ಕುಷ್ಟಗಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ತಾಲೂಕು ಮಟ್ಟದ ಯುವ ಸಂಸತ್ ಕಾರ್ಯಕ್ರಮವನ್ನು ಪ್ರಧಾನ ಸಿವಿಲ್ ನ್ಯಾಯಾಧೀಶ ಎಂ.ಎಲ್. ಪೂಜೇರಿ ಉದ್ಘಾಟಿಸಿದರು.
ಕುಷ್ಟಗಿ: ಪ್ರಜಾಪ್ರಭುತ್ವದ ಪರಿಕಲ್ಪನೆಗೆ ಬಸವಣ್ಣನವರ ಅನುಭವ ಮಂಟಪವೇ ಪ್ರೇರಣೆಯಾಗಿದೆ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ಎಂ.ಎಲ್. ಪೂಜೇರಿ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ತಾಲೂಕು ಆಡಳಿತ, ತಾಪಂ, ಸಮಾಜ ಕಲ್ಯಾಣ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಉನ್ನತ ಶಿಕ್ಷಣ ಇಲಾಖೆ ಹಾಗೂ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಯುವ ಸಂಸತ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಅಂದಿನ ಅನುಭವ ಮಂಟಪದಲ್ಲಿ ಲಿಂಗ ಸಮಾನತೆ, ಜಾತಿ ಅಸಮಾನತೆ ಸೇರಿದಂತೆ ಸಾಮಾಜಿಕ ಸಮಸ್ಯೆಗಳ ಕುರಿತು ಮುಕ್ತ ಚರ್ಚೆ ನಡೆಯುತ್ತಿತ್ತು. ಅದೇ ರೀತಿ ಸಂಸತ್ತಿನಲ್ಲಿ ದೇಶದ ಅಭಿವೃದ್ಧಿ, ಜನರ ಹಿತಾಸಕ್ತಿ ಹಾಗೂ ಸಮಸ್ಯೆಗಳ ಪರಿಹಾರಕ್ಕೆ ಪೂರಕವಾದ ಕಾನೂನುಗಳನ್ನು ರೂಪಿಸಲಾಗುತ್ತದೆ ಎಂದು ತಿಳಿಸಿದರು.
ಪ್ರಜಾಪ್ರಭುತ್ವ ವ್ಯವಸ್ಥೆ ಹಾಗೂ ಅದರ ಮೌಲ್ಯಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಿ, ಜವಾಬ್ದಾರಿಯುತ ಪ್ರಜೆಗಳನ್ನಾಗಿ ರೂಪಿಸುವ ಉದ್ದೇಶದಿಂದ ಯುವ ಸಂಸತ್ತು ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಬರಗಾಲ ಪೀಡಿತ ಪ್ರದೇಶಗಳಲ್ಲಿ ರೈತರ ಸಾಲ ವಸೂಲಾತಿಗೆ ಬ್ಯಾಂಕುಗಳು ಒತ್ತಡ ಹೇರದಂತೆ ಸರ್ಕಾರ ಕ್ರಮ ಕೈಗೊಳ್ಳುವುದು ಜನಪರ ಆಡಳಿತಕ್ಕೆ ಉದಾಹರಣೆಯಾಗಿದೆ. ಉತ್ತಮ ಸಂಸದೀಯ ಪಟುವಾಗಲು ಸಕಾರಾತ್ಮಕ ವಿಚಾರಗಳನ್ನು ಬೆಂಬಲಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಜನರ ಸಮಸ್ಯೆಗಳಿಗೆ ಸ್ಪಂದಿಸುವ ಗುಣ ಹೊಂದಬೇಕು ಎಂದು ಸಲಹೆ ನೀಡಿದರು.
ತಾಪಂ ಇಒ ಅಮರೇಶ ಯಾದವ್ ಮಾತನಾಡಿ, ಸಂಸದೀಯ ಕಲಾಪಗಳ ಮಹತ್ವ ಮತ್ತು ಕಾರ್ಯವೈಖರಿಯನ್ನು ವಿದ್ಯಾರ್ಥಿಗಳು ಅರಿತುಕೊಳ್ಳಬೇಕು ಎಂದರು.
ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ತುಗ್ಲೆಪ್ಪ ದೇಸಾಯಿ ಪ್ರಾಸ್ತಾವಿಕವಾಗಿ ಮಾತನಾಡಿದರು. ದೈಹಿಕ ಶಿಕ್ಷಣ ಅಧಿಕಾರಿ ನಾಗಪ್ಪ ಬಿಳಿಯಪ್ಪ ಸಂವಿಧಾನದ ಪೀಠಿಕೆ ಬೋಧಿಸಿದರು.
ಗ್ರೇಡ್-2 ತಹಸೀಲ್ದಾರ್ ರಜನಿಕಾಂತ್ ಕೆಂಗೇರಿ, ಪರಿಶಿಷ್ಟ ಇಲಾಖೆಯ ಅಧಿಕಾರಿ ವೀರಪ್ಪ, ಯಮನಪ್ಪ ಚೂರಿ, ರಾಘಪ್ಪ, ಪುರಸಭೆ ಮುಖ್ಯಾಧಿಕಾರಿ ವೆಂಕಪ್ಪ ಬೀಳಗಿ, ವಕೀಲರ ಸಂಘದ ಅಧ್ಯಕ್ಷ ಎಚ್.ಆರ್. ನಾಯಕ, ಜೀವನಸಾಬ ಬಿನ್ನಾಳ, ಕಿಶನರಾವ್ ಕುಲಕರ್ಣಿ, ಶರಣಪ್ಪ ನಿಡಶೇಸಿ ಉಪಸ್ಥಿತರಿದ್ದರು.
ಲಂಚ ನೀಡುವವರೂ ಭ್ರಷ್ಟಾಚಾರಕ್ಕೆ ಕಾರಣ: ಲಂಚ ಪಡೆಯುವವರು ಮಾತ್ರ ಭ್ರಷ್ಟರಲ್ಲ. ತಮ್ಮ ಕೆಲಸ ಮಾಡಿಸಿಕೊಳ್ಳಲು ಒತ್ತಾಯಪೂರ್ವಕವಾಗಿ ಲಂಚದ ಆಮಿಷವೊಡ್ಡಿ ಹಣ ನೀಡುವವರೂ ಭ್ರಷ್ಟಾಚಾರಕ್ಕೆ ಕಾರಣರಾಗುತ್ತಾರೆ. ಸಮಾಜದಲ್ಲಿ ಲಂಚ ನೀಡುವ ಪ್ರವೃತ್ತಿಗೆ ಕಡಿವಾಣ ಹಾಕಿದಾಗ ಮಾತ್ರ ಭ್ರಷ್ಟಾಚಾರ ನಿಯಂತ್ರಣ ಸಾಧ್ಯವಾಗಲಿದೆ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ಎಂ.ಎಲ್. ಪೂಜೇರಿ ಅಭಿಪ್ರಾಯಪಟ್ಟರು.ಖಡಕ್ ಪ್ರಶ್ನೆ, ಖಡಕ್ ಉತ್ತರ: ಯುವ ಸಂಸತ್ತಿನಲ್ಲಿ ವಿದ್ಯಾರ್ಥಿಗಳ ವಾಗ್ವಾದ!
ವಿದ್ಯಾರ್ಥಿಗಳೇ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸಭಾಪತಿ, ವಿವಿಧ ಖಾತೆಗಳ ಸಚಿವರು, ವಿರೋಧ ಪಕ್ಷದ ನಾಯಕ ಹಾಗೂ ಉಪನಾಯಕರ ಪಾತ್ರ ವಹಿಸಿ, ಖಡಕ್ ಪ್ರಶ್ನೆಗಳಿಗೆ ಖಡಕ್ ಉತ್ತರ ನೀಡುವ ಮೂಲಕ ನೈಜ ಸಂಸತ್ತಿನ ಮಾದರಿಯಲ್ಲಿ ಚರ್ಚೆ ನಡೆಸಿದರು. ಆಡಳಿತ ಮತ್ತು ವಿರೋಧ ಪಕ್ಷಗಳ ನಡುವಿನ ಬಿರುಸಿನ ವಾಗ್ವಾದ, ಚುಕ್ಕೆ ಗುರುತಿನ ಪ್ರಶ್ನೆಗಳು ಹಾಗೂ ಸಭಾಪತಿಯ ಮಧ್ಯಪ್ರವೇಶದೊಂದಿಗೆ ತಾಲೂಕು ಮಟ್ಟದ ಯುವ ಸಂಸತ್ತು ಗಮನ ಸೆಳೆಯಿತು.
ಪಟ್ಟಣದ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ನಡೆದ ಯುವ ಸಂಸತ್ತಿನಲ್ಲಿ ಸದ್ಯದ ರಾಜಕೀಯ ಪರಿಸ್ಥಿತಿಯನ್ನು ಹೋಲುವಂತೆ ವಿದ್ಯಾರ್ಥಿಗಳು ವಿವಿಧ ಸಾರ್ವಜನಿಕ ಸಮಸ್ಯೆಗಳನ್ನು ಪ್ರಸ್ತಾಪಿಸಿ ಗಮನ ಸೆಳೆದರು.
ಗ್ರಾಮೀಣ ಪ್ರದೇಶಗಳ ಸಮಸ್ಯೆಗಳು, ಸ್ವಚ್ಛತೆ, ಮಳೆ ಕೊರತೆಯಿಂದ ರೈತರು ಎದುರಿಸುತ್ತಿರುವ ಸಂಕಷ್ಟ, ಬರಗಾಲದಿಂದ ಬೆಳೆ ಕಳೆದುಕೊಂಡ ರೈತರಿಗೆ ಪರಿಹಾರ, ರೈತರ ಆತ್ಮಹತ್ಯೆ ತಡೆಗೆ ಕೈಗೊಳ್ಳಬೇಕಾದ ಕ್ರಮಗಳು, ವಿದ್ಯುತ್ ಸಮಸ್ಯೆ, ಕೈಗಾರಿಕಾ ಪ್ರದೇಶಗಳಲ್ಲಿ ಕಂಪನಿಗಳ ನಿಯಮ ಉಲ್ಲಂಘನೆ, ಕಾರ್ಮಿಕರ ವೇತನ, ಮಹಿಳೆಯರ ಮೇಲಿನ ದೌರ್ಜನ್ಯ ಹಾಗೂ ಅಸ್ಪೃಶ್ಯತೆ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚೆ ನಡೆಯಿತು.
ಚರ್ಚೆಯ ಮಧ್ಯೆ ಆಡಳಿತ ಮತ್ತು ವಿರೋಧ ಪಕ್ಷದ ಪಾತ್ರ ನಿರ್ವಹಿಸುತ್ತಿದ್ದ ವಿದ್ಯಾರ್ಥಿಗಳ ನಡುವೆ ಬಿಸಿಬಿಸಿ ವಾಗ್ವಾದ ನಡೆಯಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.