ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಇದೇ ಮೊದಲ ಬಾರಿಗೆ ದಾವಣಗೆರೆ ಜಿಲ್ಲೆಗೆ ಆಗಮಿಸಿದ ಕೆ.ಎಸ್.ಬಸವಂತಪ್ಪ ಅವರು ನಗರ ಪುರಪ್ರವೇಶ ಮಾಡುತ್ತಿದ್ದಂತೆಯೇ ನೇರವಾಗಿ ಕಲ್ಲೇಶ್ವರ ರೈಸ್ ಮಿಲ್ ಆವರಣದಲ್ಲಿರುವ ದಿವಂಗತ ಡಾ.ಶಾಮನೂರು ಶಿವಶಂಕರಪ್ಪ ಅವರ ಸಮಾಧಿಗೆ ತೆರಳಿ ಪುಷ್ಪನಮನ ಸಲ್ಲಿಸಿ ಗೌರವ ಸಮರ್ಪಿಸಿದ್ದಾರೆ.
- ರಾಜಕೀಯ ಗುರುಗಳ ಆಶೀರ್ವಾದ ಪಡೆದ ಸಚಿವ । ಸಂಸದೆ, ಶಾಸಕ ಶುಭಾಶಯ - - -
ಕನ್ನಡಪ್ರಭ ವಾರ್ತೆ ದಾವಣಗೆರೆ
ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಇದೇ ಮೊದಲ ಬಾರಿಗೆ ದಾವಣಗೆರೆ ಜಿಲ್ಲೆಗೆ ಆಗಮಿಸಿದ ಕೆ.ಎಸ್.ಬಸವಂತಪ್ಪ ಅವರು ನಗರ ಪುರಪ್ರವೇಶ ಮಾಡುತ್ತಿದ್ದಂತೆಯೇ ನೇರವಾಗಿ ಕಲ್ಲೇಶ್ವರ ರೈಸ್ ಮಿಲ್ ಆವರಣದಲ್ಲಿರುವ ದಿವಂಗತ ಡಾ.ಶಾಮನೂರು ಶಿವಶಂಕರಪ್ಪ ಅವರ ಸಮಾಧಿಗೆ ತೆರಳಿ ಪುಷ್ಪನಮನ ಸಲ್ಲಿಸಿ ಗೌರವ ಸಮರ್ಪಿಸಿದರು.
ಬಡವರ ಬಂಧು, ದಾವಣಗೆರೆಯ ಧಣಿ ಹಾಗೂ ಜಿಲ್ಲೆಯ ರಾಜಕೀಯ ಕ್ಷೇತ್ರದ ಹಿರಿಯ ಮಾರ್ಗದರ್ಶಕರಾಗಿದ್ದ ಡಾ.ಶಾಮನೂರು ಶಿವಶಂಕರಪ್ಪ ಸಮಾಧಿಗೆ ನಮಿಸಿ ಕೆಲಕಾಲ ಮೌನವಾಗಿ ನಿಂತ ಸಚಿವ ಬಸವಂತಪ್ಪ, ತಮ್ಮ ರಾಜಕೀಯ ಬದುಕಿನ ಮಹತ್ವದ ಘಟ್ಟದಲ್ಲಿ ಹಿರಿಯ ನಾಯಕನ ಆಶೀರ್ವಾದ ಪಡೆಯುವ ಭಾವನಾತ್ಮಕ ಕ್ಷಣಕ್ಕೆ ಸಾಕ್ಷಿಯಾದರು.
ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಪ್ರಥಮ ಬಾರಿಗೆ ಶನಿವಾರ ಜಿಲ್ಲೆಗೆ ಆಗಮಿಸಿದ ಸಚಿವ ಕೆ.ಎಸ್.ಬಸವಂತಪ್ಪ ಅವರಿಗೆ ಆಡಳಿತ ವರ್ಗ, ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಅದ್ಧೂರಿ ಸ್ವಾಗತ ಕೋರಿದರು. ಬೈಕ್, ಕಾರುಗಳ ಬೃಹತ್ ರ‍್ಯಾಲಿಯ ಮೂಲಕ ಸಚಿವರನ್ನು ಜಿಲ್ಲೆಯ ಗಡಿಭಾಗದಿಂದ ಮಾಯಕೊಂಡ ಕ್ಷೇತ್ರಕ್ಕೆ ಬರಮಾಡಿಕೊಳ್ಳಲಾಯಿತು. ಮಾರ್ಗದುದ್ದಕ್ಕೂ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಶುಭಾಶಯ ಕೋರಿದರು.
ಬಳಿಕ ಮಾಯಕೊಂಡ ಪಬ್ಲಿಕ್ ಶಾಲೆಯಲ್ಲಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡ ಸಚಿವ ಬಸವಂತಪ್ಪ ಸನ್ಮಾನ ಸ್ವೀಕರಿಸಿದರು. ಕಾರ್ಯಕ್ರಮದ ನಂತರ ಯಾವುದೇ ರಾಜಕೀಯ ಕಾರ್ಯಕ್ರಮಕ್ಕೆ ತೆರಳುವ ಮುನ್ನ ಶಾಮನೂರು ಶಿವಶಂಕರಪ್ಪ ಅವರ ಸಮಾಧಿಗೆ ಭೇಟಿ ನೀಡಿ ಗೌರವ ಸಲ್ಲಿಸಿರುವುದು ಗಮನ ಸೆಳೆಯಿತು.
ಶಾಮನೂರು ನಿವಾಸದಲ್ಲಿ ಆತ್ಮೀಯ ಭೇಟಿ: ನಂತರ ಸಚಿವ ಕೆ.ಎಸ್.ಬಸವಂತಪ್ಪ ಅವರು ಸಚಿವ ಎಸ್.ಎಸ್. ಮಲ್ಲಿಕಾರ್ಜುನ ನಿವಾಸಕ್ಕೆ ತೆರಳಿದರು. ಈ ವೇಳೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ, ಶಾಸಕ ಸಮರ್ಥ ಶಾಮನೂರು ಅವರಿಗೆ ಹೂಗುಚ್ಛ ನೀಡಿ ಶುಭಾಶಯ ಕೋರಿದರು.
ಸಚಿವರಾಗಿ ಜವಾಬ್ದಾರಿ ವಹಿಸಿಕೊಂಡಿರುವ ಕೆ.ಎಸ್. ಬಸವಂತಪ್ಪ ಅವರನ್ನು ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ ಹಾಗೂ ಶಾಸಕರಾದ ಸಮರ್ಥ್ ಶಾಮನೂರು ಆತ್ಮೀಯವಾಗಿ ಸ್ವಾಗತಿಸಿ ಹೂಗುಚ್ಛ ನೀಡಿ ಅಭಿನಂದಿಸಿದರು. ಇದೇ ಸಂದರ್ಭದಲ್ಲಿ ಜಿಲ್ಲೆಯ ಹಾಗೂ ಮಾಯಕೊಂಡ ಕ್ಷೇತ್ರದ ಅಭಿವೃದ್ಧಿಗೆ ಮತ್ತಷ್ಟು ಶ್ರಮಿಸಿ, ಜನರ ಆಶೋತ್ತರಗಳಿಗೆ ಸ್ಪಂದಿಸುವ ಮೂಲಕ ಉತ್ತಮ ಸೇವೆ ಸಲ್ಲಿಸಲಿ ಎಂದು ಶುಭ ಹಾರೈಸಿದರು.
- - -
-9ಕೆಡಿವಿಜಿ38: ನೂತನ ಸಚಿವರಾಗಿ ದಾವಣಗೆರೆ ಜಿಲ್ಲೆಗೆ ಆಗಮಿಸಿದ ಕೆ.ಎಸ್.ಬಸವಂತಪ್ಪ ಕಲ್ಲೇಶ್ವರ ರೈಸ್ ಮಿಲ್ ಆವರಣದಲ್ಲಿರುವ ದಿ।। ಡಾ.ಶಾಮನೂರು ಶಿವಶಂಕರಪ್ಪ ಸಮಾಧಿಗೆ ಪುಷ್ಪನಮನ ಸಲ್ಲಿಸಿ ಗೌರವ ಸಮರ್ಪಿಸಿದರು. -9ಕೆಡಿವಿಜಿ39: ನೂತನ ಸಚಿವ ಕೆ.ಎಸ್.ಬಸವಂತಪ್ಪ ಅವರಿಗೆ ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ ಅವರು ದಿ।। ಡಾ.ಶಾಮನೂರು ಶಿವಶಂಕರಪ್ಪನವರ ಸ್ಮರಣಿಕೆ ನೀಡಿ ಅಭಿನಂದಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.