ಬಸವಣ್ಣನವರ ವಚನ ಸಾರ್ವಕಾಲಿಕ: ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ

KannadaprabhaNewsNetwork | Published : May 11, 2024 1:34 AM

ಸಾರಾಂಶ

ಸಮಾನತೆ ಹಾಗೂ ಕಾಯಕದ ಬಗ್ಗೆ ಸಂದೇಶ ಸಾರಿದ ಬಸವಣ್ಣನವರ ವಚನಗಳು ಸಾರ್ವಕಾಲಿಕ ಸತ್ಯವಾಗಿವೆ ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಹೇಳಿದರು.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಬಸವ ಜಯಂತಿ ಅಂಗವಾಗಿ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಇಲ್ಲಿನ ಕೇಶ್ವಾಪುರ ವೃತ್ತದ ಬಳಿಯ ಬಸವೇಶ್ವರರ ಮೂರ್ತಿಗೆ ಶುಕ್ರವಾರ ಮಾಲಾರ್ಪಣೆ ಮಾಡುವ ಮೂಲಕ ಗೌರವ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಅವರು, ಸಮಾನತೆ ಹಾಗೂ ಕಾಯಕದ ಬಗ್ಗೆ ಸಂದೇಶ ಸಾರಿದ ಬಸವಣ್ಣನವರ ವಚನಗಳು ಸಾರ್ವಕಾಲಿಕ ಸತ್ಯವಾಗಿವೆ. ಬಸವಣ್ಣನವರು ಹಾಕಿಕೊಟ್ಟ ಮಾರ್ಗದಲ್ಲಿ ಮುನ್ನಡೆದಾಗ ಮಾತ್ರ ಸಮಾಜದಲ್ಲಿ ಸಮಾನತೆ ಹಾಗೂ ಸಹೋದರತೆ ಭಾವನೆ ಬರಲು ಸಾಧ್ಯವಾಗುತ್ತದೆ. ಕೇವಲ ಜಯಂತಿಯ ದಿನ ಮಾತ್ರ ಬಸವಣ್ಣನವರನ್ನು ಸ್ಮರಿಸದೇ, ನಿತ್ಯ ಸ್ಮರಿಸುವಂತಾಗಬೇಕು ಎಂದರು.

ನಂತರ ಹು-ಧಾ ಮಹಾನಗರ ಜಿಲ್ಲಾ ಬಿಜೆಪಿ ವತಿಯಿಂದ ಆಯೋಜಿಸಿದ್ದ ಬೈಕ್‌ ರ್‍ಯಾಲಿಗೆ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಚಾಲನೆ ನೀಡಿದರು. ಕೇಶ್ವಾಪುರ ಸರ್ಕಲ್‌ದಿಂದ ಪ್ರಾರಂಭವಾದ ಬೈಕ್‌ ರ್‍ಯಾಲಿಯೂ ಕುಸುಗಲ್‌ ರಸ್ತೆ, ಬದಾಮಿ ನಗರ, ರಮೇಶ ಭವನ ಸೇರಿದಂತೆ ನಗರದ ವಿವಿಧ ಮಾರ್ಗಗಳಲ್ಲಿ ಸಂಚರಿಸಿತು.

ರ್‍ಯಾಲಿಯಲ್ಲಿ ಶಾಸಕ ಮಹೇಶ ಟೆಂಗಿನಕಾಯಿ, ಮಹಾನಗರ ಪಾಲಿಕೆ ಸದಸ್ಯರು, ಪಕ್ಷದ ಮುಖಂಡರು ಹಾಗೂ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು. ರ್‍ಯಾಲಿಯ ಉದ್ದಕ್ಕೂ ಸಮಾನತೆಯ ಹರಿಕಾರ ಅಣ್ಣ ಬಸವಣ್ಣನಿಗೆ ಜೈಯವಾಗಲಿ, ಕಾಯಕದ ಮೂಲಕ ಜೀವನ ಸಂದೇಶ ಸಾರಿದ ಜಗತ್‌ಜ್ಯೋತಿ ಬಸವಣ್ಣನಿಗೆ ವಿಜಯವಾಗಲಿ ಎಂಬುದು ಸೇರಿದಂತೆ ವಿವಿಧ ಜಯ ಘೋಷಣೆಗಳು ಮೊಳಗಿದವು.

ಬಿಜೆಪಿ ಕಚೇರಿಯಲ್ಲಿ ಬಸವ ಜಯಂತಿ

ಹುಬ್ಬಳ್ಳಿ ಅರವಿಂದ ನಗರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಜಗದ್ಗುರು ಬಸವೇಶ್ವರ ಜಯಂತಿ ಪ್ರಯುಕ್ತ ಬಸವಣ್ಣನವರ ಭಾವಚಿತ್ರಕ್ಕೆ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಪೂಜೆ ಹಾಗೂ ಪುಷ್ಪಾರ್ಚನೆ ನೆರವೇರಿಸಿದರು. ಈ ಸಂದರ್ಭದಲ್ಲಿ ಶಾಸಕ ಮಹೇಶ ಟೆಂಗಿನಕಾಯಿ, ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಿಗಿ, ಮಹಾನಗರ ಪಾಲಿಕೆ ಸದಸ್ಯರು, ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

Share this article