ಹೊಸದುರ್ಗ: ತಾಲೂಕಿನ ಕಬ್ಬಳ ಗ್ರಾಮ ದೇವತೆ ಶ್ರೀಕತ್ತಿಕಲ್ಲಾಂಭ ದೇವಿ ರಥದ ಪ್ರತಿಷ್ಠಾಪನೆ ಹಾಗೂ ಬ್ರಹ್ಮರಥೋತ್ಸವ ಫೆ.26ರಂದು ಬೆಳಿಗ್ಗೆ 5ಕ್ಕೆ ನಡೆಯಲಿದೆ.ನೂತನ ರಥ ಪ್ರತಿಷ್ಠಾಪನೆ ಅಂಗವಾಗಿ ಫೆ.20ರ ಗುರವಾರ ಕತ್ತಿಕಲ್ಲಾಂಭ ದೇವಿಯೊಂದಿಗೆ ಗ್ರಾಮದ ಲಕ್ಕಮ್ಮ ದೇವಿ, ಕಾಲಭೈರವೇಶ್ವರ ಸ್ವಾಮಿ, ಸೋಮೇಶ್ವರ ಸ್ವಾಮಿ, ಪಾಂಡುರಂಗ ರುಕ್ಮೀಣಿ ದೇವಿ ಹೊಳೆ ಪೂಜೆ ನಡೆಯಿತು. ಫೆ.21ರಂದು ರಾಜ ಬೀದಿ ಉತ್ಸವ, ಫೆ,22ರಂದು ಗ್ರಾಮದ ಎಲ್ಲಾ ದೇವರಗಳ ಸಮ್ಮುಖದಲ್ಲಿ ಗುಡ್ಡದ ರಂಗನಾಥಸ್ವಾಮಿ ದೇವರಿಗೆ ಬಿಲ್ಗೂಡು ಹಾಗೂ ದೊಡ್ಡ ಎಡೆ ಸೇವೆ ನಂತರ ದೇವರುಗಳ ಕೂಡುಬೇಟಿ ಕಾರ್ಯಕ್ರಮ ನಡೆಯಿತು.
ಫೆ.25ರಂದು ಬೆಳಿಗ್ಗೆ 6ಕ್ಕೆ ಅಮ್ಮನವರ ಅರತಿಯೊಂದಿಗೆ ಜಾಲಿಯಮ್ಮನವರ ದೇವಸ್ಥಾನಕ್ಕೆ ತೆರಳಿ ಪಂಚಾಮೃತ ಅಭಿಷೇಕ ಪ್ರಸಾದ ವಿನಿಯೋಗ ನಡೆಯಲಿದೆ. ನಂತರ ನೂತನ ರಥ ಕಳಸ ಹಾಗೂ ಗಂಗಾ ಪೂಜೆ ರಾತ್ರಿ ಗ್ರಾಮದಲ್ಲಿ ಸುಗ್ಗಿ ಮಹೋತ್ಸವ ನಡೆಯಲಿದೆ. ಫೆ.26 ರಂದು ಬೆಳಿಗ್ಗೆ 5 ಗಂಟೆಯ ಮಕರ ಲಗ್ನದಲ್ಲಿ ಕತ್ತಿಕಲ್ಲಾಂಭ ದೇವಿಯ ನೂತನ ರಥ ಪ್ರತಿಷ್ಠಾಪನೆ ನಂತರ ದೇವಿಯ ಬ್ರಹ್ಮ ರಥೋತ್ಸವ ನಡೆಯಲಿದೆ.