ಬಿಎಸ್‌ವೈ ಟೀಕಿಸಿ ಯತ್ನಾಳ್‌ ನಾಯಕನಾಗುವ ಕನಸು

KannadaprabhaNewsNetwork |  
Published : Dec 11, 2023, 01:15 AM IST
ಎಂ.ಪಿ.ರೇಣುಕಾಚಾರ್ಯ  | Kannada Prabha

ಸಾರಾಂಶ

ನಮಗೂ ಏರುಧ್ವನಿಯಲ್ಲಿ ಮಾತನಾಡಲು ಬರುತ್ತೆ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ವಾಗ್ದಾಳಿ

ನಮಗೂ ಏರುಧ್ವನಿಯಲ್ಲಿ ಮಾತನಾಡಲು ಬರುತ್ತೆ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ವಾಗ್ದಾಳಿ

ಕನ್ನಡಪ್ರಭ ವಾರ್ತೆ ದಾವಣಗೆರೆ

ಬಿ.ಎಸ್‌.ಯಡಿಯೂರಪ್ಪನವರ ಟೀಕಿಸುವುದರಿಂದ ದೊಡ್ಡ ಮಟ್ಟದ ನಾಯಕನಾಗುತ್ತೇನೆಂಬ ಹಗಲುಗನಸು ಕಾಣಬೇಡಿ. ಭ್ರಮಾ ಲೋಕದಲ್ಲಿರುವ ನೀವು ದೊಡ್ಡ ಮಟ್ಟದ ನಾಯಕನಾಗಲು ಸಾಧ್ಯವೇ ಇಲ್ಲ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ವಿಜಯಪುರ ಶಾಸಕ ಬಸವನಗೌಡ ಪಾಟೀಲ್‌ ಯತ್ನಾಳ್ ವಿರುದ್ಧ ಹರಿಹಾಯ್ದಿದ್ದಾರೆ.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಯತ್ನಾಳ್ ಸಂಘಟನೆ ಆಧಾರದ ಮೇಲೆ ಬರಲಿ. ನಮಗೂ ಏರುಧ್ವನಿಯಲ್ಲಿ ಮಾತನಾಡಲು ಬರುತ್ತದೆ. ಹಿಂದೆ ಯತ್ನಾಳ್‌ಗೆ ಕೇಂದ್ರ ಸಚಿವರಾಗಿ ಮಾಡಿದ್ದು ಯಡಿಯೂರಪ್ಪ. ಜೆಡಿಎಸ್ ಗೆ ಇದೇ ಯತ್ನಾಳ್ ಹೋದಾಗ ಮತ್ತೆ ಬಿಜೆಪಿಗೆ ವಾಪಸ್ ಕರೆ ತಂದಿದ್ದು ಯಡಿಯೂರಪ್ಪನವರೇ ಎಂಬುದನ್ನು ಯತ್ನಾಳ್ ಮರೆಯಬಾರದು ಎಂದು ತಿಳಿಸಿದರು.

ಹಿಂದೆಯೇ ಅನೇಕರು ಯತ್ನಾಳ್ ಬಾಯಿ ಸುಮ್ಮನಿರಲ್ಲವೆಂದಿದ್ದರು. ಹಿಂದಿನ ಸರ್ಕಾರದಲ್ಲಿ ಮಂತ್ರಿ ಮಾಡಲಿಲ್ಲವೆಂದು ಯತ್ನಾಳ್ ಈಗಲೂ ಟೀಕಿಸುತ್ತಿದ್ದಾರೆ. ನಾವೇ ಬಹಳಷ್ಟು ಜನರು ಹೋಗಿ ಶಾಸಕರನ್ನು ಒಪ್ಪಿಸಿದ್ದೆವು. ಆದರೂ, ಬಸವನಗೌಡ ಪಾಟೀಲ್ ಯತ್ನಾಳ್ ಮಾಜಿ ಸಿಎಂ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವಿ.ವಿಜಯೇಂದ್ರಗೆ ಟೀಕಿಸುತ್ತಿದ್ದಾರೆ ಎಂದು ದೂರಿದರು.

ಬಿಜೆಪಿ ಬಿಟ್ಟಿದ್ದ ವೇಳೆ ಬಸವನಗೌಡ ಪಾಟೀಲ್ ಯತ್ನಾಳ್ ಜೆಡಿಎಸ್‌ಗೆ ಸೇರಿದ್ದರು. ಆಗ ಅಲ್ಪಸಂಖ್ಯಾತರ ಟೊಪ್ಪಿ ಧರಿಸಿದ್ದಾರೆ. ನನಗೂ ಕೆಲವರು ವಿಜಯಪುರದಿಂದ ಯತ್ನಾಳ್ ಮುಸ್ಲಿಮರ ಟೊಪ್ಪಿ ಧರಿಸಿದ್ದ ಫೋಟೋಗಳನ್ನು ಕಳಿಸಿದ್ದಾರೆ. ಯತ್ನಾಳ ಕಾಲಕ್ಕೆ ತಕ್ಕಂತೆ ಬದಲಾಗುತ್ತಿದ್ದಾರೆ. ನಮಗೂ ಅಡ್ಜೆಸ್ಟ್‌ಮೆಂಟ್ ರಾಜಕಾರಣ ಗೊತ್ತು. ಯತ್ನಾಳ್‌ರ ಅಡ್ಜಸ್ಟ್‌ಮೆಂಟ್ ರಾಜಕಾರಣ ಎಲ್ಲಿದೆ, ಯಾರ ಜೊತೆಗಿದೆ ಎಂಬ ವಿಚಾರವೂ ಗೊತ್ತಿದೆ ಎಂದು ತಿಳಿಸಿದರು.

ನಮ್ಮ, ನಿಮ್ಮ ಸಂಬಂಧ ಚೆನ್ನಾಗಿಯೇ ಇದೆ. ಅನಗತ್ಯವಾಗಿ ಬಿ.ಎಸ್‌.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ಬಸವನಗೌಡ ಪಾಟೀಲ್ ಯತ್ನಾಳ್ ಮಾತನಾಡುವುದು ಏಕೆ ಎಂದು ರೇಣುಕಾಚಾರ್ಯ ಖಾರವಾಗಿ ಪ್ರಶ್ನಿಸಿದರು.

ಬಿಜೆಪಿ ಮುಖಂಡರಾದ ಕಕ್ಕರಗೊಳ್ಳ ಕೆ.ಪಿ.ಕಲ್ಲಿಂಗಪ್ಪ, ಪ್ರವೀಣ ಜಾಧವ್‌, ರಾಜು ವೀರಣ್ಣ, ಅಣಜಿ ಬಸವರಾಜ ಇತರರಿದ್ದರು.ಯತ್ನಾಳ್‌ಗೆ ಶೋಭೆ ತರಲ್ಲ

ಅನಗತ್ಯವಾಗಿ ಯಡಿಯೂರಪ್ಪ, ವಿಜಯೇಂದ್ರರಿಗೆ ಟೀಕೆ ಯಾಕೆ ಮಾಡಬೇಕು? ಇದರಿಂದ ಯಾವುದೇ ಪ್ರಯೋಜನವೂ ಇಲ್ಲ. ವಿಜಯೇಂದ್ರಗೆ ಗುರಿಯಾಗಿಟ್ಟು ಮಾತನಾಡುವುದು ಯತ್ನಾಳ್‌ಗೆ ಶೋಭೆ ತರಲ್ಲ. ಇದರಿಂದ ಯತ್ನಾಳ್ ವ್ಯಕ್ತಿತ್ವಕ್ಕೆ ಧಕ್ಕೆ ಬರುತ್ತದೆ. ಇನ್ನಾದರೂ ಯತ್ನಾಳ್ ತಮ್ಮ ಮಾತಿನ ಮೇಲೆ ನಿಗಾ ಇಡಲಿ. ಎಂ.ಪಿ.ರೇಣುಕಾಚಾರ್ಯ, ಮಾಜಿ ಸಚಿವ

-----

ಯತ್ನಾಳ್‌ರಿಂದ ಪಕ್ಷಕ್ಕೆ ಮುಜುಗರ ತರುವ ಕೆಲಸ: ರೇಣುಕಾಚಾರ್ಯ

ಬಿ.ಎಸ್‌.ಯಡಿಯೂರಪ್ಪನವರು 2017ರಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಾದ ನಂತರ ನಿತ್ಯವೂ ಯತ್ನಾಳ್ ಮಾತನಾಡುತ್ತಿದ್ದರು. ಆಗ ಯತ್ನಾಳ್ ಮಾತನಾಡದಿದ್ದರೆ ಬಿಜೆಪಿಗೆ ಸಂಪೂರ್ಣ ಬಹುಮತ ಬರುತ್ತಿತ್ತು. ಆದರೆ, ಯತ್ನಾಳ್ ಪಕ್ಷಕ್ಕೆ ಡ್ಯಾಮೇಜ್ ಮಾಡಿಕೊಂಡೇ ಬರುತ್ತಿದ್ದಾರೆ. ನಮಗೂ ಏರುಧ್ವನಿಯ ಮಾತು ಬರುತ್ತವೆ. ನಿಮಗಷ್ಟೇ ಅಲ್ಲ. ವಿಪಕ್ಷಗಳು ಬಿಎಸ್‌ವೈಗೆ ಟೀಕೆ ಮಾಡುತ್ತಿಲ್ಲ. ಆದರೆ, ನಮ್ಮ ಪಕ್ಷದ ಯತ್ನಾಳೇ ಆರೋಪಿಸುತ್ತಾರೆ. ಯಡಿಯೂರಪ್ಪ ನಾಯಕತ್ವ, ವಿಜಯೇಂದ್ರ ರಾಜ್ಯಾಧ್ಯಕ್ಷರಾದ್ದರಿಂದ ಪಕ್ಷದ ಶಕ್ತಿ ವರ್ಧನೆಯಾಗಿದೆ. ವಿಜಯೇಂದ್ರಗೆ ರಾಜ್ಯಾಧ್ಯಕ್ಷ ಮಾಡಿದ್ದು ಅಮಿತ್ ಶಾ, ಮೋದಿ. ಹೀಗಿದ್ದರೂ ಯತ್ನಾಳ್ ಅನಗತ್ಯ ಟೀಕೆ ಮಾಡುತ್ತಾ, ಪಕ್ಷಕ್ಕೆ ಮುಜುಗರ ತರುತ್ತಿದ್ದಾರೆ. ತಕ್ಷಣವೇ ಯತ್ನಾಳ್‌ಗೆ ನೋಟಿಸ್ ನೀಡಬೇಕು ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಒತ್ತಾಯಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ