- ಚಿತ್ರದುರ್ಗ, ಚಿಕ್ಕಮಗಳೂರು ಜಿಲ್ಲೆಗೆ ಭದ್ರಾ ಹಿನ್ನೀರು, ಅನ್ಯ ಮಾರ್ಗದಿಂದ ನೀರೊದಗಿಸಲು ಮನವಿ - - -
ಕನ್ನಡಪ್ರಭ ವಾರ್ತೆ ದಾವಣಗೆರೆಭದ್ರಾ ಡ್ಯಾಂ ಬಲದಂಡೆ ನಾಲೆ ಬಳಿ ಕೈಗೊಂಡ ಕಾಮಗಾರಿ ವಿವಾದಕ್ಕೆ ಕಾರಣವಾಗಿದೆ. ತಕ್ಷಣವೇ ಈ ಕಾಮಗಾರಿ ಸ್ಥಗಿತಗೊಳಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜಲ ಸಂಪನ್ಮೂಲ ಸಚಿವ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ಗೆ ಮಾಯಕೊಂಡ ಕ್ಷೇತ್ರ ಕಾಂಗ್ರೆಸ್ ಶಾಸಕ ಕೆ.ಎಸ್.ಬಸವಂತಪ್ಪ ಒತ್ತಾಯಿಸಿದರು.
ಬೆಂಗಳೂರಿನಲ್ಲಿ ಸಿಎಂ, ಡಿಸಿಎಂ ಅವರನ್ನು ಭೇಟಿ ಮಾಡಿದ ಶಾಸಕ ಕೆ.ಎಸ್.ಬಸವಂತಪ್ಪ, ಭದ್ರಾ ಜಲಾಶಯದ ಬುಡದಲ್ಲೇ ಇರುವ ಬಲದಂಡೆ ನಾಲೆಯಿಂದ ಚಿತ್ರದುರ್ಗ, ಚಿಕ್ಕಮಗಳೂರು ಜಿಲ್ಲೆಗಳ 1236 ಗ್ರಾಮಗಳಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಹಾಗೂ ಹೊಸದುರ್ಗ ಪಟ್ಟಣಕ್ಕೆ ಕುಡಿಯುವ ನೀರು ಪೂರೈಸಲು ಜಲಜೀವನ್ ಮಿಷನ್ ಅಡಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ಈ ಕಾಮಗಾರಿಗೆ ಜಿಲ್ಲೆಯಲ್ಲಿ ತೀವ್ರ ವಿರೋಧ ವ್ಯಕ್ತವಾಗಿ, ವಿವಾದಕ್ಕೆ ಕಾರಣವಾಗಿದೆ. ಹೀಗಾಗಿ ಕೂಡಲೇ ಕಾಮಗಾರಿ ಸ್ಥಗಿತಗೊಳಿಸಲು ಸೂಚಿಸುವಂತೆ ಮನವಿ ಮಾಡಿದರು.ಬಲದಂಡೆ ನಾಲೆ ಸೀಳಿ, ಪೈಪ್‌ಲೈನ್ ಅಳವಡಿಸಿ ನೀರು ಹರಿಸಿದರೆ ನಾಲೆಯಲ್ಲಿ ನೀರಿನ ಸಹಜ ಹರಿವಿಗೆ ಅಡ್ಡಿಯಾಗಲಿದೆ. ಆರಂಭದಲ್ಲೇ ನೀರಿನ ಹರಿವಿನ ವೇಗ ಕಡಿಮೆಯಾದರೆ ದಾವಣಗೆರೆ ಜಿಲ್ಲೆಯ ಹರಿಹರ, ದಾವಣಗೆರೆ, ಹೊನ್ನಾಳಿ ಹಾಗೂ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಕೊನೆಯ ಭಾಗದ ಅಚ್ಚುಕಟ್ಟು ಪ್ರದೇಶಗಳ ಜಮೀನುಗಳಿಗೆ ನೀರು ತಲುಪುವುದೇ ಇಲ್ಲ ಎಂಬುದನ್ನು ಸಿಎಂ, ಡಿಸಿಎಂ ಗಮನಕ್ಕೆ ತಂದರು.
ಚಿತ್ರದುರ್ಗ, ಚಿಕ್ಕಮಗಳೂರು ಜಿಲ್ಲೆಗಳ ಕುಡಿಯುವ ನೀರು ಪೂರೈಕೆಗೆ ಭದ್ರಾ ಡ್ಯಾಂನ ಹಿನ್ನೀರಿನಿಂದ ಅಥವಾ ನದಿ ಅಥವಾ ಬೇರೆ ಮಾರ್ಗದಿಂದ ನೀರು ಪೂರೈಸಲು ಕ್ರಮ ಕೈಗೊಳ್ಳಬೇಕು. ಕೂಡಲೇ ತಮ್ಮ ಅಧ್ಯಕ್ಷತೆಯಲ್ಲಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ, ಜಿಲ್ಲೆಯ ಎಲ್ಲ ಶಾಸಕರು, ಭದ್ರಾ ಬಲದಂಡೆ ಅಚ್ಚುಕಟ್ಟು ಪ್ರದೇಶದ ರೈತ ಮುಖಂಡರ ಸಭೆ ಕರೆದು, ನಮ್ಮ ಜಿಲ್ಲೆ ಹಾಗೂ ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರಿಗೆ ನ್ಯಾಯ ಒದಗಿಸಬೇಕೆಂದು ಸರ್ಕಾರಕ್ಕೆ ಶಾಸಕ ಕೆ.ಎಸ್. ಬಸವಂತಪ್ಪ ಮನವಿ ಮಾಡಿದರು.ಮನವಿ ಸ್ವೀಕರಿಸಿದ ಸಿಎಂ ಸಿದ್ದರಾಮಯ್ಯ, ಶೀಘ್ರವೇ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಭದ್ರಾ ಬಲದಂಡೆ ಅಚ್ಚುಕಟ್ಟು ಪ್ರದೇಶದ ರೈತ ಮುಖಂಡರ ಸಭೆ ಕರೆಯುವಂತೆ ಸಂಬಂಧಿಸಿದ ಸಚಿವರಿಗೆ ಸೂಚಿಸುವುದಾಗಿ ಭರವಸೆ ನೀಡಿದರು.
- - -(ಬಾಕ್ಸ್) * ಭದ್ರಾ ಡ್ಯಾಂಗೂ ಅಪಾಯ ಭದ್ರಾ ಡ್ಯಾಂನ ಬಫರ್ ಝೋನ್‌ನಲ್ಲೇ ಕಾಮಗಾರಿ ಕೈಗೊಂಡಿದ್ದರಿಂದ ಅಣೆಕಟ್ಟೆಗೂ ಅಪಾಯ ತಪ್ಪಿದ್ದಲ್ಲವೆಂಬ ಆರೋಪ ರೈತರಿಂದ ಕೇಳಿಬರುತ್ತಿದೆ. ಭದ್ರಾ ಮೇಲ್ದಂಡೆ ಯೋಜನೆಯಡಿ ಡ್ಶಾಂನಿಂದ ಹೊಸದುರ್ಗ, ಕಡೂರು, ಚಿಕ್ಕಮಗಳೂರು, ತರೀಕೆರೆ ತಾಲೂಕು ಸೇರಿದಂತೆ ಬಯಲು ಸೀಮೆ ಹಳ್ಳಿಗಳಿಗೆ ನಿತ್ಯ 39 ಕ್ಯುಸೆಕ್‌ನಂತೆ ವರ್ಷವಿಡೀ ಕುಡಿಯುವ ನೀರು ಕೊಡಲು 1 ಟಿಎಂಸಿ ಅಡಿ ನೀರು ಹಂಚಿಕೆ ಮಾಡಲಾಗಿದೆ. ಇದು ರೈತರ ಆಕ್ರೋಶಕ್ಕೆ ಕಾರಣವಾಗಿದೆ ಎಂದು ಬಸವಂತಪ್ಪ ಮನವರಿಕೆ ಮಾಡಿಕೊಟ್ಟರು.
- - --28ಕೆಡಿವಿಜಿ1, 2.ಜೆಪಿಜಿ:
ಭದ್ರಾ ಡ್ಯಾಂ ಬಳಿ ಬಲದಂಡೆ ನಾಲೆ ಕಾಮಗಾರಿ ಸ್ಥಗಿತಗೊಳಿಸಿ, ಭದ್ರಾ ಅಚ್ಚುಕಟ್ಟು ಪ್ರದೇಶದ ಹಿನ್ನೀರು ಪ್ರದೇಶ, ಬೇರೆ ಮಾರ್ಗದಿಂದ ಚಿತ್ರದುರ್ಗ, ಚಿಕ್ಕಮಗಳೂರು ಜಿಲ್ಲೆಗೆ ಕುಡಿಯುವ ನೀರು ಪೂರೈಸುವಂತೆ ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಅವರು ಸಿಎಂ ಸಿದ್ದರಾಮಯ್ಯಗೆ ಮನವಿ ಅರ್ಪಿಸಿದರು.