ಪೌರ ಕಾರ್ಮಿಕರ ಮಗನಾಗಿ ಇದೀಗ ಸಂಪುಟ ದರ್ಜೆ ಸಚಿವರಾದ ಮಾಯಕೊಂಡ ಕ್ಷೇತ್ರ ಶಾಸಕ ಕೆ.ಎಸ್.ಬಸವಂತಪ್ಪ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಗರದ ಪಾಲಿಕೆ ಆವರಣದಲ್ಲಿ ಬುಧವಾರ ಪೌರ ನೌಕರರು, ಪೌರ ಕಾರ್ಮಿಕರು ಪಟಾಕಿ ಸಿಡಿಸಿ, ಪರಸ್ಪರರಿಗೆ ಸಿಹಿ ತಿನ್ನಿಸುವ ಮೂಲಕ ವಿಜಯೋತ್ಸವ ಆಚರಿಸಿದ್ದಾರೆ.
- ದಾವಣಗೆರೆ ಪಾಲಿಕೆಯಲ್ಲಿ ಸಿಹಿ ಹಂಚಿದ ಪೌರ ನೌಕರರು, ಪೌರ ಕಾರ್ಮಿಕರು । ಸಮಸ್ಯೆಗಳಿಗೆ ಸ್ಪಂದನೆ ವಿಶ್ವಾಸ - - -
ಕನ್ನಡಪ್ರಭ ವಾರ್ತೆ ದಾವಣಗೆರೆ
ಪೌರ ಕಾರ್ಮಿಕರ ಮಗನಾಗಿ ಇದೀಗ ಸಂಪುಟ ದರ್ಜೆ ಸಚಿವರಾದ ಮಾಯಕೊಂಡ ಕ್ಷೇತ್ರ ಶಾಸಕ ಕೆ.ಎಸ್.ಬಸವಂತಪ್ಪ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಗರದ ಪಾಲಿಕೆ ಆವರಣದಲ್ಲಿ ಬುಧವಾರ ಪೌರ ನೌಕರರು, ಪೌರ ಕಾರ್ಮಿಕರು ಪಟಾಕಿ ಸಿಡಿಸಿ, ಪರಸ್ಪರರಿಗೆ ಸಿಹಿ ತಿನ್ನಿಸುವ ಮೂಲಕ ವಿಜಯೋತ್ಸವ ಆಚರಿಸಿದರು.
ನಗರದ ಪಾಲಿಕೆ ಆವರಣದಲ್ಲಿ ಸಚಿವ ಕೆ.ಎಸ್.ಬಸವಂತಪ್ಪಗೆ ಜೈಕಾರ ಹಾಕಿದ ಪೌರ ನೌಕರರು, ಪೌರ ಕಾರ್ಮಿಕರು, ಸ್ವಚ್ಛತಾ ಕಾರ್ಮಿಕರು ತಮ್ಮ ಖುಷಿ, ಸಂಭ್ರಮ ವ್ಯಕ್ತಪಡಿಸಿದರು.
ಪೌರ ನೌಕರರ ಸಂಘದ ಅಧ್ಯಕ್ಷ, ಸಚಿವರ ಕಿರಿಯ ಸಹೋದರ ಕೆ.ಎಸ್. ಗೋವಿಂದರಾಜು ಮಾತನಾಡಿ, ಬಡವರ ಸೇವೆಯೇ ಜನಸೇವೆಯೆಂದು ನಂಬಿ ಬದುಕಿದವರು ಕೆ.ಎಸ್.ಬಸವಂತಪ್ಪ. ಅವರಿಗೆ ಮಾಯಕೊಂಡ ಕ್ಷೇತ್ರದ ಜನರು ಶಾಸಕರಾಗಿ ಆಯ್ಕೆ ಮಾಡುವ ಮೂಲಕ ಹೊಸ ಭವಿಷ್ಯ ಬರೆದರು. ಇದೀಗ ಕೆ.ಎಸ್.ಬಸವಂತಪ್ಪ ಅವರ ನಿಸ್ವಾರ್ಥ ಸೇವೆ ಗುರುತಿಸಿ, ಕಾಂಗ್ರೆಸ್ ಸರ್ಕಾರ ಸಚಿವ ಸ್ಥಾನ ನೀಡಿರುವುದು ಅಭಿನಂದನೀಯ ಸಂಗತಿ ಎಂದರು.
ಬಸವಂತಪ್ಪ ಅತ್ಯಂತ ಬಡ ಕುಟುಂಬದ ಹಿನ್ನೆಲೆ ಹೊಂದಿದ್ದ ಪೌರ ಕಾರ್ಮಿಕರ ದಂಪತಿ ಮಗನಾಗಿ ಜೀವನದುದ್ದಕ್ಕೂ ಕಷ್ಟ-ನಷ್ಟಗಳನ್ನೇ ಅನುಭವಿಸಿದವರು. ಅವರು ತಮ್ಮ ಸೋದರ ಮಾವ, ಮಾಜಿ ಸಚಿವ ಎಚ್.ಆಂಜನೇಯ ಅವರ ನೆರಳಿನಲ್ಲಿ 1990ರಲ್ಲಿ ಸಕ್ರಿಯ ರಾಜಕಾರಣಕ್ಕೆ ಪ್ರವೇಶಿಸಿದರು. ಮಾಯಕೊಂಡ ಕ್ಷೇತ್ರದ ಶಾಸಕರಾಗಿ ಕೆ.ಎಸ್. ಬಸವಂತಪ್ಪ ಅವರನ್ನು ಗುರುತಿಸಿ, ಕಾಂಗ್ರೆಸ್ ಸರ್ಕಾರ ಸಚಿವ ಸ್ಥಾನ ನೀಡುವ ಮೂಲಕ ಪ್ರೋತ್ಸಾಹಿಸುತ್ತಿದೆ. ಆ ಮೂಲಕ ಶ್ರಮಿಕ ವರ್ಗಕ್ಕೆ ಸರ್ಕಾರದ ಬಗ್ಗೆ ಉತ್ಸಾಹ ಮೂಡಿಸಿದೆ ಎಂದು ತಿಳಿಸಿದರು.
ಬಸವಂತಪ್ಪ ಸಚಿವರಾಗಿ ಅಧಿಕಾರ ವಹಿಸಿಕೊಂಡಿರುವುದು ರಾಜ್ಯದ ಸಮಸ್ತ ಪೌರ ಕಾರ್ಮಿಕರ ರಕ್ಷಣೆಗೆ ದೊಡ್ಡ ಬಲ ಬಂದಂತಾಗಿದೆ. ದೇಶದಲ್ಲೇ ಮೊದಲ ಬಾರಿಗೆ ಪೌರ ಕಾರ್ಮಿಕರ ಮನನೊಬ್ಬನಿಗೆ ಸಚಿವ ಸ್ಥಾನ ನೀಡಿ, ಅವಕಾಶ ಕಲ್ಪಿಸಿರುವುದು ಪೌರ ಕಾರ್ಮಿಕರು ಹಾಗೂ ಕುಟುಂಬ ವರ್ಗದವರಿಗೆ ಮತ್ತಷ್ಟು ಶಕ್ತಿ ತುಂಬಿದಂತಾಗಿದೆ. ಬಸವಂತಪ್ಪ ಅವರಿಗೆ ಮಂತ್ರಿ ಮಾಡಿದ ಕಾಂಗ್ರೆಸ್ ಹೈಕಮಾಂಡ್, ಮುಖ್ಯಮಂತ್ರಿ ಹಾಗೂ ರಾಜ್ಯ ನಾಯಕರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇವೆ ಎಂದು ಹೇಳಿದರು.
ಪೌರ ಕಾರ್ಮಿಕ ಮುಖಂಡರು ಮಾತನಾಡಿ, ಇಂದು ಅತ್ಯಂತ ಸಂತೋಷದ ದಿನವಾಗಿದೆ. ನಮ್ಮ ಮನೆಯ ಮಗನೇ ಸಚಿವರಾಗಿದ್ದಾರೆ. ಪೌರಕಾರ್ಮಿಕರು ಅನುಭವಿಸುತ್ತಿರುವ ಕಷ್ಟಗಳು ನೂತನ ಸಚಿವ ಬಸವಂತಪ್ಪ ಅವರಿಗೆ ಸಂಪೂರ್ಣ ಅರಿವಿದೆ. ಮುಂಬರುವ ದಿನಗಳಲ್ಲಿ ನಮ್ಮಂತಹ ಪೌರ ಕಾರ್ಮಿಕರ ಕಷ್ಟ, ನಷ್ಟ, ಸಮಸ್ಯೆಗಳಿಗೆ ಧ್ವನಿ ಎತ್ತುವ ನಾಯಕನಾಗಿ ಬಸವಂತಪ್ಪ ಹೊರಹೊಮ್ಮಲಿದ್ದಾರೆ. ಪೌರ ಕಾರ್ಮಿಕರಿಗೆ ಮನೆ ಇಲ್ಲ. ಬಡತನದಲ್ಲಿ ಬದುಕುತ್ತಿದ್ದೇವೆ. ಮನೆ ಬಾಡಿಗೆಯೂ ಹೆಚ್ಚಾಗಿದೆ. ಈ ಎಲ್ಲ ವಿಚಾರಗಳ ಬಗ್ಗೆ ಬಸವಂತಪ್ಪ ಧ್ವನಿ ಆಗುತ್ತಾರೆಂಬ ಸಂಪೂರ್ಣ ವಿಶ್ವಾಸ ನಮಗಿದೆ ಎಂದು ತಿಳಿಸಿದರು.
ಈಚೆಗೆ ನೇಮಕಗೊಂಡ ಪೌರ ಕಾರ್ಮಿಕರಿಗೆ ಇಂದಿಗೂ ವೇತನ ಬಂದಿಲ್ಲ. ದಿನಗೂಲಿ ನೌಕರರನ್ನು ಕಾಯಂ ಮಾಡಿಲ್ಲ. ನೂತನ ಸಚಿವರಾದ ಕೆ.ಎಸ್.ಬಸವಂತಪ್ಪ ನಮ್ಮೆಲ್ಲ ಕಷ್ಟ, ಸಮಸ್ಯೆಗಳ ನಿವಾರಣೆಗೆ ಸ್ಪಂದಿಸಲಿದ್ದಾರೆ. ಕೆ.ಎಸ್.ಬಸವಂತಪ್ಪ ಸಚಿವರಾಗಿದ್ದು ನಮ್ಮ ಮನೆಯ ಮಗನೇ, ನಮ್ಮೆಲ್ಲರ ಒಬ್ಬ ಸಹೋದರನೇ ಮಂತ್ರಿಯಾದಷ್ಟು ಖುಷಿಯಾಗುತ್ತದೆ. ವಿಧಾನಸೌಧದ ಅಂಗಳದಲ್ಲಿ ಪೌರ ಕಾರ್ಮಿಕರ ಧ್ವನಿಯಾಗಿ ನಿಂತು, ಅವರು ನಮ್ಮೆಲ್ಲರ ಸಮಸ್ಯೆ ನಿವಾರಿಸುತ್ತಾರೆಂಬ ವಿಶ್ವಾಸವಿದೆ ಎಂದು ಹೇಳಿದರು.
ನಗರ ಪಾಲಿಕೆ ಆರೋಗ್ಯ ನಿರೀಕ್ಷಕ ಪ್ರಕಾಶ, ಹೊನ್ನಪ್ಪ, ನಿಖಿಲ್, ರಾಘವೇಂದ್ರ, ಜಯಪ್ರಕಾಶ, ಲಕ್ಷ್ಮೀದೇವಿ, ಉಷಾ, ಪೌರ ಕಾರ್ಮಿಕರಾದ ಸಾವಿತ್ರಮ್ಮ, ಮುತ್ತೂರಮ್ಮ, ಉಚ್ಚೆಂಗಮ್ಮ, ನೀಲಮ್ಮ, ಶಾಂತಮ್ಮ, ಹಾಲೇಶ, ಮಲ್ಲಿಕಾರ್ಜುನ, ಹನಮಂತಪ್ಪ, ರಾಜು ಇತರರು ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದರು.
- - -
-5ಕೆಡಿವಿಜಿ1: ಮಾಯಕೊಂಡ ಕ್ಷೇತ್ರ ಶಾಸಕ ಕೆ.ಎಸ್.ಬಸವಂತಪ್ಪ ಸಚಿವರಾಗಿ ಅಧಿಕಾರ ವಹಿಸಿಕೊಂಡ ಹಿನ್ನೆಲೆ ದಾವಣಗೆರೆಯಲ್ಲಿ ಬುಧವಾರ ಪೌರ ನೌಕರರ ಸಂಘ, ಪೌರ ಕಾರ್ಮಿಕರ ಸಂಘ, ಪೌರ ಕಾರ್ಮಿಕರು, ಪೌರ ನೌಕರರು ಪಟಾಕಿ ಸಿಡಿಸಿ, ಪರಸ್ಪರರಿಗೆ ಸಿಹಿ ತಿನ್ನಿಸಿ, ಸಂಭ್ರಮಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.