ಚಂದ್ರು ಕೊಂಚಿಗೇರಿ
ಜಾತ್ರೆಗೆ ಯಾವುದೇ ತರಹದ ಪ್ರಚಾರದ ಅಗತ್ಯವಿಲ್ಲ ಎಂದು ಹೇಳುವ ಧಾರ್ಮಿಕ ದತ್ತಿ ಇಲಾಖೆಯ ಅಧಿಕಾರಿ, ಮೈಲಾರ ಇತರೆ ಕಡೆಗಳಲ್ಲಿ 25ಕ್ಕೂ ಹೆಚ್ಚು ಪ್ಲಾಸ್ಟಿಕ್ ಬ್ಯಾನರ್‌ಗಳಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ, ಸಂಸದ ಈ.ತುಕಾರಾಂ, ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ, ಶಾಸಕ ಕೃಷ್ಣನಾಯ್ಕ ಅವರ ಭಾವಚಿತ್ರಗಳಿರುವ ಪ್ಲಾಸ್ಟಿಕ್ ಬ್ಯಾನರ್ ಅಳವಡಿಸಿದ್ದಾರೆ.2016ರಲ್ಲಿ ಸರ್ಕಾರ ಪ್ಲಾಸ್ಟಿಕ್ ನಿಷೇಧ ಕಾಯ್ದೆ ಸಿದ್ಧವಾಗಿತ್ತು. 2022ರಲ್ಲಿ ಸರ್ಕಾರ ಈ ಕುರಿತು ಪರಿಸರದ ಮೇಲಾಗುತ್ತಿರುವ ಹಾನಿ ತಡೆಗಟ್ಟಲು, ಕಟ್ಟುನಿಟ್ಟಾಗಿ ಪ್ಲಾಸ್ಟಿಕ್ ಬ್ಯಾನರ್, ಪ್ಲಾಸ್ಟಿಕ್ ಬಳಕೆ ನಿಷೇಧಿಸಿದೆ. ಆದರೆ ಮೈಲಾರಲಿಂಗೇಶ್ವರ ದೇವಸ್ಥಾನದ ಇಒ ಜಾತ್ರೆ ಹಾಗೂ ಇತರೆ ಕಡೆಗಳಲ್ಲಿ ಪ್ಲಾಸ್ಟಿಕ್ ಬ್ಯಾನರ್ ಅಳವಡಿಸಿದ್ದಾರೆ. ಜನಸಾಮಾನ್ಯರು ಈ ರೀತಿ ಪ್ಲಾಸ್ಟಿಕ್ ಬ್ಯಾನರ್ ಬಳಕೆ ಮಾಡಿದರೆ ತಪ್ಪು ಎನ್ನುವ ಸರ್ಕಾರಿ ಅಧಿಕಾರಿಗಳೇ ಕಾಯ್ದೆ ಉಲ್ಲಂಘನೆ ಮಾಡಿರುವುದು ಬೇಲಿಯೇ ಎದ್ದು ಹೊಲ ಮೇಯ್ದಂತೆ ಆಗಿದೆ ಎನ್ನುವುದು ಭಕ್ತರ ಅಭಿಪ್ರಾಯ.
ಮುಂದುವರೆದ ಶೀತಲ ಸಮರ:ಜಾತ್ರೆಯ ಸಂದರ್ಭದಲ್ಲೇ ದೇವಸ್ಥಾನದ ವಂಶ ಪಾರಂಪರ್ಯ ಧರ್ಮಕರ್ತ ಗುರು ವೆಂಕಪ್ಪಯ್ಯ ಒಡೆಯರ್, ದೇವಸ್ಥಾನ ಕಾರ್ಯ ನಿರ್ವಾಹಕ ಅಧಿಕಾರಿ ಹನುಮಂತಪ್ಪ ನಡುವೆ ಶೀತಲ ಸಮರ ಮುಂದುವರಿದಿದೆ. ಜಾತ್ರೆಯ ಧಾರ್ಮಿಕ ಪೂಜಾ ವಿಧಿ ವಿಧಾನಗಳು, ದೇಗುಲದ ವಂಶ ಪಾರಂಪರ್ಯ ಗುರು ವೆಂಕಪ್ಪಯ್ಯ ಒಡೆಯರ್ ಸಮ್ಮುಖದಲ್ಲಿ ನಡೆಯುತ್ತಿವೆ. ಆದರೆ ಈಚಿಗೆ ಡಿಸಿ ಆದೇಶದ ಮೇರೆಗೆ ಗುರು ವೆಂಕಪ್ಪಯ್ಯ ಒಡೆಯರ್ ವಂಶಸ್ಥರನ್ನು ದೇಗುಲದಿಂದ ಹೊರಗೆ ಹಾಕಿರುವ ದೇವಸ್ಥಾನದ ಇಒ ಜಾತ್ರೆಯ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿಲ್ಲ.
ಜಾತ್ರೆಗೆ ಬರುವ ಭಕ್ತರಿಗೆ ಮೂಲಭೂತ ಸೌಲಭ್ಯ ಕಲ್ಪಿಸುವಲ್ಲಿ ಜಿಲ್ಲಾಡಳಿತ ಆಸಕ್ತಿ ತೋರಿಲ್ಲ. ಹೊಳಲುನಿಂದ ಮೈಲಾರವರೆಗೂ ಡಾಂಬರೀಕರಣ ಮಾಡದೇ ತಗ್ಗು ಗುಂಡಿಗಳಿಗೆ ಮಣ್ಣು ಹಾಕಿದೆ. ಇದರಿಂದ ಭಕ್ತರಿಗೆ ಧೂಳು ರಸ್ತೆಯೇ ಗತಿಯಾಗಿದೆ. ಇದಕ್ಕೆ ನೀರು ಸಿಂಪರಣೆ ಮಾಡುವ ಗೋಜಿಗೂ ಅಧಿಕಾರಿಗಳು ಹೋಗಿಲ್ಲ.