₹15 ಕೋಟಿ ವೆಚ್ಚದಲ್ಲಿ ರೇಷ್ಮೆ ಮೆಗಾ ಮಾರುಕಟ್ಟೆ ನಿರ್ಮಾಣ: ಸಚಿವ ಕೆ. ವೆಂಕಟೇಶ

KannadaprabhaNewsNetwork |  
Published : Feb 13, 2025, 12:45 AM IST
ಎಚ್12-ಆರ್‌ಎನ್‌ಆರ್2: | Kannada Prabha

ಸಾರಾಂಶ

ರಾಣಿಬೆನ್ನೂರು ತಾಲೂಕಿನ ಕೂನಬೇವು ಗ್ರಾಮದ ವ್ಯಾಪ್ತಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ನೂತನ ರೇಷ್ಮೆ ಮೆಗಾ ಮಾರುಕಟ್ಟೆ ಕಟ್ಟಡ ಕಾಮಗಾರಿಯನ್ನು ಇಲಾಖೆ ಸಚಿವ ಕೆ. ವೆಂಕಟೇಶ ಪರಿಶೀಲಿಸಿದರು.

ರಾಣಿಬೆನ್ನೂರು: ಉತ್ತರ ಕರ್ನಾಟಕ ಭಾಗದಲ್ಲಿ ರೇಷ್ಮೆ ಬೆಳೆ ಹೆಚ್ಚಾಗಿ ಬೆಳೆಯುತ್ತಿರುವುದರಿಂದ ಈ ಭಾಗದ ರೇಷ್ಮೆ ಬೆಳೆಗಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸುಮಾರು ₹15 ಕೋಟಿ ವೆಚ್ಚದ ರೇಷ್ಮೆ ಮೆಗಾ ಮಾರುಕಟ್ಟೆ ನಿರ್ಮಿಸಲಾಗುತ್ತಿದೆ ಎಂದು ಪಶುಸಂಗೋಪನೆ ಮತ್ತು ರೇಷ್ಮೆ ಇಲಾಖೆ ಸಚಿವ ಕೆ. ವೆಂಕಟೇಶ ಹೇಳಿದರು.

ತಾಲೂಕಿನ ಕೂನಬೇವು ಗ್ರಾಮದ ವ್ಯಾಪ್ತಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ನೂತನ ರೇಷ್ಮೆ ಮೆಗಾ ಮಾರುಕಟ್ಟೆ ಕಟ್ಟಡ ಕಾಮಗಾರಿಯನ್ನು ಬುಧವಾರ ವೀಕ್ಷಣೆ ಮಾಡಿ ಮಾತನಾಡಿದರು.ಉತ್ತರ ಕರ್ನಾಟಕ ಭಾಗದ ಸಾವಿರಾರು ರೇಷ್ಮೆ ಬೆಳೆಗಾರರು ತಮ್ಮ ರೇಷ್ಮೆ ಮಾರಾಟ ಮಾಡಲು ದೂರದ ರಾಮನಗರಕ್ಕೆ ಹೋಗುತ್ತಿದ್ದರು. ಇದರಿಂದ ಪ್ರಯಾಣ ವೆಚ್ಚ ಹಾಗೂ ರೇಷ್ಮೆ ಗುಣಮಟ್ಟ ಕಳೆದುಕೊಳ್ಳುವ ಸಂಭವ ಹೆಚ್ಚಾಗಿತ್ತು. ಆದ್ದರಿಂದ ಇಲ್ಲಿನ ರೈತರಿಗೆ ಅನುಕೂಲಕ್ಕಾಗಿ ಸರ್ಕಾರ ಹೊಸ ರೇಷ್ಮೆ ಮೆಗಾ ಮಾರುಕಟ್ಟೆ ನಿರ್ಮಾಣ ಮಾಡಲು ಮುಂದಾಯಿತು. ಅದರಂತೆ ಈಗಾಗಲೇ ತಾಲೂಕಿನ ಕೂನಬೇವು ಗ್ರಾಮದ ವ್ಯಾಪ್ತಿಯಲ್ಲಿ ಸುಮಾರು ಐದು ಎಕರೆ ಜಾಗದಲ್ಲಿ ಕಾಮಗಾರಿ ಪ್ರಾರಂಭವಾಗಿದ್ದು, ಒಂದು ವರ್ಷದೊಳಗೆ ಮುಕ್ತಾಯಗೊಂಡು ಲೋಕಾರ್ಪಣೆಗೊಳ್ಳಲಿದೆ ಎಂದರು.

ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ ಮಾತನಾಡಿ, ನಮ್ಮ ಹಾವೇರಿ ಜಿಲ್ಲೆಯಲ್ಲಿ ರೇಷ್ಮೆ ಮಾರುಕಟ್ಟೆ ನಿರ್ಮಾಣವಾಗುತ್ತಿರುವುದು ಈ ಭಾಗದ ರೇಷ್ಮೆ ಬೆಳಗಾರರಿಗೆ ವರದಾನವಾಗಲಿದೆ. ಕರ್ನಾಟಕದಲ್ಲಿ ಅತೀ ಹೆಚ್ಚು ರೇಷ್ಮೆ ಬೆಳೆ ಬೆಳೆಯುವಲ್ಲಿ ಮೂರನೇ ಸ್ಥಾನದಲ್ಲಿದೆ. ಈ ನಿಟ್ಟಿನಲ್ಲಿ ಸರ್ಕಾರ ಮಾರುಕಟ್ಟೆ ನಿರ್ಮಾಣಕ್ಕೆ ಆಧ್ಯತೆ ನೀಡಿದೆ. ಆದಷ್ಟು ಗುತ್ತಿಗೆದಾರರು ನಿಗದಿತ ಸಮಯದಲ್ಲಿ ಗುಣಮಟ್ಟದ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂದರು.

ಇದೇ ಸಂದರ್ಭದಲ್ಲಿ ರೇಷ್ಮೆ ನೂತನ ಕಟ್ಟಡ ನೀಲಿ ನಕ್ಷೆ ಹಾಗೂ ಕಟ್ಟಡ ಯೋಜನೆ ಕುರಿತು ಮಾಹಿತಿ ಪಡೆದುಕೊಂಡರು. ಉಳಿದ ಜಾಗದಲ್ಲಿ ಏನು ಮಾಡಬೇಕು ಎನ್ನುವುದರ ಬಗ್ಗೆ ಶಾಸಕರ ಜೊತೆ ಚರ್ಚೆ ನಡೆಸಿದರು.

ಸಚಿವರು ಭೇಟಿ ಸಮಯದಲ್ಲಿ ಮುಖಂಡರಾದ ಬಸವರಾಜ ಸವಣೂರು, ಸಂಜೀವ ಮೋಟೆಬೆನ್ನೂರು ಸೇರಿದಂತೆ ಗ್ರಾಪಂ ಸದಸ್ಯರು ಹಾಜರಿದ್ದರು.

ರೇಷ್ಮೆ ಇಲಾಖೆಯ ಉಪ ನಿರ್ದೇಶಕರಾದ ಎಂ.ಡಿ. ಪಾಟೀಲ, ತಾಲೂಕು ರೇಷ್ಮೆ ವಿಸ್ತರಣಾಧಿಕಾರಿ ನರ್ಮದಾ ಎಂ., ಸಹಾಯಕ ರೇಷ್ಮೆ ಅಧಿಕಾರಿ ಬಿ.ಆರ್. ಅಂಗಡಿ, ರೇಷ್ಮೆ ಜಂಟಿ ನಿರ್ದೇಶಕ ವೈ.ಟಿ. ತಿಮ್ಮಯ್ಯ, ಬ್ಯಾಡಗಿ ರೇಷ್ಮೆ ವಿಸ್ತರಣಾಧಿಕಾರಿ ಭಾರತಿ ಡಿ. ನಾಯಕ, ಎಸ್.ಎನ್. ಕೋರೆ ಸೇರಿದಂತೆ ಇತರ ಅಧಿಕಾರಿಗಳು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

500 ನಾಯಿಗಳಿಗೆ ಚಿಕನ್‌ ರೈಸ್ ನೀಡಲು ವರ್ಷಕ್ಕೆ 1.83 ಕೋಟಿ
ಯಲಹಂಕದಲ್ಲಿ ‘ಚೀನಾದ ಹ್ಯಾಂಗ್‌ಝೌ’ ಮಾದರಿ ರೈಲು ನಿಲ್ದಾಣ