ಬಳ್ಳಾರಿ: ಬಯಲಾಟಗಳು ಕನ್ನಡ ಹಾಗೂ ತೆಲುಗು ಭಾಷೆಯ ನಡುವೆ ಸಾಂಸ್ಕೃತಿಕ ಕೊಂಡಿಗಳಾಗಿದ್ದು, ಎರಡು ಭಾಷೆಗಳ ಸಾಂಸ್ಕೃತಿಕ ಬಾಂಧವ್ಯ ಬೆಸೆಯಲು ಹೆಚ್ಚು ಪೂರಕವಾಗಿವೆ ಎಂದು ಹಿರಿಯ ಸಾಹಿತಿ ಕುಂ.ವೀರಭದ್ರಪ್ಪ ತಿಳಿಸಿದರು.ನಗರದ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರಲ್ಲಿ ಕರ್ನಾಟಕ ಬಯಲಾಟ ಅಕಾಡೆಮಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಶನಿವಾರ ಶುರುಗೊಂಡ ಎರಡು ದಿನಗಳ ಕರ್ನಾಟಕ-ಆಂಧ್ರ ಗಡಿಪ್ರದೇಶದ ಕನ್ನಡ ಬಯಲಾಟಗಳ ಪ್ರದರ್ಶನ ಹಾಗೂ ವಿಚಾರ ಸಂಕಿರಣಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಆಂಧ್ರಪ್ರದೇಶದಲ್ಲಿ ಕನ್ನಡದ ಬಯಲಾಟಗಳನ್ನು ಪ್ರದರ್ಶನ ನೀಡುವುದೇ ಅತ್ಯಂತ ವೈಶಿಷ್ಯವಾದದ್ದು. ಭಾಷೆಯ ನಡುವೆ ಕೊಡು ಕೊಳ್ಳುವಿಕೆ ಇರಬೇಕು. ಬಯಲಾಟ ಕಲಾವಿದರನ್ನು ಗುರುತಿಸಿ ಪ್ರತ್ಯೇಕ ಪ್ರಶಸ್ತಿಗಳನ್ನು ನೀಡಿ ಪ್ರೋತ್ಸಾಹಿಸಬೇಕು. ಬಳ್ಳಾರಿಯ ಪ್ರಮುಖ ವೃತ್ತಗಳಿಗೆ ಈ ಜಿಲ್ಲೆಯ ಮಹಾನ್ ಕಲಾವಿದರಾದ ಸುಭದ್ರಮ್ಮ ಮನ್ಸೂರು ಹಾಗೂ ಬೆಳಗಲ್ ಈರಣ್ಣನವರ ಹೆಸರಿಡಬೇಕು. ಬಯಲಾಟ ಕುರಿತು ಬಿಎ., ಎಂಎ., ವಿದ್ಯಾರ್ಥಿಗಳಿಗೆ ಪಠ್ಯವಾಗಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಯಲಾಟ ಅಕಾಡೆಮಿ ಅಧ್ಯಕ್ಷ ಡಾ.ಕೆ.ಆರ್. ದುರ್ಗಾದಾಸ್ ಮಾತನಾಡಿ, ಬಯಲಾಟ ಅತ್ಯಂತ ಸಮರ್ಥ ಹಾಗೂ ಪ್ರಭಾವಿ ಮಾಧ್ಯಮವಾಗಿದೆ. ಬಯಲಾಟ ಪರಿಷ್ಕರಣೆ ಅಗತ್ಯವಿದೆ. ಹಿಮ್ಮೇಳ-ಮುಮ್ಮೇಳ ಕಲಾವಿದರ ಸಂಖ್ಯೆ ಕಡಿಮೆಯಾಗುತ್ತಿದೆ. ಬಯಲಾಟ ಸಂಭಾಷಣೆಯಲ್ಲಿ ತಿದ್ದುಪಡಿಯಾಗಬೇಕಿದೆ. ಈ ಹಿನ್ನೆಲೆಯಲ್ಲಿ ಅಕಾಡೆಮಿ ಪೂರಕವಾಗಿ ಶ್ರಮಿಸಲಿದೆ. ಕಾಲೇಜು ವಿದ್ಯಾರ್ಥಿಗಳಿಗೆ ಬಯಲಾಟ ತರಬೇತಿ ನೀಡುವುದಾದರೆ, ಅಕಾಡೆಮಿಯಿಂದ ಖರ್ಚು-ವೆಚ್ವ ನೀಡಲಾಗುವುದು. ಬಯಲಾಟ ಪರಿಷ್ಕರಣೆ ಒತ್ತು ನೀಡಲಾಗುವುದು ಎಂದು ತಿಳಿಸಿದರು.ಹೊಸತು ಪತ್ರಿಕೆಯ ಸಂಪಾದಕ ಡಾ.ಸಿದ್ದನಗೌಡ ಪಾಟೀಲ್ ಆಶಯ ಭಾಷಣ ಮಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿವೃತ್ತ ಅಧಿಕಾರಿ ಚೋರನೂರು ಕೊಟ್ರಪ್ಪ ಬಯಲಾಟ ಕಲಾವಿದರು ಎದುರಿಸುತ್ತಿರುವ ಸಂಕಷ್ಟಗಳ ಕುರಿತು ತಿಳಿಸಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಕಾರ್ಯಕ್ರಮ ಸಂಯೋಜಕ ಹಾಗೂ ಲೇಖಕ ಡಾ.ಜಾಜಿ ದೇವೇಂದ್ರಪ್ಪ, ಆಂಧ್ರಪ್ರದೇಶ ಗಡಿಭಾಗದ ಅನೇಕು ಹಳ್ಳಿಗಳು ಭೌಗೋಳಿಕವಾಗಿ ಆಂಧ್ರದಲ್ಲಿದ್ದರೂ, ಸಾಂಸ್ಕೃತಿಕವಾಗಿ ಕನ್ನಡ ಭಾಷೆಯೊಂದಿಗೆ ಬೆಸೆದುಕೊಂಡಿವೆ ಎಂದು ತಿಳಿಸಿದರು.
ಕನ್ನಡ ಮತ್ತು ಸಂಸ್ಖೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ನಾಗರಾಜ, ಕನ್ನಡ ಸಾಹಿತ್ಯಪರಿಷತ್ ಜಿಲ್ಲಾಧ್ಯಕ್ಷ ನಿಷ್ಠಿ ರುದ್ರಪ್ಪ, ಗೌರವ ಕಾರ್ಯದರ್ಶಿ ಡಾ.ಶಿವಲಿಂಗಪ್ಪ ಹಂದಿಹಾಳ್ ಹಾಗೂ ಪತ್ರಕರ್ತ ಕೆ.ಎಂ.ಮಂಜುನಾಥ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ಮುದ್ದಟನೂರು ಜಿ.ವೀರನಗೌಡ ಅವರ ಸಂಗೀತ ನಿರ್ದೇಶನದಲ್ಲಿ
ಎಂ.ಸೂಗೂರುಮಲ್ಲಯ್ಯ ರಂಗಗೀತೆಗಳನ್ನು ಪ್ರಸ್ತುತ ಪಡಿಸಿದರು. ಎರಿಸ್ವಾಮಿ ಶಿಡಗಿನಮೊಳ ಮದ್ದಲೆ ಸಾಥ್ ನೀಡಿದರು.
ಪ್ರೇಕ್ಷಕರ ಕೊರತೆ:
ರಾಜಕಾರಣಿಗಳು ಅಭಿಜಾತ ಕಲಾವಿದರು: ಬಳ್ಳಾರಿ ಜಿಲ್ಲೆಯ ರಾಜಕಾರಣಿಗಳು ಅಭಿಜಾತ ಕಲಾವಿದರು. ಬಯಲಾಟ ಕಲಾವಿದರನ್ನು ಮೀರಿಸುವಂತೆ ಇವರು ನಟನೆ ಮಾಡಬಲ್ಲರು ಎಂದು ಲೇಖಕ ಕುಂ.ವೀರಭದ್ರಪ್ಪ ವ್ಯಂಗ್ಯವಾಡಿದರು. ಇಂದು ಒಂದು ಪಕ್ಷ, ನಾಳೆ ಮತ್ತೊಂದು ಪಕ್ಷದಲ್ಲಿ ಕಂಡು ಬರುವ ರಾಜಕಾರಣಿಗಳು, ಯಾವ ಪ್ರತಿಭಾನ್ವಿತ ಕಲಾವಿದರಿಗೂ ಕಡಿಮೆಯೇನಲ್ಲ ಎಂದರು.