ಜ್ಞಾನದ ಹಣತೆ ಬೆಳಗಿಸಿದ ಲಿಂ. ಬಸವಣ್ಣಜ್ಜನವರು

KannadaprabhaNewsNetwork |  
Published : Jan 28, 2026, 02:30 AM IST
ಕುಂದಗೋಳ ಪಟ್ಟಣದ ಕಲ್ಯಾಣಪುರ ವೈಭವ ಜಾತ್ರಾ ಮಹೋತ್ಸವಕ್ಕೆ ಶಿರಹಟ್ಟಿಯ ಫಕೀರ ಸಿದ್ದರಾಮ ಶ್ರೀಗಳು ಚಾಲನೆ ನೀಡಿ ಮಾತನಾಡಿದರು. | Kannada Prabha

ಸಾರಾಂಶ

ಮೊಬೈಲ್ ಹಾಗೂ ಟಿವಿ ಗೀಳಿನ ಬಗ್ಗೆ ಎಚ್ಚರಿಸುತ್ತ ದೂರದರ್ಶನ ಬದಿಗಿಟ್ಟು ಧರ್ಮದರ್ಶನದ ಕಡೆಗೆ ಮುಖ ಮಾಡಿದರೆ ಸಮಾಜ ತಾನಾಗಿಯೇ ಸುಧಾರಿಸುತ್ತದೆ ಎಂದು ಗವಿಸಿದ್ದೇಶ್ವರ ಶಾಸ್ತ್ರಿಗಳು ಹೇಳಿದರು.

ಕುಂದಗೋಳ:

ಕೌದಿಯೊಳಗೆ ಮುಚ್ಚಿಟ್ಟಿದ್ದ ಕಲ್ಯಾಣದ ಅಮೃತ ಜ್ಞಾನವು ಇಂದು ಭಕ್ತಿಯ ಸೆಲೆಯಾಗಿ ಪಸರಿಸುತ್ತಿದೆ. ಲಿಂ. ಬಸವಣ್ಣಜ್ಜನವರು ಭಕ್ತರ ಬದುಕಿನ ಸಂಕಷ್ಟಗಳಿಗೆ ಪರಿಹಾರ ನೀಡುತ್ತಾ, ಸಹನೆಯ ಶಾಂತ ಮೂರ್ತಿಯಾಗಿ ಜ್ಞಾನದ ಹಣತೆ ಬೆಳಗಿಸಿದ್ದಾರೆ ಎಂದು ಶಿರಹಟ್ಟಿಯ ಫಕೀರ ಸಿದ್ದರಾಮ ಶ್ರೀ ಹೇಳಿದರು.

ಪಟ್ಟಣದ ಕಲ್ಯಾಣಪುರ ಬಸವಣ್ಣಜ್ಜನವರ ಪುಣ್ಯಸ್ಮರಣೋತ್ಸವದ ಅಂಗವಾಗಿ ಆಯೋಜಿಸಿದ್ದ 5 ದಿನಗಳ ‘ಕಲ್ಯಾಣಪುರ ವೈಭವ’ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.

ಲಿಂ. ಬಸವಣ್ಣಜ್ಜನವರ ಆದೇಶದಂತೆ ಅಭಿನವ ಬಸವಣ್ಣಜ್ಜನವರು ತ್ರಿವಿಧ ದಾಸೋಹದ ಪರಿಕಲ್ಪನೆ ಮುಂದುವರಿಸಿಕೊಂಡು ಬರುತ್ತಿರುವುದು ಶ್ಲಾಘನೀಯ. ಸಮಾಜವನ್ನು ಬೆಳಗುವ ಆಧ್ಯಾತ್ಮಿಕ ಶಕ್ತಿಯು ಇಲ್ಲಿ ಜ್ಞಾನದ ರೂಪದಲ್ಲಿ ಹರಿಯುತ್ತಿದೆ ಎಂದು ಶ್ರೀಗಳು ಸ್ಮರಿಸಿದರು. ಇದೇ ವೇಳೆ ಶತಾಯುಷಿ ಫಕೀರಯ್ಯ ಬಾಳಿಹಳ್ಳಿಮಠ ಅವರ ಸುದೀರ್ಘ ಬದುಕನ್ನು ಚೇತನಕ್ಕೆ ಹೋಲಿಸಿದ ಶ್ರೀಗಳು, ಮಾಡಿದ ಕಾರ್ಯಗಳು ದೊಡ್ಡದಾದಾಗ ಬದುಕು ಸಾರ್ಥಕವಾಗುತ್ತದೆ ಎಂದರು.

ಪ್ರವಚನ ನೀಡಿದ ಗವಿಸಿದ್ದೇಶ್ವರ ಶಾಸ್ತ್ರಿಗಳು, ಮೊಬೈಲ್ ಹಾಗೂ ಟಿವಿ ಗೀಳಿನ ಬಗ್ಗೆ ಎಚ್ಚರಿಸುತ್ತ ದೂರದರ್ಶನ ಬದಿಗಿಟ್ಟು ಧರ್ಮದರ್ಶನದ ಕಡೆಗೆ ಮುಖ ಮಾಡಿದರೆ ಸಮಾಜ ತಾನಾಗಿಯೇ ಸುಧಾರಿಸುತ್ತದೆ ಎಂದು ಕಿವಿಮಾತು ಹೇಳಿದರು.

ಶಾಸಕ ಎಂ.ಆರ್. ಪಾಟೀಲ್ ಮಾತನಾಡಿ, ಕಲ್ಯಾಣಪುರ ಶ್ರೀಗಳ ಧರ್ಮ ಜಾಗೃತಿಯ ಕಾರ್ಯ ಅಮೋಘವಾಗಿದ್ದು, ನಡೆ- ನುಡಿ ಶುದ್ಧಿಯಿದ್ದರೆ ಮಾತ್ರ ಜನ್ಮ ಸಾರ್ಥಕವಾಗಲು ಸಾಧ್ಯ ಎಂದರು.

ಸಬಿತಾ ಅಮರಶೆಟ್ಟಿ, ನಿರಾಮಯ ಫೌಂಡೇಶನ್ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಬಾಳಿಕಾಯಿ ಮಾತನಾಡಿದರು. ಗಾಳಿಮರೆಮ್ಮದೇವಿ ದೇವಸ್ಥಾನದಿಂದ ಅಜ್ಜನವರ ಮೂರ್ತಿಯ ಭವ್ಯ ಮೆರವಣಿಗೆಯು ಅದ್ಧೂರಿಯಾಗಿ ನೆರವೇರಿತು. ಅಭಿನವಶ್ರೀ ಬಸವಣ್ಣಜ್ಜನವರು, ಕಮಡೊಳ್ಳಿ ಲೋಚನೇಶ್ವರ ಮಠದ ಶ್ರೀಗಳು ಸೇರಿದಂತೆ ಅನೇಕ ಸ್ವಾಮೀಜಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಐದು ದಿನಗಳ ಸಂಭ್ರಮದಲ್ಲಿ ರೈತ, ಮಹಿಳಾ ಹಾಗೂ ಯುವ ಗೋಷ್ಠಿಗಳು ನಡೆಯಲಿದ್ದು, ಮಂಜಮ್ಮ ಜೋಗತಿ ಅವರಿಗೆ ‘ಕಲ್ಯಾಣಶಿರಿ’ ಗೌರವ ಸಮರ್ಪಿಸಲಾಗುವುದು. ಜ. 30ರಂದು ಬಸವಣ್ಣನವರ ಮಹಾರಥೋತ್ಸವ ಜರುಗಲಿದೆ.

ಕಾರ್ಯಕ್ರಮದ ಆರಂಭದಲ್ಲಿ ಲಕ್ಷ್ಮೇಶ್ವರದ ಗಿರಿಜಾಶಂಕರ ಮಹಿಳಾ ಬಳಗದಿಂದ ಲಲಿತ ಸಹಸ್ರನಾಮ ಪಠಣ ಹಾಗೂ ಪಲ್ಲವಿ ಚಾಕಲಬ್ಬಿ ಮತ್ತು ತಂಡದಿಂದ ಭರತನಾಟ್ಯ ಪ್ರದರ್ಶನ ನಡೆಯಿತು. ಮೃತ್ಯುಂಜಯ ಜಡಿಮಠ ಹಾಗೂ ಬಸವರಾಜ ಹಿರೇಮಠ ಕಾರ್ಯಕ್ರಮ ನಿರ್ವಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿ ರಾಮ್‌ ಜಿ ವಿರುದ್ಧ ಸಿಡಿದೆದ್ದ ಕಾಂಗ್ರೆಸ್‌ ಪಡೆ - ದುಡಿವ ಕೈಗಳ ಅನ್ನ ಕಸಿವ ಕಾಯ್ದೆ
ಕೇಂದ್ರ ಸರ್ಕಾರದ ಸಾಧನೆ ತಿಳಿ ಹೇಳಿ