- ಶೆಟ್ಟಿಕೊಪ್ಪ ಗಣಪತಿ ಪೆಂಡಾಲ್ ನಲ್ಲಿ ಸಂಜೀವಿನಿ ಒಕ್ಕೂಟದ ಮಾಸಿಕ ಸಂತೆ ಉದ್ಘಾಟನೆ
ಕಡಹಿನ ಬೈಲು ಗ್ರಾಪಂ ಸಂಜೀವಿನಿ ಒಕ್ಕೂಟದಲ್ಲಿ 39 ಸ್ವ ಸಹಾಯ ಸಂಘಗಳಿವೆ ಎಂದು ಕಡಹಿನಬೈಲು ಗ್ರಾಮ ಪಂಚಾಯಿತಿ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ವಿಂಧ್ಯಾ ಹೆಗ್ಡೆ ತಿಳಿಸಿದರು.
ಶನಿವಾರ ತಾಲೂಕಿನ ಶೆಟ್ಟಿಕೊಪ್ಪದ ಗಣಪತಿ ಪೆಂಡಾಲ್ ನಲ್ಲಿ ಕಡಹಿನಬೈಲು ಗ್ರಾಪಂ ವ್ಯಾಪ್ತಿಯ ಸಂಜೀವಿನಿ ಒಕ್ಕೂಟದ ಮಾಸಿಕ ಸಂತೆ ಉದ್ಘಾಟನೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಇಂದು 20 ಕ್ಕೂ ಹೆಚ್ಚು ಸ್ವಸಹಾಯ ಸಂಘಗಳು ತಾವೇ ಸ್ವಂತವಾಗಿ ಬೆಳೆದ ತರಕಾರಿ, ಗೆಡ್ಡೆ ಗೆಣಸು, ಕುಶಲ ವಸ್ತುಗಳನ್ನು ಮಾಸಿಕ ಸಂತೆಯಲ್ಲಿ ತಂದು ಮಾರಾಟ ಮಾಡುತ್ತಿದ್ದಾರೆ. ಇದರಿಂದ ಸಂಘದ ಸದಸ್ಯರಿಗೆ ಆರ್ಥಿಕವಾಗಿ ಪ್ರಗತಿ ಸಾಧಿಸಲು ಸಾಧ್ಯವಾಗಿದೆ. ಮಹಿಳೆಯರು ಮನೆಯಲ್ಲೇ ಇದ್ದರೆ ಸಾಲದು. ಹೊರ ಪ್ರಪಂಚದ ಅರಿವು ಇರಬೇಕು. ಮಹಿಳೆಯರು ಆರ್ಥಿಕವಾಗಿ ಸಬಲೀಕರಣವಾಗಬೇಕು. ಮಹಿಳೆಯರಿಗೆ ವ್ಯವಹಾರದ ಜ್ಞಾನ ಸಿಗಬೇಕು ಎಂಬುದೇ ಮಾಸಿಕ ಸಂತೆ ಮೂಲ ಉದ್ದೇಶ ಎಂದರು.ಮುಖ್ಯ ಅತಿಥಿಯಾಗಿದ್ದ ಎನ್.ಆರ್.ಎಲ್.ಎಂ.ನ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಸುಬ್ರಮಣ್ಯ ಮಾತನಾಡಿ, ಮಾಸಿಕ ಸಂತೆಗಳು ಎನ್.ಆರ್.ಎಲ್.ಎಂ. ನ ಮುಖ್ಯ ಕಾರ್ಯಕ್ರಮ. ಸಂಜೀವಿನಿ ಒಕ್ಕೂಟದಲ್ಲಿ ಬರುವ ಸ್ವಸಹಾಯ ಸಂಘದ ಎಲ್ಲಾ ಸದಸ್ಯರು ಕೃಷಿ ಮತ್ತು ಕೃಷಿಯೇತರ ಉತ್ಪನ್ನಗಳನ್ನು ಮಾರಾಟ ಮಾಡಲು ಸೂಕ್ತ ವೇದಿಕೆ ಕಲ್ಪಿಸಲಾಗುವುದು. ಯಾವುದೇ ಮದ್ಯವರ್ತಿಗಳ ಹಾವಳಿ ಇರುವುದಿಲ್ಲ. ಇದೇ ಮಾಸಿಕ ಸಂತೆಗಳು ಮುಂದಿನ ದಿನಗಳಲ್ಲಿ ಹಳ್ಳಿಯ ಸಂತೆಗಳಾಗಿ ಬದಲಾವಣೆಯಾಗಬೇಕಾಗಿದೆ. ನಂತರ ಗ್ರಾಮಗಳಲ್ಲಿ ನಿರಂತರ ಸಂತೆ ನಡೆಯುವಂತೆ ಪ್ರೋತ್ಸಾಹಿಸಲಾಗುವುದು. ಆ ಮೂಲಕ ಸಂಘದ ಸದಸ್ಯರಿಗೆ ಆದಾಯೋತ್ಪನ್ನು ಚಟುವಟಿಕೆ ಕೈ ಗೊಳ್ಳಲು ಸಹಕಾರ ನೀಡಲಾಗುವುದು. ವಿವಿಧ ಸ್ಥಳಗಳಲ್ಲಿ ನಡೆಯುವ ಜಾತ್ರೆ, ಕೃಷಿ ಮೇಳ ,ಹಬ್ಬದ ಅಂಗವಾಗಿ ನಡೆಯುವ ಕಾರ್ಯಕ್ರಮಗಳಲ್ಲಿ ಸಂಘದ ಸದಸ್ಯರು ಮಳಿಗೆಗಳನ್ನು ಹಾಕಿ ತಾವೇ ಬೆಳೆದ ಉತ್ಪನ್ನಗಳನ್ನು ಮಾರಾಟ ಮಾಡಬಹುದು ಎಂದರು.
ಕಡಹಿನಬೈಲು ಗ್ರಾಪಂ ಅಧ್ಯಕ್ಷೆ ಲಿಲ್ಲಿ ಮಾತುಕುಟ್ಟಿ ಉದ್ಘಾಟಿಸಿದರು.ಅ ತಿಥಿಗಳಾಗಿ ಸದಸ್ಯರಾದ ಎ.ಬಿ.ಮಂಜುನಾಥ್, ಚಂದ್ರಶೇಖರ್,ವಾಣಿ ನರೇಂದ್ರ, ಪೂರ್ಣಿಮ, ಶೈಲಾ ಮಹೇಶ್,ಸಂಜೀವಿನಿ ಒಕ್ಕೂಟದ ಉಪಾಧ್ಯಕ್ಷೆ ಸುಮಿತ್ರ, ಎನ್.ಆರ್.ಎಲ್.ಎಂ ನ ವಲಯ ಮೇಲ್ವೀಚಾರಕ ಚೇತನ್, ಪಿ.ಆರ್.ಐ ಶೈನಿ, ಎಂ.ಬಿ.ಕೆ ಶಾಲಿ, ಪಶು ಸಖಿ ಮಾಲಿನಿ, ಕೃಷಿ ಸಖಿ ಪ್ರೀತಿ, ಎಲ್.ಸಿ.ಆರ್.ಪಿ ಸಲೀನಾ , ಚಂದ್ರಿಕಾ, ಕವನ ಉಪಸ್ಥಿತರಿದ್ದರು. ಪ್ರೀತಿ ಸ್ವಾಗತಿಸಿದರು.ಸಲೀನಾ ಕಾರ್ಯಕ್ರಮ ನಿರೂಪಿಸಿದರು.ಚಂದ್ರಿಕಾ ವಂದಿಸಿದರು.