ಅದ್ಧೂರಿಯಾಗಿ ನಡೆದ ಬೆಣಕಲ್ಲಿನ ಗುಡ್ಡದ ಬಸವೇಶ್ವರ ಜಾತ್ರೆ

KannadaprabhaNewsNetwork |  
Published : Apr 19, 2024, 01:01 AM IST
18ಕೆಕೆಆರ್4: ಕುಕನೂರು ತಾಲೂಕಿನ ಬೆಣಕಲ್ ಗ್ರಾಮದಲ್ಲಿ ಗುರುವಾರ ಶ್ರೀ ಗುಡ್ಡದ ಬಸವೇಶ್ವರ ರಥೋತ್ಸವ ಜರುಗಿತು. | Kannada Prabha

ಸಾರಾಂಶ

ಕುಕನೂರು ತಾಲೂಕಿನ ಬೆಣಕಲ್ ಗ್ರಾಮದಲ್ಲಿ ಗುರುವಾರ ಶ್ರೀ ಗುಡ್ಡದ ಬಸವೇಶ್ವರ ರಥೋತ್ಸವ ಜರುಗಿತು.

ರಾಸುಗಳ ಸವಾಲು । 8 ಜೋಡಿ ಸಾಮೂಹಿಕ ವಿವಾಹ । ಭಕ್ತಾಧಿಗಳಿಗೆ ತರವೇಹಾರಿ ಊಟ

ಕನ್ನಡಪ್ರಭ ವಾರ್ತೆ ಕುಕನೂರು

ತಾಲೂಕಿನ ಬೆಣಕಲ್ ಗ್ರಾಮದಲ್ಲಿ ಗುರುವಾರ ಶ್ರೀ ಗುಡ್ಡದ ಬಸವೇಶ್ವರ ರಥೋತ್ಸವ ಜರುಗಿತು.

ಕಳೆದೊಂದು ತಿಂಗಳಿಂದ ಜಾತ್ರೆಯ ಸಿದ್ದತೆ ಕೈಗೊಂಡಿದ್ದ ಗ್ರಾಮಸ್ಥರು ಒಗ್ಗಟ್ಟಾಗಿ ಜಾತ್ರೆಯ ಯಶಸ್ಸಿಗೆ ಕೈಜೋಡಿಸಿದರು. ಪ್ರತಿಯೊಂದು ಕೆಲಸಗಳನ್ನು ತಂಡಗಳನ್ನಾಗಿ ಹಂಚಿಕೊಂಡು ಯಾವುದೇ ಕುಂದು- ಕೊರತೆಯಾಗದಂತೆ ನೋಡಿಕೊಂಡರು. 8 ಜೋಡಿಗಳ ಸಾಮೂಹಿಕ ವಿವಾಹ ಜರುಗಿದವು. ನವ ಜೋಡಿಗಳಿಗೆ ಅಭಿನವ ಗವಿಶ್ರೀ ಗೆಳೆಯರ ಬಳಗದಿಂದ ಕಾಲುಂಗರ ಕೊಡಿಸಲಾಯಿತು. ಗ್ರಾಮದ ಶಾಲೆಯ 2004-05ನೇ ಸಾಲಿನ ವಿದ್ಯಾರ್ಥಿಗಳು ಈ ಬಾರಿ ಜಾತ್ರೆಗೆ 200 ಊಟದ ತಾಟುಗಳನ್ನು ದೇಣಿಗೆಯಾಗಿ ನೀಡಿದರು. ಜಾತ್ರೆಯ ಅಂಗವಾಗಿ ಸಿಡ್ಸ್ ಕಂಪನಿಯ ಮಹಾಂತೇಶ ಪಾಟೀಲ್ ಎಂಬುವರು ಜೋಡಿ ರಾಸುಗಳು ಖರೀದಿಗೆ ₹1.50 ಲಕ್ಷ ದೇಣಿಗೆ ನೀಡಿದರು‌. ಈ ರಾಸುಗಳ ಸವಾಲು ನಡೆಯಿತು.

ತರವೇಹಾರಿ ಊಟ:

ಜಾತ್ರೆಗೆ ಆಗಮಿಸಿದ ಭಕ್ತಾಧಿಗಳಿಗೆ ಹಾಗೂ ಇಡೀ ಊರಿಗೆ ತರವೇಹಾರಿ ಊಟ ಊಣ ಬಡಿಸಲಾಯಿತು. ಭಕ್ತರು ರೊಟ್ಟಿ, ಚಪಾತಿ, ಬೂದಿ, ನುಗ್ಗೆ ಕಾಯಿ ಸಾರು, ಬದನೆಕಾಯಿ, ಹೆಸರು ಕಾಳು ಪಲ್ಯೆ, ಮೈಸೂರು ಪಾಕ್, ಬಾಳೆ ಹಣ್ಣು, ಕಲ್ಲಂಗಡಿ, ಮೊಸರನ್ನ, ಅನ್ನ, ಸಾರು ಸವಿದರು. ಸ್ವಚ್ಛತೆ ವಿಚಾರದಲ್ಲಂತೂ ಹೆಚ್ಚಿನ ಮುತುವರ್ಜಿ ವಹಿಸಿದ್ದು ಕಂಡು ಬಂತು. ಎಲ್ಲಿಯಾದರೂ ಊಟದ ತ್ಯಾಜ್ಯವಿದ್ದರೇ ಗ್ರಾಮದ ಹಲವರು ಹಿಂದೆ- ಮುಂದೆ ನೋಡದೇ ತಾವೇ ಎತ್ತಿ ಹಾಕಿ ಸ್ವಚ್ಛತೆಗೆ ಆದ್ಯತೆ ನೀಡುತ್ತಿರುವುದು ಸಾಮಾನ್ಯವಾಗಿತ್ತು.

ಶ್ರೀ ಗುಡ್ಡದ ಬಸವೇಶ್ವರ ದೇವಸ್ಥಾನವು ಗ್ರಾಮದ ಹೊರವಲಯದ ಗುಡ್ಡದಲ್ಲಿದೆ. ಈ ದೇವಸ್ಥಾನದಲ್ಲಿ ಈವರೆಗೆ ಸಮರ್ಪಕ ಮೂಲ ಸೌಲಭ್ಯಗಳಿರಲಿಲ್ಲ.

ಇದನ್ನು ನೋಡಿದ ಗ್ರಾಮದ ಶರಣಪ್ಪ ಜವಳಿ, ಮಲ್ಲಪ್ಪ ಚನ್ನಪ್ಪ ಬಳಗೇರಿ, ರವಿ ಬನ್ನಿಕೊಪ್ಪ, ಆನಂದ ಹೊಟ್ಟಿ, ವೈದ್ಯರಾದ ಶಿವಕುಮಾರ ಬಿಳಗಿಮಠ, ಮುತ್ತು ಉಪ್ಪಾರ, ವಿನಾಯಕ ಬಳಗೇರಿ ತಂಡದ ಸದಸ್ಯರು ಗ್ರಾಮಸ್ಥರೊಂದಿಗೆ ಒಡಗೂಡಿ ದೇವಸ್ಥಾನದ ಬಳಿ ಕುಡಿಯುವ ನೀರಿನ ವ್ಯವಸ್ಥೆಗಾಗಿ ನೂತನ ಟ್ಯಾಂಕ್ ನಿರ್ಮಾಣ, ಹದಗೆಟ್ಟಿದ್ದ ರಸ್ತೆ ಸರಿಪಡಿಸುವ ಮೂಲಕ ಗಮನ ಸೆಳೆದಿದ್ದಾರೆ. ಇದಕ್ಕೂ ಮುನ್ನ ದೇವಸ್ಥಾನಕ್ಕೆ ತೆರಳಲು ಸರಿಯಾದ ರಸ್ತೆಯ ವ್ಯವಸ್ಥೆಯು ಇಲ್ಲಿರಲಿಲ್ಲ. 200 ಟ್ರ್ಯಾಕ್ಟರ್ ಮಣ್ಣನ್ನು ತೆಗ್ಗು- ಗುಂಡಿಗಳಿಗೆ ಮುಚ್ಚಿ ರಸ್ತೆ ಹಾದಿ ಸರಿಪಡಿಸಲಾಗಿದೆ. ಇದೀಗ ಸುಲಭವಾಗಿ ದೇವಸ್ಥಾನಕ್ಕೆ ತೆರಳಬಹುದಾಗಿದೆ.

PREV

Recommended Stories

ಧರ್ಮಸ್ಥಳ ಗ್ರಾಮ ಕೇಸಿಂದ ಹಿಂದೆ ಸರಿದ ನ್ಯಾಯಾಧೀಶ
ಕಡಿಮೆ ಗುಣದ ಔಷಧಿ ಎರಡೇ ದಿನಕ್ಕೇ ಮಾರುಕಟ್ಟೆಯಿಂದ ವಾಪಸ್‌: ಸಚಿವ