- ಜಲಾಶಯ, ಎಂಪಿಸಿಎಲ್ ವಿದ್ಯುತ್ ಸ್ಥಾವರದಿಂದ ನದಿಗೆ 75 ಸಾವಿರ ಕ್ಯೂಸೆಕ್ ನೀರು ನದಿಗೆ
ಕನ್ನಡಪ್ರಭ ವಾರ್ತೆ ಕೊಡೇಕಲ್ (ಯಾದಗಿರಿ ಜಿಲ್ಲೆ)
ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರದ ಬಸವಸಾಗರ ಜಲಾಶಯಕ್ಕೆ ದಿನದಿಂದ ದಿನಕ್ಕೆ ನೀರಿನ ಒಳಹರಿವು ಹೆಚ್ಚುತ್ತಿದ್ದು. ಗುರುವಾರದಂದು ಜಲಾಶಯಕ್ಕೆ 75 ಸಾವಿರ ಕ್ಯೂಸೆಕ್ ನೀರಿನ ಒಳಹರಿವು ಹರಿದು ಬರುತ್ತಿದೆ. ಜಲಾಶಯ ಈಗಾಗಲೇ ಭರ್ತಿಯಾಗುತ್ತಿರುವುದರಿಂದ ಹೆಚ್ಚುವರಿ ಕೃಷ್ಣಾ ನೀರನ್ನು ನದಿಗೆ ಬಿಡಲಾಗುತ್ತಿದೆ.ಮಲಪ್ರಭಾ ನದಿ ಜಲಾನಯನ ಪ್ರದೇಶ ಹಾಗೂ ಜಲಾಶಯದ ಮೇಲ್ಬಾಗದ ಪ್ರದೇಶದಲ್ಲಿ ವ್ಯಾಪಕವಾಗಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಮತ್ತು ಆಲಮಟ್ಟಿ ಜಲಾಶಯದಿಂದ ನದಿಗೆ ನೀರು ಹರಿಸುತ್ತಿರುವುದರಿಂದ ನಾರಾಯಣಪುರದ ಬಸವಸಾಗರ ಜಲಾಶಯಕ್ಕೆ ನೀರಿನ ಒಳಹರಿವು ಗಣನೀಯವಾಗಿ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಜಲಾಶಯದ ನೀರಿನ ಸಂಗ್ರಹ ಮಟ್ಟವನ್ನು ಕಾಯ್ದುಕೊಂಡು, ನದಿ ಪಾತ್ರದಲ್ಲಿ ಪ್ರವಾಹ ಭೀತಿಯನ್ನು ತಪ್ಪಿಸುವ ಉದ್ದೇಶದಿಂದ ಜಲಾಶಯದ 25 ಮುಖ್ಯ ಕ್ರಸ್ಟ್‌ಗೇಟುಗಳ ಮೂಲಕ 69,015 ಕ್ಯೂಸೆಕ್ ಮತ್ತು ಎಂಪಿಸಿಎಲ್ ಮೂಲಕ 6 ಸಾವಿರ ಕ್ಯೂಸೆಕ್ ಸೇರಿದಂತೆ ಒಟ್ಟು 75,015 ಕ್ಯೂಸೆಕ್ ನೀರು ಕೃಷ್ಣೆಗೆ ಹರಿಬಿಡಲಾಗುತ್ತಿದೆ.
ಕಳೆದ ಶುಕ್ರವಾರದಿಂದ ನದಿಗೆ ಜಲಾಶಯದಿಂದ ನೀರು ಹರಿಸಲಾಗುತ್ತಿದ್ದು, ದಿನದಿಂದ ದಿನಕ್ಕೆ ನದಿಗೆ ಹರಿಯುವ ನೀರಿನ ಪ್ರಮಾಣ ಅಧಿಕವಾಗುತ್ತಲೇ ಇರುವುದರಿಂದ ಕೃಷ್ಣಾ ನದಿ ತಟದ ಜನರು ನದಿ ತೀರದತ್ತ ಮೀನು ಹಿಡಿಯುವುದು ಸೇರಿದಂತೆ ಯಾವುದೇ ಚಟುವಟಿಕೆಗಳನ್ನು ನಡೆಸದೇ ತಮ್ಮ ಜಾನುವಾರುಗಳೊಂದಿಗೆ ಸುರಕ್ಷಿತ ಸ್ಥಳಗಳಲ್ಲಿ ಇರಬೇಕೆಂದು ಅಧಿಕಾರಿಗಳು ಸೂಚಿಸಿದ್ದಾರೆ.
------
19ವೈಡಿಆರ್7: ಯಾದಗಿರಿ ಜಿಲ್ಲೆ ನಾರಾಯಣಪುರದ ಬಸವಸಾಗರ ಜಲಾಶಯಕ್ಕೆ ಗುರುವಾರ ಬೆಳಿಗ್ಗ 75 ಸಾವಿರ ಕ್ಯೂಸೆಕ್ ನೀರಿನ ಒಳಹರಿವು ಹರಿದು ಬಂದಿದ್ದರಿಂದ, ಜಲಾಶಯದ ಪ್ರಮುಖ 25 ಕ್ರಸ್ಟ್ ಗೇಟ್ ತೆರೆಯುವ ಮೂಲಕ ನದಿಗೆ 69 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಹರಿಸಲಾಗುತ್ತಿದೆ.