ಮಿಷನ್ ವಿದ್ಯಾಕಾಶಿಗಾಗಿ ಬೇಸ್‌ಲೈನ್‌ ಪರೀಕ್ಷೆ ಯಶಸ್ವಿ

KannadaprabhaNewsNetwork | Published : Aug 29, 2024 12:55 AM

ಸಾರಾಂಶ

ವಿದ್ಯಾಕಾಶಿ ಎಂದು ಹೆಸರು ಪಡೆದಿದ್ದ ಧಾರವಾಡ ಜಿಲ್ಲೆಯು ಇತ್ತೀಚಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಗಣನೀಯ ಕುಸಿತ ಕಾಣುತ್ತಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಡಳಿತ ಮಿಷನ್ ವಿದ್ಯಾಕಾಶಿ ಯೋಜನೆ ಮೂಲಕ ಮತ್ತೆ ಮೊದಲಿದ್ದ ಸ್ಥಾನ ಪಡೆಯಲು ಮುಂದಾಗಿದೆ. ಇದರ ಅಂಗವಾಗಿ ಇದೀಗ ಬೇಸ್‌ಲೈನ್‌ ಪರೀಕ್ಷೆ ನಡೆಸಿದೆ.

ಧಾರವಾಡ:

ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಮತ್ತು ಶೈಕ್ಷಣಿಕ ಗುಣಮಟ್ಟದ ಸುಧಾರಣೆಗೆ ಮಿಷನ್ ವಿದ್ಯಾಕಾಶಿ ಯೋಜನೆ ಮೂಲಕ ವಿಶಿಷ್ಠ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಮುಂದುವರಿದ ಭಾಗವಾಗಿ ಜಿಲ್ಲಾಡಳಿತವು ಬುಧವಾರ ಜಿಲ್ಲೆಯ ಎಲ್ಲ ಪ್ರೌಢಶಾಲೆಗಳಲ್ಲಿ ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಏಕಕಾಲಕ್ಕೆ ಬೋರ್ಡ್‌ ಪರೀಕ್ಷೆ ಮಾದರಿಯಲ್ಲಿ ಬೇಸ್‌ಲೈನ್ ಪರೀಕ್ಷೆ ಆಯೋಜಿಸಿತ್ತು.

ನವಲೂರ ಸರ್ಕಾರಿ ಪ್ರೌಢಶಾಲೆಯಲ್ಲಿ ಪರೀಕ್ಷೆ ವಿಧಾನ ಪರಿಶೀಲಿಸಿದ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್, ಶಿಕ್ಷಣ ಇಲಾಖೆ ಹಾಗೂ ಜಿಲ್ಲಾಡಳಿತದ ಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಪರೀಕ್ಷಾ ಸಮಯದಲ್ಲಿ ಬೆಳಗ್ಗೆ ನವಲೂರ ಪ್ರೌಢಶಾಲೆಗೆ ಜಿಲ್ಲಾಧಿಕಾರಿಗಳೊಂದಿಗೆ ಭೇಟಿ ನೀಡಿದ ಸಚಿವರು, ಪ್ರಶ್ನೆ ಪತ್ರಿಕೆ ಸ್ವರೂಪ, ಕಠಿಣತೆ ಹಾಗೂ ಪರೀಕ್ಷೆಯ ಬಗ್ಗೆ ವಿದ್ಯಾರ್ಥಿಗಳ ಅಭಿಪ್ರಾಯ ಪಡೆದರು.

ನಂತರ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿ, 10ನೇ ತರಗತಿಯ ಪಠ್ಯಕ್ರಮದಲ್ಲಿ ಕೌಶಲ್ಯಭರಿತ ತರಬೇತಿ ನೀಡುವ ಮತ್ತು ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗುವ ಅಂಶಗಳು ಸೇರಬೇಕು. ಶಿಕ್ಷಣದ ನಂತರ ವಿದ್ಯಾರ್ಥಿ ಸ್ವಾವಲಂಬಿ ಆಗುವಂತೆ ರೂಪಿಸುವ ಶಿಕ್ಷಣಬೇಕು ಎಂದ ಅವರು, ಶೈಕ್ಷಣಿಕ ವಲಯದ ಸಮಗ್ರ ಬದಲಾವಣೆಗೆ ಇಂತಹ ಕ್ರಮಗಳ ಅಗತ್ಯವಿದೆ ಎಂದರು.

ಜಿಲ್ಲಾಧಿಕಾರಿ ದಿವ್ಯಪ್ರಭು ಮಾತನಾಡಿ, ಬುಧವಾರದ ಪರೀಕ್ಷೆಯನ್ನು ಜಿಲ್ಲೆಯ 466 ಪ್ರೌಢಶಾಲೆಗಳ 1262 ಬ್ಲಾಕ್‌ಗಳಲ್ಲಿ ಏಕಕಾಲಕ್ಕೆ ಜರುಗಿಸಲಾಗಿದೆ. ಇದರಲ್ಲಿ ಕನ್ನಡ ಮಾಧ್ಯಮದ 270 ಪ್ರೌಢಶಾಲೆಗಳ 18482 ವಿದ್ಯಾರ್ಥಿಗಳು, ಇಂಗ್ಲಿಷ್‌ ಮಾಧ್ಯಮದ 166 ಪ್ರೌಢಶಾಲೆಗಳ 8967 ವಿದ್ಯಾರ್ಥಿಗಳು, ಉರ್ದು ಮಾಧ್ಯಮದ 24 ಪ್ರೌಢಶಾಲೆಗಳ 2500 ವಿದ್ಯಾರ್ಥಿಗಳು, ಹಿಂದಿ ಮಾಧ್ಯಮದ ಎರಡು ಪ್ರೌಢಶಾಲೆಗಳ 30 ವಿದ್ಯಾರ್ಥಿಗಳು ಮತ್ತು ತೆಲಗು ಮಾಧ್ಯಮದ ನಾಲ್ಕು ಪ್ರೌಢಶಾಲೆಗಳ 17 ವಿದ್ಯಾರ್ಥಿಗಳು ಸೇರಿ ಒಟ್ಟು ಐದು ಮಾಧ್ಯಮಗಳಲ್ಲಿ 27,625 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಇಂದಿನ ಬೇಸ್‌ಲೈನ್ ಪರೀಕ್ಷೆಗೆ ನೋಂದಾಯಿಸಿಕೊಂಡಿರುವ 13,783 ವಿದ್ಯಾರ್ಥಿಗಳು ಮತ್ತು 13,842 ವಿದ್ಯಾರ್ಥಿನಿಯರಲ್ಲಿ 2456 ವಿದ್ಯಾರ್ಥಿಗಳು ಗೈರಾಗಿದ್ದಾರೆ. ಗೈರಾಗಿರುವ ವಿದ್ಯಾರ್ಥಿಗಳ ಮನೆ ಭೇಟಿ, ಪಾಲಕರ ಸಭೆ ಆಯೋಜನೆ ಮೂಲಕ ಶಾಲೆಗೆ ನಿರಂತರವಾಗಿ ಬರುವಂತೆ ಜಿಲ್ಲಾಡಳಿತದಿಂದ ಪ್ರಯತ್ನ ಮಾಡಲಾಗುವುದು ಎಂದರು.

ಶಿಕ್ಷಣ ಇಲಾಖೆಯೊಂದಿಗೆ ಕಂದಾಯ, ಪಂಚಾಯತ್‌ರಾಜ್, ಪಿಡಬ್ಲ್ಯೂಡಿ, ಮಹಾನಗರ ಪಾಲಿಕೆ, ನಗರ ಸ್ಥಳೀಯ ಸಂಸ್ಥೆಗಳ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳು ಇಂದಿನ ಪರೀಕ್ಷೆಗೆ ಅಬರ್ಸರವರ್, ರೂಟ್ ಆಫೀಸರ್ ಆಗಿ ಕರ್ತವ್ಯ ನಿರ್ವಹಿಸಿದರು ಎಂದು ತಿಳಿಸಿದರು.

ಮೇಲುಸ್ತುವಾರಿ ಸಮಿತಿ ಅಧ್ಯಕ್ಷರಾದ ಉಪವಿಭಾಗಾಧಿಕಾರಿ ಶಾಲಂ ಹುಸೇನ್, ತಹಸೀಲ್ದಾರ್‌ ಡಿ.ಎಚ್. ಹೂಗಾರ, ಮಿಷನ್ ವಿದ್ಯಾಕಾಶಿ ಶೈಕ್ಷಣಿಕ ಸಮಿತಿ ಅಧ್ಯಕ್ಷ ಪ್ರೊ. ಎಸ್.ಎಂ. ಶಿವಪ್ರಸಾದ, ಬೇರೆ ಬೇರೆ ಸಮಿತಿಗಳ ಸದಸ್ಯರಾದ ಪ್ರಕಾಶ ಹಳಪೇಟ, ಎಸ್.ಎಂ. ಉದಯಶಂಕರ, ಮಹೇಶ ಮಾಸಾಳ, ಡಿಡಿಪಿಐ ಎಸ್.ಎಸ್. ಕೆಳದಿಮಠ, ಬಿಇಒಗಳಾದ ಅಶೋಕ ಸಿಂದಗಿ, ಉಮೇಶ ಬೊಮ್ಮಕ್ಕನವರ, ರಾಮಕೃಷ್ಣ ಸದಲಗಿ, ಚನ್ನಪ್ಪ ಗೌಡ, ಮಹಾದೇವಿ ಬಸಾಪುರ, ಮಹಾದೇವಿ ಮಾಡಲಗೇರಿ, ಎಸ್.ಬಿ. ಮಲ್ನಾಡ ಇದ್ದರು.

Share this article