ಎತ್ತಿನಬಂಡಿಯಲ್ಲಿ ವಿದ್ಯಾರ್ಥಿಗಳ ಪಿಕ್‌ನಿಕ್

KannadaprabhaNewsNetwork |  
Published : Dec 11, 2023, 01:15 AM IST
ಬಸವರಾಜ ನಂದಿಹಾಳ  | Kannada Prabha

ಸಾರಾಂಶ

ಎತ್ತಿನಬಂಡಿಯಲ್ಲಿ ವಿದ್ಯಾರ್ಥಿಗಳ ಪಿಕ್‌ನಿಕ್

ಬಸವರಾಜ ನಂದಿಹಾಳ ಕನ್ನಡಪ್ರಭವಾರ್ತೆ ಬಸವನಬಾಗೇವಾಡಿ ಪಟ್ಟಣದ ಕೂಡಲಸಂಗಮ ಅಭಿವೃದ್ಧಿ ಮಂಡಳಿಯ ಬಸವೇಶ್ವರ ದೇವಾಲಯ ಅಂತಾರಾಷ್ಟ್ರೀಯ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಎಲ್‌ಕೆಜಿ, ಯುಕೆಜಿ, ಒಂದು ಹಾಗೂ ಎರಡನೇ ತರಗತಿಯ ವಿದ್ಯಾರ್ಥಿಗಳನ್ನು ಶನಿವಾರ ಪಟ್ಟಣದ ಸಮೀಪದ ಐತಿಹಾಸಿಕ ಹೋರಿಮಟ್ಟಿ ಗುಡ್ಡಕ್ಕೆ ಚಕ್ಕಡಿಯಲ್ಲಿ ಹೊರಸಂಚಾರಕ್ಕೆ (ಪಿಕ್‌ನಿಕ್) ಕರೆದೊಯ್ದುದ್ದು ಗಮನಸೆಳೆಯಿತು. ಕಾನ್ವೆಂಟ್‌ನಂಥ ಖಾಸಗಿ ಶಾಲೆಗಳಲ್ಲಿ ಸಾಂಪ್ರದಾಯಿಕ ಶೈಲಿ ಆಚರಣೆಗಳು ವಿರಳ ಎನ್ನುವ ಮಾತು ಇದೆ. ಇದಕ್ಕೆ ಅಪವಾದಂತೆ ಇಲ್ಲಿನ ಬಸವೇಶ್ವರ ದೇವಾಲಯ ಅಂತಾರಾಷ್ಟ್ರೀಯ ಶಾಲೆ ಸಿಬ್ಬಂದಿ ತಮ್ಮ ಮಕ್ಕಳಿಗೆ ಸಾಂಪ್ರದಾಯಿಕ ಚಕ್ಕಡಿ ಗಾಡಿ ಪ್ರಯಾಣದ ಅನುಭವ ಸಿಗಲಿ ಎನ್ನುವ ಉದ್ದೇಶದಿಂದ ಇಂತಹ ವೈಶಿಷ್ಟ್ಯಪೂರ್ಣ ಪಿಕ್‌ನಿಕ್‌ ಆಯೋಜಿಸಲಾಗಿತ್ತು. ಶಾಲೆ ಮೇಲುಉಸ್ತುವಾರಿ ಸಮಿತಿ ಅಧ್ಯಕ್ಷ ಭರತು ಅಗರವಾಲ, ಶಾಲೆ ಮೇಲುಸ್ತುವಾರಿ ಸಮಿತಿ ಮಾಜಿ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ, ಸಮಿತಿ ಸದಸ್ಯ ಎಂ.ಜಿ.ಆದಿಗೊಂಡ ಪಿಕ್‌ನಿಕ್‌ಗೆ ಚಾಲನೆ ನೀಡಿದರು. ಶಿಕ್ಷಕರು ಉತ್ತರ ಕರ್ನಾಟಕ ಶೈಲಿಯ ಉಡುಪು ಧರಿಸಿದ್ದರು. ವಿದ್ಯಾರ್ಥಿಗಳು ಸಹ ವಿವಿಧ ಸಾಂಪ್ರದಾಯಿಕ ಉಡುಪು ಧರಿಸಿ ಗಮನಸೆಳೆದರು. ಹದಿನೈದು ಚಕ್ಕಡಿಗಳಲ್ಲಿ ವಿದ್ಯಾರ್ಥಿಗಳು ಪಿಕ್‌ನಿಕ್‌ಗೆ ತೆರಳಿದರು. ಉತ್ತರ ಕರ್ನಾಟಕದ ಊಟ ಸಜ್ಜಿ ರೊಟ್ಟಿ, ಜೋಳದ ರೊಟ್ಟಿ, ವಿವಿಧ ಪಲ್ಲೆ, ಸಜ್ಜಿ ಕಡಬು, ಹೂರಣದ ಕಡಬು, ಶೇಂಗಾ ಹೋಳಿಗೆ, ಕುರಡಗಿ, ಅನ್ನ ಸಾಂಬಾರ ಸವಿದರು. ಶಾಲೆ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಭರತು ಅಗರವಾಲ ವಿಶೇಷ ಪಿಕ್‌ನಿಕ್‌ ಶ್ಲಾಘಿಸಿದರು. ಇಂದಿನ ಆಧುನಿಕ ಯುಗದಲ್ಲಿ ಮಕ್ಕಳಿಗೆ ಚಕ್ಕಡಿ ಗಾಡಿ, ಸಾಂಪ್ರದಾಯಿಕ ಊಟದ ಪರಿಚಯಿಸುವ ಉದ್ದೇಶದಿಂದ ಶಾಲೆ ಸಿಬ್ಬಂದಿ ಇಂತಹ ಪಿಕ್‌ನಿಕ್ ಹಮ್ಮಿಕೊಂಡಿರುವುದು ಮಾದರಿಯಾಗಿದೆ. ಇಂದಿನ ಮಕ್ಕಳಿಗೆ ಕಾರು, ಬೈಕ್ ಪ್ರಯಾಣದ ಅನುಭವ ಇರುತ್ತದೆ. ಆದರೆ, ಚಕ್ಕಡಿ ಗಾಡಿ ಪ್ರಯಾಣದ ಅನುಭವ ಇರುವುದಿಲ್ಲ. ನಾವು ಚಿಕ್ಕವರಿದ್ದಾಗ ಚಕ್ಕಡಿಯಲ್ಲಿ ಕುಳಿತ ನೆನಪಾಗುತ್ತಿದೆ ಎಂದರು. ಚಕ್ಕಡಿ ಗಾಡಿ ಮಾಲೀಕ ಬಸವರಾಜ ಖ್ಯಾಡದ ಅವರು, ಶಾಲೆಗಳಲ್ಲಿ ಚಕ್ಕಡಿ ಮೂಲಕ ಪಿಕ್‌ನಿಕ್‌ ಹೋಗುವುದು ಅಪರೂಪ. ಇದೊಂದು ಹೊಸ ರೀತಿಯ ಹೊಸ ಅನುಭವ ಎಂದರು. ಎಲ್‌ಕೆಜಿಯ ಅಶ್ವಿತಾ ನಾಯಕ, ಯುಕೆಜಿ ಗೌತಮಿ ಬಿರಾದಾರ, ಒಂದನೇ ತರಗತಿಯ ಮಲ್ಲಿಕಾರ್ಜುನ ಕಾಳಗಿ, ಇದೇ ಮೊದಲು ನಾವು ಚಕ್ಕಡಿಯಲ್ಲಿ ಬೇರೆ ಸ್ಥಳಕ್ಕೆ ಹೋಗುತ್ತಿದ್ದೇವೆ. ಇದು ನಮಗೆ ಹೊಸ ಅನುಭವ ನೀಡುವ ಜೊತೆಗೆ ಸಂತಸ ಆಗುತ್ತಿದೆ. ನಮಗೆ ಚಕ್ಕಡಿ ಪ್ರಯಾಣದ ಅವಕಾಶ ನೀಡಿರುವ ನಮ್ಮ ಶಿಕ್ಷಕರಿಗೆ ಧನ್ಯವಾದ ಹೇಳಿದರು. ಶಾಲೆ ಸಿಬ್ಬಂದಿ ಮಹೇಶ ಹುಮನಾಬಾದ ಅವರು, ನಮ್ಮ ಮಕ್ಕಳಗೆ ಸಾಂಪ್ರದಾಯಿಕ ಚಕ್ಕಡಿ ಗಾಡಿ ಪ್ರಯಾಣದ ಅನುಭವ ಆಗಬೇಕು. ಉತ್ತರ ಕರ್ನಾಟಕದ ಊಟದ ಸವಿ ಸಿಗಬೇಕೆಂಬ ಉದ್ದೇಶದಿಂದ ವಿನೂತನವಾಗಿ ಪಿಕ್‌ನಿಕ್ ಹಮ್ಮಿಕೊಂಡಿದ್ದೇವೆ. ನಮ್ಮ ಶಾಲೆ ಪ್ರಾಂಶುಪಾಲರು ಸೇರಿದಂತೆ ಎಲ್ಲ ಶಿಕ್ಷಕರ ಸಹಕಾರದಿಂದ ಈ ಪಿಕ್‌ನಿಕ್ ಆಯೋಜನೆ ಮಾಡಲಾಗಿದೆ ಎಂದರು.

PREV

Recommended Stories

ಧರ್ಮಸ್ಥಳ ಗ್ರಾಮ : ಡೆಬಿಟ್, ಪಾನ್ ಕಾರ್ಡ್ ರಹಸ್ಯ ಬಯಲು
ದ್ವೇಷ ಭಾಷಣ ತಡೆ, ಸುಳ್ಳು ಸುದ್ದಿ ನಿಯಂತ್ರಣಕ್ಕೆ ಮಸೂದೆ