ಕಂದಾಯ ಇಲಾಖೆಯಲ್ಲಿ ಸಮಸ್ಯೆ: ರೈತರ ಪರದಾಟ

KannadaprabhaNewsNetwork | Published : Feb 13, 2025 12:45 AM

ಸಾರಾಂಶ

ಚಿಕ್ಕಮಗಳೂರು, ಕಂದಾಯ ಇಲಾಖೆಯಲ್ಲಿನ ಕೆಲವು ನಿಯಮದಿಂದಾಗಿ ರೈತರು ಪರದಾಡುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು, ಜನಪ್ರತಿ ನಿಧಿಗಳು, ಹೋರಾಟಗಾರರ ಹಾಗೂ ಅಧಿಕಾರಿಗಳ ಸಭೆ ಕರೆದು ಸಮಸ್ಯೆ ಬಗೆಹರಿಸಬೇಕು. ಇಲ್ಲದೆ ಹೋದರೆ ಮುಂದಿನ ದಿನಗಳಲ್ಲಿ ಹೋರಾಟ ರೂಪಿಸಲಾಗುವುದು ಎಂದು ಕಸ್ತೂರಿರಂಗನ್‌ ವರದಿ ವಿರೋಧಿ ಮತ್ತು ಮುಳ್ಳಯ್ಯನಗಿರಿ ಸಂರಕ್ಷಿತ ಮೀಸಲು ಪ್ರದೇಶ ವಿರೋಧಿ ಹೋರಾಟ ಸಮಿತಿ ಪ್ರಧಾನ ಸಂಚಾಲಕ ಎಸ್‌. ವಿಜಯಕುಮಾರ್‌ ಆಗ್ರಹಿಸಿದ್ದಾರೆ.

ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಹೋರಾಟಗಾರರ ವಿಶೇಷ ಸಭೆ ಕರೆಯಲು ಆಗ್ರಹ,

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಕಂದಾಯ ಇಲಾಖೆಯಲ್ಲಿನ ಕೆಲವು ನಿಯಮದಿಂದಾಗಿ ರೈತರು ಪರದಾಡುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು, ಜನಪ್ರತಿ ನಿಧಿಗಳು, ಹೋರಾಟಗಾರರ ಹಾಗೂ ಅಧಿಕಾರಿಗಳ ಸಭೆ ಕರೆದು ಸಮಸ್ಯೆ ಬಗೆಹರಿಸಬೇಕು. ಇಲ್ಲದೆ ಹೋದರೆ ಮುಂದಿನ ದಿನಗಳಲ್ಲಿ ಹೋರಾಟ ರೂಪಿಸಲಾಗುವುದು ಎಂದು ಕಸ್ತೂರಿರಂಗನ್‌ ವರದಿ ವಿರೋಧಿ ಮತ್ತು ಮುಳ್ಳಯ್ಯನಗಿರಿ ಸಂರಕ್ಷಿತ ಮೀಸಲು ಪ್ರದೇಶ ವಿರೋಧಿ ಹೋರಾಟ ಸಮಿತಿ ಪ್ರಧಾನ ಸಂಚಾಲಕ ಎಸ್‌. ವಿಜಯಕುಮಾರ್‌ ಆಗ್ರಹಿಸಿದ್ದಾರೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಫಾರಂ ನಂಬರ್‌ 50 ಹಾಗೂ 53ರಲ್ಲಿ ಅರ್ಜಿ ಸಲ್ಲಿಸಿದ ರೈತರಿಗೆ ಖುಷ್ಕಿ ಅಲ್ಲದೇ ಕಾಫಿ ಹಾಗೂ ತೋಟಗಾರಿಕೆ ಬೆಳೆಗಳ ಭೂಮಿಗೆ ಹಕ್ಕುಪತ್ರ ನೀಡಲಾಗುತ್ತಿತ್ತು. ಆದರೆ, ಇದೇ ಪ್ರದೇಶದಲ್ಲಿ ಫಾರಂ ನಂಬರ್‌ 57ರಡಿ ಸಲ್ಲಿಸಿರುವ ಅರ್ಜಿಗಳನ್ನು ಗೌಪ್ಯವಾಗಿ ವಜಾ ಮಾಡಲಾಗುತ್ತಿದೆ. ಇದೇ ರೀತಿಯಲ್ಲಿ ಮುಂದುವರಿದರೆ ಜಿಲ್ಲೆಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಕಂದಾಯ ಕಾಯ್ದೆ ಪ್ರಕಾರ ಭೂಮಿ ಮಂಜೂರು ಮಾಡಲು ನಗರಸಭೆ ವ್ಯಾಪ್ತಿಯಿಂದ 5 ಕಿ.ಮೀ. ಪುರಸಭಾ ವ್ಯಾಪ್ತಿಯಿಂದ 3 ಕಿ.ಮೀ. ಹಾಗೂ ನಗರಪಾಲಿಕೆ ವ್ಯಾಪ್ತಿಯಿಂದ 10 ಕಿ.ಮೀ. ಎಂಬ ನಿಬಂಧನೆ ವಿಧಿಸಲಾಗಿತ್ತು. ಇದು, ಗಾಳಿ ಮಾರ್ಗವೋ ಅಥವಾ ಭೂ ಮಾರ್ಗವೋ ಎಂಬ ನಿಖರ ಮಾಹಿತಿ ನೀಡಿಲ್ಲ ಎಂದರು.

ಭೂ ಮಾರ್ಗವಾಗಿ ಸುಮಾರು 15 ರಿಂದ 25 ಕಿ.ಮೀ.ಗಳ ದೂರವಿದ್ದರೂ ಸಹ ಗಾಳಿ ಮಾರ್ಗದ ನೆಪ ಹೇಳಿ ರೈತರ ಜಮೀನನ್ನು ಪೋಡಿ ಮಾಡಲು ನಿರಾಕರಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ದೂರಮಾಪನೆಯನ್ನು ಮಾಡುವಾಗ ಒಬ್ಬೊಬ್ಬ ಸರ್ವೆಯರ್‌ ತಮ್ಮದೇ ಆದ ರೀತಿಯಲ್ಲಿ ದೂರದ ಅಂಕಿ-ಅಂಶ ನೀಡಿ ಜನರನ್ನು ಮತ್ತು ಅಧಿಕಾರಿಗಳನ್ನು ದಿಕ್ಕು ತಪ್ಪಿಸುತ್ತಿ ದ್ದಾರೆ. ಈ ಬಗ್ಗೆ ಸರ್ವೆ ಇಲಾಖೆ ಮತ್ತು ತಹಸೀಲ್ದಾರ್‌ಗಳು ನಗರ ವ್ಯಾಪ್ತಿಗೆ ಬರುವ ಗಡಿಯನ್ನು ಅಧಿಕೃತವಾಗಿ ಸೂಚಿಸಿ ಗೊಂದಲ ನಿವಾರಿಸಬೇಕು ಎಂದು ಆಗ್ರಹಿಸಿದರು.

ಜಿಲ್ಲೆಯಲ್ಲಿ ತೆಗೆದುಕೊಳ್ಳಲಾಗಿದ್ದ ಕಂದಾಯ ಮತ್ತು ಅರಣ್ಯ ಭೂಮಿ ಜಂಟಿ ಸರ್ವೆ ಸಂಪೂರ್ಣವಾಗಿ ಸ್ಥಗಿತ ಗೊಂಡಿದೆ. ರೈತರ ಹಾಗೂ ನಿವೇಶನ ರಹಿತರ ಸಮಸ್ಯೆ ಮುಂದುವರಿದಿದೆ. ಈ ಬಗ್ಗೆ ಅಧಿಕಾರಿಗಳಿಂದ ಸ್ಪಷ್ಟ ಮಾಹಿತಿ ಪಡೆದು ಸೂಕ್ತ ಕ್ರಮ ವಹಿಸಬೇಕು. ಹಲವಾರು ಸರ್ವೆ ನಂಬರ್‌ಗಳಲ್ಲಿ ಅರಣ್ಯ ಭೂಮಿ ವಿಸ್ತೀರ್ಣ ಮತ್ತು ಕಂದಾಯ ಭೂಮಿ ಸರಿ ಹೊಂದಿದ್ದರೂ ಸಹ ಕಂದಾಯ ಇಲಾಖೆ ಭೂಮಿಗಳ ಪೋಡಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಅಡ್ಡಿಪಡಿಸುತ್ತಿದ್ದಾರೆ.

ಸೆಕ್ಷನ್‌ 4(1) ಮೀಸಲು ಅರಣ್ಯ ಪ್ರಸ್ತಾವನೆಯನ್ನು ಸುಮಾರು 70-80 ವರ್ಷಗಳ ವರೆಗೆ ಸೆಕ್ಷನ್‌ 17(1) ಅಂತಿಮ ಗೊಳಿಸದೇ ಈಗಲೂ ಕಂದಾಯ ಗೋಮಾಳ ಎಂದು ಪಹಣಿಗಳು ಬರುತ್ತಿದ್ದು, ಕಂದಾಯ ದಾಖಲೆಯಲ್ಲಿರುವ ಭೂಮಿಗಳ ಮೇಲಿನ ಕಂದಾಯ ವಹಿವಾಟಿಗೆ ಕಂದಾಯ ಇಲಾಖೆ ಅಧಿಕಾರಿಗಳನ್ನು ಅಮಾನತು ಮಾಡಿ ಆತ್ಮಸ್ಥೈರ್ಯ ಕುಗ್ಗಿಸ ಲಾಗುತ್ತಿದೆ. ಕೂಡಲೇ ಈ ಎಲ್ಲಾ ಸಮಸ್ಯೆಗಳ ನಿವಾರಣೆಗೆ ವಿಶೇಷ ಸಭೆ ಕರೆಯಬೇಕು ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಕಸ್ತೂರಿರಂಗನ್‌ ವಿರೋಧಿ ಮತ್ತು ಮುಳ್ಳಯ್ಯನಗಿರಿ ಸಂರಕ್ಷಿತ ಮೀಸಲು ಪ್ರದೇಶ ವಿರೋಧಿ ಸಮಿತಿ ಸಂಚಾಲಕ ಕೆ.ಕೆ. ರಘು, ಮುನ್ನಾ, ಧರ್ಮೇಶ್‌, ಮೈನ್ ಪಾಷಾ, ಭರತ್‌ ಹಾಗೂ ಮಹೇಶ್‌ ಉಪಸ್ಥಿತರಿದ್ದರು.

--- ಬಾಕ್ಸ್‌ ----ಇಂಡೀಕರಣಕ್ಕೆ ಅನಾನುಕೂಲ

ಇಂಡೀಕರಣ ಮಾಡಲು ರಾಜ್ಯ ಸರ್ಕಾರ ಜಾರಿಗೆ ತಂದಿರುವ ಹೊಸ ಸಾಫ್ಟ್‌ವೆರ್‌ ನ್ನು ಚಿಕ್ಕಮಗಳೂರು ಸೇರಿದಂತೆ ರಾಜ್ಯದಲ್ಲಿ ಕೆಲವು ತಾಲೂಕುಗಳಲ್ಲಿ ಪ್ರಾಯೋಗಿಕವಾಗಿ ಕಾರ್ಯರೂಪಕ್ಕೆ ತರಲಾಗಿದೆ. ಕಳೆದ ಮೂರು ತಿಂಗಳಿಂದ ಪೋಡಿ ನಂತರ ಪಹಣಿಯಲ್ಲಿ ಹೊಸ ನಂಬರ್‌ ಇಂಡೀಕರಣಕ್ಕೆ ಎಡಿಎಲ್‌ಆರ್‌ ಅವರಿಗೆ ನೀಡಲಾಗಿದೆ.

ಹೊಸ ಆಫ್‌ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಹೀಗಾಗಿ ಚಿಕ್ಕಮಗಳೂರು ತಾಲೂಕಿನಲ್ಲಿ 100ಕ್ಕೂ ಹೆಚ್ಚು ಕಡತಗಳು ವಿಲೇವಾರಿಯಾಗಿಲ್ಲ. ಸರ್ಕಾರ ಈ ಸಾಫ್ಟ್‌ವೇರ್‌ ಸರಿಯಾಗುವವರೆಗೆ ಹಿಂದಿನ ರೀತಿಯಲ್ಲೆ ಇಂಡೀಕರಣ ಮಾಡಲು ತಾತ್ಕಾಲಿಕವಾಗಿ ಅವಕಾಶ ನೀಡಬೇಕು ಎಂದು ಎಸ್‌. ವಿಜಯಕುಮಾರ್‌ ಒತ್ತಾಯಿಸಿದರು.

12 ಕೆಸಿಕೆಎಂ 1ಕಸ್ತೂರಿ ರಂಗನ್‌ ವರದಿ ವಿರೋಧಿ ಮತ್ತು ಮುಳ್ಳಯ್ಯನಗಿರಿ ಸಂರಕ್ಷಿತ ಮೀಸಲು ಪ್ರದೇಶ ವಿರೋಧಿ ಹೋರಾಟ ಸಮಿತಿಯ ಪ್ರಧಾನ ಸಂಚಾಲಕ ಎಸ್‌. ವಿಜಯಕುಮಾರ್ ಅವರು ಬುಧವಾರ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದರು.

Share this article