಂದ್ರಶೇಖರ್

ಕನ್ನಡಪ್ರಭ ವಾರ್ತೆ ಪಾಂಡವಪುರ

ಸರ್ಕಾರಿ ಉದ್ಯೋಗದಲ್ಲಿರುವ ಪ್ರತಿಯೊಬ್ಬ ನೌಕರರಿಗೂ ಜನರ ಸೇವೆ ಮಾಡಲು ಒಂದು ಅವಕಾಶವಿರುತ್ತದೆ. ನನಗೆ ಸಿಕ್ಕ ಅವಕಾಶದಲ್ಲಿ ಸಾಧ್ಯವಾದಷ್ಟು ಜನಸೇವೆ ಮಾಡಿದ್ದೇನೆ ಎಂದು ಭೂ-ದಾಖಲೆಗಳ ಇಲಾಖೆ ಪರ್ಯಾವೇಕ್ಷಕ ಅಧಿಕಾರಿ ಎಸ್.ಎಲ್.ಚಂದ್ರಶೇಖರ್ ಹೇಳಿದರು.

ಪಟ್ಟಣದ ಅನ್ನಪೂರ್ಣೇಶ್ವರಿ ಕನ್ವೆನ್ಷನ್ ಹಾಲ್‌ನಲ್ಲಿ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿ, ನನ್ನ ಸೇವಾವಧಿಯಲ್ಲಿ ಉತ್ತಮ ಕೆಲಸ ಮಾಡಲು ಸಹೋದ್ಯೋಗಿಗಳು ಸಾಕಷ್ಟು ಸಹಕಾರ ನೀಡಿದರು ಎಂದರು.

ರೆವಿನ್ಯೂ ಇನ್ಸ್ ಪೆಕ್ಟರ್ ಟಿ.ಪಿ.ರೇವಣ್ಣ ಮಾತನಾಡಿ, ಸರ್ಕಾರಿ ಅಧಿಕಾರಿಗಳು ಸೇವಾ ದಿನಗಳಲ್ಲಿ ನಿತ್ಯ ಒಂದಲ್ಲ ಒಂದು ಒತ್ತಡದಲ್ಲಿರುತ್ತಾರೆ. ನಿವೃತ್ತರಾದ ನಂತರವಾದರೂ ನೆಮ್ಮದಿಯ ಜೀವನ ನಡೆಸಬೇಕು ಎಂದರು.

ಇದೇ ವೇಳೆ ಎಲ್ಲಾ ಅಧಿಕಾರಿಗಳು, ಸಿಬ್ಬಂದಿ ಎಸ್.ಎಲ್.ಚಂದ್ರಶೇಖರ್ ಅವರನ್ನು ಅಭಿನಂದಿಸಿದರು. ಈ ವೇಳೆ ಭೂ-ದಾಖಲೆಗಳ ಸಹಾಯಕ ನಿರ್ದೇಶಕರು ಹಾಗೂ ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗವಹಿಸಿದ್ದರು.

Share this article