ಕನ್ನಡಪ್ರಭ ವಾರ್ತೆ ಭಟ್ಕಳ
ಎರಡು ಪ್ರತ್ಯೇಕ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.ಎರಡೂ ಪ್ರಕರಣಗಳ ಆರೋಪಿಗಳೆನ್ನಲಾದ ಇಲ್ಲಿಯ ಪುರವರ್ಗದ ನಿವಾಸಿ ಮುರ್ತುಜಾ ಹಾಗೂ ರಿಜ್ವಾನ್ ಎಂಬವರನ್ನು ಬಂಧಿಸಲಾಗಿದೆ. ಅವರಿಂದ ದರೋಡೆ ಮಾಡಿದ ವಸ್ತುಗಳನ್ನು ಕೂಡಾ ವಶಕ್ಕೆ ಪಡೆಯಲಾಗಿದೆ. ಇನ್ನಿಬ್ಬರು ಮಹಿಳೆಯರ ಕುರಿತು ಪೊಲೀಸರಿಗೆ ಸುಳಿವು ದೊರೆತಿದ್ದು, ಶೀಘ್ರದಲ್ಲಿ ಪೊಲೀಸರು ಪತ್ತೆ ಹಚ್ಚಿ ಬಂಧಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಪ್ರಕರಣ-1: ಪಟ್ಟಣದ ಹನೀಪಾಬಾದಿನ ಮೊಹಮ್ಮದ್ ಶಕೀಲ್ ಎನ್ನುವವರ ಅಂಗಡಿಗೆ ಬಂದ ಮಹಿಳೆಯರಿಬ್ಬರು ಶಕೀಲ್ ಅವರನ್ನು ಪರಿಚಯ ಮಾಡಿಕೊಂಡು ಮೊಬೈಲ್ ನಂಬರನ್ನು ಪಡೆದು ರಾತ್ರಿ ನಿರ್ಜನ ಪ್ರದೇಶಕ್ಕೆ ಕರೆಯಿಸಿಕೊಂಡು ಹೋಗಿದ್ದಾರೆ. ಅಲ್ಲಿ ನಾಲ್ವರು ಸೇರಿ ₹ ೨೩,೮೫೦, ಫೋನ್ ಪೇ ಮೂಲಕ ₹ ೪೯,೦೦೦, ರೆಡ್‌ಮಿ ನೋಟ್ ೧೦ ಮೊಬೈಲ್ ೩೦,೦೦೦ ಕಿತ್ತುಕೊಂಡು ದರೋಡೆ ಮಾಡಿಕೊಂಡು ಹೋಗಿರುವ ಕುರಿತು ಇಲ್ಲಿನ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು.
ದರೋಡೆ ಮಾಡಿದ ಆರೋಪಿಗಳಲ್ಲಿ ಓರ್ವಳ ಹೆಸರು ಫರ್ಜಾನಾ ಹಾಗೂ ಕಾರು ಚಾಲಕ ಮುರ್ಜುಜಾ ಎಂದು ತಿಳಿದು ಬಂದಿತ್ತು. ಇನ್ನಿಬ್ಬರ ಹೆಸರು ವಿಳಾಸ ತಿಳಿದು ಬಂದಿಲ್ಲ ಎನ್ನಲಾಗಿದೆ. ಶಕೀಲ್ ಅವರನ್ನು ಹನೀಫಾಬಾದ್ ಕ್ರಾಸ್‌ಗೆ ಕರೆಯಿಸಿಕೊಂಡು ಸ್ವಿಪ್ಟ್ ಕಾರಿನಲ್ಲಿ ಮುರ್ಡೇಶ್ವರ ಸಮೀಪ ಕರೆದುಕೊಂಡು ಹೋಗಿ ಅಲ್ಲಿ ನಾಲ್ವರು ಸೇರಿ ಹಲ್ಲೆ ಮಾಡಿ ದರೋಡೆ ಮಾಡಿದ್ದರು. ಆನಂತರ ಇವರನ್ನು ಹೊನ್ನಾವರ ಸಮೀಪ ಕರೆದುಕೊಂಡು ಹೋಗಿ ಮೊಬೈಲ್‌ನಲ್ಲಿ ವೀಡಿಯೋ ಮಾಡಿಕೊಂಡು, ತನ್ನಿಂದ ತಪ್ಪಾಗಿದೆ, ಮಹಿಳೆಯ ಮೈಮೇಲೆ ಕೈ ಮಾಡಿದ್ದೇನೆ ಎಂತೆಲ್ಲ ಹೇಳಿಸಿಕೊಂಡಿದ್ದರು. ದೂರು ನೀಡಿದರೆ ಈ ವೀಡಿಯೋ ವೈರಲ್ ಮಾಡುವುದಾಗಿಯೂ ಬೆದರಿಕೆ ಹಾಕಿದ್ದರು. ಆನಂತರ ರಾತ್ರಿ ೧.೩೦ರ ಸುಮಾರಿಗೆ ವೆಂಕಟಾಪುರ ಸೇತುವೆಯ ಮೇಲೆ ಬೀಳಿಸಿ ಹೋಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದು, ದೂರನ್ನು ದಾಖಲಿಸಿಕೊಂಡ ಗ್ರಾಮೀಣ ಠಾಣೆಯ ಇನ್‌ಸ್ಪೆಕ್ಟರ್ ಚಂದನ ಗೋಪಾಲ ವಿ., ಅವರು ತನಿಖೆ ನಡೆಸಿದ್ದರು. ಇನ್ನೊಂದು ಪ್ರಕರಣದಲ್ಲಿ ಕುಂದಾಪುರದ ಸಂಕೇತ ತಿಮ್ಮಪ್ಪ ಪೂಜಾರಿ ಎನ್ನುವವರು ದೂರು ನೀಡಿದ್ದು, ದೂರಿನಲ್ಲಿ ಪುರವರ್ಗದ ಮುರ್ತುಜಾ ಮತ್ತು ಇನ್ನಿಬ್ಬರು ಅಪರಿಚಿತರು ಗಾರೆ ಕೆಲಸ ಮಾಡುವ ತನ್ನನ್ನು ಹಡೀನ್‌ನಲ್ಲಿ ಸಿಮೆಂಟ್ ದಾಸ್ತಾನು ಮಳಿಗೆ ತೋರಿಸುತ್ತೇನೆ ಎಂದು ಕರೆದುಕೊಂಡು ಹೋಗಿ ಹಡೀನ್ ಹತ್ತಿರ ಆರೋಪಿತರು ಮೂವರು ಸೇರಿ ಹಿಡಿದು ಕುತ್ತಿಗೆಯಲ್ಲಿದ್ದ ೧೦ ಗ್ರಾಂ ತೂಕದ ₹೬೦ ಸಾವಿರ ಮೌಲ್ಯದ ಚಿನ್ನದ ಚೈನು, ಎಂಐ ಕಂಪೆನಿಯ ನೋಟ್ ೯ ಪ್ರೋ ಮೊಬೈಲ್ ₹೨೦ ಸಾವಿರ ಮೌಲ್ಯವನ್ನು ಬಲವಂತವಾಗಿ ಕಿತ್ತುಕೊಂಡು ದೂಡಿ ಹಾಕಿ ಎರಡು ಸ್ಕೂಟರಿನಲ್ಲಿ ಪರಾರಿಯಾಗಿದ್ದಾರೆ ಎಂದು ತಿಳಿಸಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಸಿಪಿಐ ಚಂದನಗೋಪಾಲ ನೇತೃತ್ವದ ತಂಡ ಎರಡೂ ಪ್ರಕರಣದ ಆರೋಪಿಗಳೆನ್ನಲಾದ ಪುರವರ್ಗದ ನಿವಾಸಿ ಮುರ್ತುಜಾ ಹಾಗೂ ರಿಜ್ವಾನ್ ಇಬ್ಬರನ್ನೂ ಬಂಧಿಸಲಾಗಿದ್ದು, ದರೋಡೆ ಮಾಡಿದ ವಸ್ತುಗಳನ್ನು ಕೂಡಾ ವಶಕ್ಕೆ ಪಡೆಯಲಾಗಿದೆ. ಇನ್ನಿಬ್ಬರು ಮಹಿಳೆಯರ ಕುರಿತು ಪೊಲೀಸರಿಗೆ ಸುಳಿವು ದೊರೆತಿದ್ದು ಶೀಘ್ರದಲ್ಲಿ ಪೊಲೀಸರು ಪತ್ತೆ ಹಚ್ಚಿ ಬಂಧಿಸಲಿದ್ದಾರೆ.