ಪೌರ ಕಾರ್ಮಿಕರ ಉಪಹಾರ ಭತ್ಯೆಯನ್ನು ₹35ನಿಂದ ₹70ಕ್ಕೆ ಹೆಚ್ಚಿಸಿ ಶೀಘ್ರದಲ್ಲೇ ಆದೇಶ ಹೊರಡಿಸಲಾಗುವುದು ಎಂದು ಘೋಷಿಸಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಪೌರ ಕಾರ್ಮಿಕರ ಕಲ್ಯಾಣ ಮಂಡಳಿ ಸ್ಥಾಪನೆ, ಬೇಡಿಕೆಗಳ ಬಗ್ಗೆ ಪರಿಶೀಲನೆ ನಡೆಸಲು ಸಚಿವ ಸಂಪುಟ ಸಮಿತಿ ರಚಿಸಲಾಗುವುದು ಎಂದು ತಿಳಿಸಿದರು.

ಬೆಂಗಳೂರು : ಪೌರ ಕಾರ್ಮಿಕರ ಉಪಹಾರ ಭತ್ಯೆಯನ್ನು ₹35ನಿಂದ ₹70ಕ್ಕೆ ಹೆಚ್ಚಿಸಿ ಶೀಘ್ರದಲ್ಲೇ ಆದೇಶ ಹೊರಡಿಸಲಾಗುವುದು ಎಂದು ಘೋಷಿಸಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಪೌರ ಕಾರ್ಮಿಕರ ಕಲ್ಯಾಣ ಮಂಡಳಿ ಸ್ಥಾಪನೆ, ಸೇವೆ ಕಾಯಂ, ಪಿಂಚಣಿ ಸೇರಿ ವಿವಿಧ ಬೇಡಿಕೆಗಳ ಬಗ್ಗೆ ಪರಿಶೀಲನೆ ನಡೆಸಲು ಸಚಿವ ಸಂಪುಟ ಸಮಿತಿ ರಚಿಸಲಾಗುವುದು ಎಂದು ತಿಳಿಸಿದರು.

ನಗರದ ಅರಮನೆ ಮೈದಾನದಲ್ಲಿ ನಗರಾಭಿವೃದ್ಧಿ ಇಲಾಖೆ ಹಾಗೂ ಪೌರಾಡಳಿತ ನಿರ್ದೇಶನಾಲಯದ ಶುಕ್ರವಾರ ಆಯೋಜಿಸಿದ್ದ ‘ಪೌರ ಕಾರ್ಮಿಕರ ದಿನಾಚರಣೆ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪೌರ ಕಾರ್ಮಿಕರು ಹಾಗೂ ಇಲಾಖೆಯ ಕಚೇರಿ ಕೆಲಸಗಳ ಅನುಕೂಲಕ್ಕಾಗಿ ಪೌರ ಭವನ ನಿರ್ಮಾಣ ಮಾಡಲಾಗುವುದು. ಪೌರ ಕಾರ್ಮಿಕರ ಮಕ್ಕಳಿಗೆ ಕೆಪಿಎಸ್ ಮಾದರಿಯಲ್ಲಿ ವಸತಿ ಶಾಲೆ ನಿರ್ಮಿಸುವ ಉದ್ದೇಶವಿದೆ, ಮನೆ ನಿರ್ಮಾಣಕ್ಕೆ ₹7.50 ಲಕ್ಷ ನೀಡಲು ತೀರ್ಮಾನಿಸಿದ್ದೇವೆ ಎಂದು ಹೇಳಿದರು.

ನಮ್ಮ ಸರ್ಕಾರ ಬಂದ ನಂತರ ಆರ್ಥಿಕ ಇಲಾಖೆಯಿಂದ ಒತ್ತಡವಿದ್ದರೂ ಸಾವಿರಾರು ಜನ ಪೌರಕಾರ್ಮಿಕರನ್ನು ಕಾಯಂ ಮಾಡಿದ್ದೇವೆ. ಉಳಿದವರನ್ನು ಕಾಯಂ ಮಾಡುತ್ತೇವೆ. ಕಾಯಂ ಮಾಡಿಕೊಳ್ಳುವುದಾಗಿ ಹೇಳಿ ಕೆಲವು ಮಧ್ಯವರ್ತಿಗಳು ಲಂಚಕ್ಕೆ ಬೇಡಿಕೆ ಇಡುತ್ತಿದ್ದಾರೆ ಎಂಬ ಮಾಹಿತಿ ಇದೆ. ಈ ವಿಚಾರವಾಗಿ ಕಾರ್ಮಿಕರು ಜಾಗೃತರಾಗಬೇಕು ಎಂದು ಹೇಳಿದರು.

ಶೇ.60ರಷ್ಟು ಪ್ರಾಮಾಣಿಕ ಕೆಲಸ:

ಪೌರ ಕಾರ್ಮಿಕರಲ್ಲಿ ಶೇ. 60ರಷ್ಟು ಜನ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ. ಮೈಗಳ್ಳರು ಕೂಡ ಇದ್ದಾರೆ. ನೀವೇ ನಿಜವಾದ ಕರ್ಮ ಯೋಗಿ, ಕಾಯಕ ಯೋಗಿಗಳು. ಪೌರ ಕಾರ್ಮಿಕರು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಕಾಂಗ್ರೆಸ್ ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.

2017ರಲ್ಲಿ ನಮ್ಮ ಸರ್ಕಾರ 10 ಸಾವಿರ ಪೌರ ಕಾರ್ಮಿಕರನ್ನು ನೇಮಕ ಮಾಡಿತ್ತು. 2023ರಲ್ಲಿ ಸಿದ್ದರಾಮಯ್ಯ ಅವರ ಸರ್ಕಾರ ಅಧಿಕಾರಕ್ಕೆ ಬಂದ ನಂತರ 12,609 ಪೌರ ಕಾರ್ಮಿಕರನ್ನು ಕಾಯಂ ಮಾಡಿ ಇತಿಹಾಸ ನಿರ್ಮಿಸಿದೆ ₹40,000 ವೇತನ ನೀಡಲಾಗುತ್ತಿದೆ. ಸ್ಥಳೀಯ ಸಂಸ್ಥೆಗಳಲ್ಲಿ 6 ಸಾವಿರ ಜನರನ್ನು ನೇಮಕ ಮಾಡಲಾಗಿದೆ. ಇನ್ನಷ್ಟು ನೇಮಕಾತಿ ಮಾಡಬೇಕು ಎಂದು ಚರ್ಚೆ ಮಾಡಿದ್ದೇವೆ ಎಂದು ಮುಖ್ಯಮಂತ್ರಿ ತಿಳಿಸಿದರು.

ನಗರಾಭಿವೃದ್ಧಿ ಸಚಿವ ಯತೀಂದ್ರ ಸಿದ್ದರಾಮಯ್ಯ, ಪೌರಾಡಳಿತ ಸಚಿವ ಎಚ್.ಸಿ. ಬಾಲಕೃಷ್ಣ ಹಾಗೂ ಮುಜರಾಯಿ ಸಚಿವ ಕೆ.ಎಸ್. ಬಸವಂತಪ್ಪ ಅವರು ಕಾರ್ಮಿಕರಿಗೆ ಪಿಂಚಣಿ, ಭತ್ಯೆ ಹೆಚ್ಚಳ, ನಿಧನರಾದ ಪೌರ ಕಾರ್ಮಿಕರ ಮಕ್ಕಳಿಗೆ ಅನುಕಂಪದ ನೌಕರಿ ಸೇರಿ ವಿವಿಧ ಬೇಡಿಕೆಗಳ ಕುರಿತು ಮುಖ್ಯಮಂತ್ರಿಯವರ ಗಮನ ಸೆಳೆದರು. ಸಮಾಜ ಕಲ್ಯಾಣ ಸಚಿವ ಕೆ.ಎಚ್. ಮುನಿಯಪ್ಪ, ಮಾಜಿ ಸಚಿವ ಎಚ್. ಆಂಜನೇಯ ಸೇರಿದಂತೆ ಇನ್ನಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಮುಖ್ಯಮಂತ್ರಿ ಸೇರಿದಂತೆ ಸಚಿವರೆಲ್ಲರೂ ಪೌರ ಕಾರ್ಮಿಕರ ಜೊತೆ ಕುಳಿತು ಊಟ ಮಾಡಿದರು. ಕಾರ್ಯಕ್ರಮದಲ್ಲಿ ಸ್ವಚ್ಛತಾ ಕಾರ್ಮಿಕರಿಗೆ ಸನ್ಮಾನಿಸಲಾಯಿತು.

ಪೌರ ಕಾರ್ಮಿಕರ ವಸ್ತ್ರ ಧರಿಸಿದ ಶಿವಕುಮಾರ್‌;

ಪೌರ ಕಾರ್ಮಿಕರ ಮಗಳಿಗೆ ಆಕೆ ಓದುವ ಶಾಲೆಯಲ್ಲಿ ಉಂಟಾದ ಕಹಿ ಅನುಭವ ಹಿನ್ನೆಲೆಯಲ್ಲಿ ಆ ಕೀಳರಿಮೆ ತೊಡೆದು ಹಾಕಲು ಸಚಿವ ಎಚ್.ಸಿ. ಬಾಲಕೃಷ್ಣ ಅವರು ಮುಖ್ಯಮಂತ್ರಿ ಸೇರಿ ಎಲ್ಲರೂ ಪೌರ ಕಾರ್ಮಿಕರ ವಸ್ತ್ರ ಧರಿಸುವಂತೆ ಕೋರಿದರು. ಅದರಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ವೇದಿಕೆ ಮೇಲಿದ್ದ ಎಲ್ಲಾ ಗಣ್ಯರು ಪೌರ ಕಾರ್ಮಿಕರ ವಸ್ತ್ರ ಧರಿಸಿದ್ದು ಗಮನ ಸೆಳೆಯಿತು.

ತನಗೆ ಹಾಗೂ ತನ್ನ ಮಗಳಿಗೆ ಶಾಲೆಯಲ್ಲಿ ಆದ ಕಹಿ ಅನುಭವ ಹಂಚಿಕೊಂಡ ಪೌರ ಕಾರ್ಮಿಕ ಮಹಿಳೆ, ‘ನಿನ್ನ ಅಮ್ಮ ಕಾರ್ಪೊರೇಷನ್‌ನಲ್ಲಿ ಕೆಲಸ ಮಾಡುತ್ತಾರೆ. ದೂರ ಕುಳಿತುಕೋ, ವಾಸನೆ ಬರುತ್ತದೆ. ಅಲ್ಲದೇ, ಶಾಲೆಗೆ ಬರುವಾಗ ಪೌರ ಕಾರ್ಮಿಕರ ವಸ್ತ್ರ ಧರಿಸಿಕೊಂಡು ಬರಬೇಡ’ ಎಂದು ಮಗಳು ಹೇಳಿದ್ದಳು. ಇದರಿಂದ ನನಗೆ ಬೇಸರವಾಯತು. ಆದರೆ, ನನ್ನ ಕೆಲಸದ ಬಗ್ಗೆ ನನಗೆ ಹೆಮ್ಮೆ ಇದೆ ಎಂದು ಪೌರ ಕಾರ್ಮಿಕ ಮಹಿಳೆ ವಿವರಿಸಿದರು.