ಇಂದು ಬಸ್ರೂರು ಸ್ವಾತಂತ್ರ್ಯ ದಿನ ಮಹೋತ್ಸವ: ಗೋವಾ ಸಿಎಂ ಭಾಗಿ

KannadaprabhaNewsNetwork | Published : Feb 13, 2025 12:46 AM

ಸಾರಾಂಶ

ಛತ್ರಪತಿ ಶ್ರೀ ಶಿವಾಜಿ ಅಭಿಮಾನಿ ಬಳಗದ ಆಯೋಜನೆಯಲ್ಲಿ ಗುರುವಾರ ಬಸ್ರೂರು ಸ್ವಾತಂತ್ರ್ಯ ದಿನ ಮಹೋತ್ಸವ ಬಸ್ರೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ನಡೆಯಲಿದೆ.

ಕನ್ನಡಪ್ರಭ ವಾರ್ತೆ ಉಡುಪಿ

ಛತ್ರಪತಿ ಶ್ರೀ ಶಿವಾಜಿ ಅಭಿಮಾನಿ ಬಳಗದ ಆಯೋಜನೆಯಲ್ಲಿ ಗುರುವಾರ ಬಸ್ರೂರು ಸ್ವಾತಂತ್ರ್ಯ ದಿನ ಮಹೋತ್ಸವ ಬಸ್ರೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ನಡೆಯಲಿದೆ.

ಸಂಘದ ಅಧ್ಯಕ್ಷ ಉಮೇಶ್‌ ಆಚಾರ್ಯ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿ, ಈ ಮಹೋತ್ಸವದಲ್ಲಿ ಗೋವಾದ ಮುಖ್ಯಮಂತ್ರಿ ಡಾ.ಪ್ರಮೋದ್‌ ಪಾಂಡುರಂಗ ರಾವ್‌ ಸಾವಂತ್‌ ಗೌರವ ಅತಿಥಿಯಾಗಿ ಭಾಗವಹಿಸಲಿದ್ದು, ದೇವಸ್ಥಾನದ ಆಡಳಿತ ಮೊಕ್ತೇಸರ ಬಿ. ಅಪ್ಪಣ್ಣ ಹೆಗ್ಡೆ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.

ಪುಣೆಯ ಭಾರತೀಯ ಸಂತಸಭಾದ ಸಂಘಟನಾ ಪ್ರಧಾನ ಕಾರ್ಯದರ್ಶಿ ಡಾ.ಸಂದೀಪ್‌ ರಾಜ್ ಮಹಾದೇವರಾವ್ ಮಹಿಂದ್, ಮೂಡ್ಲಕಟ್ಟೆ ಐಎಂಜೆ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಸಿದ್ದಾರ್ಥ ಶೆಟ್ಟಿ ಭಾಗವಹಿಸಲಿದ್ದಾರೆ. ಕೊಡಗಿನ ರಾಷ್ಟ್ರೀಯವಾದಿ ನಾಟಕಕಾರ ಅಡ್ಡಂಡ ಸಿ. ಕಾರ್ಯಪ್ಪ ದಿಕ್ಸೂಚಿ ಭಾಷಣ ಮಾಡಲಿದ್ದಾರೆ.

ಬೆಳಗ್ಗೆ 9 ಗಂಟೆಗೆ ದೇವಸ್ಥಾನದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಮಧ್ಯಾಹ್ನ 11.30ಕ್ಕೆ ದಾರ್ಮಿಕ ಸಭೆಯಲ್ಲಿ ಕಜಂಪಾಡಿ ಸುಬ್ರಹ್ಮಣ್ಯ ಭಟ್‌ ಪ್ರವಚನ ನೀಡಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಗಂಗೊಳ್ಳಿಯಿಂದ ಹಡಗಿನಲ್ಲಿ ಹೊರಟು, ಬಸ್ರೂರು ಹೊಳೆಬಾಗಿಲಿಗೆ ಬಂದು, ಅಲ್ಲಿಂದ ದೇವಸ್ಥಾನದವರೆಗೆ ಭವ್ಯ ಶೋಭಾಯಾತ್ರೆ ನಡೆಯಲಿದೆ. ನಂತರ 5.30ರಿಂದ ಸಭಾ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಡಾ.ಸಂದೀಪ್‌ರಾಜ್ ಮಹಾದೇವರಾವ್ ಮಹಿಂದ್, ಬಳಗದ ಕಾರ್ಯದರ್ಶಿ ರಾಜೇಶ್‌ ಜಿ. ಕೆಳಮನೆ, ಸಂಚಾಲಕರಾದ ಸುಧೀರ್ ಮೇರ್ಡಿ ಮತ್ತು ಸುರೇಶ್‌ ಕೃಷ್ಣ ನಾಯಕ್ ಇದ್ದರು.

................ಶಿವಾಜಿ 88 ಯುದ್ಧ ನೌಕೆಗಳೊಂದಿಗೆ ವಸುಪುರಕ್ಕೆ ಬಂದಿದ್ದ! 1525ರಲ್ಲಿ ವ್ಯಾಪಾರಕ್ಕಾಗಿ ಆಗಮಿಸಿದ ಡಚ್ಚರು ಮತ್ತು ಪೋರ್ಚುಗೀಸರು ವಸುಪುರ (ಈಗಿನ ಕುಂದಾಪುರ ತಾಲೂಕಿನ ಬಸ್ರೂರು) ಮತ್ತು ಸುತ್ತಲಿನ ಪ್ರದೇಶ ಅತಿಕ್ರಮಿಸಿಕೊಂಡರು. ಅವರನ್ನು ಎದರಿಸಲು ಸಾಧ್ಯವಾಗದ ಇಲ್ಲಿನ ಕೆಳದಿಯ ಸಾವಂತರು ಛತ್ರಪತಿ ಶಿವಾಜಿಯ ಸಹಾಯ ಯಾಚಿಸಿದರು.

ಶಿವಾಜಿಯು 1665ರಲ್ಲಿ 3 ದೊಡ್ಡ ಮತ್ತು 85 ಸಣ್ಣ ನೌಕೆಗಳಲ್ಲಿ 4000 ಸೈನಿಕರೊಂದಿಗೆ ಮಹಾರಾಷ್ಟ್ರದ ಸಿಂದೂದುರ್ಗದಿಂದ ಹೊರಟು ಬಸ್ರೂರಿಗೆ ಬಂದು ಫೆ.13ರಂದು ಫೋರ್ಚುಗೀಸರನ್ನು ಸೋಲಿಸಿ, ಬಸ್ರೂರು, ಭಟ್ಕಳ, ಕಾರವಾರ, ಹೊನ್ನಾವರಗಳನ್ನು ಗೆದ್ದು ಅವುಗಳನ್ನು ಕೆಳದಿ ಸಾಮಂತ ರಾಜಶೇಖರ ಅವರಿಗೆ ಮರಳಿ ಒಪ್ಪಿಸಿ, ಸೌಹಾರ್ದ ಮೆರೆದರು. ಈ ದಿನದ ನೆನಪಿಗೆ ಕಳೆದ 12 ವರ್ಷಗಳಿಂದ ಶಿವಾಜಿ ಅಭಿಮಾನಿ ಬಳಗವು ಗಂಗೊಳ್ಳಿಯಿಂದ ಬಸ್ರೂರುವರೆಗೆ ಹಡಗಿನಲ್ಲಿ ಶಿವಾಜಿಯ ಪುತ್ಥಳಿಗೆ ಶೋಭಾಯಾತ್ರೆ ನಡೆಸುತ್ತಾರೆ.

500 ವರ್ಷಗಳಷ್ಟು ಹಿಂದೆಯೇ ಶಿವಾಜಿಯು ನೌಕ ಶಾಸ್ತ್ರ ಮತ್ತು ಸಮುದ್ರ ಯುದ್ಧದಲ್ಲಿ ತಜ್ಞನಾಗಿದ್ದು, ಆತನ ಈ ಸಾಹಸದ ಬಗ್ಗೆ ಡಾ.ಸಂದೀಪ್‌ರಾಜ್ ಮಹಾದೇವರಾವ್ ಮಹಿಂದ್ ಅವರು ಅಧ್ಯಯನ ಮಾಡಿದ್ದು, ದಾಖಲೆಗಳನ್ನು ಸಂಗ್ರಹಿಸಿದ್ದಾರೆ.

Share this article