ರಂಗಭೂಮಿ ಕಲಾಸಂತ ಬಾಬಣ್ಣ ಕಲ್ಮನಿ ನಿಧನ

KannadaprabhaNewsNetwork | Published : Dec 11, 2023 1:15 AM

ಸಾರಾಂಶ

ಕುಕನೂರು ಪಟ್ಟಣದ ಹಿರಿಯ ರಂಗಭೂಮಿ ಕಲಾ ಸಂತ ಬಾಬಣ್ಣ ಕಲ್ಮನಿ (ಜಲಾಲುದ್ದೀನ್) (89) ಅನಾರೋಗ್ಯದಿಂದ ಭಾನುವಾರ ಬೆಳಗ್ಗೆ ನಿಧನರಾದರು. ಅವರ ಅಂತ್ಯಕ್ರಿಯೆ ಭಾನುವಾರ ಮಧ್ಯಾಹ್ನ ಜರುಗಿತು. ಗಣ್ಯರು, ಮುಖಂಡರು, ಕಲಾವಿದರು ಬಾಬಣ್ಣ ಅವರ ಅಗಲಿಕೆಗೆ ಕಂಬನಿ ಮಿಡಿಸಿದರು. ಬಾಬಣ್ಣ ಕಲ್ಮನಿ ಅವರಿಗೆ ೨೦೨೧-೨೨ನೇ ಸಾಲಿನ ಗುಬ್ಬಿ ವೀರಣ್ಣ ಪ್ರಶಸ್ತಿ ಒಲಿದು ಬಂದಿತ್ತು. ಅವರು ಮುಡಿಗೇಸಿಕೊಳ್ಳುವ ಮೊದಲೇ ಅಸ್ತಂಗತರಾಗಿದ್ದು, ರಂಗಭೂಮಿಗೆ ತುಂಬರಾದ ನಷ್ಟವಾಗಿದೆ.

ಕನ್ನಡಪ್ರಭ ವಾರ್ತೆ ಕುಕನೂರು

ಪಟ್ಟಣದ ಹಿರಿಯ ರಂಗಭೂಮಿ ಕಲಾ ಸಂತ ಬಾಬಣ್ಣ ಕಲ್ಮನಿ (ಜಲಾಲುದ್ದೀನ್) (89) ಅನಾರೋಗ್ಯದಿಂದ ಭಾನುವಾರ ಬೆಳಗ್ಗೆ ನಿಧನರಾದರು.

ಅವರ ಅಂತ್ಯಕ್ರಿಯೆ ಭಾನುವಾರ ಮಧ್ಯಾಹ್ನ ಜರುಗಿತು. ಗಣ್ಯರು, ಮುಖಂಡರು, ಕಲಾವಿದರು ಬಾಬಣ್ಣ ಅವರ ಅಗಲಿಕೆಗೆ ಕಂಬನಿ ಮಿಡಿಸಿದರು.

ಬಾಬಣ್ಣ ಕಲ್ಮನಿ ಅವರಿಗೆ ೨೦೨೧-೨೨ನೇ ಸಾಲಿನ ಗುಬ್ಬಿ ವೀರಣ್ಣ ಪ್ರಶಸ್ತಿ ಒಲಿದು ಬಂದಿತ್ತು. ಅವರು ಮುಡಿಗೇಸಿಕೊಳ್ಳುವ ಮೊದಲೇ ಅಸ್ತಂಗತರಾಗಿದ್ದು, ರಂಗಭೂಮಿಗೆ ತುಂಬರಾದ ನಷ್ಟವಾಗಿದೆ.

ಬಾಬಣ್ಣ ಕಲ್ಮನಿ ತಮ್ಮ ೧೦ನೇ ವರ್ಷದಲ್ಲಿ ರಂಗಭೂಮಿ ಪ್ರವೇಶಿಸಿ ಸುಮಾರು ೭೭ ವರ್ಷ ಸೇವೆ ಸಲ್ಲಿಸಿದ ಹಿರಿಮೆ ಅವರದ್ದು. ಇಳಿವಯಸ್ಸಿನಲ್ಲೂ ಖಡಕ್ ಆಗಿ ನಟಿಸುತ್ತಿದ್ದರು. ಅವರು ರಂಗಭೂಮಿಯನ್ನೇ ಉಸಿರಾಡಿದವರು. ಇವರ ಇಡೀ ಕುಟುಂಬವೇ ರಂಗಭೂಮಿಗೆ ಮೀಸಲು. ಬಾಬಣ್ಣ ಅವರ ತಾಯಿ ಹೆಸರಾಂತ ರಂಗಭೂಮಿ ಕಲಾವಿದೆ ರೆಹಮಾನವ್ವ ಕಲ್ಮನಿ. ವೃತ್ತಿ ರಂಗಭೂಮಿಯ ದಿಗ್ಗಜೆ ಎಂದೇ ಹೆಸರುವಾಸಿ. ರಾಜ್ಯ ಪ್ರಶಸ್ತಿ ಪುರಸ್ಕೃತ ರಂಗಕಲಾವಿದೆ ರೆಹಮಾನವ್ವ ಧೀಮಂತ ನಟಿ. ರೆಹಮಾನವ್ವ ಅವರ ಐವರು ಮಕ್ಕಳಲ್ಲಿ ದೊಡ್ಡವರೇ ಈ ಬಾಬಣ್ಣ.

ಬಾಬಣ್ಣನವರು ದೊಡ್ಡವಾಡ, ಅರಿಷಿಣಗೋಡಿ, ಚಿಂದೋಡಿ, ಗುಡಿಗೇರಿ, ಶೇಖಮಾಸ್ತರ, ಪುಟ್ಟರಾಜ ಗವಾಯಿಗಳ ಕಂಪನಿ ಸೇರಿದಂತೆ ಕರ್ನಾಟಕದ ಹತ್ತು ಹಲವು ನಾಟಕ ಕಂಪನಿಗಳಲ್ಲಿ ಅಭಿನಯಿಸಿದ್ದಾರೆ. ತಾಯಿ ಕಟ್ಟಿದ ಮಹಾಮಾಯಾ ನಾಟ್ಯ ಸಂಘದ ಜವಾಬ್ದಾರಿ ಹೊತ್ತು ಅದನ್ನು ವಿಜಯಲಕ್ಷ್ಮೀ ನಾಟ್ಯ ಸಂಘ ಎಂದು ಹೆಸರು ಬದಲಿಸಿ ನಾಡಿನಾದ್ಯಂತ ರಂಗಪ್ರದರ್ಶನ ನೀಡಿದ ಹಿರಿಮೆ ಅವರದು.

ಕಂಪನಿ ಬಂದ್‌ ಆದ ಮೇಲೆ ಮತ್ತೆ ಬೇರೆ ಕಂಪನಿಗಳಲ್ಲಿ ಪುರುಷ, ಸ್ತ್ರೀ ಪಾತ್ರ ಸೇರಿದಂತೆ ಎಲ್ಲ ಬಗೆಯ ಪಾತ್ರಗಳಲ್ಲಿ ನಟಿಸಿ ಪ್ರಖ್ಯಾತ ನಟರೆನಿಸಿಕೊಂಡರು. ಹೇಮರೆಡ್ಡಿ ಮಲ್ಲಮ್ಮ ನಾಟಕದಲ್ಲಿ ನಾಗಮ್ಮ, ಮಹಾದೇವಿ, ಪದ್ಮವ್ವ, ಚಿತ್ತರಂಜನಿ, ಮಲ್ಲಿಕಾರ್ಜುನ, ವೇಮನ ಸೇರಿದಂತೆ ಅಷ್ಟೂ ಪಾತ್ರಗಳಲ್ಲಿ ನಟಿಸಿ ದಾಖಲೆ ನಿರ್ಮಿಸಿದರು.

ಕಂಪನಿಗಳ ಭರಾಟೆ ಇಳಿಮುಖವಾದ ಮೇಲೆ ಕಳೆದ 10-15 ವರ್ಷಗಳಿಂದ ರಂಗಭೂಮಿಯ ಮತ್ತೊಬ್ಬ ಖ್ಯಾತ ನಟ ಎಂ.ಎಸ್. ಕೊಟ್ರೇಶ ಅವರೊಂದಿಗೆ ತಂಡ ಮಾಡಿಕೊಂಡು ಆಹ್ವಾನ ಬಂದ ಕಡೆ ಹೋಗಿ ನಾಟಕ ಆಡಿದರು. ನಾಟಕಗಳಾದ ಶಿಶುನಾಳ ಶರೀಫ (ಇದರಲ್ಲಿ ಬಾಬಣ್ಣ ಶರೀಫ ಪಾತ್ರ), ಸಿದ್ಧಾರೂಢ ಮಹಾತ್ಮೆ (ಇದರಲ್ಲಿ ಬಾಬಣ್ಣ ಶರೀಫ), ನವಲಗುಂದದ ನಾಗಲಿಂಗಲೀಲೆ (ಇದರಲ್ಲಿ ಬಾಬಣ್ಣ ರಿಚರ್ಡ್ಸ್, ಶರೀಫ ಪಾತ್ರ,) ಮುಂತಾದ ಸಂತರ, ಅನುಭಾವಿಗಳ ನಾಟಕಗಳನ್ನಾಡಿದ್ದಾರೆ.

ಬಾಬಣ್ಣ ಕಲ್ಮನಿ ನಾಡಿನ ಹಿರಿಯ ಕಲಾವಿದ. ಹಣಕ್ಕಾಗಿ ಎಂದಿಗೂ ಪಾತ್ರ ಮಾಡುತ್ತಿರಲಿಲ್ಲ. ಕಲೆಯನ್ನು ಆರಾಧಿಸುವ ನೈಜ ಸಂತ. ಅವರ ಅಗಲಿಕೆ ರಂಗಭೂಮಿಗೆ ತುಂಬಲಾರದ ನಷ್ಟವಾಗಿದೆ ಎಂದು ಮಹಾದೇವ, ಸ್ವಾಮೀಜಿ ಅನ್ನದಾನೀಶ್ವರ ಶಾಖಾಮಠ, ಕುಕನೂರು ಹೇಳಿದರು.

Share this article