ಮೇಲುಕೋಟೆ: ಕ್ಷೇತ್ರದಲ್ಲಿ ಜಾನಪದ ಕಲೆಗಳಿಗೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ತಿಳಿಸಿದರು.
ಮೇಲುಕೋಟೆ ಯತಿರಾಜದಾಸರ್ ಗುರುಪೀಠ ಜಾನಪದ ಕಲಾಮೇಳ ನಡೆಸುತ್ತಾ ಬಂದಿರುವುದು ಸಾಮಾನ್ಯ ಸಂಗತಿಯಲ್ಲ. ಕಲಾಮೇಳದಿಂದ ರಥಸಪ್ತಮಿಯ ಉತ್ಸವಕ್ಕೂ ಆಕರ್ಷಣೆ ಬಂದಿದೆ ಎಂದರು.
ಭರತ ನಾಟ್ಯದಂಥ ಭಾರತೀಯ ಸಂಸ್ಕೃತಿ ಬಿಂಬಿಸುವ ಕಲೆಗೂ ವೇದಿಕೆ ಕಲ್ಪಿಸಿ, ಬೆಂಗಳೂರಿನ ನಾಟ್ಯಭೈರವಿ ಕಲಾ ಕುಟೀರದ 50 ಮಕ್ಕಳು ಭರತನಾಟ್ಯ ಕಲಿತು ಪ್ರದರ್ಶನ ನೀಡುತ್ತಿರುವುದು ಖುಷಿ ನೀಡಿದೆ ಎಂದರು.ಇಸ್ರೋದ ಹಿರಿಯ ವಿಜ್ಞಾನಿ ಡಾ.ಶ್ರೀನಾಥ್ ಮಾತನಾಡಿ, ರಾಮಾನುಜರ ಕರ್ಮಭೂಮಿಯಲ್ಲಿ ರಥಸಪ್ತಮಿಯನ್ನು ಕಲಾರಾಧನೆಯ ವೇದಿಕೆಯಾಗಿ ಬದಲಿಸಿ ನೂರಾರು ಕಲಾವಿದರಿಗೆ ಮೂರು ದಶಕಗಳಿಂದ ಪ್ರೋತ್ಸಾಹಿಸುತ್ತಿರುವ ಯತಿರಾಜದಾಸರ್ ಗುರುಪೀಠದ ಕಾರ್ಯ ಇತರ ದೇವಾಲಯಗಳಿಗೆ ಮಾದರಿಯಾಗಿದೆ ಎಂದರು.
ಸಮಾರಂಭದಲ್ಲಿ ಮಾಧ್ಯಮ ಅಕಾಡೆಮಿ ಪ್ರಶಸ್ತಿಗೆ ಭಾಜನರಾದ ಕೆ.ಆರ್.ನೀಲಕಂಠ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾರ ಪತ್ರಕರ್ತರಾದ ಸುನಿಲ್ ಕುಮಾರ್ ಮತ್ತು ಚನ್ನಮಾದೇಗೌಡ ಹಾಗೂ ಜನಪದ ಕ್ಷೇತ್ರದಲ್ಲಿ ಸೇವೆ ಮಾಡಿದ ಕಲಾವಿದ ಕುಮಾರ್‌ರನ್ನು ಅಭಿನಂದಿಸಲಾಯಿತು.ವೇದಿಕೆಯಲ್ಲಿ ಸ್ಥಾನಾಚಾರ್ಯ ಶ್ರೀನಿವಾಸ ನರಸಿಂಹನ್ ಗುರೂಜಿ, ಗ್ರಾಪಂ ಉಪಾಧ್ಯಕ್ಷರಾದ ಜಯರಾಮೇಗೌಡ, ಭ.ರಾ.ರಾ.ಸಂ.ಸಂ ಕುಲಸಚಿವ ಎಸ್ ಕುಮಾರ್, ಇತಿಹಾಸ ತಜ್ಞ ಪ್ರೊ.ಶಲ್ವಪ್ಪಿಳ್ಳೆ ಅಯ್ಯಂಗಾರ್, ಸ್ಥಾನೀಕಂ ಸಂತಾನರಾಮನ್ ಕದಲಗೆರೆ, ಆರ್. ಶಿವಣ್ಣಗೌಡ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.
ಕಾರ್ಯಕ್ರಮಕ್ಕೂ ಮುನ್ನ ಮಾಜಿ ಸಚಿವ ಸಿ.ಎಸ್ ಪುಟ್ಟರಾಜುರವರು ಪು.ತಿ.ನ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.ರಥಸಪ್ತಮಿಯಂದು ಕರ್ನಾಟಕದ ಜಾನಪದ ಅಕಾಡೆಮಿ ಪ್ರಶಸ್ತಿಗೆ ಭಾಜನರಾದ ಜನಪದ ಕಲಾವಿದ ಹೊನ್ನಯ್ಯ ಮತ್ತು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ನಂಬಿನಾಯಕನಹಳ್ಳಿ ಕೃಷ್ಣೇಗೌಡ ಮತ್ತು ಜನಪದ ಕಲಾಕ್ಷೇತ್ರದಲ್ಲಿ ಸೇವೆ ಮಾಡಿದ ಜೋಗಯ್ಯರನ್ನು ಗುರುಪೀಠದಿಂದ ಅಭಿನಂದಿಸಲಾಯಿತು.