ರಾಹುಲ್‌ ಮೆಚ್ಚಿಸಲು ರಾಜ್ಯಪಾಲರಿಗೆ ಕಾಂಗ್ರೆಸ್‌ ಅವಮಾನ

KannadaprabhaNewsNetwork |  
Published : Jan 28, 2026, 02:30 AM IST
ಪ್ರಹ್ಲಾದ ಜೋಶಿ | Kannada Prabha

ಸಾರಾಂಶ

ಅಧಿಕಾರ ಹಸ್ತಾಂತರ ವಿಚಾರದಲ್ಲಿ ಡಿ.ಕೆ. ಶಿವಕುಮಾರ ಹಾಗೂ ಸಿಎಂ ಸಿದ್ದರಾಮಯ್ಯ ನಡುವಿನ ಯುದ್ಧದಲ್ಲಿ ರಾಹುಲ್ ಗಾಂಧಿ ಅವರನ್ನು ಮೆಚ್ಚಿಸಲು ಮುಖ್ಯಮಂತ್ರಿಗಳು ವಿಧಾನಸಭೆಯನ್ನು ಹುಡುಗಾಟದ ವೇದಿಕೆಯನ್ನಾಗಿ ಮಾಡಿಕೊಂಡು ಚಿಲ್ಲರೆ ಮಟ್ಟಕ್ಕೆ ಇಳಿದಿದ್ದಾರೆ.

ಹುಬ್ಬಳ್ಳಿ:

ರಾಹುಲ್‌ ಗಾಂಧಿ ಮೆಚ್ಚಿಸಲು, ಅಧಿಕಾರದಲ್ಲಿ ತಾವೇ ಮುಖ್ಯಮಂತ್ರಿಯಾಗಿ ಮುಂದುವರಿಯುವುದಕ್ಕಾಗಿ ಸಿದ್ದರಾಮಯ್ಯ ಹಾಗೂ ಅವರ ಪಟಾಲಂ ರಾಜ್ಯಪಾಲರನ್ನು ಅವಮಾನಿಸಿದೆ ಎಂದಿರುವ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಸುಧಾರಣೆಗಾಗಿ ನರೇಗಾ ಹೆಸರು ಬದಲಿಸಲಾಗಿದೆ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 176ನೇ ಕಲಂ ಪ್ರಕಾರ ಹೊಸ ವರ್ಷದ ಮೊದಲನೇ ಅಧಿವೇಶನದಲ್ಲಿ ರಾಜ್ಯಪಾಲರು ಮಾತನಾಡಿದ ನಂತರವೇ ಕಲಾಪ ಆರಂಭವಾಗುತ್ತವೆ. ರಾಜ್ಯ ಸರ್ಕಾರ ಬರೆದುಕೊಟ್ಟ ಭಾಷಣ ಓದುವುದು ಅಥವಾ ಸ್ವಂತ ವಿಚಾರಗಳನ್ನು ಮಂಡಿಸುವುದು ಕಲಂ 163ರ ಪ್ರಕಾರ ರಾಜ್ಯಪಾಲರ ವಿವೇಚನೆಗೆ ಬಿಟ್ಟದ್ದು. ರಾಜ್ಯ ಸರ್ಕಾರ ಬರೆದುಕೊಟ್ಟ ಭಾಷಣ ಓದಿಲ್ಲ ಎಂಬ ಕಾರಣಕ್ಕೆ ರಾಜಭವನಕ್ಕೆ ಮುತ್ತಿಗೆ ಹಾಕಲು ಹೊರಟಿರುವ ಸಿಎಂ ಸಿದ್ದರಾಮಯ್ಯ, ಅಂದು ರಾಜ್ಯಪಾಲರ ದಾರಿಗೆ ಅಡ್ಡ ಬಂದವರನ್ನು ಸಂಪುಟದಿಂದ ಮೊದಲು ವಜಾ ಮಾಡಬೇಕು ಎಂದು ಆಗ್ರಹಿಸಿದರು.

ಅಧಿಕಾರ ಹಸ್ತಾಂತರ ವಿಚಾರದಲ್ಲಿ ಡಿ.ಕೆ. ಶಿವಕುಮಾರ ಹಾಗೂ ಸಿಎಂ ಸಿದ್ದರಾಮಯ್ಯ ನಡುವಿನ ಯುದ್ಧದಲ್ಲಿ ರಾಹುಲ್ ಗಾಂಧಿ ಅವರನ್ನು ಮೆಚ್ಚಿಸಲು ಮುಖ್ಯಮಂತ್ರಿಗಳು ವಿಧಾನಸಭೆಯನ್ನು ಹುಡುಗಾಟದ ವೇದಿಕೆಯನ್ನಾಗಿ ಮಾಡಿಕೊಂಡು ಚಿಲ್ಲರೆ ಮಟ್ಟಕ್ಕೆ ಇಳಿದಿದ್ದಾರೆ ಎಂದು ಟೀಕಿಸಿದರು.

ಗಣರಾಜ್ಯೋತ್ಸವ ಭಾಷಣದಲ್ಲಿ ತಮ್ಮ ತಮ್ಮ ಸಾಧನೆಗಳನ್ನು ಹೇಳಿಕೊಳ್ಳಲು ಅವಕಾಶ ಇದ್ದೇ ಇರುತ್ತದೆ. ಆದರೆ, ಭಾಷಣದ ಭರಾಟೆಯಲ್ಲಿ ಪ್ರಧಾನ ಮಂತ್ರಿ ಹಾಗೂ ಕೇಂದ್ರದ ಯೋಜನೆಗಳನ್ನು ಟೀಕಿಸುವುದು ಸರಿಯಲ್ಲ. ಸಚಿವ ಎಚ್.ಕೆ. ಪಾಟೀಲ ಅವರು ಗಣರಾಜ್ಯೋತ್ಸವ ಭಾಷಣದಲ್ಲಿ ಏನೇನೋ ಮಾತನಾಡಿದ್ದಾರೆ. ಅಲ್ಲಿ ನಮ್ಮವರೂ ಇದ್ದರು. ಸ್ಥಳದಲ್ಲೇ ಅದನ್ನು ವಿರೋಧಿಸಿದರೂ, ಭಾಷಣ ನಿಲ್ಲಿಸದೇ ಭಂಡತನ ಪ್ರದರ್ಶಿಸಿದ್ದಾರೆ ಎಂದು ಕಿಡಿಕಾರಿದರು.ಕಾಂಗ್ರೆಸ್ಸಿಗೆ ಗಾಂಧಿ ನೆನಪು:

ನರೇಗಾ ಯೋಜನೆಯಲ್ಲಿ ಭ್ರಷ್ಟಾಚಾರ ಆಗಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಅದರಲ್ಲಿ ಪಾರದರ್ಶಕ ತರಲು ವಿಬಿ ಜಿ ರಾಮ್ ಜಿ ಎಂದು ಬದಲಾಯಿಸಿ ಸುಧಾರಣೆ ತರಲಾಗಿದೆ. ಮಹಾತ್ಮ ಗಾಂಧಿ ಹೆಸರು ಕಾಂಗ್ರೆಸ್ ಪಕ್ಷಕ್ಕೆ ಈಗ ನೆನಪಾಗಿದೆ. 415 ವಿವಿಧ ಯೋಜನೆಗಳಿಗೆ, ವಿಮಾನ ನಿಲ್ದಾಣ, ಉದ್ಯಾನಗಳಿಗೆ ನಕಲಿ ಗಾಂಧಿ ಕುಟುಂಬದವರ ಹೆಸರಿಟ್ಟಿರುವ ಕಾಂಗ್ರೆಸಿಗರಿಗೆ ಗಾಂಧೀಜಿ ಬಗ್ಗೆ ಮಾತನಾಡುವ ಯೋಗ್ಯತೆ ಇಲ್ಲ ಎಂದರು.

ಜಿಎಸ್‌ಟಿ ಬೇಡ ಎನ್ನಲಿ:

ಮಂಟೂರು ರಸ್ತೆಯಲ್ಲಿ ನಿರ್ಮಾಣವಾದ ಮನೆಗಳ ವಿಚಾರದಲ್ಲಿ ಕಾಂಗ್ರೆಸ್ ಸುಳ್ಳು ಹೇಳುತ್ತಿದೆ. ವಸತಿ ಸಚಿವ ಜಮೀರ್‌ ಅಹಮದ್ ಖಾನ್‌ ದೂರವಾಣಿ ಕರೆ ಮಾಡಿದಾಗ ಕಾರ್ಯಕ್ರಮವನ್ನು ಮುಂದೂಡುವಂತೆ ಮನವಿ ಮಾಡಿದ್ದೆ. ಅದನ್ನು ಸಿಎಂ ನಿರಾಕರಿಸಿದ್ದರು. ಯೋಜನೆಗೆ ಕೇಂದ್ರವೂ ಹಣ ನೀಡಿದೆ. ಕಾಂಗ್ರೆಸ್ ಹೇಳುವ ರೀತಿಯಲ್ಲಿ ಶೇ. 18ರಷ್ಟು ಜಿಎಸ್‌ಟಿ ಸಂಗ್ರಹಿಸುವುದಿಲ್ಲ. ಒಂದು ವೇಳೆ ಸಂಗ್ರಹಿಸಿದರೂ ಅದರಲ್ಲಿ ಅರ್ಧ ರಾಜ್ಯಕ್ಕೆ ಮರಳಿ ಬರುತ್ತದೆ. ಹಾಗಿದ್ದರೆ, ನಮ್ಮ ಪಾಲಿನ ಜಿಎಸ್‌ಟಿ ಬೇಡ ಎಂದು ಸಿಎಂ ಸಿದ್ದರಾಮಯ್ಯ ಜಿಎಸ್‌ಟಿ ಕೌನ್ಸಿಲ್ ಮುಂದೆ ಹೇಳಲಿ ನೋಡೋಣ ಎಂದು ಸವಾಲು ಹಾಕಿದರು.ಯೋಜನೆ ಅನುಷ್ಠಾನಕ್ಕೆ ಬದ್ಧ

ಕಳಸಾ-ಬಂಡೂರಿ ವಿಚಾರವಾಗಿ ರಾಜ್ಯ ಜಲಸಂಪನ್ಮೂಲ ಖಾತೆ ಸಚಿವ ಡಿ.ಕೆ. ಶಿವಕುಮಾರ ನಮ್ಮನ್ನು ಭೇಟಿಯಾಗಿದ್ದರು. ಸುದೀರ್ಘವಾಗಿ ಚರ್ಚೆ ಮಾಡಿದ್ದೇವೆ. ಗೋವಾ ವನ್ಯಜೀವಿ ಮಂಡಳಿ ನ್ಯಾಯಾಲಯಕ್ಕೆ ಅರ್ಜಿ ಹಾಕಿದೆ. ಅದನ್ನು ಹೈಕೋರ್ಟ್‌ಲ್ಲಿ ಮಂಡಿಸಿ ರಾಜ್ಯ ಸರ್ಕಾರವೇ ವಜಾ ಮಾಡಿಸಬೇಕಿದೆ. ಈ ಎಲ್ಲ ವಿಚಾರವಾಗಿ ಕಾನೂನು ತಜ್ಞರ ಜತೆ ಚರ್ಚಿಸಲು ಸೂಚನೆ ನೀಡಲಾಗಿದೆ. ಯೋಜನೆಯ ಅನುಷ್ಠಾನಕ್ಕೆ ನಮ್ಮ ಸರ್ಕಾರ ಬದ್ಧವಿದೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿ ರಾಮ್‌ ಜಿ ವಿರುದ್ಧ ಸಿಡಿದೆದ್ದ ಕಾಂಗ್ರೆಸ್‌ ಪಡೆ - ದುಡಿವ ಕೈಗಳ ಅನ್ನ ಕಸಿವ ಕಾಯ್ದೆ
ಕೇಂದ್ರ ಸರ್ಕಾರದ ಸಾಧನೆ ತಿಳಿ ಹೇಳಿ