ಸುದ್ದಿಗೋಷ್ಠಿಯಲ್ಲಿ ಮಾಜಿ ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ ವಾಗ್ದಾಳಿ ಕನ್ನಡಪ್ರಭ ವಾರ್ತೆ ಚಿತ್ರದುರ್ಗ ಬರ ನಿರ್ವಹಣೆಯಲ್ಲಿ ತನ್ನ ಜವಾಬ್ದಾರಿಯ ಮರೆತಿರುವ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಅನಾವಶ್ಯಕವಾಗಿ ಕೇಂದ್ರದ ಮೇಲೆ ಗೂಬೆ ಕೂರಿಸುತ್ತ, ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಆರೋಪಗಳ ಮಾಡುತ್ತಾ ಕಾಲಹರಣ ಮಾಡುತ್ತಿದೆ ಎಂದು ವಿಧಾನಸಭೆ ಮಾಜಿ ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ ವಾಗ್ದಾಳಿ ನಡೆಸಿದರು. ಮಂಗಳವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯದಲ್ಲಿ ಬರ ಆವರಿಸಿದ್ದು ತುರ್ತು ಪರಿಹಾರಗಳ ಬಗ್ಗೆ ಉದಾಸೀನ ತೋರಲಾಗಿದೆ. ಅಧಿಕಾರಿ ಹಂಚಿಕೆ ಸೂತ್ರ ಸಿದ್ದರಾಮಯ್ಯ ಅವರಿಗೆ ಮಾತ್ರ ಗೊತ್ತಿದ್ದು ತಮ್ಮ ಸ್ಥಾನ ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವ ಕುಮಾರ್ ನನಗ್ಯಾವಾಗ ಬಡ್ತಿ ಸಿಕ್ಕಿತು, ಮುಖ್ಯಮಂತ್ರಿ ಯಾವಾಗ ಆಗುತ್ತೇನೆ ಎಂಬ ಚಿಂತೆಯಲ್ಲಿ ಮುಳುಗಿದ್ದಾರೆಂದು ದೂರಿದರು. ವಿಷ ಜಂತುಗಳ ಹಾವಳಿ:
ಬಿಜೆಪಿ ಬರ ಅಧ್ಯಯನ ಮಾಡುತ್ತಿರುವ ವಿಷಯ ತಿಳಿಯುತ್ತಿದ್ದಂತೆ ರಾಜ್ಯದ ರೈತರಿಗೆ ಏಳುಗಂಟೆ ವಿದ್ಯುತ್ ಪೂರೈಕೆ ಮಾಡುವ ತೀರ್ಮಾನ ಕೈಗೊಳ್ಳಲಾಗಿದೆ. ರಾತ್ರಿ ವೇಳೆ ವಿದ್ಯುತ್ ಪೂರೈಕೆ ಮಾಡುತ್ತಿರುವ ಕಾರಣ ಹಾಗೂ ಸಿಂಗಲ್ ಫೇಸ್ ಬಂದ್ ಮಾಡಿದ್ದರಿಂದ ಚನ್ನಗಿರಿ ತಾಲೂಕಿನಲ್ಲಿ ಹಾವು ಕಡಿದ ಪ್ರಕರಣ ಗಳು ಹೆಚ್ಚಾಗಿದ್ದು ರೈತರು ಆತಂಕದಲ್ಲಿ ಇದ್ದಾರೆ. ಸಂತೇಬೆನ್ನೂರಿನಲ್ಲಿ ವಿವಿಧ ವಿಷ ಜಂತುಗಳಿಂದ ಕಡಿಸಿ ಕೊಂಡು ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. 160 ಪ್ರಕರಣಗಳು ದಾಖಲಾಗಿದ್ದು ಇಬ್ಬರು ಸಾವನ್ನಪ್ಪಿದ್ದಾರೆ ಎಂದರು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇದ್ದಾಗ ನೆರೆ ಹಾವಳಿಯಿಂದ ತೊಂದರೆಗೀಡಾದ ರೈತರಿಗೆ ತಕ್ಷಣವೇ ಪರಿಹಾರ ಬಿಡುಗಡೆ ಮಾಡಲಾಗಿತ್ತು. ಹಿಂದಿನ ಯುಪಿಎ ಸರ್ಕಾರ 2006 ರಿಂದ 2014 ರವರೆಗೆ ರಾಜ್ಯಕ್ಕೆ 2250 ಕೋಟಿ ರು.ನೀಡಿದೆ. ಆದರೆ ಮೋದಿ ಸರ್ಕಾರ ರಾಜ್ಯಕ್ಕೆ 13,488 ಕೋಟಿ ನೀಡುತ್ತಿದೆ. ಆದರೆ ತೀವ್ರ ಬರಗಾಲವಿದ್ದರೂ ರಾಜ್ಯ ಸರ್ಕಾರ ಎಚ್ಚರ ತಪ್ಪಿದ್ದು ರೈತರಿಗೆ ಪರಿಹಾರ ನೀಡುವುದ ಬಿಟ್ಟು ಕೇಂದ್ರದ ಮೇಲೆ ಆರೋಪ ಮಾಡುತ್ತ ಕಾಲ ಕಳೆಯುತ್ತಿದೆ. ತೀವ್ರ ಬರವಿದ್ದರೂ ಒಬ್ಬ ಸಚಿವರೂ ಕೂಡಾ ಪ್ರವಾಸ ಕೈಗೊಂಡು ಜನರ ಸಮಸ್ಯೆ ಆಲಿಸಿಲ್ಲ. ಬಿಜೆಪಿ ಪ್ರವಾಸ ಕೈಗೊಂಡ ನಂತರ ಜಿಲ್ಲಾವಾರು ಹಣ ಬಿಡುಗಡೆ ಮಾಡಿದೆ. ಸಚಿವರು ಅಧಿಕಾರಿಳ ಸಭೆ ಮಾಡುತ್ತಿದ್ದಾರೆಂದು ಕಾಗೇರಿ ಹೇಳಿದರು. ಬರದಿಂದಾಗಿ ಕೆಲವು ಕಡೆ ಕೃಷಿ ಕಾರ್ಮಿಕರು ಗುಳೇ ಹೋಗುತ್ತಿದ್ದಾರೆ. ಬರದ ತೀವ್ರತೆ ಇನ್ನಿಲ್ಲದಂತೆ ಕಾಡಿದೆ. ಬರ ಅಧ್ಯಯನದ ನಂತರ ರಾಜ್ಯದ ಮುಖ್ಯಸ್ಥರಿಗೆ ಈ ಸಂಬಂಧ ವರದಿ ಸಲ್ಲಿಸಲಾಗುವುದು. ನಂತರ ಕೇಂದ್ರದ ಗಮನಕ್ಕೂ ತರಲಾಗುವುದು. ಈಗಾಗಲೇ ಕೇಂದ್ರ ಸರ್ಕಾರ ತಜ್ಞರ ತಂಡ ಕಳಿಸಿ ಬರ ಅಧ್ಯಯನ ನಡೆಸಿ ವರದಿ ಪಡೆದಿದೆ ಎಂದರು. ಮಾಜಿ ಶಾಸಕ ತಿಪ್ಪಾರೆಡ್ಡಿ ಮಾತನಾಡಿ, ಈರುಳ್ಳಿ ದರ ಗಗನಕ್ಕೇರುತ್ತಿರುವುದ ಗಮನಿಸಿ ಪ್ರಧಾನಿ ನರೇಂದ್ರ ಮೋದಿ ಗ್ರಾಹಕರಿಗೆ ಕೈ ಗೆಟುಕುವ ದರದಲ್ಲಿ ಈರುಳ್ಳಿ ನೀಡುತ್ತಿದ್ದಾರೆ. ಗೋದಿ ಹಿಟ್ಟು ಕೊಡುವ ಕಾರ್ಯಕ್ಕೂ ಚಾಲನೆ ನೀಡಿದ್ದಾರೆ ಎಂದರು.ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ್, ಶಾಸಕ ಎಂ.ಚಂದ್ರಪ್ಪ, ಬಿ.ಪಿ.ಹರೀಶ್,ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್, ಬಿಜೆಪಿ ಜಿಲ್ಲಾಧ್ಯಕ್ಷ ಮುರುಳಿ, ಯುವ ಮುಖಂಡ ಅನಿತ್ ಕುಮಾರ್, ರೈತ ಮೋರ್ಚಾದ ಉಪಾಧ್ಯಕ್ಷರಾದ ದುಂಡಪ್ಪ ಬಂಡವಾಡ, ಸಂಪತ್ ಕುಮಾರ್, ವೆಂಕಟೇಶ್ ಯಾದವ್, ನರೇಂದ್ರ ಹೊನ್ನಾಳ್, ಮಾಧುರಿ ಗಿರೀಶ್, ದಗ್ಗೆ ಶಿವಪ್ರಕಾಶ್, ನಾಗರಾಜ್ ಬೇದ್ರೆ, ಭಾರ್ಗವಿ ದ್ರಾವಿಡ್, ನವೀನ್ ಚಾಲುಕ್ಯ, ಉಪಸ್ಥಿತರಿದ್ದರು.