ರಾಷ್ಟ್ರೀಯ ಹೆದ್ದಾರಿ ಬದಿಯಲ್ಲೆ ತೆರೆದುಕೊಳ್ಳುವ ವಾರದ ಸಂತೆ

KannadaprabhaNewsNetwork | Published : Jun 21, 2024 1:03 AM

ಸಾರಾಂಶ

ಹೆದ್ದಾರಿ ಅಂಚಿನ ಪ್ರದೇಶದಲ್ಲಿ ನೂರಾರು ವರ್ಷಗಳ ಕೆಲವು ಸಾಲುಮರಗಳಿವೆ. ಅವುಗಳ ಟೊಂಗೆ ಶಿಥಿಲವಾಗಿದ್ದು ಪದೇ ಪದೇ ಮುರಿದು ಬೀಳುತ್ತಿವೆ. ಕಳೆದ ವರ್ಷ ಮರದ ಟೊಂಗೆ ಮುರಿದು ಬಿದ್ದು ವ್ಯಾಪಾರಿ ಗಾಯಗೊಂಡ ಪ್ರಕರಣವೂ ನಡೆದಿದೆ.

ಕನ್ನಡಪ್ರಭ ವಾರ್ತೆ ತಾಳಗುಪ್ಪ

ಜನಪ್ರತಿನಿಧಿಗಳ ಇಚ್ಛಾಶಕ್ತಿ, ದೂರದೃಷ್ಟಿಯ ಕೊರತೆ ಪರಿಣಾಮವಾಗಿ ಸಾಗರ ತಾಲೂಕಿನಲ್ಲಿ ದೊಡ್ಡ ಗ್ರಾಮ ಪಂಚಾಯತಿ ಎನಿಸಿಕೊಂಡು, ಅಧಿಕ ಆದಾಯ ಹೊಂದಿರುವ ತಾಳಗುಪ್ಪದಲ್ಲಿ ರಾಷ್ಟ್ರೀಯ ಹೆದ್ದಾರಿ ರಸ್ತೆಬದಿಯೇ ಸಂತೆ ಮೈದಾನವಾಗಿದೆ!

ಪ್ರತಿ ಶನಿವಾರ ನಡೆಯುವ ಸಂತೆಗೆ, ತಾಳಗುಪ್ಪ ಹೋಬಳಿಯ 9 ಗ್ರಾಮ ಪಂಚಾಯತಿ ವ್ಯಾಪ್ತಿಯ ಹಾಗೂ ಜಿಲ್ಲಾ ಗಡಿ ಭಾಗದ ಗ್ರಾಮಗಳ ಬಹುತೇಕರು ಕೊಡುಕೊಳ್ಳುವಿಕೆಗೆ ಇಲ್ಲಿನ ಸಂತೆಯನ್ನು ಅವಲಂಬಿಸಿದ್ದಾರೆ.

ವ್ಯಾಪಾರ ವಹಿವಾಟು ನಡೆಸಲು ಇಲ್ಲಿ ಸಂತೆ ಸುಂಕವನ್ನೂ ವಸೂಲು ಮಾಡಲಾಗುತ್ತದೆ. ಚಿಲ್ಲರೆ ಅಂಗಡಿಗಳಿಗೆ 50 ರಿಂದ 100 ಹಾಗೂ ರಖಂ ವ್ಯಾಪಾರಿಗಳಿಗೆ 200 ರು. ಸುಂಕ ವಸೂಲು ಮಾಡಲಾಗುತ್ತದೆ. ಗ್ರಾಮ ಪಂಚಾಯತಿಗೆ ಸಂತೆಯಿಂದ ವಾರ್ಷಿಕವಾಗಿ ಲಕ್ಷಾಂತರ ರು.ಗಳ ಆದಾಯವಿದ್ದು, ಈ ವರ್ಷ ಹರಾಜಿನಿಂದ 3 ಲಕ್ಷ ರು.ಗಳ ಆದಾಯ ಬಂದಿದೆ. ಆದರೆ ಗ್ರಾಮ ಪಂಚಾಯಿತಿ ವ್ಯಾಪಾರಿಗಳ ಅನುಕೂಲಕ್ಕಾಗಿ ಯಾವ ಸೌಕರ್ಯವನ್ನೂ ಮಾಡದಿರುವುದರಿಂದ ಸಂತೆ ನಡೆಯುವ ಸ್ಥಳ ಕೆಸರು ಗದ್ದೆಯಂತಾಗಿದೆ.

ಹೆದ್ದಾರಿ ಅಂಚಿನ ಪ್ರದೇಶದಲ್ಲಿ ನೂರಾರು ವರ್ಷಗಳ ಕೆಲವು ಸಾಲುಮರಗಳಿವೆ. ಅವುಗಳ ಟೊಂಗೆ ಶಿಥಿಲವಾಗಿದ್ದು ಪದೇ ಪದೇ ಮುರಿದು ಬೀಳುತ್ತಿವೆ. ಕಳೆದ ವರ್ಷ ಮರದ ಟೊಂಗೆ ಮುರಿದು ಬಿದ್ದು ವ್ಯಾಪಾರಿ ಗಾಯಗೊಂಡ ಪ್ರಕರಣವೂ ನಡೆದಿದೆ.

ನನಸಾಗದ ಸಂತೆ ಮೈದಾನ ಕನಸು:

ಗ್ರಾಮದಲ್ಲಿ ಸಂತೆ ಮೈದಾನ ನಿರ್ಮಿಸಲು ಸೂಕ್ತ ಸರಕಾರಿ ಭೂಮಿಗಳಿಲ್ಲ. ಖಾಸಗಿಯವರ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಸುಸಜ್ಜಿತವಾದ ಸಂತೆ ಮೈದಾನ ನಿರ್ಮಿಸುವ ಪ್ರಯತ್ನ ಹಲವು ಕಾಲದಿಂದ ನಡೆಯುತ್ತಲೇ ಇದೆ. ಮಾರುಕಟ್ಟೆ ಪ್ರಾಂಗಣ ನಿರ್ಮಿಸಲು ಸಾಗರ ಎಪಿಎಂಸಿಯು 1980ರಿಂದ ಖಾಸಗಿ ಭೂಮಿಯನ್ನು ವಶಪಡಿಸಿಕೊಳ್ಳಲು 3 ಬಾರಿ ಭೂ ಸ್ವಾಧೀನ ಪಕ್ರಿಯೆ ಪ್ರಾರಂಭಿಸಿದ್ದರೂ ನ್ಯಾಯಾಲಯದ ತೀರ್ಪಿನಿಂದ ಅದಕ್ಕೆ ಹಿನ್ನಡೆಯಾಗಿದೆ. ಇನ್ನು, ರಾಷ್ಟ್ರೀಯ ಹೆದ್ದಾರಿಗೆ ತಾಗಿದಂತಿರುವ ಸರ್ವೇ ನಂ 84ರ ಸ್ಥಳವನ್ನು ಉದ್ಯಮಿಯೊಬ್ಬರು ಈ ಹಿಂದೆ ಖರೀದಿಸಿದ್ದು, ಅದರಲ್ಲಿದ್ದ ಸಂತೆ ನಡೆಸಲು ಸಾಕಾಗಬಹುದಾದ ಬಿ.ಕರಾಬ್ ಜಾಗವನ್ನು ಕಂದಾಯ ಇಲಾಖೆ ಖರೀದಿದಾರರಿಗೆ ಖಾತೆ ಮಾಡಿಕೊಟ್ಟಿದೆ ಎನ್ನಲಾಗಿದೆ.

ಕಮರಿದ ಕುಮಾರ್‌ ಭರವಸೆ:

ಸಂತೆ ಮೈದಾನ ನಿರ್ಮಾಣಕ್ಕೆ ಆಸಕ್ತಿ ವಹಿಸಿದ ಮಾಜಿ ಶಾಸಕ ಕುಮಾರ ಬಂಗಾರಪ್ಪ ಗ್ರಾಮ ಪಂಚಾಯತಿ ಪಕ್ಕದಲ್ಲಿ ಖಾಸಗಿ ವ್ಯಕ್ತಿಗೆ ಸೇರಿದ ಅಂದಾಜು 13 ಎಕರೆ ಸ್ಥಳದಲ್ಲಿ ಸಂತೆ ಮೈದಾನಕ್ಕೆ ಅಗತ್ಯ ಸ್ಥಳ ಪಡೆದುಕೊಳ್ಳುವ ಪ್ರಯತ್ನನಡೆಸಿದ್ದರು. ಒಂದು ಕೋಟಿ ರು. ಗಳ ಅನುದಾನ ದೊರೆತಿದೆ. ಒಂದು ತಿಂಗಳಲ್ಲಿ ಕೆಲಸ ಪ್ರಾರಂಭವಾಗುತ್ತದೆ ಎಂದು ಅಂದಿನ ಶಾಸಕ ಕುಮಾರ್‌ ಬಂಗಾರಪ್ಪ 2018ರ ಡಿಸೆಂಬರ್‌ನಲ್ಲಿ ಗ್ರಾಮದಲ್ಲಿ ನಡೆದ ಜನಸ್ಪಂದನ ಸಭೆಯಲ್ಲಿ ಹೇಳಿದ್ದರು. ಆದರೆ ಅವರ ಮಾತು ಸುಳ್ಳಾಗಿದೆ.

ಬ್ಯಾಕೋಡು ಗ್ರಾಪಂ ಅಧ್ಯಕ್ಷ ಲಕ್ಷ್ಮೀನಾರಾಯಣ ಮಾತನಾಡಿ ,ಸರಕಾರಿ ಭೂಮಿ ಲಭ್ಯವಿಲ್ಲದ ಕಾರಣ ಹೆದ್ದಾರಿ ಸನಿಹದ ಸರ್ವೇ ನಂ 84,85ರಲ್ಲಿನ ಖಾಸಗಿ ಭೂಮಿಯಲ್ಲಿ ಸಂತೆ ಮೈದಾನ ನಿರ್ಮಿಸಲು ಅಗತ್ಯ ಸ್ಥಳವನ್ನು ಸ್ವಾಧೀನಪಡಿಸಿಕೊಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ ಎಂದರು.

ಹೆಸರು ಹೇಳಲು ಇಚ್ಛಿಸದ ತರಕಾರಿ ವ್ಯಾಪಾರಿಯೊಬ್ಬ ಮಾತನಾಡಿ, ವಾರಕ್ಕೆ 100 ರು.ಗಳ ಸಂತೆ ಸುಂಕ ನೀಡುತ್ತಿದ್ದರೂ ಕೆಸರಿನಲ್ಲಿ, ಶಿಥಿಲ ಮರದ ನೆರಳಿನಲ್ಲಿ ಆತಂಕದಿಂದಲೇ ವ್ಯಾಪಾರ ನಡೆಸಬೇಕಾಗಿದೆ. ನಮ್ಮಿಂದ ಪಡೆದ ಸುಂಕದ ಹಣದಲ್ಲಿ ಸ್ವಲ್ಪಭಾಗ ಬಳಸಿದ್ದರೂ ವ್ಯಾಪಾರದದ ಸ್ಥಳದ ಅವ್ಯವಸ್ಥೆ ನಿವಾರಣೆಯಾಗಿ ಗ್ರಾಮ ಪಂಚಾಯತಿಗೆ ಗೌರವ ಬರುತ್ತಿತ್ತು ಎಂದರು.

Share this article