ಕನ್ನಡಪ್ರಭವಾರ್ತೆ ವಿರಾಜಪೇಟೆ
ಹಬ್ಬದ ಹಿಂದಿನ ಮೂರು ದಿವಸಗಳಿಂದಲೇ ಧ್ವಜಾರೋಹಣ, ಬಲಿಪೂಜೆ, ಪ್ರಭೋದನೆ ಹಾಗೂ ನವೇನಾ ಪ್ರಾರ್ಥನೆಯು ಜರುಗಿತು. ತದನಂತರ ವಾರ್ಷಿಕೋತ್ಸವದ ದಿವಸ ಸಂಜೆ ಆಡಂಬರ ಗಾಯನ ಬಲಿಪೂಜೆ ನಡೆಯಿತು. ಈ ಬಲಿಪೂಜೆಯನ್ನು ಕೆ. ಆರ್. ಪೇಟೆ ಯ ಬಾಲ ಯೇಸು ದೇವಾಲಯದ ಧರ್ಮಗುರುಗಳಾದ ವಂದನೀಯ ಫಾದರ್ ಪೌಲೋಸ್ ತೋಮಸ್ ರವರು ನೆರವೇರಿಸಿದರು.
ಈ ಸಂದರ್ಭ ಗಾಯನ ವೃಂದದವರಿಂದ ದೇವರ ಗಾಯನ ಹಾಗೂ ಪ್ರಾರ್ಥನೆ ಜರುಗಿತು. ದೀಪಾರಾಧನೆ, ಬೈಬಲ್ ವಾಚನ ನಡೆಸಲಾಯಿತು. ತದನಂತರ ಸಂತ ಅನ್ನಮ್ಮ ರವರ ಹಾಗೂ ಸಂತ ಲೂರ್ದು ಮಾತೆಯ ಪ್ರತಿಮೆಗಳನ್ನು ವಿದ್ಯುತ್ ಹಾಗೂ ಹೂವು ಅಲಂಕೃತ ತೇರಿನಲ್ಲಿ ಪ್ರತಿಷ್ಠಾಪಿಸಿ ವಿರಾಜಪೇಟೆ ನಗರದಾದ್ಯಂತ ಮೆರವಣಿಗೆ ನಡೆಸಲಾಯಿತು.ಚರ್ಚ್ ಅವರಣದಿಂದ ಹೊರಟು ತೆಲುಗರ ಬೀದಿ, ದೊಡ್ಡಟ್ಟಿ ಚೌಕಿ, ಗಡಿಯಾರ ಕಂಬ, ಖಾಸಗಿ ಬಸ್ ನಿಲ್ದಾಣ ಹಾಗೂ ಕೆ. ಎಸ್. ಆರ್. ಟಿ. ಸಿ. ಬಸ್ ನಿಲ್ದಾಣದ ಮೂಲಕವಾಗಿ ಮೆರವಣಿಗೆ ಸಾಗಿ ಪುನಃ ಚರ್ಚ್ ನಲ್ಲಿ ಕೊನೆಗೊಂಡಿತು. ಮೆರವಣಿಗೆಯಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಉಪಸ್ಥಿತರಿದ್ದು ಮೇಣದ ಬತ್ತಿಗಳನ್ನು ಹಚ್ಚಿ ಹಿಡಿದು ಮೆರವಣಿಗೆಯ ಉದ್ದಕ್ಕೂ ಜಪಸಾರ ಹಾಗೂ ದೇವರ ನಾಮಾವಳಿಯನ್ನು ಸ್ತುತಿಸಿದರು. ತದನಂತರ ಚರ್ಚ್ ನಲ್ಲಿ ವಿಶೇಷ ಪ್ರಾರ್ಥನೆ, ಪರಮ ಪ್ರಸಾದ ದ ಆಶೀರ್ವಾದದ ಬಳಿಕ ನೆರೆದಿದ್ದ ಭಕ್ತರಿಗೆ ಅನ್ನ ಸಂತರ್ಪಣಾ ಸೇವೆಯನ್ನು ಮಾಡಲಾಯಿತು. ಭಕ್ತರು ಸಿಡಿಮದ್ದನ್ನು ಸಿಡಿಸುವುದರ ಮೂಲಕ ಸಂಭ್ರಮಿಸಿದರು.
ಶಾಸಕ ಎ. ಎಸ್. ಪೊನ್ನಣ್ಣ ಭೇಟಿ ಹಾಗೂ ಶುಭ ಹಾರೈಕೆ: ಸಂತ ಅನ್ನಮ್ಮ ಚರ್ಚ್ ನ ವಾರ್ಷಿಕೋತ್ಸವ ಆಚರಣೆಯ ಸಂದರ್ಭ ವಿರಾಜಪೇಟೆ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ. ಎಸ್. ಪೊನ್ನಣ್ಣ ಅವರು ಭೇಟಿಯನ್ನು ನೀಡಿ ಜನರಿಗೆ ಹಬ್ಬದ ಶುಭಾಶಯಗಳನ್ನು ತಿಳಿಸಿದರು. ಮತ್ತು ನಾಡಿನ ಒಳಿತಿಗಾಗಿ ಪ್ರಾರ್ಥನೆಯನ್ನು ಮಾಡಿದರು.