ಸ್ಕೇಟಿಂಗ್‌ ಮೈದಾನದ ದಾರಿ ನುಂಗಿದ ಬಾಸ್ಕೆಟ್‌ ಬಾಲ್‌ ಮೈದಾನ

KannadaprabhaNewsNetwork |  
Published : Feb 04, 2026, 02:15 AM IST
ಧಾರವಾಡದ ಆರ್‌.ಎನ್‌. ಕ್ರೀಡಾಂಗಣಕ್ಕೆ ಹೊಂದಿಕೊಂಡು ಸ್ಕೇಟಿಂಗ್‌ ಮೈದಾನದ ದಾರಿ ಮಧ್ಯೆ ನಿರ್ಮಿಸಿರುವ ಹೊಸ ಮೈದಾನ. | Kannada Prabha

ಸಾರಾಂಶ

ನೇರ, ಸರಳವಾಗಿದ್ದ ಜಾಗದಲ್ಲಿ ಬಾಸ್ಕೆಟ್‌ ಬಾಲ್‌ ಮೈದಾನ ನಿರ್ಮಿಸಿದ್ದು, ಸ್ಕೇಟಿಂಗ್‌ ಮೈದಾನಕ್ಕೆ ಆರ್‌.ಎನ್. ಶೆಟ್ಟಿ ಕ್ರೀಡಾಂಗಣದ ಮೂಲಕ ಸುತ್ತು ಹಾಕಿ ಹೋಗುವ ಸ್ಥಿತಿ ಉಂಟಾಗಿದೆ. ಇದು ಮಕ್ಕಳು, ಪಾಲಕರಿಗೆ ಕಿರಿಕಿರಿಯಾಗಿದ್ದು, ಹಿಡಿಶಾಪ ಹಾಕುತ್ತಿದ್ದಾರೆ.

ಬಸವರಾಜ ಹಿರೇಮಠ

ಧಾರವಾಡ:

ಆರ್‌.ಎನ್‌. ಶೆಟ್ಟಿ ಕ್ರೀಡಾಂಗಣದ ಆವರಣದಲ್ಲಿ ಅವೈಜ್ಞಾನಿಕವಾಗಿ ಬಾಸ್ಕೆಟ್‌ ಬಾಲ್‌ ಮೈದಾನ ನಿರ್ಮಿಸಿದ ಪರಿಣಾಮ, ಇಲ್ಲಿಯ ಏಕೈಕ ಸ್ಕೇಟಿಂಗ್‌ ಮೈದಾನಕ್ಕೆ ಹೋಗುವ ದಾರಿಯೇ ಮುಚ್ಚಿದೆ. ಇದು ಮಕ್ಕಳು, ಪಾಲಕರ ಆಕ್ರೋಶಕ್ಕೂ ಕಾರಣವಾಗಿದೆ.

ಒಳಾಂಗಣ ಕ್ರೀಡಾಂಗಣದ ಎದುರು ಹಾಗೂ ಆರ್.ಎನ್‌. ಶೆಟ್ಟಿ ಕ್ರೀಡಾಂಗಣಕ್ಕೆ ಹೊಂದಿಕೊಂಡು 2017ರಲ್ಲಿ ₹ 50 ಲಕ್ಷ ವೆಚ್ಚದಲ್ಲಿ ಸ್ಕೇಟಿಂಗ್‌ ಮೈದಾನ ನಿರ್ಮಿಸಲಾಗಿತ್ತು. ನಿತ್ಯ ಹತ್ತಾರು ಸ್ಕೇಟರ್ಸ್‌ಗಳು ಇಲ್ಲಿ ತರಬೇತಿ ಸಹ ಪಡೆಯುತ್ತಾರೆ. ರಾಜ್ಯ, ರಾಷ್ಟ್ರಮಟ್ಟದಲ್ಲೂ ಸ್ಕೇಟರ್ಸ್‌ಗಳು ಸಾಧನೆ ಮಾಡಿದ್ದು, ಈ ಮೈದಾನ ನಿಷ್ಪ್ರಯೋಜಕ ಎನ್ನುವಂತೆ ಸ್ಕೇಟಿಂಗ್‌ ಮೈದಾನ ವಿಸ್ತರಿಸಲು ಮೀಸಲಿಟ್ಟ ಜಾಗದಲ್ಲಿ ಏಕಾಏಕಿ ಬಾಸ್ಕೆಟ್‌ ಬಾಲ್ ಮೈದಾನ ನಿರ್ಮಿಸುವ ಮೂಲಕ ಸ್ಕೇಟಿಂಗ್‌ ಮೈದಾನದ ದಾರಿಯನ್ನೇ ನುಂಗಿ ಹಾಕಿದೆ.

ಸ್ಕೇಟರ್ಸ್‌ಗಳ ಪಾಲಕರಿಂದ ಹಿಡಿಶಾಪ:

ನೇರ, ಸರಳವಾಗಿದ್ದ ಜಾಗದಲ್ಲಿ ಬಾಸ್ಕೆಟ್‌ ಬಾಲ್‌ ಮೈದಾನ ನಿರ್ಮಿಸಿದ್ದು, ಸ್ಕೇಟಿಂಗ್‌ ಮೈದಾನಕ್ಕೆ ಆರ್‌.ಎನ್. ಶೆಟ್ಟಿ ಕ್ರೀಡಾಂಗಣದ ಮೂಲಕ ಸುತ್ತು ಹಾಕಿ ಹೋಗುವ ಸ್ಥಿತಿ ಉಂಟಾಗಿದೆ. ಇದು ಮಕ್ಕಳು, ಪಾಲಕರಿಗೆ ಕಿರಿಕಿರಿಯಾಗಿದ್ದು, ಹಿಡಿಶಾಪ ಹಾಕುತ್ತಿದ್ದಾರೆ. ಕೆಲವರು ಸ್ಕೇಟಿಂಗ್‌ ಕ್ರೀಡೆಯಿಂದಲೇ ದೂರ ಉಳಿಯುವಂತಾಗಿದೆ.

ಕ್ರೀಡೆಗೆಲ್ಲಿದೆ ಉತ್ತೇಜನ?:

9 ವರ್ಷಗಳ ಹಿಂದೆ ನಿರ್ಮಿಸಿದ 100 ಮೀಟರ್‌ ಸ್ಕೇಟಿಂಗ್‌ ಮೈದಾನದಲ್ಲಿ ಈಗಾಗಲೇ ನೂರಾರು ಸ್ಕೇಟರ್ಸ್‌ಗಳು ಸಿದ್ಧವಾಗಿದ್ದಾರೆ. ರಾಜ್ಯ, ರಾಷ್ಟ್ರಮಟ್ಟದಲ್ಲಿ ಮತ್ತಷ್ಟು ಉತ್ಕಷ್ಟ ಸಾಧನೆ ತೋರಲು 200 ಮೀಟರ್‌ ಮೈದಾನದ ಬೇಡಿಕೆ ಇಡಲಾಗಿತ್ತು. ಸ್ಕೇಟಿಂಗ್‌ ಮೈದಾನದ ವಿಸ್ತರಣೆಗೆ ಕೊರತೆಯಾದ ಜಾಗವನ್ನು ಆರ್‌.ಎನ್‌. ಶೆಟ್ಟಿ ಕ್ರೀಡಾಂಗಣಕ್ಕೆ ಒತ್ತಿ ನಿಂತಿರುವ ಗೋಡೆಯನ್ನು ತುಸು ಕತ್ತರಿಸಿ ಜಾಗ ಮಾಡಿಕೊಡಲು ಈ ಬಗ್ಗೆ ಕ್ರೀಡಾ ಇಲಾಖೆ, ಮಹಾನಗರ ಪಾಲಿಕೆಗೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಲಿಲ್ಲ. ಇದೀಗ ನಗರದಲ್ಲಿ ಈಗಾಗಲೇ ನಾಲ್ಕೈದು ಬಾಸ್ಕೆಟ್‌ ಬಾಲ್‌ ಮೈದಾನಗಳಿದ್ದರೂ ಸ್ಕೇಟಿಂಗ್‌ ಮೈದಾನದ ಎದುರು ಅವೈಜ್ಞಾನಿಕವಾಗಿ ಮತ್ತೊಂದು ಮೈದಾನ ನಿರ್ಮಿಸಿದ್ದು ಯಾವ ಪುರುಷಾರ್ಥಕ್ಕೆ ಎಂದು ಸ್ಕೇಟರ್ಸ್ ಪಾಲಕರು ಪ್ರಶ್ನಿಸುತ್ತಾರೆ.

ಕ್ರೀಡೆಗಿಂತ ಹೊಸ ಯೋಜನೆಗೆ ಬೆಲೆ?:

ಧಾರವಾಡದಲ್ಲಿ ಕ್ರೀಡೆಗಳಿಗಿಂತ ಹೊಸ ಹೊಸ ಯೋಜನೆಗಳಿಗೆ ಮಹತ್ವ ಜಾಸ್ತಿ ಎನ್ನುವುದಕ್ಕೆ ಇದೊಂದು ಮಹತ್ವದ ಸಾಕ್ಷಿಯಾಗಿದೆ. ₹ 50 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಸ್ಕೇಟಿಂಗ್‌ ಮೈದಾನದ ಪ್ರವೇಶ ಹಾಗೂ ಸ್ಪರ್ಧೆ ನಡೆದಾಗ ಬಳಕೆಯಾಗುವ ಜಾಗದಲ್ಲಿ ಮತ್ತೊಂದು ಮೈದಾನದ ಅಗತ್ಯತೆ ಇತ್ತಾ? ಸರ್ಕಾರದ ಹಣವನ್ನು ಹೀಗೂ ಪೋಲು ಮಾಡಬಹುದು ಎಂಬುದಕ್ಕೆ ಉತ್ತಮ ಉದಾಹರಣೆಯಾಗಿ ನಿಲ್ಲುತ್ತದೆ. ಸ್ಕೇಟಿಂಗ್‌ ಮೈದಾನಕ್ಕೆ ಹೋಗಲು ತಾತ್ಕಾಲಿಕವಾಗಿ ಕ್ರೀಡಾಂಗಣದ ತುಸು ಗೋಡೆ ಒಡೆದು ದಾರಿ ಮಾಡಿಕೊಡಲಾಗುವುದು. ಜತೆಗೆ 200 ಮೀಟರ್‌ ಸ್ಕೇಟಿಂಗ್‌ ಮೈದಾನಕ್ಕೆ ಜಾಗ ಹುಡುಕುತ್ತಿದ್ದು, ಶೀಘ್ರದಲ್ಲಿ ಮಂಜೂರಾತಿ ಆಗಲಿದೆ. ಜತೆಗೆ ಕ್ರೀಡಾಂಗಣದಲ್ಲಿ ₹ 1 ಕೋಟಿ ವೆಚ್ಚದಲ್ಲಿ ಒಳಾಂಗಣ ಇಂಡೋರ್‌ ಜಿಮ್‌ ಹಾಗೂ ಕುಸ್ತಿ ಮೈದಾನ ನಿರ್ಮಿಸಲು ಟೆಂಡರ್‌ ಕರೆಯಲಾಗುತ್ತಿದೆ.

ಸದಾನಂದ ಅಮರಾಪೂರ, ಸಹಾಯಕ ನಿರ್ದೇಶಕರು, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಜಿಲ್ಲಾ ಕ್ರೀಡಾಂಗಣಕ್ಕೆ ಬೇಕು ಸೌಕರ್ಯ...

ಧಾರವಾಡದ ಹೃದಯ ಭಾಗದಲ್ಲಿರುವ ಆರ್‌.ಎನ್‌. ಶೆಟ್ಟಿ ಕ್ರೀಡಾಂಗಣಕ್ಕೆ ಬೆಳಗಿನ ಜಾವ ಮತ್ತು ಸಂಜೆ ವಾಕಿಂಗ್, ಜಾಗಿಂಗ್, ಕ್ರೀಡಾ ತರಬೇತಿಗೆ ನೂರಾರು ಕ್ರೀಡಾಪಟುಗಳು, ಸಾರ್ವಜನಿಕರು ಮಹಿಳೆಯರು, ವೃದ್ಧರು ಈ ಕ್ರೀಡಾಂಗಣ ಬಳಸುತ್ತಾರೆ. ಗಣರಾಜ್ಯೋತ್ಸವ, ಸ್ವಾತಂತ್ರ್ಯೋತ್ಸವ ಅಂತಹ ರಾಷ್ಟ್ರೀಯ ಕಾರ್ಯಕ್ರಮಗಳು ಇಲ್ಲಿಯೇ ನಡೆಯುತ್ತವೆ. ಆದರೆ, ಕ್ರೀಡಾಂಗಣದಲ್ಲಿನ ಸೌಕರ್ಯಗಳು ಮಾತ್ರ ತೀರಾ ಕಡಿಮೆ. ಅಗತ್ಯತೆಗೆ ತಕ್ಕಷ್ಟು ವ್ಯಾಯಾಮದ ಉಪಕರಣಗಳಿಲ್ಲ. ಪುರುಷ, ಮಹಿಳೆಯರಿಗೆ ತಲಾ ಒಂದೊಂದು ಶೌಚಾಲಯಗಳಿವೆ. ದೊಡ್ಡ ಸಂಖ್ಯೆಯಲ್ಲಿ ಜನರು ಬಂದಾಗ ತೀವ್ರ ಸಮಸ್ಯೆಗಳಾಗಿದ್ದು, ಕ್ರೀಡಾಂಗಣಕ್ಕೆ ಇನ್ನೂ ಹೆಚ್ಚಿನ ಸೌಲಭ್ಯಗಳ ಅಗತ್ಯ ಇದೆ ಎಂದು ಧಾರವಾಡ ಜನಜಾಗೃತಿ ಅಭಿಯಾನ ಸರ್ಕಾರಕ್ಕೆ ಆಗ್ರಹಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿಕ್ಷಣದ ಜೊತೆಗೆ ವೃತ್ತಿಪರ ಕೌಶಲ್ಯ ಅಗತ್ಯ
ಪಂ.ದೀನದಯಾಳ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನದ ಯೋಜನಾ ಸಭೆ