ವಸತಿ ನಿಲಯದಲ್ಲಿ ಮೂಲಭೂತ ಸಮಸ್ಯೆ: ವಿದ್ಯಾರ್ಥಿಗಳ ಧರಣಿ

KannadaprabhaNewsNetwork |  
Published : Sep 02, 2026, 03:45 AM IST
ಕೊಪ್ಪಳ ನಗರದ ಡಾ. ಬಿ.ಆರ್. ಅಂಬೇಡ್ಕರ್ ಎಸ್‌ಸಿ-4 ವಸತಿ ನಿಲಯದ ವಿದ್ಯಾರ್ಥಿಗಳು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ಡಾ. ಬಿ.ಆರ್. ಅಂಬೇಡ್ಕರ್ ಎಸ್‌ಸಿ-4 ವಸತಿ ನಿಲಯದ ವಿವಿಧ ಮೂಲಭೂತ ಸಮಸ್ಯೆಗಳನ್ನು ಕೂಡಲೇ ಬಗೆಹರಿಸುವಂತೆ ಆಗ್ರಹಿಸಿ ವಿದ್ಯಾರ್ಥಿಗಳು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಕೊಪ್ಪಳ: ನಗರದ ಡಾ. ಬಿ.ಆರ್. ಅಂಬೇಡ್ಕರ್ ಎಸ್‌ಸಿ-4 ವಸತಿ ನಿಲಯದ ವಿವಿಧ ಮೂಲಭೂತ ಸಮಸ್ಯೆಗಳನ್ನು ಕೂಡಲೇ ಬಗೆಹರಿಸುವಂತೆ ಆಗ್ರಹಿಸಿ ವಿದ್ಯಾರ್ಥಿಗಳು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಬೆಳಗ್ಗೆ 10.30ಕ್ಕೆ ಆರಂಭವಾದ ಪ್ರತಿಭಟನೆ ಸುಮಾರು ಎರಡು ಗಂಟೆಗಳ ಕಾಲ ನಡೆಯಿತು. ವಿದ್ಯಾರ್ಥಿಗಳು ತಮ್ಮ ಸಮಸ್ಯೆಗಳನ್ನು ಆಲಿಸಲು ಅಧಿಕಾರಿಗಳಿಗಾಗಿ ಕಾದರೂ ಯಾವುದೇ ಅಧಿಕಾರಿ ಸ್ಥಳಕ್ಕೆ ಆಗಮಿಸದಿರುವುದರಿಂದ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದ ಆನಂತರ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದರು.

ಅಧಿಕಾರಿಗಳು ವಿದ್ಯಾರ್ಥಿಗಳ ಸಮಸ್ಯೆಗಳನ್ನು ಸಮರ್ಪಕವಾಗಿ ಆಲಿಸದೆ ಕೇವಲ ಮನವಿ ಸ್ವೀಕರಿಸಿ ತೆರಳಲು ಮುಂದಾದಾಗ ವಿದ್ಯಾರ್ಥಿಗಳು ವಿರೋಧ ವ್ಯಕ್ತಪಡಿಸಿ, ಸಮಸ್ಯೆಗಳ ಕುರಿತು ಚರ್ಚಿಸಿ ಪರಿಹಾರದ ಭರವಸೆ ನೀಡುವಂತೆ ಪಟ್ಟು ಹಿಡಿದರು.

ವಸತಿ ನಿಲಯದಲ್ಲಿ ಕಳೆದ ಮೂರು-ನಾಲ್ಕು ತಿಂಗಳಿಂದ ಸೋಪ್ ಕಿಟ್ ನೀಡಿಲ್ಲ. ಶುದ್ಧ ಕುಡಿಯುವ ನೀರಿನ ಸಮಸ್ಯೆಯಿದ್ದು, ನೀರಿನ ಸಂಪನ್ನು ಸಮರ್ಪಕವಾಗಿ ಸ್ವಚ್ಛಗೊಳಿಸದ ಪರಿಣಾಮ ಹಲವು ವಿದ್ಯಾರ್ಥಿಗಳಿಗೆ ಕೈ-ಕಾಲುಗಳಲ್ಲಿ ತುರಿಕೆ ಹಾಗೂ ಅಲರ್ಜಿ ಕಾಣಿಸಿಕೊಂಡಿದೆ ಎಂದು ದೂರಿದರು. ವಿದ್ಯಾರ್ಥಿಗಳಿಗೆ ನೀಡಬೇಕಾದ ಸ್ಪೋರ್ಟ್ಸ್ ಕಿಟ್‌ಗಳೂ ಇನ್ನೂ ದೊರೆತಿಲ್ಲ. ಗ್ರಂಥಾಲಯ ಹಾಗೂ ವಸತಿ ನಿಲಯದ ಸ್ವಚ್ಛತೆ ಸೇರಿದಂತೆ ಹಲವು ಮೂಲಭೂತ ಸಮಸ್ಯೆಗಳು ಬಗೆಹರಿಯದೆ ಉಳಿದಿವೆ ಎಂದು ಆರೋಪಿಸಿದರು.

ವಸತಿ ನಿಲಯದ ವಾರ್ಡನ್ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಆಲಿಸುತ್ತಿಲ್ಲ ಹಾಗೂ ನಿಗದಿತ ಸಮಯಕ್ಕೆ ವಸತಿ ನಿಲಯಕ್ಕೆ ಭೇಟಿ ನೀಡುತ್ತಿಲ್ಲ. ಹೀಗಾಗಿ ಸಮಸ್ಯೆಗಳು ಮುಂದುವರಿದಿದ್ದು, ವಾರ್ಡನ್ ಅವರನ್ನು ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಗೆ ಸ್ಪಂದಿಸಿದ ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಅಂಜನಪ್ಪ ಅವರು, ವಿದ್ಯಾರ್ಥಿಗಳಿಗೆ ಸೋಪ್ ಹಾಗೂ ಕಿಟ್ ಬಾಕ್ಸ್‌ಗಳನ್ನು ನೀಡುವುದಾಗಿ, 15 ದಿನಗಳೊಳಗೆ ಸ್ಪೋರ್ಟ್ಸ್ ಕಿಟ್‌ಗಳನ್ನು ಒದಗಿಸುವುದಾಗಿ ಭರವಸೆ ನೀಡಿದರು. ಉಳಿದ ಸಮಸ್ಯೆಗಳನ್ನೂ ಪರಿಶೀಲಿಸಿ ಪರಿಹರಿಸುವುದಾಗಿ ತಿಳಿಸಿದರು. ಅಧಿಕಾರಿಗಳ ಭರವಸೆ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ಕೈಬಿಟ್ಟರು. ಎಐಡಿವೈಒ ಹೋರಾಟಗಾರ ಶರಣು ಗಡ್ಡಿ, ವಿದ್ಯಾರ್ಥಿ ಮುಖಂಡ ಪ್ರದೀಪ್, ವಿದ್ಯಾರ್ಥಿಗಳಾದ ದುರುಗೇಶ್ ಎಂ., ಶರಣಬಸವ, ಮಲ್ಲಿಕಾರ್ಜುನ, ಪರಶುರಾಮ, ಶ್ರೀಕಾಂತ, ಕೋಟೇಶ್, ಸುಭಾಸ್, ಭಾಗೇಶ್, ಶರಣಪ್ಪ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕ್ರೀಡೆಗೆ ಹೆಚ್ಚಿನ ಆದ್ಯತೆ ಉತ್ತಮ ಬೆಳವಣಿಗೆ: ಸಿ.ಎಲ್.ಸುಬ್ಬಯ್ಯ
ಮೌಂಟ್ ಫುಜಿ ಶಿಖರದಲ್ಲಿ ಹಾರಿದ ತ್ರಿವರ್ಣ ಧ್ವಜ