ಅಂಗೈಯೊಳಗೆ ಇಷ್ಟಲಿಂಗ ಕರುಣಿಸಿದ ಬಸವಣ್ಣ: ಸಾಣೆಹಳ್ಳಿ ಶ್ರೀ

KannadaprabhaNewsNetwork |  
Published : Jun 02, 2024, 01:45 AM IST
ಸಾಣೆ ಹಳ್ಳಿಯ ಶ್ರೀಮಠದಲ್ಲಿ ನಡೆದ ಪ್ರತಿ ತಿಂಗಳ ಇಷ್ಟಲಿಂಗ ದೀಕ್ಷಾ ಸಂಸ್ಕಾರ ಕಾರ್ಯಕ್ರಮದಲ್ಲಿ ಶ್ರೀಗಳು ವಟುವಿಗೆ  ಲಿಂಗ ದೀಕ್ಷೆ ನೀಡುತ್ತಿರುವುದು. | Kannada Prabha

ಸಾರಾಂಶ

ಸಾಣೆಹಳ್ಳಿಯ ಶ್ರೀಮಠದಲ್ಲಿ ನಡೆದ ಪ್ರತಿ ತಿಂಗಳ ಇಷ್ಟಲಿಂಗ ದೀಕ್ಷಾ ಸಂಸ್ಕಾರ ಕಾರ್ಯಕ್ರಮದಲ್ಲಿ ಶ್ರೀಗಳು ವಟುವಿಗೆ ಲಿಂಗದೀಕ್ಷೆ ನೀಡಿದರು.

ಕನ್ನಡಪ್ರಭ ವಾರ್ತೆ ಹೊಸದುರ್ಗ

ಧರ್ಮಗಳಲ್ಲಿನ ವಿಚಾರಗಳು ಜನರನ್ನು ದಿಕ್ಕುತಪ್ಪಿಸಿ, ದಿಂಡುರುಳುವ ವಾತಾವರಣ ಇದ್ದದ್ದನ್ನು ಕಂಡು ಅಂಗೈಯೊಳಗೆ ಇಷ್ಟಲಿಂಗ ವನ್ನು ಬಸವಣ್ಣ ಕರುಣಿಸಿ ಇಷ್ಟಲಿಂಗದ ಜನಕರಾದರು ಎಂದು ಸಾಣೆಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ತಾಲೂಕಿನ ಸಾಣೆ ಹಳ್ಳಿಯ ಶ್ರೀಮಠದಲ್ಲಿ ನಡೆದ ಪ್ರತಿ ತಿಂಗಳ ಇಷ್ಟಲಿಂಗ ದೀಕ್ಷಾ ಸಂಸ್ಕಾರ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಮಾತನಾಡಿ, ಚಲನೆ ಇಲ್ಲದ ಜೀವವಿಲ್ಲದ ಗುಡಿಯಲ್ಲಿನ ಸ್ಥಾವರ ದೇವರನ್ನು ಎಲ್ಲರೂ ಪೂಜಿಸಲು ಸಾಧ್ಯವಿಲ್ಲ. ತನ್ನ ದೇವರನ್ನು ತಾನೇ ಮುಟ್ಟಿ ಪೂಜಿಸಬೇಕೆಂದು ತನ್ನೊಡನೆ ಚಲಿಸುವ ಇಷ್ಟ ಲಿಂಗವನ್ನು ಜನರಿಗೆ ಬಸವಣ್ಣ ನೀಡಿದರು ಎಂದರು.

ಲಿಂಗಾಯತ ಧರ್ಮದ ತತ್ವಗಳನ್ನು ಶರಣರು ಪ್ರತಿಪಾದಿಸಿದರು. ಅಷ್ಟಾವರಣ, ಪಂಚಾಚಾರ, ಷಟ್‌ಸ್ಥಲಗಳು ಇವು ಲಿಂಗಾಯತ ಧರ್ಮದ ಆಧಾರಸ್ಥಂಬಗಳು. ಗುರು ಎಂದರೆ ಅಜ್ಞಾನವನ್ನು ಕಳೆಯುವ ವ್ಯಕ್ತಿ. ಸರಿಯಾದ ಜ್ಞಾನ ಬಲ್ಲ ಶಕ್ತಿ. ಹೊರಗಿನ ಗುರು ಎಷ್ಟು ಮುಖ್ಯವೋ ಒಳಗಿನ ಗುರು ಅಷ್ಟೇ ಮುಖ್ಯ. ಅಂತರಂಗದಲ್ಲಿ ಗುರುವನ್ನು ಕಂಡುಕೊಂಡು ಅರಿವನ್ನಾಗಿ ಪಡೆದುಕೊಳ್ಳಬೇಕು. ಇಷ್ಟಲಿಂಗವನ್ನು ಭಾವಕ್ಕೆ ತೆಗೆದುಕೊಳ್ಳುವ ಮೂಲಕ ಪ್ರಾಣಕ್ಕೆ ತೆಗೆದುಕೊಳ್ಳಬೇಕು ಎಂದರು.ಜಂಗಮ ಎಂದರೆ ಅರಿವು ಆಚಾರವನ್ನು ಹೊಂದಿದವರು. ಆಚಾರಕ್ಕೆ ತಕ್ಕ ನಡಾವಳಿಕೆಯನ್ನು ಹೊಂದಿ ನಮ್ಮೊಳಗಡೆಯೇ ನಾವು ಜಂಗಮರಾಗುವುದು. ಪಾದೋದಕ ಎಂದರೆ ಗುರುಗಳ ಪಾದ ತೊಳೆದುಕೊಂಡು ಕುಡಿಯುವುದಲ್ಲ. ಲಿಂಗದ ಮೇಲೆ ನೀರುಹಾಕಿಕೊಂಡು ಕುಡಿಯುವುದು. ಪ್ರಸಾದ ಎಂದರೆ ಬರೀ ಹಣ್ಣು ಕಾಯಿ, ಕಲ್ಲುಸಕ್ಕರೆ ಅಲ್ಲ. ಅರಿವನ್ನು ನೀಡುವುದು. ಮಂತ್ರ ಎಂದರೆ ಅರ್ಥವಾಗದೇ ಇರುವ ಭಾಷೆಗಳಿಂದ ಮಂತ್ರಗಳನ್ನು ಪಠಿಸುವುದಲ್ಲ. ಮನಸ್ಸಿನಿಂದಾಡುವ ಪ್ರತಿಯೊಂದು ಶುದ್ಧ ಮಾತುಗಳು ಮಂತ್ರಗಳಾಗುವುವು ಎಂದರು.

ಲಿಂಗದೀಕ್ಷೆ ಪಡೆದುಕೊಂಡ ನಂತರ ಯಾವುದೇ ಹೊರಗಿನ ದೇವಸ್ಥಾನಗಳಿಗೆ ಹೋಗಿ ಪೂಜೆ ಮಾಡುವುದಿಲ್ಲ ಎನ್ನುವ ನಿಷ್ಠೆ, ನಿಯಮ, ಬದ್ಧತೆ ಪ್ರತಿಯೊಬ್ಬರಲ್ಲೂ ಇರಬೇಕು. ಜನರ ಸ್ವಭಾವ ಒಂದೊಂದು ಹಬ್ಬಕ್ಕೂ ಒಂದೊಂದು ದೇವಸ್ಥಾನಗಳಿಗೆ ಹೋಗಿ ಪೂಜೆ ಮಾಡುವ ಸಂಪ್ರದಾಯ ಬೆಳೆಸಿಕೊಂಡಿದ್ದಾರೆ. ಇದನ್ನೇ ಶರಣರು ವಿರೋಧಿಸಿದರು ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೀದಿ ನಾಯಿ ಮರಿ ದತ್ತು ಪಡೆದು ಮಾನವೀಯತೆ ತೋರಿ
5 ವರ್ಷದೊಳಗಿನ ಮಕ್ಕಳಿಗೆ ಪಲ್ಸ್ ಪೋಲಿಯೊ ಕಡ್ಡಾಯ